ಸ್ವತಂತ್ರ ಆಳ್ವಿಕೆಯಲ್ಲಿ ಭಾರತದ ಜನತೆಗೆ ನ್ಯಾಯಾಂಗವೇ ಅಂತಿಮ ನ್ಯಾಯ ಒದಗಿಸುತ್ತಿದೆ.
ಭಾರತದ ಸಂವಿಧಾನದ ವೈಶಿಷ್ಟ್ಯ ಎಂದರೆ ಆಡಳಿತ ವ್ಯವಸ್ಥೆಯ ಮೂರು ಪ್ರಧಾನ ಸ್ತಂಭಗಳಾದ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗಗಳಿಗೆ ಸಮಾಜವನ್ನು ಸರಿದಾರಿಯಲ್ಲಿ ಕರೆದೊಯ್ಯುವ ಜಂಟಿ ಹೊಣೆಗಾರಿಕೆಯನ್ನು ಕಲ್ಪಿಸುತ್ತದೆ. 75 ವರ್ಷಗಳ ಸ್ವತಂತ್ರ ಭಾರತದಲ್ಲಿ ಶಾಸಕಾಂಗವು ಹಲವು ಏಳುಬೀಳುಗಳನ್ನು ಎದುರಿಸುತ್ತಾ, ತೆವಳುತ್ತಾ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರೂ, ಕಳೆದ ಮೂರು ನಾಲ್ಕು ದಶಕಗಳಲ್ಲಿ ಅಧಿಕಾರ ರಾಜಕಾರಣದಲ್ಲಿನ ಪಲ್ಲಟಗಳ ಪರಿಣಾಮವಾಗಿ ಇಂದು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಶಾಸಕಾಂಗದ ಕಾರ್ಯನಿರ್ವಹಣೆಯಲ್ಲಿ ಇರಬೇಕಾಗಿದ್ದ ಸಾಂವಿಧಾನಿಕ ನೈತಿಕತೆ, ಪಾರದರ್ಶಕತೆ ಹಾಗೂ ಜನನಿಷ್ಠೆಯ ಪ್ರಾಮಾಣಿಕತೆ ಕ್ರಮೇಣ ಕುಸಿಯುತ್ತಿರುವುದು ಸಾರ್ವಭೌಮ ಪ್ರಜೆಗಳಲ್ಲಿ ಹೆಚ್ಚಿನ ಆತಂಕ ಮೂಡಿಸುತ್ತಿರುವುದು ವಾಸ್ತವ.
ಪಕ್ಷಾತೀತವಾಗಿ ನೋಡಿದರೂ ಅಧಿಕಾರ ರಾಜಕಾರಣದಲ್ಲಿ ನೆಲೆ ಕಂಡಿರುವ ಭಾರತದ ರಾಜಕೀಯ ಪಕ್ಷಗಳು ತಮ್ಮ ತತ್ವ ಸಿದ್ಧಾಂತಗಳನ್ನು ಕೇವಲ ಅಧಿಕಾರ ಕೇಂದ್ರವನ್ನು ತಲುಪುವ ಪ್ರಜಾಸತ್ತಾತ್ಮಕ ಸಾಧನಗಳಂತೆ ಮಾತ್ರವೇ ಪರಿಗಣಿಸುತ್ತಿದ್ದು, ಸಂವಿಧಾನ ಆಶಿಸುವ ಸಮಾನತೆ, ಭ್ರಾತೃತ್ವ ಹಾಗೂ ಸಮನ್ವಯತೆಯ ಎಲ್ಲ ನೆಲೆಗಳನ್ನೂ ಭ್ರಷ್ಟಗೊಳಿಸುತ್ತಲೇ ಬಂದಿವೆ. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವ ಆಶ್ವಾಸನೆಯೊಂದಿಗೆ 2014ಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕಳೆದ ಹತ್ತು ವರ್ಷಗಳಲ್ಲಿ ಅಪರಾಧ ಮುಕ್ತ, ಭ್ರಷ್ಟಾಚಾರ ಮುಕ್ತ, ದ್ವೇಷ-ಪ್ರತೀಕಾರ ಮುಕ್ತ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಸೊಲ್ಲೆತ್ತದಿರುವುದು ಅಧಿಕಾರ ರಾಜಕಾರಣದ ಮತ್ತೊಂದು ವಿಕೃತ ಆಯಾಮವನ್ನು ತೋರುತ್ತದೆ. ಕಾಂಗ್ರೆಸ್ ದಿನದಿಂದ ದಿನಕ್ಕೆ ಪುನರುಜ್ಜೀವನ ಪಡೆಯುತ್ತಿರುವಂತೆಯೇ, ರಾಜಕೀಯ ಭ್ರಷ್ಟಾಚಾರ, ಮತಾಂಧತೆ, ಮತೀಯವಾದ, ದ್ವೇಷ-ಸೇಡಿನ ರಾಜಕಾರಣ ಸರ್ವವ್ಯಾಪಿಯಾಗಿ ಆವರಿಸುತ್ತಿದೆ.
