• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ

ಜನತೆಯ ಬದುಕನ್ನು ಕಸಿದುಕೊಳ್ಳುವ ವ್ಯವಸ್ಥೆ ಶಿಲಾಯುಗದ ಪ್ರತಿಬಿಂಬವಾಗಿ ಕಾಣುತ್ತದೆ

ಪ್ರತಿಧ್ವನಿ by ಪ್ರತಿಧ್ವನಿ
May 27, 2026
in ಅಂಕಣ
0
ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಎಂದು ಪರಿಗಣಿಸಲು ಕಾರಣ ಎಂದರೆ ಈ ಶಾಸನಾತ್ಮಕ ಗ್ರಂಥದಲ್ಲಿ ಅಳವಡಿಸಲಾಗಿರುವ ಮಾನವೀಯ ಮೌಲ್ಯಗಳು. ನಮ್ಮ ಸಂವಿಧಾನ ಮೂಲತಃ ವ್ಯಕ್ತಿ ಕೇಂದ್ರಿತವಾದದ್ದು ಹಾಗಾಗಿಯೇ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅತಿ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಸಂವಿಧಾನದ ಅನುಚ್ಛೇದ 21 ಜನತೆಯ ಮೂಲಭೂತ ಹಕ್ಕುಗಳನ್ನು ಖಚಿತಪಡಿಸುವುದೇ ಅಲ್ಲದೆ ವೈಯುಕ್ತಿಕ ಬದುಕು ಮತ್ತು ಸ್ವಾತಂತ್ರ್ಯವನ್ನು ಖಾತರಿಗೊಳಿಸುತ್ತದೆ. ಭಾರತದ ನ್ಯಾಯಾಂಗ ಈ ಹಕ್ಕುಗಳನ್ನು ಮತ್ತೆ ಮತ್ತೆ ಪ್ರತಿಪಾದಿಸುತ್ತಿದ್ದು , ಪ್ರತಿಯೊಬ್ಬ ಪ್ರಜೆಗೂ ಘನತೆಯಿಂದ ಬದುಕುವ ಹಕ್ಕು ಕಲ್ಪಿಸಿದೆ. ವ್ಯಕ್ತಿಯ ಜೀವ ರಕ್ಷಣೆಗೆ ಅಗತ್ಯವಾದ ಜೀವನೋಪಾಯವನ್ನು ಒದಗಿಸುವ ಜವಾಬ್ದಾರಿಯನ್ನು ಚುನಾಯಿತ ಸರ್ಕಾರದ ಮೇಲೆ ಹೊರಿಸಲಾಗಿದೆ.

ಈ ದೃಷ್ಟಿಯಿಂದ ನೋಡಿದಾಗ, ಸರ್ಕಾರಗಳು ಜಾರಿಗೊಳಿಸುವ ಯಾವುದೇ ಶಾಸನಗಳು ಜನತೆಯ ಬದುಕುವ ಹಕ್ಕನ್ನು ಕಸಿದುಕೊಳ್ಳುವ ರೀತಿಯಲ್ಲಿ ಇರಲು ಸಾಧ್ಯವಿಲ್ಲ. ಮಾನವೀಯ ದೃಷ್ಟಿಯಿಂದ ನೋಡಿದಾಗ ಈ ಔದಾತ್ಯವನ್ನು ಸಂವಿಧಾನದ ಮುಖಾಂತರವೇ ನೋಡಬೇಕಿಲ್ಲ. ಒಂದು ಭೌಗೋಳಿಕ ಪ್ರದೇಶದಲ್ಲಿ ಪ್ರಜೆ ಎಂದು ಪರಿಗಣಿಸಲ್ಪಟ್ಟು ಪೌರತ್ವವನ್ನು ಪಡೆದುಕೊಂಡಿರುವ ಪ್ರತಿ ವ್ಯಕ್ತಿಗೂ ಜೀವಿಸುವ ಹಕ್ಕು ಇರುವುದು ಮನುಜ ಸಂವೇದನೆಯನ್ನು ಬಿಂಬಿಸುವ ಒಂದು ಮೌಲ್ಯ. ಯಾವುದೇ ರೀತಿಯಿಂದಾದರೂ ಇದನ್ನು ಕಸಿದುಕೊಳ್ಳುವುದು ಅಮಾನುಷವಷ್ಟೇ ಅಲ್ಲ, ಜೀವ ವಿರೋಧಿ ಲಕ್ಷಣವಾಗುತ್ತದೆ. ಇಷ್ಟು ಅರ್ಥಮಾಡಿಕೊಳ್ಳಲು ದಾರ್ಶನಿಕರ ಬಳಿ ಹೋಗಬೇಕಿಲ್ಲ ಅಥವಾ ಧರ್ಮಗ್ರಂಥಗಳಲ್ಲಿ ಹುಡುಕಾಡಬೇಕಿಲ್ಲ. ಸಮಾಜದ ಅಂತರಂಗದಲ್ಲಿ, ಆಳುವವರ ಎದೆಯಲ್ಲಿ ಮನುಷ್ಯತ್ವ ಜೀವಂತವಾಗಿದ್ದರೆ ಸಾಕು.

ನವ ಭಾರತದ ಕವಲುಹಾದಿ ಪಯಣ

ಬಹುಶಃ ವಿಕಾಸದತ್ತ ಸಾಗುತ್ತಿರುವ ನವ ಭಾರತ ಈ ಮೌಲ್ಯವನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿದೆ. ಅಸಹಾಯಕ ಜನರನ್ನು, ಅಮಾಯಕರನ್ನು, ನಿಷ್ಪಾಪಿಗಳನ್ನು ವಿನಾಕಾರಣ ಹಸಿವು-ಬಡತನಕ್ಕೆ ದೂಡುವ ಒಂದು ರಾಜಕೀಯ ಪ್ರಕ್ರಿಯೆಗೆ ನವ ಭಾರತ ಸಾಕ್ಷಿಯಾಗುತ್ತಿದೆ. ವಿಡಂಬನೆ ಎಂದರೆ ಪಾತಕ ಜಗತ್ತನ್ನು ಪ್ರತಿನಿಧಿಸುವ, ಅಪರಾಧಿಕ ಲೋಕವನ್ನು ಬಿಂಬಿಸುವ ವ್ಯಕ್ತಿಗಳು ಶಾಸನ ಸಭೆಗಳಿಗೆ ಆಯ್ಕೆಯಾಗಿ ಆಡಳಿತ ನೀತಿಗಳನ್ನು, ಕಾಯ್ದೆ ಕಾನೂನುಗಳನ್ನು ರೂಪಿಸುತ್ತಿದ್ದಾರೆ. ಈ ವೈಪರೀತ್ಯವನ್ನು ಪಕ್ಷ ರಾಜಕಾರಣದಿಂದಾಚೆ ನಿಂತು ನೋಡಿದಾಗ, ಭಾರತ ತನ್ನ ಅಂತಃಸತ್ವವನ್ನೇ ಕಳೆದುಕೊಳ್ಳುತ್ತಿರುವುದು ಢಾಳಾಗಿ ಕಾಣಿಸುತ್ತದೆ. ಪ್ರಪ್ರಥಮ ಬಾರಿಗೆ ಸ್ವತಂತ್ರ ಭಾರತದಲ್ಲಿ ಜನತೆಯ ಮತದಾನದ ಹಕ್ಕನ್ನು ಬದುಕುವ ಹಕ್ಕುಗಳಿಗೆ ಸಮೀಕರಿಸುತ್ತಿರುವುದು ಈ ಪಾತಾಳ ಕುಸಿತಕ್ಕೆ ನಿದರ್ಶನವಾಗಿ ಕಾಣುತ್ತದೆ.

ಭಾರತೀಯ ಚುನಾವಣಾ ಆಯೋಗ ತನ್ನ ಸಾಂವಿಧಾನಿಕ ಅಧಿಕಾರ ವ್ಯಾಪ್ತಿಯನ್ನು ಮೀರಿ ದೇಶಾದ್ಯಂತ ಕೈಗೊಂಡಿರುವ ಮತದಾರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)‌ ಈಗಾಗಲೇ ದೇಶದ ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದ್ದು, ಹತ್ತಾರು ವರ್ಷಗಳಿಂದ ತಮ್ಮನ್ನು ಆಳುವ ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡುವ ʼ ಮತದಾನ ʼದ ಹಕ್ಕನ್ನು ಚಲಾಯಿಸುತ್ತಿದ್ದವರು ಈಗ ತಮ್ಮದಲ್ಲದ ತಪ್ಪಿಗೆ ಕಳೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ಪರಿಭಾಷೆಯಲ್ಲಿ ʼ ಶುದ್ಧೀಕರಣ ʼ ಎಂದರೆ ಮಾಲಿನ್ಯವನ್ನು ತೊಳೆಯುವ ಒಂದು ಪ್ರಕ್ರಿಯೆ. ಚುನಾವಣಾ ಆಯೋಗದ ಪರಿಭಾಷೆಯಲ್ಲಿ ಮತದಾರ ಪಟ್ಟಿಗಳ ಶುದ್ಧೀಕರಣ ಎಂದರೆ, ಸಾಂವಿಧಾನಿಕ ಮತದಾನದ ಹಕ್ಕು ಪಡೆದಿರುವ ಜನತೆಯನ್ನು ಅಳಿಸಿಹಾಕುವುದು. ಈ ವಿಡಂಬನೆ ಈಗ ಸುಪ್ರೀಂಕೋರ್ಟ್‌ ಅಂಗಳದಲ್ಲಿದ್ದು, ನ್ಯಾಯಾಂಗದ ಅಂತಿಮ ತೀರ್ಪು ಕೋಟ್ಯಂತರ ಜನರ ಸಾಂವಿಧಾನಿಕ ಮತ್ತು ಮಾನವೀಯ ಅಸ್ತಿತ್ವವನ್ನು ನಿರ್ಧರಿಸಲಿದೆ.

 

