ರಾಜ್ಯದ ಉಪಚುನಾವಣೆ ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಈ ಚುನಾವಣಾ ಸಮರದ ಅಖಾಡದಲ್ಲಿ ಲಾಭ ಯಾರಿಗೆ ನಷ್ಟ ಯಾರಿಗೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಬಿರುಸುಗೊಂಡಿದೆ. ಅದರಲ್ಲೂ ಹಾನಗಲ್ ಹಾಗೂ ಸಿಂದಗಿ ಎರಡರಲ್ಲೂ ಕಮಲ ಪಡೆಯ ಹಾದಿ ಕಷ್ಟ ಎಂದು ಹೇಳಲಾಗುತ್ತಿದೆಯಾದರೂ ಗೆಲುವಿನ ಓಟದಲ್ಲಿ ಕಾಂಗ್ರೆಸ್ ಒಂದು ಹೆಜ್ಜೆ ಮುಂದಿದೆ ಎಂಬ ಲೆಕ್ಕಾಚಾರಗಳು ಶುರುವಾಗಿವೆ.
ಉಪಚುನಾವಣಾ ಅಖಾಡದಲ್ಲಿ ಇನ್ನು ಸರಿಯಾಗಿ ಪ್ರಚಾರದ ಭರಾಟೆಯೇ ಆರಂಭವಾಗಿಲ್ಲ. ಆಗಲೇ ಈ ಚುನಾವಣಾ ಕದನದ ರಣಾಂಗಣದಲ್ಲಿ ಪಕ್ಷಗಳ ಬಲಾಬಲದ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಗೆಲುವಿಗಾಗಿ ರಣತಂತ್ರ ರೂಪಿಸುತ್ತಿವೆ. ಚುನಾವಣಾ ಅಖಾಡ ಯಾರಿಗೆ ಲಾಭ ತರಲಿದೆ ಯಾರಿಗೆ ನಷ್ಟ ಉಂಟು ಮಾಡಲಿದೆ ಅನ್ನೋ ಚರ್ಚೆ ಜೋರಾಗಿದೆ.
ಹಾನಗಲ್ನಲ್ಲಿ ಬಿಜೆಪಿ ಹಾದಿ ಕಷ್ಟ ಕಷ್ಟ ಹಾನಗಲ್ನಲ್ಲಿ ರೇವತಿ ಉದಾಸಿಗೆ ಟಿಕೆಟ್ ಕೈ ತಪ್ಪಿರೋ ಕಾರಣಕ್ಕೆ ಉದಾಸಿ ಕುಟುಂಬ ಒಳಪೆಟ್ಟು ನೀಡೋ ಸಾಧ್ಯತೆಯಿದೆ. ನಾಯಕತ್ವ ಬದಲಾವಣೆ ಬಳಿಕ ಲಿಂಗಾಯತ ಮತ ಕ್ರೋಢಿಕರಣ ಕಷ್ಟ ಸಾಧ್ಯವಾಗಿದ್ದು, ಕ್ಷೇತ್ರದಲ್ಲಿ ಪ್ರಬಲವಾಗಿರೋ ಲಿಂಗಾಯುತ ಸಮುದಾಯ ಬಿಎಸ್ವೈ ಆಪ್ತ ಸಜ್ಜನರ ಬಗ್ಗೆ ಗೊಂದಲದಲ್ಲಿದೆ. ಇನ್ನು ಹಾವೇರಿ ಸಿಎಂ ತವರು ಜಿಲ್ಲೆಯಾದ್ರೂ ಬೊಮ್ಮಾಯಿಗೆ ಹಾನಗಲ್ ಕ್ಷೇತ್ರದ ಮೇಲೆ ಅಷ್ಟೊಂದು ಹಿಡಿತವಿಲ್ಲ. ಶಾಸಕರಾಗಿದ್ದ ದಿವಂಗತ ಸಿಎಂ ಉದಾಸಿ ಅನಾರೋಗ್ಯದಿಂದಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಡೆಗಣಿಸಿರೋದು ಸಹ ಪಕ್ಷಕ್ಕೆ ಹಿನ್ನಡೆ ಉಂಟು ಮಾಡೋ ಸಾಧ್ಯತೆಯಿದೆ.
ಹಾನಗಲ್ನಲ್ಲಿ ಕಾಂಗ್ರೆಸ್ v/s ಬಿಜೆಪಿ
2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಕ್ಷೇತ್ರದಲ್ಲಿ ಚಿರಪರಿಚಿತರು. ಕಳೆದ ಚುನಾವಣೆಯಲ್ಲಿ ಮಾನೆ ಕೇವಲ 6514 ಮತಗಳ ಅಂತರದಿಂದಷ್ಟೇ ಪರಾಭವಗೊಂಡಿದ್ದರು. ಇನ್ನು ಶ್ರೀನಿವಾಸ್ ಮಾನೆ ಪರಾಭವಗೊಂಡ ಬಗ್ಗೆ ಕ್ಷೇತ್ರದಲ್ಲಿ ಸಹಾನೂಭುತಿ ಇದೆ. ಸೋತ ಬಳಿಕವೂ ಮಾನೆ ಒಂದೂವರೆ ವರ್ಷದಿಂದ ಕ್ಷೇತ್ರದಲ್ಲಿ ನಿರಂತರ ಸಂಚಾರ ಮಾಡಿದ್ದಾರೆ. ಮತ್ತೊಂದೆಡೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿರೋ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕಾಂಗ್ರೆಸ್ ಬಲಿಷ್ಠವಾಗಿದೆ ಅನ್ನೋ ಸಂದೇಶ ನೀಡುತ್ತಿದ್ದಾರೆ.
