ಡೆಲ್ಟಾ ವೈರಸ್ ವರ್ಸಸ್ ಲಸಿಕೆ: ಗೊಂದಲ ಸೃಷ್ಟಿಸಿದ ವ್ಯತಿರಿಕ್ತ ಸಂಶೋಧನಾ ವರದಿಗಳು!

ದೇಶದಲ್ಲಿ ಲಕ್ಷಾಂತರ ಜನರ ಜೀವ ಮತ್ತು ಜೀವನ ಬಲಿತೆಗೆದುಕೊಂಡಿರುವ ಭೀಕರ ಕೋವಿಡ್ ಎರಡನೇ ಅಲೆಗೆ ಕಾರಣವಾಗಿರುವ ಕರೊನಾದ ರೂಪಾಂತರಿ ಡೆಲ್ಟಾ ವೈರಸ್ ದಾಳಿಯನ್ನು ತಡೆಯಲು ಲಸಿಕೆಯೊಂದೇ ಸದ್ಯಕ್ಕೆ ಇರುವ ಅಸ್ತ್ರ ಎಂದು ಹೇಳಲಾಗುತ್ತಿದೆ. ಹಾಗಾಗಿ ಲಸಿಕೆ ಅಭಿಯಾನ ಚುರುಕುಗೊಳಿಸಲು ಮತ್ತು ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡಲು ನ್ಯಾಯಾಂಗದ ಆಣತಿಯಂತೆ ಸರ್ಕಾರ ಕೂಡ ಮುಂದಾಗಿದೆ.

ಆದರೆ, ಲಸಿಕೆಯ ರಾಮಬಾಣದ ಬಗ್ಗೆ ಇಷ್ಟೆಲ್ಲಾ ತಯಾರಿಗಳು, ಸಮರೋಪಾದಿಯ ಅಭಿಯಾನದ ನಡುವೆ ಮತ್ತೊಂದು ಆಘಾತಕಾರಿ ಸಂಗತಿ ಹೊರಬಿದ್ದಿದೆ. ದೇಶದಲ್ಲಿ ಸದ್ಯ ಬಳಕೆಯಲ್ಲಿರುವ ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ ಲಸಿಕೆಗಳ ಎರಡೂ ಡೋಸ್ ಪಡೆದುಕೊಂಡವರು ಕೂಡ ಈ ಡೆಲ್ಟಾ ವೈರಸ್ ದಾಳಿಯಿಂದ ಸುರಕ್ಷಿತವಲ್ಲ. ಎರಡರಲ್ಲಿ ಯಾವ ಲಸಿಕೆಯನ್ನು ಪಡೆದುಕೊಂಡಿದ್ದರೂ ಅವರ ಮೇಲೆ ಈ ವೈರಸ್ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ದೇಶದ ಮುಂಚೂಣಿ ವೈದ್ಯಕೀಯ ಸಂಶೋಧಾನಾ ಸಂಸ್ಥೆ ಎಐಐಎಂಎಸ್(ಏಮ್ಸ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್ ಸಿಡಿಸಿ)ಗಳು ಪ್ರತ್ಯೇಕವಾಗಿ ನಡೆಸಿದ ಸಂಶೋಧನೆಯಲ್ಲಿ ಪತ್ತೆಯಾಗಿದೆ.

ಭಾರತದಲ್ಲಿ ಕಳೆದ ಅಕ್ಟೋಬರಿನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ ಕರೋನಾದ ಈ ರೂಪಾಂತರಿ ಡೆಲ್ಟಾ ವೈರಸ್, ದೇಶದಲ್ಲಿ ಭೀಕರ ಎರಡನೇ ಅಲೆಯ ಅಪಾರ ಸಾವುನೋವುಗಳಿಗೆ ಕಾರಣವಾಗಿದೆ. ಈ ಮೊದಲು ಭಾರತದಲ್ಲಿ ಮೊದಲ ಅಲೆಗೆ ಕಾರಣವಾಗಿದ್ದ ಬ್ರಿಟನ್ ಮೂಲದ ಆಲ್ಫಾ ರೂಪಾಂತರಿ ವೈರಸ್ ಗಿಂತ ಈ ಡೆಲ್ಟಾ ರೂಪಾಂತರ ಶೇ.40-50ರಷ್ಟು ಅಧಿಕ ಸೋಂಕಿಗೆ ಕಾರಣವಾಗಿದೆ ಮತ್ತು ಹೆಚ್ಚು ಸಾವುಗಳಿಗೂ ಕಾರಣವಾಗಿದೆ ಎಂಬುದು ಹಲವು ಸಂಸ್ಥೆಗಳು ಅಧ್ಯಯನಗಳಿಂದ ತಿಳಿದುಬಂದಿದೆ.