ಈ ಬೆಳವಣಿಗೆಗೆ ಪೂರಕವಾಗಿ ನವ ಉದಾರವಾದ ಹಾಗೂ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯ ಕರಾಳ ಬಾಹುಗಳು ದೇಶದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುತ್ತಿದ್ದು, ಬಡತನ, ಹಸಿವೆ, ಅಪೌಷ್ಟಿಕತೆ, ನಿರ್ವಸತಿಯ ಜಟಿಲ ಸಮಸ್ಯೆಗಳ ನಡುವೆ ತಳಮಟ್ಟದ ಸಮಾಜದ ಬದುಕು ದುಸ್ತರವಾಗುತ್ತಿದೆ. ಸಂವಿಧಾನದ ಸಮಾನತೆಯ ಆಶಯವನ್ನು ಸಾಕಾರಗೊಳಿಸಲು ಪ್ರಮುಖ ತಡೆಗೋಡೆಯಾಗಿರುವ ನವಉದಾರವಾದ ಮತ್ತು ಜಾತಿವಾದ-ಮತೀಯವಾದದ ವಿರುದ್ಧ ಸೊಲ್ಲೆತ್ತದೆಯೇ ದೇಶದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಅಧಿಕಾರ ನಡೆಸಲು ಉತ್ಸುಕವಾಗಿವೆ. ಹಾಗಾಗಿಯೇ ರಾಷ್ಟ್ರ-ರಾಜ್ಯ ರಾಜಕಾರಣದಲ್ಲಿ ಜೀವನ ಹಾಗೂ ಜೀವನೋಪಾಯದ ನೆಲೆಗಳನ್ನೇ ಕಳೆದುಕೊಳ್ಳುತ್ತಿರುವ ಅಸಂಖ್ಯಾತ ಜನತೆ ತಮ್ಮ ಸಾಂವಿಧಾನಿಕ ಹಕ್ಕೊತ್ತಾಯಗಳಿಗಾಗಿ ನ್ಯಾಯಾಂಗದತ್ತ ನೋಡುತ್ತಿದ್ದಾರೆ.
ಶಾಸಕಾಂಗದ ಪ್ರಾತಿನಿಧಿಕ ಜವಾಬ್ದಾರಿ
ಈ ಹಿನ್ನೆಲೆಯಲ್ಲೇ ಇಂದು ಭಾರತದ ಆಡಳಿತ ವ್ಯವಸ್ಥೆಯಲ್ಲಿ ನ್ಯಾಯಾಂಗ ನಿರ್ವಹಿಸಬೇಕಾದ ಹಾಗೂ ನಿರ್ವಹಿಸುತ್ತಿರುವ ಪಾತ್ರವನ್ನು ನಿಷ್ಕರ್ಷೆ ಮಾಡಬೇಕಿದೆ. ಜನಸಾಮಾನ್ಯರ ನಿತ್ಯ ಬದುಕನ್ನು ಹಸನಾಗಿಸುವ, ಭವಿಷ್ಯವನ್ನು ಸುರಕ್ಷಿತವಾಗಿಸುವ ಆಡಳಿತ ನೀತಿಗಳನ್ನು ರೂಪಿಸಿ, ನಿರೂಪಿಸಿ, ಜಾರಿಗೊಳಿಸುವ ನೈತಿಕ-ಸಾಂವಿಧಾನಿಕ ಜವಾಬ್ದಾರಿ ಹೊಂದಿರುವ ಶಾಸಕಾಂಗವು ತನ್ನ ಜನಮುಖಿ-ಸಮಾಜಮುಖಿ ಮುಖವಾಡವನ್ನು ಕಳಚಿಹಾಕಿ ದಶಕಗಳೇ ಸಂದುಹೋಗಿವೆ. ಸಾಮಾಜಿಕ-ಆರ್ಥಿಕ ಸಮಾನತೆ ಮತ್ತು ಸ್ವಾವಲಂಬನೆಯನ್ನು ಕೇವಲ ತಾತ್ಕಾಲಿಕ ಉಪಕ್ರಮಗಳ ಮೂಲಕವೇ ಸಾಧಿಸಬಯಸುವ ಅಧಿಕಾರ ರಾಜಕಾರಣದ ವಾರಸುದಾರರಿಗೆ ತಾವು ಜನತೆಯ ತೆರಿಗೆಯ ಹಣವನ್ನೇ ರೂಪಾಂತರಗೊಳಿಸಿ ಅವಕಾಶವಂಚಿತರಿಗೆ ಹಂಚುವ ಆಡಳಿತ ನೀತಿಗಳೇ ಕ್ರಾಂತಿಕಾರಿಯಾಗಿ ಕಾಣುತ್ತಿರುವುದು ಈ ಕಾಲಘಟ್ಟದ ದುರಂತ ವಾಸ್ತವ. ಇದನ್ನೇ ಮಾನದಂಡವಾಗಿ ಪರಿಗಣಿಸಿ ಸಮಾಜವೂ ಸಹ ಆಡಳಿತ ವ್ಯವಸ್ಥೆಯ ಸಾಫಲ್ಯ ವೈಫಲ್ಯಗಳನ್ನು ಅಳೆಯುತ್ತಿರುವುದು ಮತ್ತೊಂದು ದುರಂತ.
