2014ರ ಲೋಕಸಭೆ ಚುನಾವಣೆ ಬಳಿಕ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಬಿಟ್ಟು ಉಳಿದೆಲ್ಲಾ ವಿಧಾನಸಭಾ ಚುನಾವಣೆಗಳನ್ನು ಹಾಗೂ 2019ರ ಲೋಕಸಭಾ ಚುನಾವಣೆಯನ್ನು ಸೋತಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಗೆಲುವು ಅತ್ಯಗತ್ಯವಾಗಿದೆ. ಅದರಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರಾದ ಗುಜರಾತ್ ಗೆಲುವು ಅತಿಹೆಚ್ಚು ಅಗತ್ಯವಾದುದಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಗಹನವಾದ ಚರ್ಚೆ ನಡೆಸಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ಪಕ್ಷ ಕೂದಲೆಳೆಯ ಅಂತರದಿಂದ ಗುಜರಾತ್ ಗೆಲುವನ್ನು ಕಳೆದುಕೊಂಡಿತ್ತು. ಈ ಬಾರಿ ಗೆಲುವು ಸಾಧ್ಯವೇ ಇಲ್ಲ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿಬರುತ್ತಿವೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಗೆಲುವನ್ನು ದಕ್ಕಿಸಿಕೊಳ್ಳಲೇಬೇಕು ಎಂದು ಕಾಂಗ್ರೆಸ್ ಪಣ ತೊಟ್ಟಿದೆ. ಹಾಗಾಗಿ ಸೋಮವಾರ ಹಿರಿಯ ನಾಯಕರಾದ ಪ್ರಿಯಾಂಕಾ ಗಾಂಧಿ, ಪಿ. ಚಿದಂಬರಂ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ, ಅಜಯ್ ಮಾಕೇನ್ ಸಮಾಲೋಚನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾ ತಂತ್ರಜ್ಞ ಸುನಿಲ್ ಕನುಗೋಲು ಕೂಡ ಸಲಹೆ ನೀಡಿದ್ದಾರೆ.
‘ಪ್ರತಿಧ್ವನಿ’ಗೆ ಲಭಿಸಿರುವ ಮಾಹಿತಿಗಳ ಪ್ರಕಾರ ಸೋಮವಾರದ ಸಮಾಲೋಚನೆಯಲ್ಲಿ ಕಾಂಗ್ರೆಸ್ ನಾಯಕರು ಗುಜರಾತ್ ಚುನಾವಣೆ ಗೆಲ್ಲಲು ಐದು ಅಂಶಗಳ ಮೇಲೆ ನಿಗಾ ಇರಿಸಬೇಕು ಎಂದು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.
ಮೋದಿ ಕೇಂದ್ರಿತ ಚುನಾವಣೆ ಬೇಡ
ಕಳೆದ ಬಾರಿ ಕಾಂಗ್ರೆಸ್ ಸೋಲಲು ಮೋದಿ ಕೇಂದ್ರಿತ ಚುನಾವಣೆ ನಡೆಸಿದ್ದೇ ಪ್ರಮುಖ ಕಾರಣ. ಚುನಾವಣೆ ಉದ್ದಕ್ಕೂ ಮೋದಿಯನ್ನೇ ಗುರಿಯಾಗಿಸಿಕೊಂಡರೆ ಪರೋಕ್ಷವಾಗಿ ಇದರಿಂದ ಬಿಜೆಪಿಗೆ ಸಹಕಾರಿ ಆಗಲಿದೆ. ಮೋದಿಗೆ ‘ತಾನು ಗುಜರಾತಿ’ ಎಂಬ ಕಾರ್ಡ್ ಪ್ಲೇ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಗುಜರಾತ್ ಅಸ್ಮಿತೆ ಮೊದಿ ಪರವಾಗಿ ಕೆಲಸ ಮಾಡುತ್ತದೆ. ಆದುದರಿಂದ ಈ ಬಾರಿ ಮುಖ್ಯಮಂತ್ರಿಯೂ ಸೇರಿದಂತೆ ಮತ್ತಿತರ ಸ್ಥಳೀಯ ನಾಯಕರ ವೈಫಲ್ಯಗಳ ಬಗ್ಗೆ ಮಾತ್ರ ಚರ್ಚೆ ಮಾಡಬೇಕು ಎಂದು ನಿರ್ಧರಿಸಲಾಗಿದೆ.