ಕಮಲ ಪಡೆಗೆ ಸಿಂದಗಿ ಸವಾಲು ಜೆಡಿಎಸ್ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಬಿಜೆಪಿಗೆ ತರುವುದು ಸುಲಭದ ಮಾತಲ್ಲ. ಮಾಜಿ ಶಾಸಕ ಎಂಸಿ ಮಗೂಳಿ ಪುತ್ರ ಅಶೋಕ್ ಮನಗೂಳಿ ಈಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ಮನಗೂಳಿ ನಿಧನದ ಅನುಕಂಪ ಅವರ ಪುತ್ರನಿಗೆ ಗೆಲುವು ಆಗುವ ಸಾಧ್ಯತೆಯಿದೆ. ಇನ್ನು ಬೈ ಎಲೆಕ್ಷನ್ ಉಸ್ತುವಾರಿಗಳು ಪ್ರಚಾರ ಕಣದಲ್ಲಿ ಸರಿಯಾಗಿ ಗುರುತಿಸಿಕೊಳ್ಳುತ್ತಿಲ್ಲ. ಜೊತೆಗೆ ಬಿಜೆಪಿ ನಾಯಕರಲ್ಲಿ ಬೈ ಎಲೆಕ್ಷನ್ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲ್ಲ ಅನ್ನೋ ಉದಾಸೀನತೆಯಿದ್ದು, ಇದು ಪಕ್ಷಕ್ಕೆ ಪೆಟ್ಟು ನೀಡೋ ಸಾಧ್ಯತೆಯಿದೆ.

ಸಿಂದಗಿಯಲ್ಲಿ ‘ಕೈ’ ಹಿಡಿಯುತ್ತಾ ಅನುಕಂಪ?
ಸಿಂದಗಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಮೊದಲಿದೆ ಕಾರಣವಾಗುವುದು ಅನುಕಂಪದ ಅಲೆ. ತಂದೆಯ ನಿಧನವನ್ನೇ ಅಶೋಕ್ ಮನಗೂಳಿ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಇತ್ತ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೋಡಿಯೂ ಮೋಡಿ ಮಾಡುತ್ತಿದ್ದು, ಮನಗೂಳಿ ಬದುಕಿದ್ದಾಗ ತಮ್ಮ ಪುತ್ರನನ್ನು ಕಾಂಗ್ರೆಸ್ ತೆಕ್ಕೆಗೆ ಹಾಕಿದ್ರು ಅನ್ನೋ ಹೇಳಿಕೆ ಸಂಚಲನ ಮೂಡಿಸಿದೆ. ಇನ್ನು ಎಂಸಿ ಮನಗೂಳಿ ಸಚಿವರಾಗಿದ್ದಾಗ ಕ್ಷೇತ್ರದಲ್ಲಿ ಮಾಡಿರೋ ಅಭಿವೃದ್ಧಿ ಕಾರ್ಯಗಳು ಅಶೋಕ್ ಮನಗೂಳಿಗೆ ಶ್ರೀರಕ್ಷೆಯಾಗಿವೆ.
ಹಾನಗಲ್ನಲ್ಲಿ ಬಿಜೆಪಿಯಿಂದ ಶಿವರಾಜ ಶರಣಪ್ಪ ಸಜ್ಜನರ, ಕಾಂಗ್ರೆಸ್ನಿಂದ ಶ್ರೀನೀವಾಸ ಮಾನೆ ಹಾಗೂ ಜೆಡಿಎಸ್ನಿಂದ ನಿಯಾಜ್ ಶೇಖ್ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಪಕ್ಷೇತರರೂ ಸೇರಿದಂತೆ ಈ ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳು ಸಸಿದ್ದಾರೆ. ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಭೂಸನೂರ ರಮೇಶ ಬಾಳಪ್ಪ, ಕಾಂಗ್ರೆಸ್ನಿಂದ ಅಶೋಕ ಮನಗೂಳಿ ಹಾಗೂ ಜೆಡಿಎಸ್ನಿಂದ ಅಂಗಡಿ ನಾಜೀಯಾ ಅಭ್ಯರ್ಥಿಗಳಾಗಿ ಸ್ರ್ಪಧಿಸಿದ್ದು ಒಟ್ಟು ಆರು ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಈ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಅ.16ರ ನಂತರ ಮೂರು ಪಕ್ಷಗಳ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ನಿರತರಾಗಲಿದ್ದಾರೆ. ಕಾಂಗ್ರೆಸ್ನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೇರಿದಂತೆ ಪ್ರಮುಖ ನಾಯಕರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಡಳಿತರೂಢ ಬಿಜೆಪಿಯಿಂದ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ನಾಯಕರು ಪ್ರಚಾರಕ್ಕೆ ಇಳಿಯಲಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಉಪಚುನಾವಣೆ ರಾಜಕೀಯ ಸಮೀಕರಣ ಜೋರಾಗಿದೆ. ಮತದಾರನ ಮನಗೆಲ್ಲಲು ಕೈ ಹಾಗೂ ಕಮಪ ಪಡೆ ರಣತಂತ್ರಗಳನ್ನು ಹೆಣೆಯುತ್ತಿವೆ. ಆದರೆ ಯಾವ ಪಕ್ಷದ ರಣತಂತ್ರಕ್ಕೆ ಹಾನಗಲ್ ಹಾಗೂ ಸಿಂದಗಿ ಮತದಾರ ಮಾರುಹೋಗುತ್ತಾನೆ ಅನ್ನೋದನ್ನ ಕಾದು ನೋಡಬೇಕಿದೆ.











