ಮುಂಬರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಇಚ್ಛಿಸುವ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳು ಸಿದ್ದವಿದೆ ಎಂದು ಗೋವಾ ಉಸ್ತುವಾರಿ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಚಿದಂಬರಂರವರ ಈ ಹೇಳಿಕೆಯೂ ತೃಣಮೂಲ ಕಾಂಗ್ರೆಸ್ನ ಗೋವಾ ಉಸ್ತುವಾರಿ ಮಹುವಾ ಮೊಯಿತ್ರಾ ಇತ್ತೀಚಿಗೆ ಟಿಎಂಸಿಯು ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಕಾಂಗ್ರೆಸ್ನೊಂದಿಗೆ ಚುನಾವಣಾ ಪೂರ್ವ ಮೈತ್ರಿಗೆ ಸಿದ್ದವಾಗಿದೆ ಎಂದು ಹೇಳಿದ ಬೆನ್ನಲ್ಲೇ ಚಿದಂಬರಂ ಈ ಹೇಳಿಕೆ ನೀಡಿದ್ದಾರೆ.
ಮೈತ್ರಿ ಕುರಿತು ನಾನು ದಿನಪತ್ರಿಕೆ ಮತ್ತು ಸುದ್ದಮಾಧ್ಯಮಗಳಲ್ಲಿ ನೋಡಿದ್ದೇನೆ ಈ ವಿಚಾರವಾಗಿ ಟಿಎಂಸಿಯ ವರಿಷ್ಠರ ಅಧಿಕೃತ ಹೇಳಿಕೆ ಬರುವವರೆಗೂ ಕಾದು ನೋಡೋಣ ಎಂದು ಹೇಳಿದ್ದಾರೆ. ಗೊವಾದಲ್ಲಿ ಕಾಂಗ್ರೆಸ್ ಸ್ವಂತ ಬಲದಿಂದ ಬಿಜೆಪಿಯನ್ನು ಸೋಲಿಸಲಿದೆ ಒಂದು ವೇಳೆ ಕಾಂಗ್ರೆಸ್ ಪಕ್ಷವನ್ನು ಯಾರಾದರೂ ಬೆಂಬಲಿಸಲು ಮುಂದೆ ಬಂದರೆ ಅವರನ್ನು ನಾನೇಕೆ ಬೇಡ ಎನ್ನಲ್ಲಿ ಎಂದು ಪ್ರಶ್ನಿಸಿದ್ದಾರೆ.
2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, 13 ಸ್ಥಾನಗಳನ್ನು ಗೆದಿದ್ದ ಬಿಜೆಪಿ ಪ್ರಾದೇಶಿಕ ಪಕ್ಷ ಹಾಗೂ ಪಕ್ಷೇತರ ಶಾಸಕರ ಸಹಾಯ ಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿಯಿತ್ತು.
ಆದರೆ, ಸದ್ಯ ಗೋವಾದಲ್ಲಿ ಕಾಂಗ್ರೆಸ್ಗೆ ನೆರವಾಗಲು ಯಾವುದೇ ಹಳೆ ಮುಖಗಳಿಲ್ಲ ಬಹುಪಾಲು ಶಾಸಕರು ಬಿಜೆಪಿ ಪಾಲಾಗಿದ್ದರೆ, ಇನ್ನು ಕೆಲವರು ಟಿಎಂಸಿಗೆ ಸೇರಿದ್ದಾರೆ. ಹಾಲಿ ಗೋವಾದಲ್ಲಿ ಕಾಂಗ್ರೆಸ್ ಇಬ್ಬರು ಶಾಸಕರನ್ನು ಹೊಂದಿದೆ.
ಗೋವಾದಲ್ಲಿ ಈಗಾಗಲೇ ಕಾಂಗ್ರೆಸ್ ಗೋವಾ ಫಾರ್ವರ್ಡ್ ಪಾರ್ಟಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿಯನ್ನು ಘೋಷಿಸಿದ್ದು ಟಿಎಂಸಿ ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಈ ನಡುವೆ ಟ್ವೀಟ್ ಮಾಡಿರುವ ಮೊಯಿತಾ ʻʻಬಿಜೆಪಿಯನ್ನು ಸೋಲಿಸಲು ಟಿಎಂಸಿ ಎಲ್ಲವನ್ನು ಮಾಡುತ್ತದೆʼʼ ಎಂದು ಟ್ವೀಟ್ ಮಾಡಿದ್ದಾರೆ. ತಾವು ಮಾಡಿರುವ ಟ್ವೀಟ್ನಲ್ಲಿ ಕಾಂಗ್ರೆಸ್ ಹಾಗೂ ಜಿಎಫ್ಸಿ ಪಕ್ಷಗಳನ್ನು ಟ್ಯಾಗ್ ಮಾಡಿದ್ದಾರೆ.