ಈ ಆಡಳಿತ ನೀತಿಗಳನ್ನು ಅನುಷ್ಟಾನಗೊಳಿಸಿ, ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕಾದ ನೈತಿಕ ಜವಾಬ್ದಾರಿ ಹೊತ್ತಿರುವ ಕಾರ್ಯಾಂಗವು ತನ್ನ ಪಾರಂಪರಿಕ ವಸಾಹತು-ಅಧಿಕಾರಶಾಹಿ ಪಳೆಯುಳಿಕೆಗಳನ್ನು ಉಳಿಸಿಕೊಂಡೇ ಬಂದಿದ್ದು ಇಂದಿಗೂ ಸಹ ಜನಸಾಮಾನ್ಯರ ನಡುವೆ ಗುರುತಿಸಿಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡದಿರುವುದು ಸ್ವತಂತ್ರ ಭಾರತದ ಅತಿದೊಡ್ಡ ದುರಂತ. ಮೇಲ್ನೋಟಕ್ಕೆ ಜನೋದ್ಧಾರಕವಾಗಿ, ಬಹುಪಯೋಗಿ ಎಂದು ಕಾಣುವ ತಾತ್ಕಾಲಿಕ ಪರಿಹಾರೋಪಾಯದ ಯೋಜನೆಗಳನ್ನೂ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲಾಗದ/ತಲುಪಿಸಲೊಲ್ಲದ ಒಂದು ಅಧಿಕಾರಶಾಹಿಯನ್ನು ಭಾರತದ ಆಡಳಿತ ವ್ಯವಸ್ಥೆ ಪೋಷಿಸಿಕೊಂಡು ಬಂದಿದೆ. ಇಲ್ಲಿ ಬೇರೂರಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಕಬಂಧ ಬಾಹುಗಳು ಸಂವಿಧಾನದ ಮೂರೂ ಸ್ತಂಭಗಳನ್ನು ಆವರಿಸಿದ್ದು, ಕಡೆಗೆ ಮಾಧ್ಯಮ ಕ್ಷೇತ್ರದಲ್ಲೂ ತನ್ನ ಪ್ರಭಾವವನ್ನು ವಿಸ್ತರಿಸಿವೆ.
ಸಾಮಾನ್ಯ ಪ್ರಜೆಗಳಲ್ಲಿ ಕಾಣುವಂತಹ ಸಿಟ್ಟು, ಆಕ್ರೋಶ, ಹತಾಶೆ, ನಿರಾಸೆ ಹಾಗೂ ಮಡುಗಟ್ಟಿರುವಂತಹ ಆತಂಕಗಳಿಗೆ ಈ ಎರಡೂ ಸಾಂವಿಧಾನಿಕ ಅಂಗಗಳು ನೀರೆರೆಯುತ್ತಲೇ ಬಂದಿವೆಯೇ ಹೊರತು, ಶಮನಕಾರಿ ಸೂತ್ರಗಳನ್ನು ಅನುಸರಿಸುವ ಪ್ರಯತ್ನಗಳನ್ನು ಮಾಡಿಲ್ಲ. ಶಾಸನಬದ್ಧವಾಗಿ ಹಲವು ಕಾಯ್ದೆಗಳ ರೂಪದಲ್ಲಿ ಜಾರಿಯಾಗಿರುವ ಆಹಾರ, ವಸತಿ, ದುಡಿಮೆ, ಶಿಕ್ಷಣ, ಆರೋಗ್ಯ ಹಾಗೂ ಬದುಕುವ ಹಕ್ಕುಗಳನ್ನು ಪಡೆಯುವುದೂ ಸಹ ಸಾಮಾನ್ಯ ಜನರ ಪಾಲಿಗೆ ಹಿಮಾಲಯಚಾರಣದಷ್ಟೇ ಕಠಿಣವೂ, ಜಟಿಲವೂ ಆಗಿರುವುದನ್ನು ಗಮನಿಸಿದಾಗ, ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಸಮನ್ವಯದ ಕೊರತೆ ಇರುವುದು ಎದ್ದು ಕಾಣುತ್ತದೆ. ಮತ್ತೊಂದು ನೆಲೆಯಲ್ಲಿ ನಿಂತು ನೋಡಿದಾಗ ಶಾಸಕಾಂಗದ ಈ ಪ್ರಯತ್ನಗಳನ್ನು ವಿಫಲಗೊಳಿಸುವ ಕಾರ್ಯಾಂಗದ ದುರಾಡಳಿತಗಳಿಗೆ ಶಾಸಕಾಂಗವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳೇ ನೇರವಾಗಿ-ಪರೋಕ್ಷವಾಗಿ ಬೆಂಗಾವಲಾಗಿ ನಿಂತಿರುವುದನ್ನೂ ನಾವು ಗಮನಿಸಬಹುದಾಗಿದೆ.
