ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಹೋಗುತ್ತಿದೆ. ಇದು ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಕೋವಿಡ್ ಅನ್ನು ನಿಯಂತ್ರಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಯತ್ನಗಳು ಏನೇನೂ ಸಾಲವು. ಲಸಿಕೆ ವಿಚಾರದಲ್ಲೂ ಕೇಂದ್ರ ಸರ್ಕಾರ ಸಂಪೂರ್ಣ ಯಾಮಾರಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಆರೋಪಿಸಿದ್ದಾರೆ.
ಸರ್ಕಾರದ ಸ್ವಯಂಕೃತ ಅಪರಾಧದ ಈ ಕಗ್ಗತ್ತಲ ಕಾಲದಲ್ಲಿ, ಅರಾಜಕ ಆಡಳಿತದಲ್ಲಿ ಜವಾಬ್ಧಾರಿಯುತ ಪ್ರತಿ ಪಕ್ಷವಾದ ನಾವು ಸುಮ್ಮನೇ ಕೈಕಟ್ಟಿ ಕೂರಲಾಗದು. ಆದ್ದರಿಂದ ನಮ್ಮ ಪಕ್ಷದ ಮೇಲ್ಮನೆ ಮತ್ತು ಕೆಳಮನೆಯನ್ನು ಪ್ರತಿನಿಧಿಸುತ್ತಿರುವ ಶಾಸಕರು, ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಕ್ಷೇತ್ರಗಳ ಅಭಿವೃದ್ಧಿಗೆಂದು ನೀಡಲಾಗುವ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ 1 ಕೋಟಿ ರೂಪಾಯಿಗಳನ್ನು ಲಸಿಕೆ ಖರೀದಿಸಿ ಜನರಿಗೆ ನೀಡಲು ಉದ್ದೇಶಿಸಿದ್ದೇವೆಂದು ತಿಳಿಸಿದ್ದಾರೆ.
ಇದರಿಂದ ಸುಮಾರು 90 ಕೋಟಿ ರೂಗಳಷ್ಟು ಸಂಗ್ರಹವಾಗುತ್ತದೆ. ಇನ್ನುಳಿದ ಹತ್ತು ಕೋಟಿ ರೂಗಳನ್ನು ಪಕ್ಷದ ವತಿಯಿಂದ ನೀಡಿ ಒಟ್ಟು 100 ಕೋಟಿ ರೂಗಳಲ್ಲಿ ಲಸಿಕೆ ಖರೀದಿಸಿ ಐಸಿಎಂಆರ್ ನಿಗಧಿಪಡಿಸಿರುವ ನಿಯಮಗಳಂತೆ ಲಸಿಕೆ ನೀಡುತ್ತೇವೆ. ಆದ್ದರಿಂದ ವಿಳಂಬಕ್ಕೆ ಅವಕಾಶ ನೀಡದೆ ಕೂಡಲೇ ಈ ಯೋಜನೆಗೆ ಅನುಮೋದನೆ ನೀಡಬೇಕು ಮತ್ತು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ.
ಪತ್ರದಲ್ಲಿ ಉಲ್ಲೇಖಿಸಿದ ಇತರೆ ಅಂಶಗಳು ಇಲ್ಲಿವೆ.
ನೀವು ತಪ್ಪು ಮಾಡಿದ್ದೀರಿ ಎಂದರೆ ಬಿಜೆಪಿಯ ಹಲವು ಮುಖಂಡರು ಜನರನ್ನು, ವಿರೋಧ ಪಕ್ಷಗಳನ್ನು, ಮಾಧ್ಯಮಗಳನ್ನು ನಿಂದಿಸುತ್ತಾ ಕೂತಿದ್ದಾರೆ. ಅವರಿಗೆ ಕೋವಿಡ್ ನಿಗ್ರಹಕ್ಕಿಂತ ಜನರಿಗೆ ಸುಳ್ಳು ಹೇಳುವ ಪ್ರಾಪಗಾಂಡ ಮಾಡುವುದೇ ತುರ್ತು ಆದ್ಯತೆಯಾಗಿದೆ ಎಂದು ದೂರಿದ್ದಾರೆ.
ಕುಂಭಮೇಳವನ್ನು ನಡೆಸಲು ಅವಕಾಶ ಕೊಟ್ಟವರಾರು? ಅಲ್ಲಿ ಲಕ್ಷಾಂತರ ಜನ ಸೇರಿದಾಗ ಅದನ್ನು ನೋಡಿ ದೇಶದ ಪ್ರಜ್ಞಾವಂತ ಜನರು ಭಯಪಡುತ್ತಿದ್ದಾಗ ಬಿಜೆಪಿಯ ಹಿರಿಯ ನಾಯಕರು ಉಢಾಫೆ ಮಾತನಾಡಿದರು. ಪಶ್ಚಿಮ ಬಂಗಾಳದ ಚುನಾವಣಾ ರ್ಯಾಲಿಗಳಲ್ಲಿ ಹೆಚ್ಚು ಜನ ಸೇರಿದಾಗ ಪ್ರಧಾನ ಮಂತ್ರಿಗಳೇ ಸಂಭ್ರಮ ಪಟ್ಟು ಮಾತನಾಡಿದರು. ಜನರನ್ನು ಸೇರಿಸಿ ನಡೆಸುತ್ತಿದ್ದ ರ್ಯಾಲಿಗಳ ಕುರಿತು ನ್ಯಾಯಾಲಯಗಳು ಛೀಮಾರಿ ಹಾಕಿದವು. ಕರೋನ ನಿಯಂತ್ರಿಸಬೇಕಾದರೆ ಲಸಿಕೆಯೊಂದೇ ಪರಿಹಾರ ಎಂದು ನಾವು ಆರಂಭದಿಂದಲೂ ಹೇಳುತ್ತಾ ಬಂದಿದ್ದೇವೆ. ಆದರೆ ಲಸಿಕೆಗಳ ಪರಿಣಾಮಗಳ ಕುರಿತು, ಸುರಕ್ಷತೆಯ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದೂ ಸಹ ಒತ್ತಾಯಿಸುತ್ತಾ ಬಂದಿದ್ದೇವೆ.