ಸಾಂವಿಧಾನಿಕತೆಯ ಪ್ರಶ್ನೆ ಮತ್ತು ಸವಾಲು

“ ಎಸ್‌ಐಆರ್‌ ಪ್ರಕ್ರಿಯೆಯನ್ನು ಜಾರಿಗೊಳಿಸುವಲ್ಲಿ ಚುನಾವಣಾ ಆಯೋಗದ ಉದ್ದೇಶ ಸರ್ವೋಚ್ಛ ನ್ಯಾಯಾಲಯದ ವ್ಯಾಪ್ತಿಯನ್ನೂ ಮೀರುವುದಾಗಿದೆ. ಇದು ದುರದೃಷ್ಟಕರ. ಸುಪ್ರೀಂಕೋರ್ಟ್‌ ಈ ಪ್ರಕ್ರಿಯೆಯ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ. ಮತದಾರ ಪಟ್ಟಿ, ಮತ ಚಲಾವಣೆಯ ಹೊರತಾಗಿ ಯಾವುದೇ ರೀತಿಯಲ್ಲೂ ಗುರುತಿನ ಚೀಟಿ ಅಲ್ಲ ” ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್‌ ಬಿ ಲೋಕುರ್‌ ಹೇಳುತ್ತಾರೆ. “ ಭಾರತೀಯ ಚುನಾವಣಾ ಆಯೋಗ ಪೌರತ್ವವನ್ನು ನಿರ್ಧರಿಸಲಾಗುವುದಿಲ್ಲ ಆದರೆ ಎಸ್‌ಐಆರ್‌ ಅದಕ್ಕಾಗಿಯೇ ಬಳಕೆಯಾಗುತ್ತಿದೆ. ಸಂವಿಧಾನವು ಚುನಾವಣಾ ಆಯೋಗಕ್ಕಾಗಲೀ ಇತರ ಯಾವುದೇ ಸಂಸ್ಥೆಗಾಗಲೀ ಅನಿಯಂತ್ರಿತ ಅಧಿಕಾರ ನೀಡುವುದಿಲ್ಲ. ಪ್ರತಿ ವ್ಯಕ್ತಿ/ಸಂಸ್ಥೆಯೂ ಸಂವಿಧಾನವನ್ನೇ ಅನುಸರಿಸಬೇಕು, ಸಾಂವಿಧಾನಿಕ ನೈತಿಕತೆ ಮತ್ತು ಕಾನೂನು ನಿಯಮವನ್ನು ಪಾಲಿಸಬೇಕು , ಆಗ ಅರಾಜಕತೆಯನ್ನು ತಪ್ಪಿಸಬಹುದು ” ಎಂದು ನ್ಯಾ. ಲೋಕುರ್‌ ವಿಷಾದ ವ್ಯಕ್ತಪಡಿಸುತ್ತಾರೆ. ( Worst Fears Coming True’: Why BJP Chief Ministers’ Plans to Link SIR to Welfare Raises Serious Concerns ದ ವೈರ್‌ )
ಎಸ್‌ಐಆರ್‌ ಪ್ರಕ್ರಿಯೆಯ ಸಾಂವಿಧಾನಿಕತೆ ಇನ್ನೂ ನಿರ್ಧಾರವಾಗಬೇಕಿದೆ. ಸರ್ವೋಚ್ಛ ನ್ಯಾಯಾಲಯ ಈ ಪ್ರಶ್ನೆಯನ್ನು ಈವರೆಗಿನ ವಿಚಾರಣೆಗಳಲ್ಲಿ ಸ್ಪಷ್ಟವಾಗಿ ಪರಿಗಣಿಸಿಲ್ಲ. ಆದರೆ ಅಂತಿಮ ನ್ಯಾಯ ಈ ಪ್ರಶ್ನೆಯಲ್ಲೇ ಸಿಗಬೇಕಿದೆ. ಈ ನಡುವೆ ಮತ್ತೊಂದು ಅಸ್ಸಾಂ ಆಗಲು ಹೊರಟಿರುವ ಪಶ್ಚಿಮ ಬಂಗಾಲ ಮತ್ತು ಬಿಹಾರದ ಚುನಾಯಿತ ಬಿಜೆಪಿ ಸರ್ಕಾರಗಳು, ಈ ನಿಷ್ಕರ್ಷೆಯಾಗುವ ಮುನ್ನವೇ ಪರಿಷ್ಕೃತ ಮತದಾರರ ಪಟ್ಟಿಯನ್ನು ಜನರ ಪೌರತ್ವ ನಿರ್ಧರಿಸಲು ಮುಂದಾಗುತ್ತಿರುವುದು ಆತಂಕಕಾರಿ ವಿಚಾರ. ಇನ್ನೂ ಅಪಾಯಕಾರಿ ಎಂದರೆ ಈ ಪಟ್ಟಿಯಿಂದ ಹೊರಗಿಡಲಾಗಿರುವ ಜನರಿಗೆ ಸಾಂವಿಧಾನಿಕ ಸೌಲಭ್ಯ, ಸವಲತ್ತುಗಳನ್ನು ರದ್ದುಪಡಿಸುವ ನಿರ್ಧಾರಗಳು. ಮತದಾನದ ಹಕ್ಕಿಗೂ ಬದುಕುವ ಹಕ್ಕಿಗೂ ಯಾವುದೇ ಸಂಬಂಧ ಇಲ್ಲ ಎನ್ನುವುದಕ್ಕೆ ಸಂವಿಧಾನವೇ ಸಾಕ್ಷಿಯಾಗಿರುವಾಗ ಸರ್ಕಾರಗಳು ಈ ನಿರ್ಧಾರ ತಳೆಯುವುದು ಹೇಗೆ ಸಾಧ್ಯ ?

ಸಾರ್ವತ್ರಿಕ ಮತದಾನ ವ್ಯವಸ್ಥೆಯಲ್ಲಿ ಪ್ರತಿ ಪ್ರಜೆಗೂ ಮತದಾನದ ಪರಮಾಧಿಕಾರ ಇರುತ್ತದೆ. ಕಾನೂನಾತ್ಮಕವಾಗಿ ಪೌರತ್ವವನ್ನು ನಿರಾಕರಿಸಲ್ಪಡುವ ವ್ಯಕ್ತಿಗಳಿಗೆ ಮಾತ್ರ ಈ ಹಕ್ಕನ್ನು ನಿರಾಕರಿಸಬಹುದು. ಒಂದು ವೇಳೆ ಮತದಾನದ ಹಕ್ಕು ಪಡೆಯುವುದು ವಿಳಂಬವಾದರೂ, ಅಂತಹ ಜನರಿಗೆ ಸರ್ಕಾರಿ ಸವಲತ್ತುಗಳನ್ನು, ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ನಿರಾಕರಿಸಲು ಬರುವುದಿಲ್ಲ. ಇದು ಪ್ರಜಾತಂತ್ರ ವಿರೋಧಿಯಷ್ಟೇ ಅಲ್ಲದೆ ಸಂವಿಧಾನ ವಿರೋಧಿ ಕ್ರಮವೂ ಆಗುತ್ತದೆ. ಆದರೆ ಈ ಎರಡೂ ಸರ್ಕಾರಗಳು, ಮತದಾರ ಪಟ್ಟಿಯಿಂದ ಹೊರಗಿಡಲ್ಪಟ್ಟಿರುವವರಿಗೆ ಸರ್ಕಾರಿ ಯೋಜನೆಗಳು ಯಾವುದೂ ಅನ್ವಯಿಸುವುದಿಲ್ಲ ಎಂದು ಅಧಿಕೃತವಾಗಿ ಆದೇಶಿಸಿವೆ. ಬಿಹಾರ ಸರ್ಕಾರ ಅಂತಹ ವ್ಯಕ್ತಿಗಳ ಬ್ಯಾಂಕ್‌ ಖಾತೆಗಳನ್ನೂ ರದ್ದುಪಡಿಸಲು ಆದೇಶಿಸಿರುವುದಾಗಿ ವರದಿಯಾಗಿದೆ.

