2024 ರ ಲೋಕಸಭಾ (Lokasabha) ಚುನಾವಣೆಯ ಹೊಸ್ತಿಲಿನಲ್ಲಿ, ಕಾಂಗ್ರೆಸ್ನಲ್ಲಿ ಎದ್ದಿರುವ ಹೆಚ್ಚುವರಿ ಡಿಸಿಎಂ (DCM) ಹುದ್ದೆ ಸೃಷ್ಠಿ ವಿಚಾರವನ್ನು ಜೀವಂತವಾಗಿರಿಸಲು ಕಾಂಗ್ರೆಸ್ನ ನಾಯಕರು ನಿರ್ಧರಿಸಿದ್ದಾರೆ. ಡಾ.ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ.ಹೆಚ್.ಸಿ. ಮಹದೇವಪ್ಪ, ಕೆ.ಎನ್.ರಾಜಣ್ಣ, ಬಿ. ಜೆಡ್.ಜಮೀರ್ ಅಹ್ಮದ್ ಖಾನ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಸಚಿವರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೀಗ ಕಾಂಗ್ರೆಸ್ (Congress) ಪಾಳಯದಲ್ಲಿ ಚರ್ಚೆಯಾಗುತ್ತಿದೆ.
ಅಷ್ಟಕ್ಕೂ ಏನಿದು ಹೆಚ್ಚುವರಿ ಡಿಸಿಎಂ ಸೃಷ್ಠಿ ವಿವಾದ?ಎಂದು ನೋಡುವುದಾದರೆ ನಡೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ನಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತಿದ್ರೆ, ಉಪ-ಮುಖ್ಯಮಂತ್ರಿ ಹುದ್ದೆ ಡಿ.ಕೆ.ಶಿವಕುಮಾರ್ ಅವರ ಪಾಲಾಗಿದೆ. ಆದ್ರೆ, ಸರ್ಕಾರ ರಚನೆಯಾಗಿ ಸಂಪುಟ ರಚನೆಯಾದಾಗಲೇ ನಾಲ್ಕು ಉಪ- ಮುಖ್ಯಮಂತ್ರಿ ಹುದ್ದೆ ಸೃಷ್ಠಿಸಬೇಕಿತ್ತು. ವೀರಶೈವ-
ಲಿಂಗಾಯತ, ದಲಿತ (SC and ST ತಲಾ ಒಂದೊಂದು), ಹಿಂದುಳಿದ ವರ್ಗ, ಒಕ್ಕಲಿಗ. ಹೀಗೆ ನಾಲ್ಕು ಪ್ರಮುಖ ಪಂಗಡಗಳನ್ನು ಪರಿಗಣಿಸಿ, ಈ ನಾಲ್ಕು ಪಂಗಡಗಳು ಕಾಂಗ್ರೆಸ್ನ ಜೊತೆಗೆ ಇದೆ ಎಂಬುದನ್ನು ಅರ್ಥೈಸಿಕೊಂಡು ಪ್ರಾತಿನಿಧ್ಯತೆ ನೀಡಬೇಕಿತ್ತು. ಆದ್ರೆ, ಅಂದು ಉಪ-ಮುಖ್ಯಮಂತ್ರಿ ಹುದ್ದೆ ಒಬ್ಬರಿಗೆ ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲಟ್ಟು ಹಿಡಿದಿದ್ದು, ಇದೀಗ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಇತರೆ ನಾಯಕರುಗಳು, ನಮ್ಮನ್ನು ಡಿಸಿಎಂ ಮಾಡಿ ಎಂದು ಹೈಕಮಾಂಡ್ ನಾಯಕರ ಬೆನ್ನು ಬಿದ್ದಿದ್ದಾರೆ.
ಯಾರೆಲ್ಲಾ ಇದ್ದಾರೆ ಉಪ- ಮುಖ್ಯಮಂತ್ರಿ ರೇಸ್ನಲ್ಲಿ?
