ನಾ ದಿವಾಕರ
ನೂರಾರು ಉದ್ಯೋಗಾಕಾಂಕ್ಷಿಗಳು ರಾಜ್ಯದ ಮೂಲೆ ಮೂಲೆಗಳಿಂದ ಬಂದು ಇಲ್ಲಿ ನೆರೆದಿರುವುದು ಒಂದು ರೀತಿಯಲ್ಲಿ ವರ್ತಮಾನ ಭಾರತದ ವಸ್ತುಸ್ಥಿತಿಗೆ ಕನ್ನಡಿ ಹಿಡಿದಂತೆಯೇ ಕಾಣುತ್ತಿದೆ. ಇಲ್ಲಿ ನೆರೆದಿರುವ ಪ್ರತಿಯೊಂದು ಜೀವವೂ ನಾಳಿನ ದಿನಗಳ ಬಗ್ಗೆ ಕನಸು ಕಟ್ಟಿಕೊಳ್ಳುತ್ತಾ, ನಮ್ಮ ರಾಜಕೀಯ ವ್ಯವಸ್ಥೆ ಹಾಗೂ ಸಾಮಾಜಿಕ ಸ್ಥಿತ್ಯಂತರಗಳು ಸೃಷ್ಟಿಸುತ್ತಿರುವ ಕವಲು ಹಾದಿಗಳಲ್ಲಿ ನಡೆಯುತ್ತಿರುವ ಭವಿಷ್ಯದ ಆಸ್ತಿಯಂತೆ ಕಾಣುತ್ತದೆ. ಶಿಕ್ಷಣ, ವಸತಿ, ಆರೋಗ್ಯ ಹಾಗೂ ಜೀವನೋಪಾಯಕ್ಕೆ ಸುಗಮ ಹಾದಿಯನ್ನು ನಿರ್ಮಿಸುವ ಉದ್ಯೋಗ ಇವೆಲ್ಲವೂ ನಮ್ಮ ಸಂವಿಧಾನ ನಮಗೆ ನೀಡಿರುವ ಆಶ್ವಾಸನೆಗಳು. ಅಷ್ಟೇ ಅಲ್ಲ ಈ ಮೂಲ ಸೌಕರ್ಯಗಳು ಯಾವುದೋ ಒಂದು ಚುನಾಯಿತ ಸರ್ಕಾರ ನಮಗೆ ನೀಡುವ ಅಥವಾ ನೀಡಲಪೇಕ್ಷಿಸುವ ಸವಲತ್ತುಗಳಲ್ಲ, ಬದಲಾಗಿ ಇವು ಭಾರತದ ಪ್ರತಿಯೊಬ್ಬ ಪ್ರಜೆಯ ಮೂಲ ಸಾಂವಿಧಾನಿಕ ಹಕ್ಕು.
ವರ್ಷವಿಡೀ ಸಂವಿಧಾನವನ್ನು ಹಿಡಿದೆತ್ತಿ ವೈಭವೀಕರಿಸುತ್ತಿರುವ ಹೊತ್ತಿನಲ್ಲಿ , ರಾಜ್ಯದ ಹೊಸ ಸರ್ಕಾರದ ನೀತಿಯಡಿ ಸಂವಿಧಾನದ ಪೀಠಿಕೆಯ ಪಠಣವನ್ನು ಒಂದು Ritual ಆಗಿ ಅನುಸರಿಸುತ್ತಿರುವ ನಮಗೆ, ಇದೇ ಸಂವಿಧಾನದ ಅಡಿ ಆಳ್ವಿಕೆ ನಡೆಸುತ್ತಿರುವ ಚುನಾಯಿತ ಪಕ್ಷಗಳು ಮೇಲೆ ಉಲ್ಲೇಖಿಸಿದಂತಹ ಸಾಂವಿಧಾನಿಕ ಆಶಯಗಳನ್ನು ಈಡೇರಿಸುತ್ತಿವೆಯೇ ಎಂಬ ಪ್ರಶ್ನೆ ಕಾಡಲೇಬೇಕಲ್ಲವೇ ? ಇಲ್ಲಿ ನೆರೆದಿರುವವರಿಗೆ ಈ ಪ್ರಶ್ನೆ ಪ್ರಧಾನವಾಗಿ ಕಾಡುತ್ತದೆ. ಹಾಗೆ ನಿರಂತರವಾಗಿ ಕಾಡುತ್ತಿರುವುದರಿಂದಲೇ ಈ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಯುವ ಜೀವಗಳು ನಾಳಿನ ಭವಿಷ್ಯದ ಕನಸು ಹೊತ್ತು ಈ ಉರಿಬಿಸಿಲಲ್ಲಿ ಬಂದು ನಿಂತಿವೆ. ವಿಪರ್ಯಾಸವೆಂದರೆ 76 ವರ್ಷಗಳ ಸ್ವತಂತ್ರ-ಸಂವಿಧಾನಬದ್ಧ-ಶಾಸನಬದ್ಧ ಆಳ್ವಿಕೆಯ ನಂತರವೂ ನಮ್ಮ ಪ್ರಜಾಪ್ರಭುತ್ವ ಆಳ್ವಿಕೆಯಲ್ಲಿ ಯುವ ಸಮೂಹ “ ಉದ್ಯೋಗ ಕೊಡಿ-ಕೆಲಸ ಕೊಡಿ-ಅನ್ನ ಕೊಡಿ- ಸೂರು ಕೊಡಿ ” ಎಂದು ಸರ್ಕಾರಗಳ ಮುಂದೆ ಗೋಗರೆಯಬೇಕಿದೆ.
ಮಾರುಕಟ್ಟೆ ಮತ್ತು ಉದ್ಯೋಗ
ಅನ್ನ-ಆಹಾರ, ಓದು-ಶಿಕ್ಷಣ, ಕೆಲಸ-ಉದ್ಯೋಗ ಆರೋಗ್ಯ-ಯೋಗಕ್ಷೇಮ ಇವೆಲ್ಲವೂ ಸಹಜವಾಗಿ ದೇಶದ ಪ್ರತಿಯೊಬ್ಬ ಪ್ರಜೆಗೂ ಒದಗಬೇಕಾಗಿರುವ ಸಾಂವಿಧಾನಿಕ ಹಕ್ಕುಬದ್ಧ ಸೌಕರ್ಯಗಳಲ್ಲವೇ ? ವಿಪರ್ಯಾಸವೆಂದರೆ ನವ ಉದಾರವಾದದ ಆಳ್ವಿಕೆಯಲ್ಲಿ ಇವೆಲ್ಲವೂ ಹಕ್ಕೊತ್ತಾಯದ ಪ್ರಶ್ನೆಗಳಾಗಿವೆ. ಈ ಹಕ್ಕೊತ್ತಾಯದ ದೊಡ್ಡ ಧ್ವನಿ ಆಡಳಿತದಲ್ಲಿರುವ ಚುನಾಯಿತ ಪಕ್ಷಗಳ ಕಿವಿಗೆ ಮುಟ್ಟಿಸಬೇಕಾದರೂ ನಾವು ಆಡಳಿತ ವ್ಯವಸ್ಥೆಯಿಂದ ಪೂರ್ವಾನುಮತಿ ಪಡೆಯಬೇಕಿದೆ. ಆದಾಗ್ಯೂ ಇಲ್ಲಿ ನೆರೆದಿರುವ ನೂರಾರು ಯುವಕ/ಯುವತಿಯರಿಗೆ, ಅವರು ಪ್ರತಿನಿಧಿಸುವ ಸಹಸ್ರಾರು ಸಂಖ್ಯೆಯ ಯುವ ಸಮೂಹಕ್ಕೆ ಮತ್ತು ಅವರನ್ನು ಅವಲಂಬಿಸಿರುವ ಕುಟುಂಬಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಉಳಿದಿದೆ ಎಂದರೆ ಅದಕ್ಕೆ ಕಾರಣ ನಮ್ಮ ಪೂರ್ವಸೂರಿಗಳು ( ಗಾಂಧಿ, ಅಂಬೇಡ್ಕರ್, ಭಗತ್‌ಸಿಂಗ್, ವಿವೇಕಾನಂದ, ರವೀಂದ್ರನಾಥ ಠಾಗೂರ್, ಕುವೆಂಪು ಮುಂತಾದವರು) ಬಿಟ್ಟುಹೋದ ಒಂದು ಸಂವಿಧಾನ, ಸಮಾಜ, ಸಂಸ್ಕೃತಿ ಮತ್ತು ಸಮಾಜಮುಖಿ ಮನಸ್ಥಿತಿ.