ಸಮಾಜದ ತಳಪಾಯ ಅಪಾಯದಲ್ಲಿ

ಇದು ಕೋಟ್ಯಂತರ ಜನರ ಮೂಲಭೂತ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತದೆ. ಎಸ್‌ಐಆರ್‌ನಿಂದ ಹೊರಗಿಡಲ್ಪಟ್ಟ ಮತದಾರರೊಂದಿಗೆ ಅವರನ್ನೇ ನಂಬಿರುವ ಕುಟುಂಬ ಸದಸ್ಯರೂ ಈ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಇದು ಕೋಟ್ಯಂತರ ಜನರನ್ನು ಪರೋಪಜೀವಿಗಳಾಗಿ ಮಾಡಿಬಿಡುತ್ತದೆ. ಸಮಕಾಲೀನ ಪರಿಭಾಷೆಯಲ್ಲಿ ʼ ಪರೋಪಜೀವಿ ಜಿರಳೆಗಳ ʼ ಸಂಖ್ಯೆ ಉಲ್ಬಣಿಸುತ್ತದೆ. ಈ ಆಡಳಿತ ನೀತಿಗಳು ಎರಡು ರಾಜ್ಯಗಳಿಗೇ ಸೀಮಿತವಾಗಿರುತ್ತದೆ ಎಂಬ ಭರವಸೆಯೂ ಇರುವುದಿಲ್ಲ. ಪಡಿತರ ಚೀಟಿ, ಬ್ಯಾಂಕ್‌ ಖಾತೆಯನ್ನು ಕಳೆದುಕೊಳ್ಳುವ ದುಡಿಯುವ ಜನರು ಖಾಸಗಿ ವಲಯದಲ್ಲೂ ನೌಕರಿ ಪಡೆಯಲಾಗದೆ ಬೀದಿ ಪಾಲಾಗಬೇಕಾಗುತ್ತದೆ. ಈ ಅಪಾಯಗಳ ಹೊರತಾಗಿಯೂ ಬಿಹಾರ ಮತ್ತು ಪಶ್ಚಿಮ ಬಂಗಾಲ ಸರ್ಕಾರಗಳು ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಲು ಮತದಾರ ಪಟ್ಟಿಯನ್ನು ಆಧಾರವಾಗಿ ಪರಿಗಣಿಸಲು ಉತ್ಸುಕವಾಗಿವೆ.

ಪಶ್ಚಿಮ ಬಂಗಾಲದ ಬಿಜೆಪಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಮ್ಮ ಪೂರ್ವಾಶ್ರಮದ ಚಟುವಟಿಕೆಗಳನ್ನು ಮರೆತು ಹಿಂದುತ್ವ ರಾಜಕಾರಣದ ಮುಖವಾಣಿಯಾಗಲು ತಯಾರಾಗುತ್ತಿದ್ದಾರೆ. ಅಧಿಕಾರ ವಹಿಸಿಕೊಂಡ ಮರುದಿನವೇ ನಡೆದ ಸಚಿವ ಸಂಪುಟ ಸಭೆಯಲ್ಲಿ ತೃಣಮೂಲ ಸರ್ಕಾರದ ಲಕ್ಷ್ಮಿ ಭಂಡಾರ ಯೋಜನೆಯಡಿ ಹೆಣ್ಣು ಮಕ್ಕಳಿಗೆ ನೀಡುವ ಮಾಸಿಕ 1500 ರೂಗಳನ್ನು 3000 ರೂಗಳಿಗೆ ಹೆಚ್ಚಿಸಿದೆ. ಆದರೆ ಈ ಹೆಚ್ಚಳ ಅಥವಾ ಸೌಲಭ್ಯ ಎಸ್‌ಐಆರ್‌ ಮತವಂಚಿತರಿಗೆ ಅನ್ವಯಿಸುವುದಿಲ್ಲ ಎಂದೂ ಘೋಷಿಸಿದ್ದಾರೆ. ಸಂವಿಧಾನವನ್ನು ಪ್ರಮಾಣೀಕರಿಸಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಸಮಾಜದಲ್ಲಿ ಅಸಮಾನತೆಯನ್ನು ಹೆಚ್ಚಿಸುವ ತಾರತಮ್ಯ ನೀತಿ ಜಾರಿಗೊಳಿಸುವುದು ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಸಲ ಇರಬಹುದು.

