ಕೃಷ್ಣಮಣಿ
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಕ್ತಿಯನ್ನು ಯಾವುದೇ ಪಕ್ಷ ಏಕಾಂಗಿಯಾಗಿ ಕುಗ್ಗಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಕಾಂಗ್ರೆಸ್ I.N.D.I.A ಒಕ್ಕೂಟ ರಚಿಸಿಕೊಂಡು ಒಗ್ಗಟ್ಟಿನ ಹೋರಾಟದ ಮಂತ್ರ ಜಪಿಸಿತ್ತು. ಮೊದಲಿಗೆ ಪ್ರಧಾನಿ ಅಭ್ಯರ್ಥಿ ಕಾಂಗ್ರೆಸ್ನಿಂದಲೇ ಆಗಬೇಕು ಎನ್ನುವ ಯಾವುದೇ ನಿರ್ಣಯ ಇಲ್ಲ ಎನ್ನುತ್ತ ಶುರುವಾದ ಮೈತ್ರಿ ಮಾತುಕತೆ ನಿಧಾನವಾಗಿ ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂದು ಹೇಳಿಕೆ ಕೊಡುವುದಕ್ಕೆ ಶುರು ಮಾಡಿದರು. ಇನ್ನು ಸೀಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಗೆ ಬೇಡಿಕೆ ಇಡುವುದಕ್ಕೆ ಮುಂದಾಯ್ತು. ನಂತರ ಕಾಂಗ್ರೆಸ್ I.N.D.I.A ಒಕ್ಕೂಟದ ಸಮನ್ವಯ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ನೇಮಕ ಮಾಡಿತು. ಈ ಎಲ್ಲಾ ಅಂಶಗಳು I.N.D.I.A ಒಕ್ಕೂಟಕ್ಕೆ ಮುಳುವಾದವು. ಒಕ್ಕೂಟ ಛಿದ್ರವಾಯ್ತು.
ಪಶ್ಚಿಮಬಂಗಾಳದ ಸಿಲಿಗುರಿಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ಶನಿವಾರ ಅಬ್ಬರದ ಭಾಷಣ ಮಾಡಿದ್ದರು. ಭಾನುವಾರ ಮಮತಾ ಬ್ಯಾನರ್ಜಿ ಕೊಲ್ಕತ್ತಾ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಮಾಡಿದರು. ಜೊತೆಗೆ ಸಮಾವೇಶದಲ್ಲಿ ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದರು. ಎಲ್ಲಾ ಅಭ್ಯರ್ಥಿಗಳನ್ನು ಜನರ ಮುಂದೆ ನಿಲ್ಲಿಸಿ ಗೆಲ್ಲಿಸುವಂತೆ ಕರೆ ನೀಡಿದರು. ಕಾಂಗ್ರೆಸ್ ಜೊತೆಗಿನ ಮನಸ್ತಾಪ ಸರಿಯಾಗಲಿದ್ದು, ಟಿಕೆಟ್ ಹೊಂದಾಣಿಕೆ ಮಾಡಿಕೊಳ್ತಾರೆ ಅನ್ನೋ ನಿರೀಕ್ಷೆ ಹುಸಿಯಾಯ್ತು. ಇದೀಗ ಪರಸ್ಪರ ಎದುರಾಳಿಗಳಾಗಿ ಅಖಾಡಕ್ಕೆ ಧುಮುಕುವಂತಾಯ್ತು.