ತೀವ್ರ ಜ್ವರದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ 63 ಮಂದಿ ಕೋವಿಡ್ ಸೋಂಕಿತರ ಮೇಲೆ ನಡೆಸಿದ ಅಧ್ಯಯನದಲ್ಲಿ, ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಪಡೆದಿದ್ದರೂ ಈ ಡೆಲ್ಟಾ ವೈರಸ್ ದಾಳಿಗೆ ಒಳಗಾಗಿರುವುದು ಪತ್ತೆಯಾಗಿದೆ. 63 ಮಂದಿಯ ಪೈಕಿ 53 ಮಂದಿ ಕೋವಾಕ್ಸಿನ್ ಲಸಿಕೆ ಪಡೆದುಕೊಂಡಿದ್ದರೆ, ಉಳಿದವರು ಕೋವಿಶೀಲ್ಡ್ ಪಡೆದುಕೊಂಡಿದ್ದರು. ಆ ಪೈಕಿ 36 ಮಂದಿ ಎರಡು ಲಸಿಕೆಗಳ ಪೈಕಿ ಯಾವುದಾದರೂ ಒಂದು ಲಸಿಕೆಯ ಎರಡೂ ಡೋಸ್ ಪಡೆದುಕೊಂಡಿದ್ದರು.

ಏಮ್ಸ್-ಐಜಿಐಬಿ ಅಧ್ಯಯನದಲ್ಲಿ ಲಸಿಕೆಗಳ ಒಂದೇ ಡೋಸ್ ಪಡೆದವರ ಪೈಕಿ ಶೇ.76.9 ಮಂದಿ ಡೆಲ್ಟಾ ರೂಪಾಂತರಿಯ ದಾಳಿಗೆ ಒಳಗಾಗಿದ್ದರೆ, ಎರಡೂ ಡೋಸ್ ಪಡೆದವರ ಪೈಕಿ ಶೇ.60 ಮಂದಿ ಡೆಲ್ಟಾ ದಾಳಿಗೆ ಒಳಗಾಗಿದ್ದರು. ಎನ್ ಸಿಡಿಸಿ-ಐಜಿಐಬಿ ನಡೆಸಿದ ಅಧ್ಯಯನದಲ್ಲಿ ಸೋಂಕಿತ 27 ಮಂದಿಯ ಪೈಕಿ ಕೋವಿಶೀಲ್ಡ್ ಪಡೆದುಕೊಂಡರಲ್ಲಿ ಶೇ.70.3ರಷ್ಟು ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ.

ಅಲ್ಲದೆ, ಈ ಎರಡೂ ಅಧ್ಯಯನದಲ್ಲಿ ಕಂಡುಬಂದಿರುವ ಮತ್ತೊಂದು ಸಂಗತಿ ಎಂದರೆ; ಮೊದಲ ಅಲೆಗೆ ಕಾರಣವಾದ ಆಲ್ಫಾ ಮತ್ತು ಎರಡನೇ ಅಲೆಯಲ್ಲಿ ಹೆಚ್ಚು ಕಂಡುಬಂದಿರುವ ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಸಂಪೂರ್ಣ ಸುರಕ್ಷತೆ ನೀಡಲು ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳೆರಡೂ ವಿಫಲವಾಗಿವೆ. ಜೊತೆಗೆ ಈವರೆಗೆ ಸೋಂಕು ತಗಲಿದರೂ ರೋಗದ ತೀವ್ರತೆ ಮತ್ತು ಪ್ರಾಣಾಪಾಯದಿಂದ ಲಸಿಕೆಗಳು ಪಾರು ಮಾಡುತ್ತವೆ ಎಂಬ ಗ್ರಹಿಕೆ ಕೂಡ ನಿಜವಲ್ಲ. ಲಸಿಕೆ ತೆಗೆದುಕೊಂಡವರು ಮತ್ತು ತೆಗೆದುಕೊಳ್ಳದೇ ಇರುವವರ ನಡುವೆ ಸೋಂಕು ತೀವ್ರೆತೆಯ ವಿಷಯದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಕಂಡುಬಂದಿಲ್ಲ ಎಂದೂ ಅಧ್ಯಯನ ಹೇಳಿದೆ.