ಈ ಮತವಂಚಿತ-ಸೌಲಭ್ಯವಂಚಿತರ ಸಂಖ್ಯೆ ಪಶ್ಚಿಮ ಬಂಗಾಲದಲ್ಲಿ 89 ಲಕ್ಷ, ಬಿಹಾರದಲ್ಲಿ 47 ಲಕ್ಷ ಇದೆ. ಇದನ್ನು ಕೌಟುಂಬಿಕ ನೆಲೆಯಲ್ಲಿ ನೋಡಿದಾಗ ಕನಿಷ್ಠ ನಾಲ್ಕು ಕೋಟಿ ಜನರು ಬೀದಿ ಪಾಲಾಗುವುದನ್ನು ಗುರುತಿಸಬಹುದು. “ಹಲವು ವಿಧಗಳಲ್ಲಿ ಇದು ನಮ್ಮನ್ನು ಕಾಡುತ್ತಿದ್ದ ಭೀಕರ ಆತಂಕಗಳನ್ನು ನಿಜವಾಗಿಸುತ್ತಿವೆ ” ಎಂದು ಸತಾರ್ಕ್ ನಾಗರಿಕ್ ಸಂಘಟನ್ ಮತ್ತು ಜನರ ಮಾಹಿತಿ ಹಕ್ಕು ಅಭಿಯಾನದ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಹೇಳುತ್ತಾರೆ. “ಚುನಾವಣಾ ಆಯೋಗವು ಎಸ್‌ಐಆರ್‌ ಮೂಲಕ, ನಾಗರಿಕರಿಗೆ ಮಾತ್ರ ಮತ ಚಲಾಯಿಸಲು ಅವಕಾಶವಿರುವುದರಿಂದ ನಾವು ಪೌರತ್ವವನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಆದ್ದರಿಂದ ಈ ಎಲ್ಲಾ ಸಾಕ್ಷಿ ಪುರಾವೆಗಳು ಬೇಕಾಗುತ್ತವೆ ಎಂದು ಹೇಳುತ್ತಿದ್ದರೂ, ಎಸ್ಐಆರ್ ಅಂಚಿನಲ್ಲಿರುವ ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಭಯ ಸದಾ ಇದ್ದೇ ಇರುತ್ತದೆ ” ಎಂದು ಅಂಜಲಿ ಭರದ್ವಾಜ್‌ ಆತಂಕ ವ್ಯಕ್ತಪಡಿಸಿದ್ದಾರೆ. (‘Worst Fears Coming True’: Why BJP Chief Ministers’ Plans to Link SIR to Welfare Raises Serious Concerns – ದ ವೈರ್‌ )

ಕಳೆದುಕೊಳ್ಳುವವರ ಭವಿಷ್ಯ ಏನು ?
ಒಂದು ವೇಳೆ ಮುಂಬರುವ ದಿನಗಳಲ್ಲಿ ಎಸ್‌ಐಆರ್‌ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ವಿಚಾರಣೆಗೊಳಪಡಿಸಿ ಇಡೀ ಪ್ರಕ್ರಿಯೆಯನ್ನು ಅಸಾಂವಿಧಾನಿಕ ಎಂದು ಅಸಿಂಧುಗೊಳಿಸಿದರೆ ಆಗ ಈ ಸೌಲಭ್ಯ ವಂಚಿತರ ಪರಿಸ್ಥಿತಿ ಏನಾಗಬಹುದು ? ಇವರು ಕಳೆದುಕೊಂಡ ಸೌಲಭ್ಯಗಳನ್ನು ಮರಳಿಸಲಾಗುತ್ತದೆಯೇ ? ಮಧ್ಯಪ್ರಾಚ್ಯದ ಬಿಕ್ಕಟ್ಟು ಮತ್ತು ಅಮೆರಿಕ-ಇರಾನ್‌ ಯುದ್ಧದ ಹಿನ್ನೆಲೆಯಲ್ಲಿ ಈಗಾಗಲೇ ಆರ್ಥಿಕ ಬಿಕ್ಕಟ್ಟು ತೀವ್ರವಾಗುತ್ತಿದ್ದು ಸಾಮಾನ್ಯ ಜನರ ನಿತ್ಯಾವಶ್ಯ ವಸ್ತುಗಳೂ ಸಹ ಕೈಗೆಟುಕದಂತಾಗುತ್ತಿದೆ. ಈ ವಿಷಮ ಸನ್ನಿವೇಶದಲ್ಲಿ ರೇಷನ್‌ ಕಾರ್ಡ್‌, ಬ್ಯಾಂಕ್‌ ಖಾತೆಯನ್ನು ರದ್ದುಪಡಿಸುವುದರಿಂದ ಲಕ್ಷಾಂತರ ಜನರು ಅಕ್ಷರಶಃ ಭಿಕಾರಿಗಳಾಗಿಬಿಡುತ್ತಾರೆ.

ಜೂನ್‌ 24 2025ರಂದು ಭಾರತೀಯ ಚುನಾವಣಾ ಆಯೋಗ ಹೊರಡಿಸಿದ ಅಧಿಸೂಚನೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಆರಂಭಿಸುವುದರ ಉದ್ದೇಶಗಳನ್ನು ಸ್ಪಷ್ಟಪಡಿಸಿತ್ತು. ವ್ಯಾಪಕ ನಗರೀಕರಣ , ಆಗಾಗ್ಗೆ ನಡೆಯುವ ವಲಸೆ ಈ ಎರಡು ಪ್ರಕ್ರಿಯೆಗಳನ್ನು ಪ್ರಸ್ತಾಪಿಸಿತ್ತು. ತನ್ನ ಪತ್ರಿಕಾ ಹೇಳಿಕೆಯಲ್ಲಿ ಹೊಸದಾಗಿ ಮತದಾನದ ಹಕ್ಕು ಪಡೆಯುವವರ ಸೇರ್ಪಡೆ, ಸಾವುಗಳ ದಾಖಲಾಗದೆ ಇರುವುದು ಮತ್ತು ಅಕ್ರಮ ವಿದೇಶಿ ವಲಸಿಗರು ಮತದಾರ ಪಟ್ಟಿಯಲ್ಲಿರುವುದೂ ಸಹ ಕಾರಣ ಎಂದು ಹೇಳಿತ್ತು. ತನ್ನ ಅಧಿಕೃತ ಅಧಿಸೂಚನೆಯಲ್ಲಿ ಅಕ್ರಮ ವಲಸಿಗರನ್ನು ಪ್ರಸ್ತಾಪಿಸಿಲ್ಲ ಎಂದು ಸುಪ್ರೀಂಕೋರ್ಟ್‌ ಸಹ ಜನವರಿಯಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವನ್ನು ಎಚ್ಚರಿಸಿತ್ತು.