ಟಿಎಂಸಿ ಪಕ್ಷದಿಂದ ಘಟಾನುಘಟಿಗಳನ್ನು ಕಣಕ್ಕಿಳಿಸಿರುವ ಮಮತಾ ಬ್ಯಾನರ್ಜಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯೂಸುಫ್ ಪಠಾಣ್ರನ್ನ ಬೆಹ್ರಾಂಪುರದಿಂದ ಕಣಕ್ಕಿಳಿಸಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಗೆ ಯೂಸೂಫ್ ಪಠಾಣ್ ಎದುರಾಳಿ ಆಗಿದ್ದಾರೆ. ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ಅಭಿಷೇಕ್ ಬ್ಯಾನರ್ಜಿ, ಅಸಾಂಸೋಲ್ನಿಂದ ಶತ್ರುಘ್ನ ಸಿನ್ಹಾರಿಗೆ ಟಿಕೆಟ್ ಸಿಕ್ಕಿದೆ. ಇನ್ನು ಲೋಕಸಭೆಯಲ್ಲಿ ಕಾಸಿಗಾಗಿ ಪ್ರಶ್ನೆ ಕೇಸ್ನಲ್ಲಿ ಸಿಲುಕಿ ಲೋಕಸಭೆ ಸದಸ್ಯತ್ವದಿಂದ ವಜಾಗೊಂಡಿದ್ದ ಮಹುವಾ ಮೊಯಿತ್ರಾಗೆ ಕೃಷ್ಣನಗರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.. ಶ್ರೀರಾಮಪುರದಿಂದ ಕಲ್ಯಾಣ್ ಬ್ಯಾನರ್ಜಿ, ಭರ್ದಮಾನ್ನಿಂದ ಮಾಜಿ ಕ್ರಿಕೆಟಿಗ ಕೀರ್ತಿ ಅಜಾದ್, ಡಂಡಂ ಕ್ಷೇತ್ರದಿಂದ ಸುಗತಾ ರಾಯ್ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಅಚ್ಚರಿಯ ಸಂಗತಿ ಅಂದ್ರೆ ಹಾಲಿ 8 ಲೋಕಸಭಾ ಸದಸ್ಯರಿಗೆ ಟಿಕೆಟ್ ತಪ್ಪಿದೆ.
ಟಿಎಂಸಿ ಹಾಗು ಕಾಂಗ್ರೆಸ್ ಸೀಟು ಹೊಂದಾಣಿಕೆ ಮಾಡಿಕೊಂಡು ಸ್ಪರ್ಧೆ ಮಾಡಿದ್ದರೆ ಮತಗಳು ಛಿದ್ರ ಆಗುತ್ತಿರಲಿಲ್ಲ. ಮತಗಳು ಒಟ್ಟಾಗಿ ಬೀಳುತ್ತಿದ್ದ ಕಾರಣದಿಂದ ಬಿಜೆಪಿ ಗೆಲುವು ತಡೆಯುವ ಪ್ರಯತ್ನ ಮಾಡಬಹುದು ಎನ್ನಲಾಗ್ತಿತ್ತು. ಆದರೆ ಇದೀಗ ಕಾಂಗ್ರೆಸ್ ಎಷ್ಟು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದೆ ಎನ್ನುವ ಬಗ್ಗೆ ಇನ್ನಷ್ಟೇ ಖಚಿತತೆ ಸಿಗಬೇಕಿದೆ. ಆದರೆ ಟಿಎಂಸಿ ರೀತಿಯಲ್ಲೇ ಎಲ್ಲಾ ಕ್ಷೇತ್ರಗಳಿಂದ ಕಾಂಗ್ರೆಸ್ ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸದರೆ ಭಾರತೀಯ ಜನತಾ ಪಾರ್ಟಿಗೆ ಬಂಪರ್ ಎನ್ನಬಹುದು. ಇಬ್ಬರ ಕಿತ್ತಾಟದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಕಳೆದ ಬಾರಿ ಗೆದ್ದಿದ್ದ ಕ್ಷೇತ್ರಗಳ ಜೊತೆಗೆ ಮತ್ತಷ್ಟು ಕ್ಷೇತ್ರಗಳಲ್ಲಿ ಕಮಲ ಕಿಲಕಿಲ ಅನ್ನೋದು ಗ್ಯಾರಂಟಿ. ಮತ್ತೆ I.N.D.I.A ಒಕ್ಕೂಟಕ್ಕೆ ಮಮತಾ ಬ್ಯಾನರ್ಜಿ ಅವರನ್ನು ಸೆಳೆಯುವ ಕೆಲಸ ಮಾಡ್ತಾರಾ..? ದೀದಿ ಕೂಡ ಮನಸು ಬಸಲಿಸಿ ಕೆಲವು ಕ್ಷೇತ್ರಗಳನ್ನು ಬಿಟ್ಟು ಕೊಡ್ತಾರಾ..? ಅನ್ನೋದ್ರ ಮೇಲೆ ಬಂಗಾಳ ಭವಿಷ್ಯ ನಿಂತಿದೆ.