ಹಾಗಾಗಿಯೇ ತಳಮಟ್ಟದ ಸಮಾಜದ ಸದಸ್ಯರು ಅನೇಕ ಸಂದರ್ಭಗಳಲ್ಲಿ ತಮ್ಮ ಸಾಂವಿಧಾನಿಕ ಹಕ್ಕು ಮತ್ತು ಸೌಲಭ್ಯಗಳಿಗಾಗಿಯೂ ನ್ಯಾಯಾಂಗದ ಕದ ಬಡಿಯುವುದನ್ನು ಕಾಣಬಹುದು. ಒಂದು ಸಂವಿಧಾನಬದ್ಧ ಪ್ರಜಾಪ್ರಭುತ್ವದಲ್ಲಿ, ಶಾಸನಬದ್ಧ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ತಮ್ಮ ಜೀವನ-ಜೀವನೋಪಾಯದ ಕನಿಷ್ಠ ಲಭ್ಯತೆಗಳಿಗಾಗಿಯೂ ಜನರು ನ್ಯಾಯಾಂಗದ ಮೊರೆ ಹೋಗುವುದು ಪ್ರಜಾಪ್ರಭುತ್ವದ ವೈಫಲ್ಯವೇ ಹೊರತು ಹೆಗ್ಗಳಿಕೆಯಾಗಲಾರದು. ಸ್ವತಂತ್ರ ಭಾರತದ 75 ವರ್ಷಗಳ ನಡಿಗೆಯನ್ನು ಗಮನಿಸಿದಾಗ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ, ಅತ್ಯಾಚಾರ, ಮಹಿಳಾ ದೌರ್ಜನ್ಯ, ಸಾಕ್ಷರತೆ, ಪೌಷ್ಟಿಕತೆ, ಪ್ರಾಥಮಿಕ ಶಿಕ್ಷಣ-ಆರೋಗ್ಯ ಹಾಗೂ ಕನಿಷ್ಠ ವಸತಿ ಸೌಕರ್ಯಗಳಿಗಾಗಿ ತಳಮಟ್ಟದ ಸಮಾಜವು ನ್ಯಾಯಾಂಗದ ಮುಖಾಂತರವೇ ಹೆಚ್ಚಿನ ಮಟ್ಟಿಗೆ ಶಾಸನಬದ್ಧ ನ್ಯಾಯವನ್ನು ಗಳಿಸಿರುವುದನ್ನು ಗಮನಿಸಬಹುದು. ಇದು ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಮಹಾವೈಫಲ್ಯವೆಂದೇ ಪರಿಗಣಿಸಬೇಕಾಗುತ್ತದೆ.

ನ್ಯಾಯಾಂಗದ ಕಟಕಟೆಯಲ್ಲಿ ಆಳ್ವಿಕೆ
ಸಾಮಾನ್ಯವಾಗಿ ಯಾವುದೇ ಸಮುದಾಯ-ಸಮಾಜ-ಗುಂಪು-ಸಂಕುಲವು ಅನ್ಯಾಯ-ದಬ್ಬಾಳಿಕೆ ದೌರ್ಜನ್ಯಕ್ಕೊಳಗಾದಾಗ ಅಂತಹ ಜನರು ಶಾಸಕಾಂಗದ ತಕ್ಷಣದ ಸ್ಪಂದನೆಯನ್ನು ಅಪೇಕ್ಷಿಸುತ್ತಾರೆ. ಕಾರ್ಯಾಂಗದ ಪ್ರತಿಸ್ಪಂದನೆಗೆ ಹಾತೊರೆಯುತ್ತಾರೆ. ಇವೆರಡೂ ಕಾಣದಾದಾಗ ನ್ಯಾಯಾಂಗದ ಮೊರೆ ಹೋಗುವುದು ನಾವು ಸಾಮಾನ್ಯವಾಗಿ ಕಾಣುತ್ತಿರುವ ವಿದ್ಯಮಾನ. ಅನೇಕ ಸನ್ನಿವೇಶಗಳಲ್ಲಿ ಇಂತಹ ನೊಂದ ಜನಸಂಕುಲಗಳು, ಅಂದರೆ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು, ಶ್ರಮಿಕರು ಹಾಗೂ ಅದಿವಾಸಿಗಳು, ನ್ಯಾಯಾಂಗವೇ ಸ್ವಯಂ ಪ್ರೇರಣೆಯಿಂದ ವಿಷಯವನ್ನು ಕೈಗೆತ್ತಿಕೊಂಡು ಶಾಸಕಾಂಗದ ಪ್ರತಿನಿಧಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಅಪೇಕ್ಷಿಸುವುದನ್ನು ಗಮನಿಸಿದ್ದೇವೆ. ಇದೇ ವೇಳೆ ಶಾಸಕಾಂಗವೇ, ಅಂದರೆ ಜನಪ್ರತಿನಿಧಿಗಳೇ, ಸ್ವಯಂ ಪ್ರೇರಣೆಯಿಂದ ತಮ್ಮ ನೋವುಗಳಿಗೆ ಸ್ಪಂದಿಸಬೇಕು ಎಂಬ ನಿರೀಕ್ಷೆಯನ್ನೂ ಕಾಣಲಾಗುವುದಿಲ್ಲ. ಇದು ನಮ್ಮ ಪ್ರಜಾಪ್ರಭುತ್ವದ ಅತಿ ದೊಡ್ಡ ವೈಫಲ್ಯ ಎನ್ನಬಹುದು.
ಈ ನೆಲೆಯಲ್ಲಿ ನಿಂತು ವಸ್ತುನಿಷ್ಠವಾಗಿ ನೋಡಿದಾಗಲೇ ಸಮಕಾಲೀನ ಭಾರತದ ಆಡಳಿತ ವ್ಯವಸ್ಥೆಯಲ್ಲಿ ನ್ಯಾಯಾಂಗದಿಂದ ಜನಸಾಮಾನ್ಯರ ನಿರೀಕ್ಷೆ ಏಕೆ ಹೆಚ್ಚಾಗುತ್ತಿದೆ ಎಂಬ ವಾಸ್ತವ ಅರ್ಥವಾಗಲು ಸಾಧ್ಯ. ಭಾರತದ ಆಳುವ ವರ್ಗಗಳು ಸ್ವಯಂಪ್ರೇರಣೆಯಿಂದ ತಳಮಟ್ಟದ ಸಮುದಾಯಗಳ ನೋವುಗಳಿಗೆ ಸ್ಪಂದಿಸುವ ಅಥವಾ ಪರಿಹಾರೋಪಾಯಗಳನ್ನು ಸೂಚಿಸುವ ವ್ಯವಧಾನವನ್ನು ಕಳೆದುಕೊಳ್ಳುತ್ತಿರುವುದರಿಂದಲೇ ಕಳೆದ ಮೂರು ದಶಕಗಳಲ್ಲಿ ನ್ಯಾಯಾಂಗದ ಮಧ್ಯಪ್ರವೇಶ, ಹಸ್ತಕ್ಷೇಪ ಮತ್ತು ಜವಾಬ್ದಾರಿಯುತ ಭಾಗವಹಿಸುವಿಕೆಯೂ ಹೆಚ್ಚಾಗುತ್ತಿದೆ. ಆದರೆ ಕಳೆದ ಒಂದು ದಶಕದಲ್ಲಿ ಈ ಮಧ್ಯಪ್ರವೇಶಕ್ಕೂ ಹಲವಾರು ನಿಬಂಧನೆಗಳು, ನಿರ್ಬಂಧಗಳು ಎದುರಾಗುತ್ತಿದ್ದು, ಕೆಲವು ಸನ್ನಿವೇಶಗಳಲ್ಲಿ ನ್ಯಾಯಾಂಗವೂ ಜನಸಾಮಾನ್ಯರಿಗೆ ನಿರಾಸೆಯನ್ನೇ ತಲುಪಿಸಿರುವುದನ್ನೂ ಕಂಡಿದ್ದೇವೆ. ಈ ವೈಫಲ್ಯ ಅಥವಾ ಹಿನ್ನಡೆಯ ಕಾರಣಗಳನ್ನು ಶೋಧಿಸಿದಾಗ ನಮಗೆ ರಾಜಕೀಯ ಅಧಿಕಾರ ಕೇಂದ್ರಗಳ ಅತಿರೇಕದ ಕೇಂದ್ರೀಕರಣ ಮತ್ತು ಅವುಗಳು ಅನುಸರಿಸುವ ಆಡಳಿತ ನೀತಿಗಳೇ ಕಾರಣ ಎನ್ನುವುದು ಢಾಳಾಗಿ ಕಾಣುತ್ತದೆ.
ಈ ನಿರಾಸೆಯ ಹೊರತಾಗಿಯೂ ಭಾರತದ ನ್ಯಾಯಾಂಗವು ಹೆಚ್ಚಿನ ಸಂದರ್ಭಗಳಲ್ಲಿ ಸಾರ್ವಭೌಮ ಪ್ರಜೆಗಳ ಹಕ್ಕುಗಳನ್ನು, ಸಾಂವಿಧಾನಿಕ ಅವಕಾಶಗಳನ್ನು ಕಾಪಾಡುತ್ತಲೇ ಬಂದಿರುವುದು ಆಶಾದಾಯಕ ಎನ್ನಬಹುದು. ಸಾಂವಿಧಾನಿಕ ಚೌಕಟ್ಟಿನಲ್ಲಿ ನೋಡಿದರೂ ಶಾಸನಸಭೆಗಳ ಸಂಸದೀಯ ಸಾಂಸ್ಥಿಕ ಹಕ್ಕು ಬಾಧ್ಯತೆಗಳನ್ನು ಮೀರಿ ಹೋಗುವ ಹೆಚ್ಚಿನ ಅಧಿಕಾರವನ್ನು ಹೊಂದಿರದ ನ್ಯಾಯಾಂಗವು ಅನೇಕ ಪ್ರಸಂಗಗಳಲ್ಲಿ ಸರ್ಕಾರಗಳಿಗೆ ಸಂವಿಧಾನದ ಆಶಯಗಳನ್ನು ನೆನಪಿಸುವ ಕೈಂಕರ್ಯದಲ್ಲಿ ತೊಡಗಿದೆ. ನಿರ್ದಿಷ್ಟ ಸರ್ಕಾರಗಳ ಆಡಳಿತಾವಧಿಯಲ್ಲಿ, ನಿರ್ದಿಷ್ಟ ಪ್ರಕರಣಗಳಲ್ಲಿ ನ್ಯಾಯ ವಿತರಣೆ ವಿಳಂಬವಾಗಿದ್ದರೂ, ಬಹುಸಂಖ್ಯೆಯ ಜನರ ಅಪೇಕ್ಷೆಗೆ ವ್ಯತಿರಿಕ್ತವಾದ ತೀರ್ಪುಗಳು ಬಂದಿದ್ದರೂ, ಸರ್ಕಾರಗಳು ತಮ್ಮ ಸಾಂವಿಧಾನಿಕ ನೈತಿಕತೆ-ಆಡಳಿತ ಪ್ರಾಮಾಣಿಕತೆಯ ಗಡಿರೇಖೆಯನ್ನು ದಾಟುವಾಗೆಲ್ಲಾ ನ್ಯಾಯಾಂಗವು ಎಚ್ಚರಿಕೆಯ ಜಾಗಟೆ ಬಾರಿಸುವ ಮೂಲಕ ಆಡಳಿತ ವ್ಯವಸ್ಥೆಯ ತೂಕಡಿಕೆಯನ್ನು ತಪ್ಪಿಸಿರುವುದು ಸತ್ಯ.