ಅದೇನೇ ಇರಲಿ, ಬಿಹಾರ ಮತ್ತು ಪಶ್ಚಿಮ ಬಂಗಾಲದ ಚುನಾವಣೆಗಳು ಮುಗಿದು ಸರ್ಕಾರಗಳು ರಚನೆಯಾಗಿದ್ದರೂ ಈವರೆಗೂ ಆ ರಾಜ್ಯಗಳಲ್ಲಿ ಗುರುತಿಸಲಾದ ʼ ಅಕ್ರಮ ವಿದೇಶಿ ವಲಸಿಗರ ʼ ನಿಖರ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಇದು ಇಡೀ ಪ್ರಕ್ರಿಯೆಯ ಪಾರದರ್ಶಕತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ಸಂವಿಧಾನದ ನಿಯಮಗಳ ಅನುಸಾರ ಸರ್ಕಾರಗಳು ಕೈಗೊಳ್ಳುವ ಯಾವುದೇ ಯೋಜನೆಗಳು, ಉಪಕ್ರಮಗಳು ಪಾರದರ್ಶಕವಾಗಿರಬೇಕು. ಇದು ಸಾಂವಿಧಾನಿಕ ನೈತಿಕತೆಯ (Constitutional Morality) ಪ್ರಶ್ನೆ. ಉತ್ತರದಾಯಿತ್ವದ ಪ್ರಶ್ನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಪ್ರಜೆಗಳಿಗೂ ಮತದಾನದ ಹಕ್ಕು ಲಭ್ಯವಾಗಿದ್ದೇ 20ನೆಯ ಶತಮಾನದಲ್ಲಿ, 1917ರ ರಷ್ಯಾ ಕ್ರಾಂತಿಯ ನಂತರದಲ್ಲಿ. ಇತಿಹಾಸದಲ್ಲಿ ಪ್ರಪ್ರಥಮವಾಗಿ ಮಹಿಳೆಯರಿಗೆ ಮತದಾನದ ಹಕ್ಕು ದೊರೆತಿದ್ದು 1918ರಲ್ಲಿ ರಷ್ಯಾದ ಕಮ್ಯುನಿಸ್ಟ್‌ ಸರ್ಕಾರದ ಆಳ್ವಿಕೆಯಲ್ಲಿ. ಈ ಪೂರ್ವನಿದರ್ಶನವೇ (Precedent) ಭಾರತವನ್ನೂ ಒಳಗೊಂಡಂತೆ ಎಲ್ಲ ದೇಶಗಳಲ್ಲೂ ಸಾರ್ವತ್ರಿಕ ಮತದಾನದ ಹಕ್ಕು (Universal Franchise) ಮಾನ್ಯತೆ ಪಡೆಯಲು ಕಾರಣವಾಯಿತು.