ಇನ್ನು ರಾಜ್ಯದಲ್ಲಿ ಸದ್ಯ ಹೆಚ್ಚುವರಿ ಉಪ-ಮುಖ್ಯಮಂತ್ರಿ ಹುದ್ದೆ ಸೃಷ್ಠಿಸುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ, ವೀರಶೈವ-ಲಿಂಗಾಯತ ಹಾಗೂ ಹಿಂದುಳಿದ ವರ್ಗದ ನಾಯಕರುಗಳು ಲಾಬಿ ಆರಂಭಿಸಿದ್ದು, ಎರಡ್ಮೂರು ಸಭೆಗಳನ್ನು ಪ್ರತ್ಯೇಕವಾಗಿ ನಡೆಸಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಟಾಂಗ್ ಕೊಟ್ಟಿದ್ದಾರೆ. ಇನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈ ಹಿಂದೆಯೇ ಉಪ-ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದು, ಈಗ ಕೇವಲ ಸಚಿವರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ರೆ, ಇತ್ತ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಹೊಸದಾಗಿ ಉಪ- ಮುಖ್ಯಮಂತ್ರಿ ಹುದ್ದೆ ಸೃಷ್ಠಿಸಿ ತಮ್ಮನ್ನು ಪರಿಗಣಿಸಬೇಕೆಂದು ಲಾಬಿ ಆರಂಭಿಸಿದ್ದಾರೆ.
ಚುನಾವಣೆಯವರೆಗೂ, ಚುನಾವಣೆ ಮುಗಿದ ಮೇಲೂ ವಿಚಾರ ಜೀವಂತವಾಗಿಡಬೇಕು!
ಚುನಾವಣೆವರೆಗೂ ಅಥವಾ ಚುನಾವಣೆ ಮುಗಿದ್ರೂ ಸಹ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಠಿ ವಿಚಾರವನ್ನು ಜೀವಂತವಾಗಿರಿಸಲು ಕಾಂಗ್ರೆಸ್ನ ನಾಯಕರು ಪ್ಲಾನ್ ಮಾಡಿದ್ದು, ಕಳೆದ 7 ತಿಂಗಳ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಸಂಪುಟ ರಚನೆ ಸಂದರ್ಭದಲ್ಲಿಯೇ ನಾಲ್ಕು ಉಪ-ಮುಖ್ಯಮಂತ್ರಿ ಹುದ್ದೆ ಸೃಷ್ಠಿಸಬೇಕಿತ್ತು. ಆದ್ರೆ, ಅಂದು ಹೈಕಮಾಂಡ್ ನಾಯಕರ ಮುಂದೆ ಒಂದೇ ಒಂದು ಹುದ್ದೆ ಸಾಕು ಎಂದು ಬ್ಯಾಟಿಂಗ್ ಮಾಡಿರುವ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸ್ವಪಕ್ಷದ ನಾಯಕರೇ ಹೋರಾಟಕ್ಕೆ ಇಳಿದಿದ್ದು, ಇದೀಗ ಚುನಾವಣೆಯವರೆಗೂ, ಚುನಾವಣೆ ಮುಗಿದ್ರೂ ತಮ್ಮ ಗುರಿ ತಲುಪುವವರೆಗೂ ವಿಚಾರವನ್ನು ಜೀವಂತವಾಗಿಡಲು ನಾಯಕರುಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆ, ಹೆಚ್ಚುವರಿ ಉಪ- ಮುಖ್ಯಮಂತ್ರಿ ಹುದ್ದೆ ಸೃಷ್ಠಿ ವಿಚಾರ ಇಂದು ನಾಳೆಗೆ ಮುಗಿಯುವವಂತಹುದ್ದಲ್ಲ ಎಂಬುದು ಇದರಿಂದ ಹೊರಗೆ ಬಂದಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇದಕ್ಕೆ ಯಾವ ರೀತಿ ಕೌಂಟರ್ ಕೊಡುತ್ತಾರೆ ಕಾದು ನೋಡಬೇಕಿದೆ.