ನಿಮ್ಮ ಕೈಯ್ಯಲ್ಲಿರುವ ಕರಪತ್ರವನ್ನು ಸೂಕ್ಷ್ಮವಾಗಿ ಅಂಡರ್‌ಲೈನ್ ಮಾಡುತ್ತಾ ಓದಿಕೊಳ್ಳಿ. ಅದು ಕರಪತ್ರ ಎಂದರೆ ಕ್ಲೀಷೆಯಾದೀತು. ಮೂಲತಃ ವಸ್ತುಸ್ಥಿತಿಯನ್ನು ಬಿಂಬಿಸುವ ಸಣ್ಣ ದಸ್ತಾವೇಜು ನಿಮ್ಮ ಬಳಿ ಇದೆ. ಇದರಿಂದಾಚೆಗೆ ಹೇಳುವುದಾದರೆ, ಭಾರತದ 142 ಕೋಟಿ ಜನಸಂಖ್ಯೆಯಲ್ಲಿ 80 ಕೋಟಿ ಜನರ ವಯೋಮಾನ 35ಕ್ಕಿಂತಲೂ ಕಡಿಮೆ. 18 ರಿಂದ 35 ವಯೋಮಾನದ ಸಂಖ್ಯೆ 60 ಕೋಟಿಯಷ್ಟಿದೆ. ಈ ಕೋಟ್ಯಂತರ ಜನರ ಪೈಕಿ ಶೇ 10ರಷ್ಟು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಅಂದರೆ ಕನಿಷ್ಠ ಆರು ಕೋಟಿ ಎಂದಾಯಿತು. ಹೆಚ್ಚು ಕಡಿಮೆ ಕರ್ನಾಟಕದ ಜನಸಂಖ್ಯೆಯಷ್ಟು. ನಾವಿಂದು ಆಗ್ರಹಿಸುತ್ತಿರುವುದು ಕೇಂದ್ರ ಸರ್ಕಾರದ ಪರಿಧಿಯಲ್ಲಿ ಖಾಲಿ ಇರುವ ಸುಮಾರು ಒಂಬತ್ತೂವರೆ ಲಕ್ಷ ಹುದ್ದೆಗಳನ್ನು ಭರ್ತಿಮಾಡಲು. ಕರ್ನಾಟಕದ ಮಟ್ಟಿಗೆ 2.5 ಲಕ್ಷ ಹುದ್ದೆಗಳು ಖಾಲಿ ಇವೆ. ಅಂದರೆ ಇವು ಸರ್ಕಾರದಿಂದ-ಆಡಳಿತ ಯಂತ್ರದಿಂದ ಘೋಷಿತ/ಅನುಮೋದಿತ ಹುದ್ದೆಗಳು. ಇದನ್ನು ಭರ್ತಿಮಾಡಲು ಆಗ್ರಹಿಸುತ್ತಿದ್ದೇವೆ. ಇದು ನಮ್ಮ ಮುಂದಿನ ಕರಾಳತೆಯ ಅರ್ಧ ಚಿತ್ರವನ್ನು ಮಾತ್ರ ನೀಡುತ್ತದೆ. ಏಕೆಂದರೆ ಈ ಹುದ್ದೆಗಳನ್ನು ಭರ್ತಿಮಾಡಿದರೂ ನಿರುದ್ಯೋಗ ಬಗೆಹರಿಯುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಈ ಪ್ರಮಾಣದ ನಿರುದ್ಯೋಗಕ್ಕೆ ಕಾರಣಗಳನ್ನೂ ನಾವು ಗುರುತಿಸಬೇಕಿದೆ. 1980ರಲ್ಲಿ ಭಾರತವನ್ನು ಪ್ರವೇಶಿಸಿದ ನವ ಉದಾರವಾದ, 1990ರಲ್ಲಿ ಜಾರಿಯಾದ ಜಾಗತೀಕರಣ-ಉದಾರೀಕರಣ ನೀತಿಗಳ ಫಲವನ್ನು ನಾವು ಇಂದು ಉಣ್ಣುತ್ತಿದ್ದೇವೆ. ಉದ್ಯೋಗ ನೀಡುವುದು ಆಳ್ವಿಕೆಯ ಜವಾಬ್ದಾರಿ ಅಲ್ಲ ಎಂಬ ಜಾಗತಿಕ ಬಂಡವಾಳಶಾಹಿ ಮಾರುಕಟ್ಟೆಯ ನೀತಿಯನ್ನೇ ಇಂದು ಎಲ್ಲ ದೇಶಗಳೂ ಅನುಸರಿಸುತ್ತಿದ್ದು, ಭಾರತವೂ ಹೊರತಾಗಿಲ್ಲ. ತಂತ್ರಜ್ಞಾನದ ಬಳಕೆ ವ್ಯಾಪಿಸುತ್ತಿರುವಂತೆಲ್ಲಾ ಮಾನವ ಶ್ರಮದ ಅವಶ್ಯಕತೆ ಕಡಿಮೆಯಾಗುತ್ತಿದೆ. ಮಾನವ ಶ್ರಮರಹಿತ ಆರ್ಥಿಕತೆಯನ್ನು ಬೆಳೆಸುವುದು ನವ ಉದಾರವಾದಿ ಬಂಡವಾಳಶಾಹಿಯ ನಾಲ್ಕನೆಯ ಹಂತದ ಪ್ರಧಾನ ಧ್ಯೇಯವಾಗಿದೆ. ಒಂದು ವರದಿಯ ಪ್ರಕಾರ ಕೃತಕ ಬುದ್ಧಿಮತ್ತೆ ಅಥವಾ ಯಾಂತ್ರಿಕ ಬುದ್ಧಿಮತ್ತೆ (Artificial Intelligence) ಪರಿಣಾಮ ಈ ವರ್ಷ ವಿಶ್ವದಾದ್ಯಂತ ಶೇ 40ರಷ್ಟು ನೌಕರಿಗಳು ಇಲ್ಲವಾಗುತ್ತವೆ.
ಈಗಾಗಲೇ ಈ ಪ್ರಕ್ರಿಯೆ ಜಾರಿಯಲ್ಲಿದೆ. ನವ ಪೀಳಿಗೆಯನ್ನು ಭ್ರಮಾಧೀನಗೊಳಿಸಿರುವ ಸಾಫ್ಟ್‌ವೇರ್ ಉದ್ದಿಮೆಯೂ ಶ್ರಮಿಕರಹಿತ ಊರ್ಧ್ವಮುಖಿ ಬೆಳವಣಿಗೆಯತ್ತ ಸಾಗಲು ಸಜ್ಜಾಗುತ್ತಿವೆ. ಇನ್ನು ಸಾಧಾರಣ ಪದವಿ ಮುಗಿಸಿ ಹೊರಬೀಳುವ ಬೃಹತ್ ಸಂಖ್ಯೆಯ ಯುವ ಸಮೂಹಕ್ಕೆ ಸುಸ್ಥಿರ ಭವಿಷ್ಯವನ್ನು ಒದಗಿಸಬಹುದಾದ ಒಂದು ಉದ್ಯೋಗಾವಕಾಶ ಮರೀಚಿಕೆಯಾಗುತ್ತಿದೆ. ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ಅರಿವು ಮತ್ತು ಜ್ಞಾನ ಮುಖ್ಯ ಬಂಡವಾಳವಾಗುವುದರಿಂದ, ಗ್ರಾಮೀಣ ಬಡಕುಟುಂಬಗಳಿಂದ ಹೊರಬರುವ ಲಕ್ಷಾಂತರ ಯುವಕ ಯುವತಿಯರು, ಉನ್ನತ ಶಿಕ್ಷಣ ಪಡೆಯಲಾರದೆ ಹಿಂದುಳಿದುಬಿಡುತ್ತಾರೆ. ಮಾರುಕಟ್ಟೆಗೆ ಬೇಕಾದ ಕೌಶಲ ಇವರಲ್ಲಿ ಇಲ್ಲದಿರುವ ಕಾರಣ Redundant ಅಂದರೆ ಅನಪೇಕ್ಷಿತರಾಗುತ್ತಾರೆ. ಹೆಚ್ಚುತ್ತಿರುವ ನಿರುದ್ಯೋಗದ ನಡುವೆ ಅನಿಶ್ಚಿತ ಉದ್ಯೋಗಗಳಲ್ಲಿ ನಿರತರಾಗಿರುವ ಲಕ್ಷಾಂತರ ಸಂಖ್ಯೆಯ ಯುವ ಸಮೂಹ ಈ ಅಪಾಯದ ಅಂಚಿನಲ್ಲಿರುವುದನ್ನು ಗಮನಿಸಬೇಕಿದೆ.
ಇಂದು ಗಿಗ್ ವರ್ಕರ್ಸ್ ಎಂದು ಕರೆಯಲಾಗುವ ಝಮೋಟೋ, ಸ್ವಿಗ್ಗಿ, ಅಮೆಜಾನ್. ಓಲಾ, ಊಬರ್ ಮುಂತಾದೆಡೆ ನೌಕರಿ ಮಾಡುವ ಲಕ್ಷಾಂತರ ಕಾರ್ಮಿಕರು ಅತಂತ್ರ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ಉದ್ಯೋಗ ಪಡೆದವರಿಗೆ ಅವರ ನಿವೃತ್ತಿಯ ನಂತರ ನೀಡಬೇಕಾದ ಭವಿಷ್ಯನಿಧಿ, ಗ್ರಾಚುಯಿಟಿ, ಪಿಂಚಣಿ ಎಲ್ಲ ವರ್ಗದವರಿಗೂ ಲಭಿಸುತ್ತಿಲ್ಲ. ಗಿಗ್ ನೌಕರರು ಈ ಸೌಲಭ್ಯಗಳಿಂದ ಹಾಗೂ ನೌಕರಿಯ ಭದ್ರತೆಯಿಂದ ಸಂಪೂರ್ಣ ವಂಚಿತರಾಗಿದ್ದಾರೆ. ಯುವ ಪೀಳಿಗೆಯನ್ನು ಈ ಸಮಸ್ಯೆ ಗಾಢವಾಗಿ ಕಾಡಬೇಕಿದೆ. ಈ ಯುವ ಪೀಳಿಗೆ ಸುಸ್ಥಿರ ಬದುಕಿನ ಬೀಜಾಕ್ಷರ ಹಂಚಬೇಕಾದ ಸಾಮಾಜಿಕ ವ್ಯವಸ್ಥೆ ಇಂದು ಮಂತ್ರಾಕ್ಷತೆ ಹಂಚುವ ಮೂಲಕ ಮೋಡಿ ಮಾಡುತ್ತಿದೆ. ಧರ್ಮ, ಧಾರ್ಮಿಕ ಶ್ರದ್ಧೆ ನಂಬಿಕೆಗಳು ಮಾನವ ಸಮಾಜದ ಅವಿಭಾಜ್ಯ ಅಂಗವಾಗಿದೆ ಆದರೆ ಈ ನಂಬಿಕೆಗಳು ಜೀವನೋಪಾಯದ ಆಧಾರವಾಗಲು ಸಾಧ್ಯವೇ ? ಈ ಪ್ರಶ್ನೆ ಯುವ ಸಮೂಹವನ್ನು ಕಾಡಬೇಕಿದೆ.
ಡಿಜಿಟಲ್ ಆರ್ಥಿಕತೆಯ ವೈರುಧ್ಯಗಳು
ಡಿಜಿಟಲ್ ಯುಗದಲ್ಲಿ ದಾಪುಗಾಲು ಹಾಕುತ್ತಿರುವ ಭಾರತ ಚಂದ್ರಲೋಕದಲ್ಲಿ ಕಾಲಿರಿಸಿದೆ ಆದರೆ ತಳಮಟ್ಟದ ಸಮಾಜದಲ್ಲಿ ಇನ್ನೂ ಪ್ರಾಚೀನ ಮೌಢ್ಯಗಳನ್ನು, ಆಚರಣೆಗಳನ್ನು, ಅಸಮಾನತೆ ಸೃಷ್ಟಿಸುವ ಪದ್ಧತಿಗಳನ್ನು ಅನುಸರಿಸಲು ಪ್ರಚೋದಿಸಲಾಗುತ್ತಿದೆ. ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದಿಂದ ವಿಮುಖವಾದ ಯಾವುದೇ ಸಮಾಜವೂ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಗುರಿ ತಲುಪಲಾಗುವುದಿಲ್ಲ ಎಂಬ ಎಚ್ಚರ ಯುವ ಸಮೂಹದಲ್ಲಿ ಇರಬೇಕು. ಆದರೆ ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆ ಮತ್ತು ಮತಾಧಾರಿತ ರಾಜಕಾರಣವು ವಿದ್ಯಾರ್ಜನೆಯ ಹಂತದಲ್ಲೇ ಈ ವೈಚಾರಿಕತೆಯ ಮೊಳಕೆಗಳನ್ನು ನಿಷ್ಕ್ರಿಯಗೊಳಿಸುತ್ತಿದೆ. ದುರಂತ ಎಂದರೆ ಎಡಪಕ್ಷಗಳನ್ನು ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷಗಳಿಗೂ ಸ್ಪಷ್ಟವಾದ ಆರ್ಥಿಕ ನೀತಿಯಾಗಲೀ, ಕಾರ್ಯಸೂಚಿಯಾಗಲೀ ಇಲ್ಲದಿರುವುದು.