ರಾಜ್ಯ ಸರ್ಕಾರದ ವೈಫಲ್ಯವೇ ಅಸ್ತ್ರ
ಗುಜರಾತಿನಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅಥವಾ ವೈಫಲ್ಯದ ಬಗ್ಗೆ ಮಾತನಾಡುವ ಬದಲು ರಾಜ್ಯ ಸರ್ಕಾರದ ವೈಫಲ್ಯ, ಭ್ರಷ್ಟಾಚಾರಗಳ ಬಗ್ಗೆ ಮಾತನಾಡಬೇಕು. ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಅಪೌಷ್ಟಿಕತೆ ಎದ್ದು ಕಾಣುತ್ತಿದೆ. ದಿನದಿಂದ ದಿನಕ್ಕೆ ಬಡತನದ ರೇಖೆಗಿಂತ ಕೆಳಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ರೀತಿಯ ವಿಷಯಗಳನ್ನು ಚುನಾವಣಾ ವಿಷಯಗಳನ್ನಾಗಿ ಪರಿವರ್ತಿಸಬೇಕು ಎಂದು ತೀರ್ಮಾನಿಸಲಾಗಿದೆ.

ಆಮ್ ಆದ್ಮಿ ಪಕ್ಷದ ಬಗ್ಗೆ ಎಚ್ಚರ
ಈ ಬಾರಿ ಆಮ್ ಆದ್ಮಿ ಪಕ್ಷವು ಗುಜರಾತ್ ವಿಧಾನಸಭಾ ಚುನಾವಣಾ ಕಣದಲ್ಲಿ ಇರುವುದರ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡಲು ಕಾಂಗ್ರೆಸ್ ನಿರ್ಧರಿಸಿದೆ. ಏಕೆಂದರೆ ಮೊದಲನೆಯದಾಗಿ ಆಮ್ ಆದ್ಮಿ ಪಕ್ಷ ತನ್ನ ಮತಬ್ಯಾಂಕಿಗೆ ಕೈಹಾಕುತ್ತದೆ ಎಂದು. ಎರಡನೇಯದಾಗಿ ಆಡಳಿತವಿರೋಧಿ ಮತಗಳು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಚದುರಿಹೋದರೆ ಆಗಲೂ ಬಿಜೆಪಿಗೆ ನೆರವಾಗುತ್ತದೆ ಎಂದು. ಈ ಹಿನ್ನೆಲೆಯಲ್ಲಿ ತನ್ನ ಮತಗಳನ್ನು ತನ್ನಲ್ಲೇ ಉಳಿಸಿಕೊಳ್ಳಲು ತಂತ್ರ ರೂಪಿಸಬೇಕು. ಆಡಳಿತವಿರೋಧಿ ಮತಗಳು ತನ್ನತ್ತ ಬರುವಂತೆ ಮಾಡಬೇಕು. ಅದಕ್ಕಾಗಿ ಆಮ್ ಆದ್ಮಿ ಪಕ್ಷ ಪಂಜಾಬಿನಲ್ಲಿ ವೈಫಲ್ಯವಾಗಿರುವುದನ್ನು ಜನರಿಗೆ ತಿಳಿಸಬೇಕು. ಆಮ್ ಆದ್ಮಿ ಪಕ್ಷ ಬಿಜೆಪಿಯ ಬಿ ಟೀಂ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ನಿರ್ಧಾರ ಮಾಡಲಾಗಿದೆ.