ಲಸಿಕೆ ಹಾಕಬೇಡಿ ಎಂದು ನಾವುಗಳಾರು ಇದುವರೆಗೂ ಹೇಳಿಲ್ಲ. ಆದರೆ ಕೇಂದ್ರ ಸರ್ಕಾರ ಮಾಡಿದ್ದೇನು? ಅಮೆರಿಕ, ಯುರೋಪಿಯನ್ ಒಕ್ಕೂಟ, ಇಂಗ್ಲೆಂಡ್, ಬ್ರೆಜಿಲ್, ಏಷ್ಯಾದ ಅನೇಕ ದೇಶಗಳು ಕಳೆದ ವರ್ಷದ ಜುಲೈ, ಆಗಸ್ಟ್ ತಿಂಗಳಲ್ಲೇ ಲಸಿಕೆಗಳ ಕುರಿತಂತೆ ಬೇಡಿಕೆಯನ್ನು ಮಂಡಿಸಿ ಕಂಪೆನಿಗಳಿಗೆ ಸರಬರಾಜು ಆದೇಶಗಳನ್ನು ನೀಡಿದ್ದವು. ಅಮೇರಿಕ 80 ಕೋಟಿ, ಯುರೂಪಿಯನ್ ಒಕ್ಕೂಟ 120 ಕೋಟಿ, ಬ್ರೆಜಿಲ್ 9 ಕೋಟಿ ಲಸಿಕೆಗಳಿಗೆ ಆದೇಶ ನೀಡಿದ್ದವು. ಆದರೆ ನಮ್ಮ ದೇಶ 2021 ರ ಜನವರಿಯಲ್ಲಿ ಆದೇಶ ನೀಡಿದ್ದು ಕೇವಲ 1.65 ಲಕ್ಷ ಡೋಸ್ ಗಳಿಗೆ ಮಾತ್ರ. ಇದರ ಹೊಣೆಯನ್ನು ಯಾರು ಹೊರಬೇಕು? ವಿರೋಧ ಪಕ್ಷಗಳೇ? ನ್ಯಾಯಾಲಯಗಳೇ? ಮಾಧ್ಯಮಗಳೇ? ಇಲ್ಲ ಜನರೇ? ಆಳುವ ಬಿಜೆಪಿಯ ಮುಖಂಡರ ನಾಲಿಗೆಗೆ ಹೇಗೆ ಇಷ್ಟೊಂದು ಸುಳ್ಳು ಹೇಳಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷಗಳನ್ನು ಟೀಕಿಸುವ ಮುಖಂಡರು ನಾಲ್ಕೈದು ತಿಂಗಳ ಹಿಂದಕ್ಕೆ ಹೋಗಿ ನೋಡಿ. ಸ್ವತಃ ಪ್ರಧಾನಮಂತ್ರಿಗಳೇ, ನಾವು ಕರೋನ ವಿರುದ್ಧ ಗೆದ್ದು ಬಿಟ್ಟಿದ್ದೇವೆ ಎಂದು ಹೇಳಿದ್ದರು. ಆರೋಗ್ಯ ಮಂತ್ರಿಗಳು ಹೇಳಿದ್ದರು ನಾವು ಈ ಕತ್ತಲ ಸುರಂಗದ ಕೊನೆಯನ್ನು ತಲುಪಿಬಿಟ್ಟಿದ್ದೇವೆ, ಇನ್ನೇನು ಬೆಳಕಿನ ರಾಶಿ ಸಿಕ್ಕಿ ಬಿಡುತ್ತದೆ ಎಂದು ಅಂದಿದ್ದರು. ಈ ಮಾತುಗಳನ್ನು ಪಾಪ ಜನ ನಂಬಿದರು. ಉತ್ಸಾಹದಿಂದ ದುಡಿಯುವ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಆಗಲೇ ಕರೋನಾದ ಎರಡನೇ ಅಲೆ ಬಂದು ಅಪ್ಪಳಿಸಿತು. ಅಸಂಖ್ಯಾತ ಜನರು ಕರೋನಾಕ್ಕೆ ಬಲಿಯಾದರು. ಬಲಿಯಾದ ಜನರನ್ನು ಆಡಳಿತ ಮಾಡುತ್ತಿರುವ ಸರ್ಕಾರಗಳೇ ಕೊಲೆ ಮಾಡಿವೆ ಎಂದರೆ ತಪ್ಪೇನು? ಆಕ್ಸಿಜನ್ ಇಲ್ಲದೆ, ಔಷಧ ಇಲ್ಲದೆ, ಬೆಡ್‍ಗಳಿಲ್ಲದೆ ಮರಣ ಹೊಂದಿದರೆ ಅದರ ಜವಾಬ್ಧಾರಿ ಯಾರು ಹೊರಬೇಕು? ತಜ್ಞರು ನೀಡಿದ ಎಚ್ಚರಿಕೆ, ಸಲಹೆಗಳನ್ನು ಕಸದ ಬುಟ್ಟಿಗೆ ಎಸೆದು ಜನರನ್ನು ಕೊಂದವರೇ ಹೊರಬೇಕಲ್ಲವೇ? ಎಂದು ಗರಂ ಆಗಿದ್ದಾರೆ.