ಮತದಾನದ ಹಕ್ಕು ರಾಜಕೀಯ ಅಸ್ತ್ರ
ಡಾ. ಬಿ.ಆರ್.‌ ಅಂಬೇಡ್ಕರ್‌ ಈ ನೀತಿಯನ್ನು ಸಂವಿಧಾನದಲ್ಲಿ ಅಳವಡಿಸಿದ್ದೇ ಅಲ್ಲದೆ “ ಒಬ್ಬ ಪ್ರಜೆ ಒಂದು ಮತ ಒಂದು ಮೌಲ್ಯ ” ಎಂಬ ಅಮೂಲ್ಯ ಸೂತ್ರವನ್ನು ಸಾಂವಿಧಾನಿಕವಾಗಿ ಜಾರಿಗೊಳಿಸಿದ್ದರು. ಈಗ ಎಸ್‌ಐಆರ್‌ ಪ್ರಕ್ರಿಯೆಯ ಮೂಲಕ , ಇಂದಿನವರೆಗೂ ನಿಖರವಾಗಿ ನಿಷ್ಕರ್ಷೆಯಾಗದ ʼ ವಿದೇಶಿ ಅಕ್ರಮ ವಲಸಿಗರ ʼ ನೆಪದಲ್ಲಿ ಈ ಮತವನ್ನೇ ಲಕ್ಷಾಂತರ ಜನರಿಗೆ ನಿರಾಕರಿಸಲಾಗುತ್ತಿದೆ. ಚುನಾವಣೆಗಳಲ್ಲಿ ಮಾರುಕಟ್ಟೆಯ ಸರಕಿನಂತಾಗಿದ್ದ ಮತ (Vote) ಎಸ್‌ಐಆರ್‌ ಪ್ರಕ್ರಿಯೆಯ ಮೂಲಕ ರಾಜಕೀಯ ಪಗಡೆಯಾಟದ ದಾಳವಾಗಿ ಪರಿಣಮಿಸಿದೆ. ಇದು ಭವಿಷ್ಯ ಭಾರತದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯಾಗಿದ್ದು, ಸಂವಿಧಾನವನ್ನು ಒಪ್ಪುವ ಎಲ್ಲ ರಾಜಕೀಯ ನಾಯಕರು ಪಕ್ಷಾತೀತವಾಗಿ ವಿರೋಧಿಸಬೇಕಿದೆ.
ಆದರೆ ಬಿಹಾರ, ಪಶ್ಚಿಮ ಬಂಗಾಲ, ಅಸ್ಸಾಂ ಮತ್ತು ಕೇಂದ್ರ ಸರ್ಕಾರಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿ ಅಧಿಕಾರ ಪಡೆದಿರುವ ಅಂಬೇಡ್ಕರ್-ಲೋಹಿಯಾ ಅನುಯಾಯಿಗಳು, So called ಸಮಾಜವಾದಿ ಹಿನ್ನೆಲೆಯ ಸಂಸದರು, ಜಾತ್ಯತೀತ ಎಂದು ನಾಮಾಂಕಿತ ಪಕ್ಷದ ಜನಪ್ರತಿನಿಧಿಗಳು ಎಸ್‌ಐಆರ್‌ ವಿರುದ್ಧ ದನಿ ಎತ್ತುವವರಲ್ಲಿ ಮೊದಲಿಗರಾಗಬೇಕಿತ್ತು. ಏಕೆಂದರೆ ಇದು ಸಂವಿಧಾನ ಭಾರತದ ಜನರಿಗೆ ನೀಡಿದ ಅತ್ಯಮೂಲ್ಯ ಆಸ್ತಿ ʼ ಮತ ʼವನ್ನು ಕಸಿದುಕೊಳ್ಳುತ್ತಿದೆ. ದುರದೃಷ್ಟವಶಾತ್‌ ಭಾರತದ ರಾಜಕಾರಣದಲ್ಲಿ ತತ್ವ-ಸಿದ್ಧಾಂತಗಳೂ ಬಳಕೆಯ ಸೇತುವೆಗಳಾಗಿ, ದಡ ಮುಟ್ಟಿಸುವ ವಾಹಕಗಳಾಗಿ, ದಡ ದಾಟಿಸುವ ನಾವೆಗಳಾಗಿ ಪರಿಣಮಿಸಿವೆ. ಈ ಹಾದಿಯಲ್ಲಿ ತಾತ್ವಿಕ ಮೌಲ್ಯಗಳೆಲ್ಲವೂ ನೀರುಪಾಲಾಗಿ, ಅಧಿಕಾರದ ವ್ಯಾಮೋಹವೊಂದೇ ದಡ ಸೇರುತ್ತದೆ.

ಮಿಲೆನಿಯಂ ಜಗತ್ತಿನ ಭವಿಷ್ಯದ ಕಾಣ್ಕೆ
ಕೋಟ್ಯಂತರ ಸಂಖ್ಯೆಯಲ್ಲಿರುವ ಮಿಲೆನಿಯಂ ಜಗತ್ತಿಗೆ, ಜಿರಳೆಯನ್ನು ಸಂಕೇತಿಸಿ ಡಿಜಿಟಲ್‌ ಸಂಘರ್ಷಕ್ಕೆ ಮುಂದಾಗಿರುವ ಯುವ ಜನಾಂಗಕ್ಕೆ ಏನೆಂದು ಉತ್ತರ ಹೇಳುವುದು ? ಭವಿಷ್ಯದ ಭಾರತ ಹೀಗೇ ಇರುತ್ತದೆ ಎಂದು ಖಚಿತಪಡಿಸುವುದೇ ? ಸಾಧ್ಯವೇ ಇಲ್ಲ, ಡಾ. ಅಂಬೇಡ್ಕರ್‌, ನೆಹರೂ, ಠಾಗೋರ್‌, ಗಾಂಧಿ ಮತ್ತಿತರ ಸ್ವಾತಂತ್ರ್ಯ ಸಂಗ್ರಾಮಿಗಳು ಕಟ್ಟಿದ ಕನಸಿನ ಭಾರತವನ್ನು ಮರುಕಟ್ಟುತ್ತೇವೆ ಎಂದು ಭರವಸೆ ನೀಡುವುದೇ ? ಆರ್ಥಿಕ ಬಿಕ್ಕಟ್ಟು, ಸಾಮಾಜಿಕ ಸಂಘರ್ಷ ಮತ್ತು ಮಾರುಕಟ್ಟೆ ಶೋಷಣೆಯಿಂದ ತತ್ತರಿಸಿ ಹೋಗುತ್ತಿರುವ ಭಾರತದ ಕೋಟ್ಯಂತರ ದುಡಿಯುವ ಜನತೆ ತಮ್ಮ ಸಹವರ್ತಿಗಳು ಅನ್ಯಾಯಕ್ಕೊಳಗಾಗುತ್ತಿರುವ ಲಕ್ಷಾಂತರ ಅಭಾಗ್ಯರ ಕಡೆ ನೋಡಬೇಡವೇ ? ಈ ಜನರನ್ನೇ ಸಂಘಟಿಸಿ, ಹುರಿದುಂಬಿಸಿ ವಿಭಿನ್ನ ರಾಜಕೀಯ ಬಾವುಟಗಳ ಕಡೆಗೆ ಆಕರ್ಷಿಸಿ ಅಧಿಕಾರ ಪಡೆಯುವ, ಶಾಸನ ಸಭೆಗಳನ್ನು ಪ್ರವೇಶಿ ಸಕಲ ಸವಲತ್ತುಗಳನ್ನು ಅನುಭವಿಸುವ ಜನಪ್ರತಿನಿಧಿಗಳಿಗೆ ಈ ಆಲೋಚನೆ ಇರಬೇಕಲ್ಲವೇ ?