ಬಂಡವಾಳ ಮತ್ತು ಬಂಡವಾಳಶಾಹಿ ಮಾರುಕಟ್ಟೆಯು ಸೃಷ್ಟಿಸುವ ಅಸಮಾನತೆಗಳನ್ನು ಅರ್ಥಮಾಡಿಕೊಳ್ಳದೆ ಹೋದರೆ ಹಸಿವು, ಬಡತನ, ದಾರಿದ್ರ್ಯ ಇವೆಲ್ಲವೂ ಫ್ಯಾಂಟಸಿಗಳಾಗಿಬಿಡುತ್ತವೆ. ಇದನ್ನು ಅರ್ಥಮಾಡಿಕೊಳ್ಳಲು ನಾವು ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆ ಸೃಷ್ಷಿಸುತ್ತಿರುವ ನಿರ್ವಾತಗಳತ್ತ (Vacuums) ಕಣ್ಣೆತ್ತಿ ನೋಡಬೇಕಿದೆ. ಪ್ರತಿ ವರ್ಷ ಕಾಲೇಜುಗಳಿಂದ ಹೊರಬೀಳುವ ಲಕ್ಷಾಂತರ ಯುವಕ ಯುವತಿಯರಿಗೆ ಸುಭದ್ರ ಭವಿಷ್ಯದ ಭರವಸೆ ಇಲ್ಲದಿರುವುದರಿಂದಲೇ ಇಂದು ಸಮಾಜದಲ್ಲಿ ಪ್ರಕ್ಷುಬ್ಧತೆ ಹೆಚ್ಚಾಗುತ್ತಿದೆ. ಯುವ ಸಮೂಹ ಸುಲಭವಾಗಿ ಮತಾಂಧತೆಗೆ, ಕೋಮುವಾದಕ್ಕೆ, ಹಿಂಸಾತ್ಮಕ ಚಟುವಟಿಕೆಗಳಿಗೆ ಬಲಿಯಾಗುತ್ತಿದೆ. ಅತ್ಯಾಚಾರ, ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆ ಮುಂತಾದ ಸಮಸ್ಯೆಗಳು ಜಟಿಲವಾಗುತ್ತಿವೆ. ಯುವ ಸಮೂಹದ ಮುಂದಿರುವ ಸಾಮಾಜಿಕ-ಆರ್ಥಿಕ ಸಮಸ್ಯೆಗಳಿಗೆ ಅನ್ಯ ಧರ್ಮಗಳಲ್ಲಿ, ಜನಾಂಗಗಳಲ್ಲಿ ಕಾರಣ ಹುಡುಕಲಾಗುತ್ತಿದೆ. ಮಾರುಕಟ್ಟೆಯೇ ಮಾಧ್ಯಮಗಳ ಮೂಲಕ ಈ ಪ್ರಚೋದನೆಗಳಿಗೆ ವೇದಿಕೆ ನಿರ್ಮಿಸುತ್ತಿದೆ.