ವಿಳಂಬ ನ್ಯಾಯಕ್ಕೂ ನ್ಯಾಯ ನಿರಾಕರಣೆಗೂ ಇರುವ ಅತಿಸೂಕ್ಷ್ಮ ಅಂತರವನ್ನು ಗಮನದಲ್ಲಿಟ್ಟು ನೋಡಿದಾಗ, ಭಾರತದ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಮೂಲ ಸೌಕರ್ಯ ಸಮಸ್ಯೆಗಳನ್ನು ಸಮರ್ಪಕವಾಗಿ ನಿವಾರಿಸಲು ಶಾಸಕಾಂಗವೂ ವಿಫಲವಾಗಿದೆ. ಈ ಬಗ್ಗೆ ಇತ್ತೀಚೆಗೂ ಸಹ ಸುಪ್ರೀಂಕೋರ್ಟ್ ತನ್ನ ತೀವ್ರ ಕಳವಳ ವ್ಯಕ್ತಪಡಿಸಿದ್ದು ತ್ವರಿತ ನ್ಯಾಯ ವಿತರಣೆಯ ಅವಶ್ಯಕತೆಯನ್ನು ಒತ್ತಿ ಹೇಳುತ್ತಲೇ ಬಂದಿದೆ. ನ್ಯಾಯಾಂಗ ನೇಮಕಾತಿಯನ್ನೂ ಒಳಗೊಂಡಂತೆ ಒಟ್ಟಾರೆ ನಿರ್ವಹಣೆಯಲ್ಲಿ ಸರ್ಕಾರಗಳ ನಿರ್ಲಕ್ಷ್ಯ ಹಾಗೂ ಸ್ವಜನಪಕ್ಷಪಾತ ಧೋರಣೆಯ ಪರಿಣಾಮ ನ್ಯಾಯಾಂಗವೂ ಸಹ ತೀವ್ರ ಒತ್ತಡದ ನಡುವೆಯೇ ಕಾರ್ಯನಿರ್ವಹಿಸಬೇಕಿದೆ. ಕೊಲೇಜಿಯಂ ಪದ್ಧತಿಯ ಮೂಲಕ ನ್ಯಾಯಾಧೀಶರ ನೇಮಕಾತಿಯನ್ನು ಹೆಚ್ಚು ಪಾರದರ್ಶಕಗೊಳಿಸಿದ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ನಡಿಗೆಯನ್ನೂ ಭಂಗಗೊಳಿಸುವ ಪ್ರಯತ್ನಗಳು ಕಾರ್ಯಾಂಗ-ಶಾಸಕಾಂಗದ ಮೂಲಕ ನಡೆಯುತ್ತಲೇ ಇವೆ.
ನ್ಯಾಯಾಂಗದ ಜವಾಬ್ದಾರಿಯುತ ನಡೆ
75 ವರ್ಷಗಳ ಭಾರತದ ನ್ಯಾಯಾಂಗದ ನಡಿಗೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನ್ಯಾಯಾಲಯಗಳು ಅತಿ ಹೆಚ್ಚು ಬಾರಿ ಸರ್ಕಾರಗಳ-ಕಾರ್ಯಾಂಗ ಶಾಸಕಾಂಗಗಳ ಕಾರ್ಯವೈಖರಿಯನ್ನು, ಆಡಳಿತ ನೀತಿಗಳನ್ನು ಹಾಗೂ ಕೆಲವು ಸಂವಿಧಾನ ವಿರೋಧಿ ಉಪಕ್ರಮಗಳನ್ನು ಖಂಡಿಸಿರುವುದನ್ನು, ಕೆಲವು ಸಂದರ್ಭಗಳಲ್ಲಿ ಛೀಮಾರಿ ಹಾಕಿರುವುದನ್ನೂ ಗಮನಿಸಬಹುದು. ಇತ್ತೀಚಿನ ಉದಾಹರಣೆಯಾಗಿ ಪಂಜಾಬ್, ಕೇರಳ, ತಮಿಳುನಾ̧ಡು, ಮಹಾರಾಷ್ಟ್ರ ರಾಜ್ಯಪಾಲರ ಕಾರ್ಯವೈಖರಿಯ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿರುವುದನ್ನು ಗಮನಿಸಬಹುದು. ನ್ಯಾಯಾಂಗವು ತನ್ನ ಮಹತ್ವದ ತೀರ್ಪುಗಳ ಮೂಲಕ ಭಾರತದ ಆಡಳಿತ ವ್ಯವಸ್ಥೆಯ ಲೋಪಗಳನ್ನು ಸರಿಪಡಿಸುತ್ತಲೇ ಬಂದಿದೆ. ಶಾಸಕಾಂಗದ ಜನವಿರೋಧಿ ಮಾದರಿಗಳನ್ನು ಖಂಡಿಸುತ್ತಾ, ಪ್ರಶ್ನಿಸುತ್ತಾ ನಾಗರಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ ಬಂದಿದೆ. ಆದರೂ ನ್ಯಾಯಾಂಗದ ಕೆಲವು ತೀರ್ಪುಗಳು ಸೂಕ್ಷ್ಮ ಸಾಂವಿಧಾನಿಕ ಪ್ರಜ್ಞೆಯನ್ನು ಘಾಸಿಗೊಳಿಸುವಂತೆಯೂ ಕಂಡಬರುತ್ತವೆ. ಇಂತಹ ಕೆಲವು ಪ್ರಸಂಗಗಳೇ , ನ್ಯಾಯಾಂಗದಿಂದ ಸದಾ ಅಂತಿಮ ನ್ಯಾಯವನ್ನೇ ನಿರೀಕ್ಷಿಸುವ ಸಾಮಾನ್ಯ ಜನತೆಯ ದೃಷ್ಟಿಯಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನೇ ಶಿಥಿಲಗೊಳಿಸುವುದು ಸ್ವಾಭಾವಿಕ.