ಹೌದು ಇರಲೇಬೇಕು. ಆದರೆ ಈ ಜನಪ್ರತಿನಿಧಿಗಳು ಉಸಿರುಗಟ್ಟಿದವರಂತೆ ಕಾಣುತ್ತಿದ್ದಾರೆ. ಸಾಂಕೇತಿಕ ವಿರೋಧ ವ್ಯಕ್ತವಾಗುತ್ತಿದೆ. ಪರ್ಯಾಯಗಳ ಸೂಚನೆ ನೀಡಲಾಗುತ್ತಿದೆ. ಆದರೆ ಇದು ಕೇವಲ ಎಸ್‌ಐಆರ್‌ ಅಥವಾ ಮತವಂಚಿತರ ಪ್ರಶ್ನೆಯಲ್ಲ. ಇದು ಭಾರತೀಯ ಪ್ರಜಾಪ್ರಭುತ್ವದ ಭವಿಷ್ಯದ ಪ್ರಶ್ನೆ. ಮಿಲೆನಿಯಂ ಯುವ ಜಗತ್ತಿನ ಭವಿಷ್ಯದ ಪ್ರಶ್ನೆ. ಮಾನವೀಯ ಮೌಲ್ಯಗಳ ಅಳಿವು ಉಳವಿನ ಪ್ರಶ್ನೆ. ಹಸಿದವರನ್ನು ಅಣಕಿಸುವ ಒಂದು ಸಮಾಜವನ್ನು ನಾವು ನಿರ್ಮಿಸುತ್ತಿದ್ದೇವೆ. ಅನ್ನ ಕಸಿದು ಸಂಭ್ರಮಿಸುವ ಒಂದು ಸಂಸ್ಕೃತಿಯನ್ನು ಕಟ್ಟಿಕೊಳ್ಳುತ್ತಿದ್ದೇವೆ. ಇದಕ್ಕೆ ಕಾರಣ ಯಾರು ಎನ್ನುವುದಕ್ಕಿಂತಲೂ, ಕಾರಣಗಳು ಏನು ಎಂದು ಆಲೋಚನೆ ಮಾಡುವುದು ವರ್ತಮಾನದ ತುರ್ತು.
ಆಗ ನಮಗೆ ಕ್ಷುದ್ರ ರಾಜಕಾರಣವನ್ನೂ ದಾಟಿ ಸತ್ಯ ದರ್ಶನವಾಗುತ್ತದೆ. ವಾಸ್ತವದ ಪರಿಚಯವಾಗುತ್ತದೆ. ಎಸ್‌ಐಆರ್‌ ವಿರೋಧಿ ಹೋರಾಟದಲ್ಲಿ ನಾವು ಬಳಸುವ ʼ ನೋ ಎಸ್‌ಐಆರ್‌ ʼ ಎಂಬ ಘೋಷಣೆಯ ಹಿಂದೆ ಈ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಸುಪ್ರೀಂಕೋರ್ಟ್‌ ಎಸ್‌ಐಆರ್‌ ಪ್ರಕ್ರಿಯೆಯನ್ನು ಅಸಾಂವಿಧಾನಿಕ ಎಂದು ಆದೇಶಿಸಿದರೂ, ಇದರ ರೂಪಾಂತರಿ ಮಾದರಿಯೊಂದು ಹಿತ್ತಲಿನಲ್ಲಿ ಸಿದ್ಧವಾಗಿರುತ್ತದೆ. ಏಕೆಂದರೆ ಇದು ಕೇವಲ ಸಂವಿಧಾನದ ಪ್ರಶ್ನೆಯಲ್ಲ ಅದನ್ನೂ ಮೀರಿ ಒಂದು ದೇಶದ ನವ ನಾಗರಿಕತೆ ಮತ್ತು ಅದರ ಕಬಂಧ ಬಾಹುಗಳ ಶಕ್ತಿಯ ಪ್ರಶ್ನೆ. ಈ ಶಕ್ತಿ ಸಂಚಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪುರೋಗಾಮಿ ಮನಸ್ಸುಗಳು ಗಂಭೀರ ಆಲೋಚನೆ ಮಾಡಬೇಕಿದೆ.

“ ಇಲ್ಲವಾದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ ” ಎಂಬ ಕ್ಲೀಷೆ ಒತ್ತಟ್ಟಿಗಿರಲಿ, ಸ್ವತಃ ನಮ್ಮನ್ನು ನಾವೇ ಕ್ಷಮಿಸಿಕೊಳ್ಳಲಾಗುವುದಿಲ್ಲ.
-೦-೦-೦-೦-೦-

Tags: #CitizenRights#CivicRights#Constitution#DemocraticValues#FundamentalRights#IndianDemocracy#PoliticalAwareness#RightToLife#RightToVote#VotingRightsDemocracyHumanRightsIndiaPoliticspratidavaniSocialJustice
Previous Post

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

Next Post

ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

Related Posts

ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌
ಅಂಕಣ

ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

by ಪ್ರತಿಧ್ವನಿ
May 26, 2026
0

ನಾ ದಿವಾಕರ ಭಾರತದ ಪ್ರಜಾತಂತ್ರ ವ್ಯವಸ್ಥೆ ಹಲವು ಮಗ್ಗುಲುಗಳಿಂದ ಹಲ್ಲೆಗೊಳಗಾಗುತ್ತಿದೆ. ಮೂಲತಃ ತಳಪಾಯದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳೇ ಇಲ್ಲದ ಒಂದು ದೇಶದಲ್ಲಿ ಪ್ರಜಾಪ್ರಭುತ್ವದ ಉನ್ನತ ಮೌಲ್ಯಗಳನ್ನು ಬಿತ್ತುವ ಕಠಿಣ...

Read moreDetails
ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

May 23, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 22, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

ಸಂತೆಮಾಳದಲ್ಲಿ ಯುವಜನರ ಭವಿಷ್ಯದ ಕನಸುಗಳು

May 18, 2026
Next Post
ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada