ಬಿಜೆಪಿಯವರು (Bjp) ನಾಲಿಗೆ ಇದೆ ಎಂಬ ಕಾರಣಕ್ಕೆ ಎಲ್ಲೆಂದರಲ್ಲಿ ಅದನ್ನ ಹೊರಚಾಚಿ ವಿಷ ಕಾರುವ ವಿಕೃತ ಮನಸ್ಥಿತಿಗೆ ತಲುಪಿದ್ದಾರೆ. ಬಿಜೆಪಿ ನಾಯಕ, ಮಾಜಿ ಕೇಂದ್ರ ಮಂತ್ರಿ ಬಸನಗೌಡ ಪಾಟೀಲ್ ಯತ್ನಾಳ್ (Basana gowda patil yatnal) ಮಹಾತ್ಮಾ ಗಾಂಧಿ (Mahatma gandhi) ಅವರನ್ನು ಹತ್ಯೆ ಮಾಡಿಸಿದ್ದು ನೆಹರೂ ಎನ್ನುವ ಮೂಲಕ ಸ್ವತಂತ್ರ ಭಾರತದ ಮೊದಲ ‘ಭಯೋತ್ಪಾದಕ’ ನಾಥೂರಾಮ್ ಗೋಡ್ಸೆಯನ್ನು ಸಮರ್ಥಿಸುವ ಅತ್ಯಂತ ನೀಚತನ ಮೆರೆದಿದ್ದಾರೆ!
ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರಿಗೆ ಕ್ಷಮಾಪಣೆ ಬರೆದುಕೊಟ್ಟ, ಅವರ ಮಾಹಿತಿದಾರರಾಗಿ ದೇಶದ್ರೋಹ ಎಸಗಿದ ಮಾತೃ ಬೇರಿನ ಹಿನ್ನೆಲೆಯ ಬಿಜೆಪಿಗರಿಗೆ ತಮ್ಮ ಸರ್ವಸ್ವವನ್ನೂ ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ಚೇತನಗಳ ಬಗ್ಗೆ ಗೌರವವಿರಲಾದರೂ ಹೇಗೆ ಸಾಧ್ಯ?

ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947ರಲ್ಲಿ ಅಲ್ಲ ಎಂದು ನೂರಾರು ವರ್ಷಗಳ ತ್ಯಾಗ ಬಲಿದಾನದ ಇತಿಹಾಸದ ಸಂಪೂರ್ಣ ಸ್ವಾತಂತ್ರ್ಯ ಚಳುವಳಿಯನ್ನೇ ಅಪಮಾನಿಸಿದವರಿಂದ ಪಾಠ ಹೇಳಿಸಿಕೊಂಡು ಬಂದ ಬಿಜೆಪಿಗರಿಂದ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ?
ಗಾಂಧಿ – ನೆಹರೂ ಈ ದೇಶದ ಅಂತಃಸತ್ವ, ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮ ಗಾಂಧಿಯವರಿಗೆ ಹೆಗಲಿಗೆ ಹೆಗಲಾಗಿದ್ದವರು, ಅವರ ನೆರಳಿನಂತಿದ್ದವರು ಜವಾಹರ ಲಾಲ್ ನೆಹರೂ. ಅವರಿಬ್ಬರೂ ಕಾಂಗ್ರೆಸ್ ಎಂಬ ಆಲದ ಮರದ ತಾಯಿ ಬೇರಿನಂತಿದ್ದವರು. ಬ್ರಿಟೀಷರಿಂದ ಮಹಾತ್ಮ ಗಾಂಧಿಯವರು ತಮ್ಮ ಹೋರಾಟದ ಜೀವನದ 6 ವರ್ಷಗಳು ಸೆರೆವಾಸ ಅನುಭವಿಸಿದರೆ, ನೆಹರೂ ಅವರು 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಜೊತೆಯಾಗಿಯೇ ದೇಶವನ್ನು ಒಗ್ಗೂಡಿಸಿ ಸ್ವಾತಂತ್ರ್ಯದ ಮಹಾಯಜ್ಞಕ್ಕೆ ಅಣಿಗೊಳಿಸಿದ್ದಾರೆ.

ಸ್ವಾತಂತ್ರ್ಯಾ ನಂತರ ಮಹಾತ್ಮರ ಆಶಯದಂತೆಯೇ ಭಾರತದ ಚುಕ್ಕಾಣಿ ಹಿಡಿದ ನೆಹರೂ ಅವರು ಗಾಂಧೀಜಿಯವರ ತತ್ವಾದರ್ಶಗಳ ಮೇಲೆಯೇ ಈ ದೇಶವನ್ನು ಮುನ್ನಡೆಸಿದ್ದಾರೆ. ಸರ್ದಾರ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಮೌಲಾನಾ ಆಜಾದ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರೊಂದಿಗೆ ಸೇರಿ ಈ ದೇಶಕ್ಕೆ ಭದ್ರ ಬುನಾದಿ ಹಾಕಿದ್ದಾರೆ.
ಆದರೆ ಈ ಯಾವುದೇ ಮಹಾನ್ ನಾಯಕರ ಬಗ್ಗೆಯೂ ಬಿಜೆಪಿಗೆ ಕಿಂಚಿತ್ ಗೌರವಿಲ್ಲ, ಕೃತಜ್ಞತಾ ಭಾವವಿಲ್ಲ. ಅವರೊಳಗೆ ತುಂಬಿರುವುದು ಕೇವಲ ದ್ವೇಷ, ಕೋಮುವಾದದ ವಿಷ! ಅವರ ಏಕೈಕ ಅಸ್ತ್ರ ಸುಳ್ಳು, ಚಾರಿತ್ರ್ಯವಧೆ, ಅಪಪ್ರಚಾರ.
‘ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದು ಸತ್ಯವಾಗುತ್ತದೆ!’ ಎಂಬ ತಮ್ಮ ನಾಯಕ ಅಮಿತ್ ಶಾ ಕಿವಿಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ ಬಿಜೆಪಿಗರು. ಗಾಂಧಿ, ನೆಹರು, ಅಂಬೇಡ್ಕರ್ ಸೇರಿದಂತೆ ಸ್ವಾತಂತ್ರ್ಯ ಹೋರಾಟ, ಇತಿಹಾಸ ಎಲ್ಲದರ ಬಗ್ಗೆಯೂ ಸುಳ್ಳು ಅಪಪ್ರಚಾರ ನಡೆಸುವುದು, ಮತ್ತು ಅದನ್ನೇ ನೂರು ಬಾರಿ ಹೇಳಿ ಸತ್ಯವೆಂದು ನಂಬಿಸಲು ಪ್ರಯತ್ನಿಸುವುದೇ ಬಿಜೆಪಿ ಬಂಡವಾಳ ಎಂದು ಬಿಜೆಪಿ ನಾಯಕರ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಪೋಸ್ಟ್ ಮಾಡಿದ್ದು, ತೀವ್ರ ವಾಗ್ದಾಳಿ ನಡೆಸಿದೆ.