ತನ್ನ ಸೀಮಿತ ಅಧಿಕಾರ ವ್ಯಾಪ್ತಿ ಹಾಗೂ ಸಾಂವಿಧಾನಿಕ ಚೌಕಟ್ಟಿನೊಳಗೇ ಕಾರ್ಯನಿರ್ವಹಿಸಬೇಕಾದ ನ್ಯಾಯಾಂಗವು ಶಾಸಕಾಂಗದ ಅಂಗಳವನ್ನು ಪ್ರವೇಶಿಸಲಾಗುವುದಿಲ್ಲ. ಹಾಗೆಯೇ ಉನ್ನತ ಶಾಸಕಾಂಗದ ಕಾರ್ಯನೀತಿಗಳಿಗೆ ಶಾಶ್ವತವಾದ ತಡೆಯೊಡ್ಡಲೂ ಸಾಧ್ಯವಾಗುವುದಿಲ್ಲ. ಹಾಗೊಮ್ಮೆ ಉನ್ನತ ನ್ಯಾಯಾಂಗವು ಕ್ರಾಂತಿಕಾರಿ ತೀರ್ಪುಗಳನ್ನು ನೀಡಿದರೂ ಸುಗ್ರೀವಾಜ್ಞೆ ಮತ್ತು ಸಂವಿಧಾನ ತಿದ್ದುಪಡಿಯ ಮೂಲಕ ಅದನ್ನು ನೇಪಥ್ಯಕ್ಕೆ ಸರಿಸುವ ಸಾಂವಿಧಾನಿಕ ವಿವೇಚನಾಧಿಕಾರ ಶಾಸಕಾಂಗಕ್ಕೆ ಇರುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಇಂತಹ ಸುಗ್ರೀವಾಜ್ಞೆಗಳೇ ಹಲವು ಜನವಿರೋಧಿ ಆಡಳಿತ ನೀತಿಗಳಿಗೆ ಕಾರಣವಾಗಿರುವುದನ್ನು ಗಮನಿಸಿದ್ದೇವೆ. ಸುಪ್ರೀಂಕೋರ್ಟ್‌ನ ತೀರ್ಪುಗಳನ್ನೂ ಅಸಿಂಧುಗೊಳಿಸುವ ಸಂಸದೀಯ ನಿರ್ಣಯಗಳನ್ನು, ಸಂವಿಧಾನ ತಿದ್ದುಪಡಿಗಳನ್ನು ಹಲವು ಸನ್ನಿವೇಶಗಳಲ್ಲಿ ಕಂಡಿದ್ದೇವೆ. ಶಾಸಕಾಂಗ ಹಾಗೂ ನ್ಯಾಯಾಂಗ ಎರಡೂ ಸಹ ಸಂವಿಧಾನದ ಚೌಕಟ್ಟಿನೊಳಗೇ ಕಾರ್ಯನಿರ್ವಹಿಸಬೇಕಾದರೂ, ಉನ್ನತ ನ್ಯಾಯಾಂಗದ ತೀರ್ಪುಗಳನ್ನು ನಿರಾಕರಿಸಲು ಸಂಸತ್ತಿಗೆ ಅಧಿಕಾರ ಇರುವುದಿಲ್ಲ. ಆದರೆ ಕೇಂದ್ರ ಸರ್ಕಾರಗಳು ಈ ವಿವೇಚನಾಧಿಕಾರವನ್ನು ಸಂವಿಧಾನ ತಿದ್ದುಪಡಿಯ ಮೂಲಕ ಬಳಸಿಕೊಂಡಿರುವುದನ್ನು ಶಹಬಾನೋ ಪ್ರಕರಣದಿಂದ ಇತ್ತೀಚಿನ ದೆಹಲಿ ಸರ್ಕಾರದ ಪ್ರಕರಣದವರೆಗೂ ಕಂಡಿದ್ದೇವೆ.