ಉದ್ಯೋಗಂ ಪುರುಷಲಕ್ಷಣಂ ಎಂಬ ಪ್ರಾಚೀನ ನುಡಿಯನ್ನು ಕೇಳಿರುತ್ತೀರಿ. ವಾಸ್ತವವಾಗಿ ಅದು “ ಉದ್ಯೋಗಂ ಸಮಾಜ ಲಕ್ಷಣಂ” ಎಂದಾಗಬೇಕು. ಏಕೆಂದರೆ ಒಬ್ಬ ಯುವಕ ಅಥವಾ ಯುವತಿ ಉದ್ಯೋಗವಿಲ್ಲದೆ ಬದುಕುವಂತಾದರೆ ಆ ಕುಟುಂಬದಲ್ಲಿನ ಒಬ್ಬ ಸೋದರಿಯ, ಸೋದರನ ಶಿಕ್ಷಣ ಕುಂಠಿತವಾಗುತ್ತದೆ, ವಿವಾಹ ಸಂಬಂಧಗಳಿಗೆ ತಡೆಯುಂಟಾಗುತ್ತದೆ. ಕೌಟುಂಬಿಕ ಬದುಕು ಅಸ್ತವ್ಯಸ್ತವಾಗುತ್ತದೆ. ದೇಶದಲ್ಲಿ ಕನಿಷ್ಠ ಆರು ಕೋಟಿ ಯುವಜೀವಗಳು ಉದ್ಯೋಗವಿಲ್ಲದೆ ಬಳಲುತ್ತಿವೆ ಎಂದರೆ ಆರು ಕೋಟಿ ಕುಟುಂಬಗಳು ಈ ಜಟಿಲ ಸಮಸ್ಯೆ ಎದುರಿಸುತ್ತಿವೆ ಎಂದೇ ಅರ್ಥ ಅಲ್ಲವೇ ? ಸರ್ಕಾರೇತರ ಸ್ವತಂತ್ರ ಸಮೀಕ್ಷೆಗಳ ದತ್ತಾಂಶಗಳನ್ನು ಗಮನಿಸಿದರೆ ನಿರುದ್ಯೋಗ ಪ್ರಮಾಣ ಇನ್ನೂ ಐದು ಪಟ್ಟು ಹೆಚ್ಚಾಗಿರುವುದು ಕಾಣುತ್ತದೆ. ಈ ಸಮಸ್ಯೆಯ ಆಳ ಅಗಲವನ್ನು ಅರ್ಥಮಾಡಿಕೊಂಡು ಯುವ ಸಮೂಹ ತನ್ನ ಭವಿಷ್ಯದ ರಾಜಕೀಯ ಗುರಿಯನ್ನು, ಸಾಮಾಜಿಕ ಧ್ಯೇಯವನ್ನು, ಸಾಂಸ್ಕೃತಿಕ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.
ಭವಿಷ್ಯದ ಗುರಿ
ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಷ್ಟೇ ಅಲ್ಲದೆ ದೇಶದ ಪ್ರತಿಯೊಬ್ಬ ವಿದ್ಯಾವಂತ, ಅವಿದ್ಯಾವಂತ ವ್ಯಕ್ತಿಗೂ ಜೀವನಾವಶ್ಯವನ್ನು ಪೂರೈಸುವ ಉದ್ಯೋಗ ನೀಡಲು ಸರ್ಕಾರಗಳನ್ನು ಆಗ್ರಹಿಸಬೇಕಿದೆ. ಬಹಳ ಗಂಭೀರವಾಗಿ ನಾವು ಪರಿಗಣಿಸಬೇಕಾದ ವಿಷಯ ಎಂದರೆ ಶಿಕ್ಷಣ, ಆರೋಗ್ಯ, ಆಹಾರದಂತೆ ಉದ್ಯೋಗ ನಮ್ಮ ಮೂಲಭೂತ ಹಕ್ಕು ಎಂದು ಶಾಸನಬದ್ಧವಾಗಿ ಘೋಷಿಸಲಾಗಿಲ್ಲ. ಈ ಹಕ್ಕಿಗಾಗಿ ನಾವು ಆಗ್ರಹಿಸಬೇಕಿದೆ. ಕಳೆದ ಮೂರು ದಶಕಗಳ ಜಾಗತೀಕರಣ ಯುಗದಲ್ಲಿ ಸೃಷ್ಟಿಯಾಗಿರುವ ಅನಿಶ್ಚಿತತೆಯ ನಡುವೆ ಹಿಂದಿರುಗಿ ನೋಡಿದಾಗ, ಎಡಪಕ್ಷಗಳು, ಎಡಪಂಥೀಯ ಕಾರ್ಮಿಕ ಸಂಘಟನೆಗಳನ್ನೂ ಸೇರಿದಂತೆ ಯಾವುದೇ ಪಕ್ಷ/ಗುಂಪುಗಳೂ ಸಹ “ಉದ್ಯೋಗ ಮೂಲಭೂತ ಹಕ್ಕು” ಎಂದು ಘೋಷಿಸಲು ಒತ್ತಾಯಿಸಿ ಹೋರಾಟಗಳನ್ನು ರೂಪಿಸಿದಂತೆ ಕಾಣುವುದಿಲ್ಲ. ಇದು ನಮ್ಮ ವೈಚಾರಿಕ ವೈಫಲ್ಯ ಎನ್ನದೆ ಅಡ್ಡಿಯಿಲ್ಲ.
