ನವದೆಹಲಿ, ಜೂನ್ 4: ರಾಜ್ಯಸಭೆಯ ದ್ವೈವಾರ್ಷಿಕ ಹಾಗೂ ಉಪಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆಯೊಂದಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಕರ್ನಾಟಕದಿಂದ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಮೂರು ಪ್ರಮುಖ ನಾಯಕರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಹಾಗೂ ಹಿರಿಯ ನಾಯಕ ಮನ್ಸೂರ್ ಅಲಿ ಖಾನ್ ಅವರಿಗೆ ಟಿಕೆಟ್ ನೀಡಲಾಗಿದೆ.ಇದರೊಂದಿಗೆ ಕರ್ನಾಟಕದ ರಾಜ್ಯಸಭೆ ಚುನಾವಣೆ ಮತ್ತಷ್ಟು ಕುತೂಹಲ ಕೆರಳಿಸಿದ್ದು, ಪಕ್ಷದ ಹೈಕಮಾಂಡ್ ವಿಶ್ವಾಸದ ನಾಯಕರಿಗೆ ಅವಕಾಶ ನೀಡಿರುವುದು ಗಮನ ಸೆಳೆದಿದೆ.
ಇನ್ನು ಇತರ ರಾಜ್ಯಗಳಿಂದಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದ್ದು, ಮಧ್ಯಪ್ರದೇಶದಿಂದ ಮೀನಾಕ್ಷಿ ನಟರಾಜನ್, ರಾಜಸ್ಥಾನದಿಂದ ನೀರಜ್ ಡಾಂಗಿ, ತಮಿಳುನಾಡಿನಿಂದ ಪ್ರವೀಣ್ ಚಕ್ರವರ್ತಿ ಹಾಗೂ ಜಾರ್ಖಂಡ್‌ನಿಂದ ಪ್ರಣವ್ ಝಾ ಅವರಿಗೆ ಪಕ್ಷದ ಅಭ್ಯರ್ಥಿತ್ವ ನೀಡಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಕರ್ನಾಟಕದಿಂದ ರಾಜ್ಯಸಭೆ ಕಣಕ್ಕಿಳಿಯುತ್ತಿರುವುದು ರಾಜ್ಯ ರಾಜಕೀಯದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದ್ದು, ಪಕ್ಷದ ಸಂಘಟನೆ ಹಾಗೂ ಸಂಸತ್ತಿನ ರಾಜಕಾರಣದಲ್ಲಿ ಅವರ ಪಾತ್ರ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.






