ಮುಖ್ಯಮಂತ್ರಿ ಕುರ್ಚಿ ವಿಚಾರದಲ್ಲಿ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಜಟಾಪಟಿಯಲ್ಲಿ ಮಾತಿನ ಸಮರ ಮುಂದುವರಿದಿದೆ. ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯ ತರುವ ಉದ್ದೇಶದಿಂದ ದೆಹಲಿಯಿಂದ ಬಂದಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬಂದು ಸಭೆ ಮಾಡಿದ ಬಳಿಕ ಮತ್ತಷ್ಟು ಕಾವು ಜೋರಾಗಿದೆ. ಮೀಟಿಂಗ್ ಮೇಲೆ ಮೀಟಿಂಗ್ ಮಾಡಿದ ಪರಿಣಾಮ, ನಾಯಕರ ನಡುವಿನ ಮುಸುಕಿನ ಗುದ್ದಾಟ ಸ್ವರೂಪ ಬದಲಿಸಿದ್ದು, ಬಹಿರಂಗವಾಗಿಯೇ ವಾಗ್ಬಾಣಗಳ ಪ್ರಯೋಗ ಮಾಡ್ತಿದ್ದಾರೆ.
ಒಂದು ಕಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಡಿ.ಕೆ ಶಿವಕುಮಾರ್ ತಂತ್ರಗಾರಿಕೆ ಮಾಡಿದ್ರೆ ಸಿಎಂ ಸಿದ್ದರಾಮಯ್ಯ ಸಿಎಂ ಕುರ್ಚಿ ಕಡೆ ಯಾರೂ ಬಾರದಂತೆ ನೋಡಿಕೊಳ್ಳುವ ಕೆಲಸ ಮಾಡ್ತಿದ್ದಾರೆ. 2025ರ ಆರಂಭದಿಂದಲೇ ಶುರುವಾದ ಡಿನ್ನರ್ ಪಾಲಿಟಿಕ್ಸ್ ಕಾಂಗ್ರೆಸ್ ನಾಯಕರನ್ನು ಗೊಂದಲದ ಗೂಡಿಗೆ ತಳ್ಳಿ ಬಿಟ್ಟಿದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಬಹಿರಂಗ ಚರ್ಚೆ ಬೇಡ ಅಂತಾ ಹೇಳಿದ್ರೂ ಮಾತುಗಳ ಅಬ್ಬರ ನಿಲ್ತಿಲ್ಲ. ನಾಯಕರು ಹೈಕಮಾಂಡ್ ಗೆರೆ ದಾಟಿ ಅಬ್ಬರಿಸುತ್ತಿದ್ದಾರೆ.
ಬೆಳಗಾವಿ ಪಾಲಿಟಿಕ್ಸ್ ಮೂಲಕ ಕಾಂಗ್ರೆಸ್ನಲ್ಲಿ ಮಾತಿನ ಸಮರ ಜೋರಾಗಿದೆ. ಸತೀಶ್ ಜಾರಕಿಹೊಳಿ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಕುರ್ಚಿ ಕದನ ನಡೆಯುತ್ತಿದೆ. ಸೈಲೆಂಟಾಗಿರಿ ಎಂದು ವಾರ್ನ್ ಮಾಡಿದರೂ ಸತೀಶ್ ಜಾರಕಿಹೊಳಿ ವೈಲೆಂಟಾಗಿದ್ದಾರೆ. ಕಾಂಗ್ರೆಸ್ ಕದನಕ್ಕೆ ಅಲ್ಪ ವಿರಾಮ ಹಾಕಲು ಉಸ್ತುವಾರಿ ಸುರ್ಜೇವಾಲ ರಾಜ್ಯಕ್ಕೆ ಎಂಟ್ರಿ ಆಗ್ತಿದ್ದಾರೆ. ನಾಳೆ ಬೆಳಗಾವಿಗೆ ಆಗಮಿಸಲಿರೊ ಸುರ್ಜೇವಾಲ, ಗಾಂಧಿ ಭಾರತ ಕಾರ್ಯಕ್ರಮಕ್ಕೂ ಮೊದಲು ಸಚಿವ ಸತೀಶ್ ಜಾರಕಿಹೊಳಿ ಜೊತೆಗೆ ಚರ್ಚೆ ಮಾಡಲಿದ್ದಾರೆ ಎನ್ನಲಾಗ್ತಿದೆ.
ಸತೀಶ್ ಜಾರಕಿಹೊಳಿ ವಿರುದ್ಧ ಡಿ.ಕೆ ಶಿವಕುಮಾರ್ ದೂರು ನೀಡಿದ್ದಾರೆ ಎನ್ನಲಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ ವೇಣುಗೋಪಾಲ್ಗೆ ದೂರು ಸಲ್ಲಿಕೆ ಆಗಿದೆ. ಕೆಪಿಸಿಸಿ ಅಧ್ಯಕ್ಷರ ಹುದ್ದೆ ಬದಲಾವಣೆ ಹಾಗೂ ಆಕಾಂಕ್ಷಿ ವಿಚಾರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಇದರಿಂದ ಪಕ್ಷ ಹಾಗೂ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆಯಾಗಿದೆ. ಬಹಿರಂಗ ಹೇಳಿಕೆ ಯಾರೂ ಕೊಡಬಾರದೆಂದು ಸೂಚಿಸಿದ್ದರು. ಆದರೂ ಹೈಕಮಾಂಡ್ ಮಾತಿಗೂ ಡೋಂಟ್ ಕೇರ್ ಅಂತಾ ಶಿಸ್ತು ಉಲ್ಲಂಘನೆ ಮಾಡಿದ್ದಾರೆ. ಕೂಡಲೇ ಮಧ್ಯಪ್ರವೇಶ ಮಾಡುವಂತೆ ದೂರು ನೀಡಿದ್ದಾರೆ ಎನ್ನಲಾಗಿದೆ.