ಈ ಸವಾಲುಗಳ ನಡುವೆಯೇ ಭಾರತದ ನ್ಯಾಯಾಂಗವು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ. ನ್ಯಾಯಧೀಶರ ನೇಮಕಾತಿ, ನಿವೃತ್ತಿ ನಂತರದ ಅಪೇಕ್ಷಿತ ವೃತ್ತಿಪರತೆ, ಪ್ರಾಮಾಣಿಕತೆ ಮುಂತಾದ ವಿಚಾರಗಳು ತೀವ್ರ ಚರ್ಚೆಗೊಳಗಾಗಿದ್ದರೂ, ಇವೆಲ್ಲವನ್ನೂ ಮೀರಿದಂತೆ ಆಡಳಿತ ವ್ಯವಸ್ಥೆಯಲ್ಲಿ-ಶಾಸಕಾಂಗದಲ್ಲಿ ಮರೆಯಾಗುತ್ತಿರುವ ಸಾಂವಿಧಾನಿಕ ನೈತಿಕತೆ ಹಾಗೂ ಕಾರ್ಯಾಂಗದಲ್ಲಿ ಬೇರೂರಿರುವ ಅಪ್ರಾಮಾಣಿಕತೆ ನ್ಯಾಯಾಂಗದ ಮುಂದಿರುವ ಸವಾಲುಗಳನ್ನು ಮತ್ತಷ್ಟು ಜಟಿಲಗೊಳಿಸುತ್ತದೆ. ಶಾಸಕಾಂಗ ಹಾಗೂ ಕಾರ್ಯಾಂಗಗಳನ್ನು ಖಂಡಿತವಾಗಿಯೂ ನ್ಯಾಯದ ಕಟಕಟೆಯಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿದೆ. ಆದರೆ ನ್ಯಾಯಾಂಗವನ್ನು ಹೀಗೆ ನಿಲ್ಲಿಸಲಾಗುವುದಿಲ್ಲ. ಕೆಲವು ಸಾಂಸ್ಥಿಕ ನ್ಯೂನತೆ ಹಾಗೂ ವೈಫಲ್ಯಗಳನ್ನು ಸರಪಡಿಸುವ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆಯು ಸ್ವಾಯತ್ತವಾಗಿ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವುದಾದರೆ ಈ ಜಟಿಲ ಸಮಸ್ಯೆಗಳನ್ನೂ ಬಗೆಹರಿಸಬಹುದು.
ಆದರೆ ಅತಿಯಾದ ಅಧಿಕಾರ ಕೇಂದ್ರೀಕರಣ ಹಾಗೂ ಅಸಂಸದೀಯ ಬೆಳವಣಿಗೆಗಳು ಈ ಮಾರ್ಗದಲ್ಲಿ ಅತಿದೊಡ್ಡ ತಡೆಗೋಡೆಯನ್ನು ನಿರ್ಮಿಸಿವೆ. ಮೂಲತಃ ಭಾರತದ ಆಡಳಿತ ವ್ಯವಸ್ಥೆ ಸಂವಿಧಾನದ ಚೌಕಟ್ಟಿನೊಳಗೆ ತನ್ನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಬೇಕಾಗುತ್ತದೆ. ಶಾಸಕಾಂಗ ಹಾಗೂ ಕಾರ್ಯಾಂಗಗಳಲ್ಲಿ, ಸಂವಿಧಾನ ಕರ್ತೃ ಡಾ. ಬಿ.ಆರ್. ಅಂಬೇಡ್ಕರ್ ಆಶಿಸಿದ್ದಂತೆ, ಸಾಂವಿಧಾನಿಕ ನೈತಿಕತೆಯು ಜಾಗೃತಾವಸ್ಥೆಯಲ್ಲಿದ್ದರೆ ನ್ಯಾಯಾಂಗದ ಮೇಲಿನ ಹೊರೆ ಕಡಿಮೆಯಾಗುತ್ತದೆ. ನ್ಯಾಯಾಂಗದ ಕಾರ್ಯನಿವರ್ಹಣೆಯಲ್ಲಿ ಕಾಣಲಾಗುತ್ತಿರುವ ಆತ್ಮವಿಮರ್ಶೆ ಮತ್ತು ಆತ್ಮಾವಲೋಕನದ ಛಾಯೆಯನ್ನೂ ಇನ್ನೆರಡು ಅಂಗಗಳಲ್ಲಿ ಕಾಣಲಾಗದಿರುವುದು ಪ್ರಜಾಸತ್ತೆಯ ವೈಫಲ್ಯದ ಸೂಚಕವಾಗಿದೆ. ಆಡಳಿತದಲ್ಲಿ ಸಾಂವಿಧಾನಿಕ ನೈತಿಕತೆಯ ಕೊರತೆ ಹೆಚ್ಚಾಗುತ್ತಿರುವುದರಿಂದ ಜನಸಾಮಾನ್ಯರ ಪಾಲಿಗೆ ಸಾಮಾಜಿಕ ನ್ಯಾಯದ ಅಂತಿಮ ಆಶ್ರಯವಾಗಬೇಕಾದ ನ್ಯಾಯಾಂಗ ಇಂದು ಮೊದಲ ಆದ್ಯತೆಯಾಗಿ ಕಾಣುತ್ತಿದೆ. ಇದು ಭಾರತದ ಪ್ರಜಾಪ್ರಭುತ್ವದ ಹಿನ್ನಡೆ ಎಂದು ಭಾವಿಸಿ, ಸಂಸದೀಯ ರಾಜಕಾರಣದ ಸಾಂವಿಧಾನಿಕ ಜವಾಬ್ದಾರಿಯನ್ನು ಜನಪ್ರತಿನಿಧಿಗಳಿಗೆ ಮತ್ತೆಮತ್ತೆ ಎಚ್ಚರಿಸುವುದು ಜನತೆಯ ಆದ್ಯತೆಯಾಗಬೇಕು.
(ಕೃಪೆ : ಸಮಾಜಮುಖಿ ಮಾಸಪತ್ರಿಕೆ ಡಿಸೆಂಬರ್ 2023)
-೦-೦-೦-೦-