ಪಾಟೀದಾರ್ ಸಮುದಾಯ ಉಳಿಸಿಕೊಳ್ಳಲು ಪ್ರಯತ್ನ
ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಇತ್ತೀಚೆಗೆ ಕಾಂಗ್ರೆಸ್ ತ್ಯಜಿಸಿರುವುದು ಪಕ್ಷಕ್ಕೆ ಸ್ವಲ್ಪ ನಷ್ಟವಾಗಲಿದೆ. ಪಾಟೀದಾರರು ಮೂಲತಃ ಬಿಜೆಪಿ ಮತದಾರರು. ಕಳೆದ ಬಾರಿ ಹಾರ್ದಿಕ್ ಪಟೇಲ್ ಕಾರಣಕ್ಕೆ ಸ್ವಲ್ಪ ಪ್ರಮಾಣದಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದರು. ಈಗ ಹಾರ್ದಿಕ್ ಪಟೇಲ್ ವರ್ಚಸ್ಸು ಮೊದಲಿನಂತಿಲ್ಲ. ಹಾಗಾಗಿ ಹಾರ್ದಿಕ್ ಪಟೇಲ್ ಪಕ್ಷ ಬಿಟ್ಟು ಹೋದರೂ ಅಳಿದುಳಿದ ಪಾಟೀದಾರ್ ಮತಗಳನ್ನು ಕಾಂಗ್ರೆಸಿನಲ್ಲೇ ಉಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸಬೇಕು ಎಂದು ನಿರ್ಧರಿಸಲಾಗಿದೆ.
ಸತ್ಯ ಮತ್ತು ಅಸತ್ಯದ ನಡುವೆ ಹೋರಾಟ
ದೇಶಾದ್ಯಂತ ಆರ್ ಎಸ್ ಎಸ್ ಮತ್ತು ಬಿಜೆಪಿ ಹಲವಾರು ವಿಷಯಗಳಲ್ಲಿ ಸುಳ್ಳುಗಳನ್ನು ಹರಡುತ್ತಿವೆ. ದೇಶ, ಧರ್ಮ, ಗಡಿ, ಸೇನೆ, ಸಂಸ್ಕೃತಿ ಹೆಸರಿನಲ್ಲಿ ಸುಳ್ಳುಗಳನ್ನು ಸೃಷ್ಟಿಸಿ ಯುವಕರನ್ನು ದಾರಿ ತಪ್ಪಿಸುತ್ತಿವೆ. ಬಿಜೆಪಿ ಐಟಿ ಸೆಲ್ ಅನ್ನು ಸುಳ್ಳಿನ ವಿಶ್ವವಿದ್ಯಾನಿಲಯ ಎಂತಲೇ ಕರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈಗ ದೇಶಾದ್ಯಂತ ನಮ್ಮ ಹೋರಾಟ ಅಸತ್ಯದ ವಿರುದ್ಧ ಎಂದು ಹೇಳುತ್ತಿದೆ. ಬಿಜೆಪಿಯ ಅಸತ್ಯದ ವಿರುದ್ಧ ನಾವು ಸತ್ಯವನ್ನೇ ಅಸ್ತ್ರ ಮಾಡಿಕೊಂಡು ಹೋರಾಡುತ್ತೇವೆ ಎಂದು ಹೇಳುತ್ತಿದೆ. ಗುಜರಾತ್ ಚುನಾವಣೆಯಲ್ಲೂ ಇದೇ ರೀತಿಯ ಸತ್ಯ ಮತ್ತು ಅಸತ್ಯದ ನಡುವಿನ ಹೋರಾಟ ನಡೆಸಬೇಕು. ನಾವು ಸತ್ಯದ ಪರ, ಗಾಂಧೀಜಿ ಅವರ ಪರ ಎಂದು ಹೇಳಬೇಕು. ಆ ಮೂಲಕ ಗಾಂಧಿಜೀ ಹೆಸರಿನಲ್ಲಿ ಗುಜರಾತ್ ಅಸ್ಮಿತೆಯನ್ನು ತಮ್ಮ ಪರ ಮಾಡಿಕೊಳ್ಳಬೇಕು. ಬಿಜೆಪಿ ಗಾಂಧಿಯನ್ನು ಕೊಂದ ಗೋಡ್ಸೆ ಪರ ಎಂಬುದನ್ನು ಸಾರಿ ಹೇಳಬೇಕು ಎಂದು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.