ಆದರೆ, ಲಸಿಕೆಯ ಕುರಿತ ಇಂತಹ ಮಹತ್ವದ ಅಧ್ಯಯನದ ಬೆನ್ನಲ್ಲೇ ಕೋವಾಕ್ಸಿನ್ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಸಹಯೋಗದಲ್ಲಿ ಐಸಿಎಂಆರ್, ಎನ್ ಐವಿ ಪುಣೆ ನಡೆಸಿದ ಜಂಟಿ ಸಂಶೋಧನೆಯ ವರದಿ ಕೂಡ ಹೊರಬಿದ್ದಿದ್ದು, ಡೆಡ್ಲಿ ಡೆಲ್ಟಾ ರೂಪಾಂತರಿ ವೈರಸ್ ವಿರುದ್ಧ ಕೋವಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ.

ಕೋವಾಕ್ಸಿನ್ ಲಸಿಕೆಯ ಡೆಲ್ಟಾ ರೂಪಾಂತರಿ ವೈರಸ್ ವಿರುದ್ಧ ಮಾತ್ರವಲ್ಲದೆ, ದಕ್ಷಿಣಾಫ್ರಿಕಾದಲ್ಲಿ ಮೊದಲು ಪತ್ತೆಯಾದ ಕರೋನಾದ ಬೇಟಾ ರೂಪಾಂತರಿ ವೈರಸ್ ವಿರುದ್ಧವೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದೂ ಆ ಸಂಶೋಧನೆಯಲ್ಲಿ ಕಂಡುಬಂದಿರುವುದಾಗಿ ಹೇಳಲಾಗಿದೆ.

ಕಾಕತಾಳೀಯವೆಂದರೆ, ದೇಶದ ಸರ್ಕಾರಿ ಸ್ವಾಮ್ಯದ ಮುಂಚೂಣಿ ವೈದ್ಯಕೀಯ ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲೇ ನಡೆದಿರುವ ಈ ಎರಡೂ ವ್ಯತಿರಿಕ್ತ ಫಲಿತಾಂಶದ ಸಂಶೋಧನಾ ವರದಿಗಳೂ ಒಂದೇ ದಿನ ಬಯಲಾಗಿದ್ದು, ಜೀವ ರಕ್ಷಣೆಗಾಗಿ ಮುಗಿಬಿದ್ದು ಲಸಿಕೆ ಪಡೆಯುತ್ತಿರುವ ದೇಶದ ಜನತೆ ಯಾವುದನ್ನು ನಂಬಬೇಕು ಎಂಬುದು ಈಗ ಗೊಂದಲಕ್ಕೀಡುಮಾಡಿದೆ. ಜೊತೆಗೆ ಕರೋನಾ ವಿರುದ್ಧದ ಸಾವುಬದುಕಿನ ಹೋರಾಟದಲ್ಲಿ ನಮಗಿರುವ ಏಕೈಕ ಅಸ್ತ್ರ ಲಸಿಕೆಯೇ ಬಡ್ಡುಗತ್ತಿ ಎಂಬ ಇಂತಹ ಸಂಶೋಧನೆಗಳು ಒಟ್ಟಾರೆ ಲಸಿಕೆ ಅಭಿಯಾನದ ಮೇಲೆ ಬೀರುವ ಪರಿಣಾಮಗಳು ಕೂಡ ಆತಂಕಕಾರಿ.

ಆ ಹಿನ್ನೆಲೆಯಲ್ಲಿ ಸರ್ಕಾರ ಇಂತಹ ವರದಿಗಳು, ಸಂಶೋಧನಾ ಫಲಿತಾಂಶಗಳ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ ಮತ್ತು ಜನತೆಗೆ ಅಂತಿಮವಾಗಿ ಸರಿಯಾದ ಮಾಹಿತಿಯನ್ನು ಸಕಾಲದಲ್ಲಿ ನೀಡುವ ಹೊಣೆಗಾರಿಕೆ ತೋರಬೇಕಿದೆ. ಆದರೆ, ಈಗಿನ ಆಡಳಿತದಿಂದ ಅಂತಹ ಸಕಾಲಿಕ ಮತ್ತು ಸಮರ್ಪಕ ಹೊಣೆಗಾರಿಕೆ ನಿರೀಕ್ಷಿಸಲಾದೀತೆ ಎಂಬುದು ಪ್ರಶ್ನೆ!

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...