ಇಂದಿನ ಪ್ರತಿಭಟನಾ ಧರಣಿ ಸಮಾವೇಶದಲ್ಲಿ ನೆರೆದಿರುವ ಎಲ್ಲರೂ ಉದ್ಯೋಗಾಕಾಂಕ್ಷಿಗಳಾಗಿದ್ದಾರೆ. ನಿಮ್ಮ ಸುತ್ತಲೂ ನಿಮ್ಮೊಡನಿಲ್ಲದ ಲಕ್ಷಾಂತರ ಜನರು ಬೇರೆ ಬೇರೆ ಕಾರಣಗಳಿಂದ ನಿಷ್ಕ್ರಿಯರಾಗಿದ್ದಾರೆ ಅಥವಾ ಭ್ರಮಾಧೀನರಾಗಿದ್ದಾರೆ ಅಥವಾ ನಿರ್ಲಿಪ್ತರಾಗಿದ್ದಾರೆ. ತಮ್ಮ ಮಕ್ಕಳು ಅನುಭವಿಸುತ್ತಿರುವ ನಿರುದ್ಯೋಗದ ಬವಣೆಯನ್ನು ನಿತ್ಯ ನೋಡುತ್ತಿದ್ದರೂ, ಇದರ ಕಾರಣಗಳನ್ನು ಅರಿಯದೆ ಜಾತಿ, ಧರ್ಮ, ಮತಾಧಾರಿತ ರಾಜಕಾರಣದ ಕಾಲಾಳುಗಳಂತೆ ಇರುವ ಪೋಷಕರು ನಮ್ಮ ನಡುವೆ ಇದ್ದಾರೆ. ಅಂಥವರಲ್ಲಿ ಜಾಗೃತಿ ಮೂಡಿಸುವುದು ಸಂಘಟನಾತ್ಮಕ ಆದ್ಯತೆಯಾಗಬೇಕು. ಹಾಗೆಯೇ ಇಲ್ಲಿ ಮುಷ್ಕರನಿರತರಾಗಿ ನೆರೆದಿರುವವರು ತಮ್ಮ youthhood ಅಂದರೆ ಯೌವ್ವನದ ಸ್ಥಿತಿಯಿಂದ ದಾಟಿ ವಯಸ್ಕರಾಗುವ ವೇಳೆಗೆ ಅದೃಷ್ಟವಶಾತ್ ಉದ್ಯೋಗ ದೊರೆತು ಉತ್ತಮ ಸ್ಥಿತಿಯಲ್ಲಿದ್ದರೆ, ಆಗ ತಳಮಟ್ಟದಲ್ಲಿರುವ ಅವಕಾಶವಂಚಿತ ಯುವ ಸಮೂಹದತ್ತ ನೋಡುವ ವಿವೇಚನೆ, ವ್ಯವಧಾನ ಮತ್ತು ವಿವೇಕವನ್ನೂ ಬೆಳೆಸಿಕೊಳ್ಳಬೇಕು. ಆಗಲೇ ಇಂತಹ ಸಮಾವೇಶಗಳು, ಧರಣಿ-ಮುಷ್ಕರ-ಪ್ರತಿಭಟನೆ- ಹೋರಾಟಗಳು ಪೂರ್ಣ ಸಾರ್ಥಕತೆ ಪಡೆದುಕೊಳ್ಳುತ್ತವೆ.