ಸ್ವತಂತ್ರ ಭಾರತದ ವೈಜ್ಞಾನಿಕ ಮುನ್ನಡಿಗೆಗೆ ಅಡಿಪಾಯ ಹಾಕಿದವರನ್ನು ಮರೆಯಲಾದೀತೇ ?
-ನಾ ದಿವಾಕರ
ಭಾರತದ ವಿಜ್ಞಾನ ಕ್ಷೇತ್ರದ ಮೇರು ಸಾಧನೆ ಎಂದೇ ಬಣ್ಣಿಸಲಾಗುತ್ತಿರುವ ಚಂದ್ರಯಾನ ಯಶಸ್ವಿಯಾಗಿದೆ. ಭಾರತದ ಪ್ರತಿಷ್ಠಿತ ಸಾರ್ವಜನಿಕ ಸಂಸ್ಥೆ (Public Sector) ಇಸ್ರೋ ತನ್ನ ಆರು ದಶಕಗಳ ಸುದೀರ್ಘ ಇತಿಹಾಸದ ಸುವರ್ಣ ಕ್ಷಣಗಳನ್ನು ಈ ಸಂದರ್ಭದಲ್ಲಿ ಸಂಭ್ರಮಿಸಿರುವುದು ಸಹಜ. ನೆಹರೂ ಆರ್ಥಿಕತೆಯ ಸಾರ್ವಜನಿಕ ಉದ್ಯಮ/ಸಂಸ್ಥೆಗಳನ್ನು ನವ ಉದಾರವಾದದ ಮಾರುಕಟ್ಟೆ ಆರ್ಥಿಕತೆಯ ಜಗುಲಿಯಲ್ಲಿಟ್ಟು ನಿಷ್ಪ್ರಯೋಜಕ ಅಥವಾ ಆರ್ಥಿಕವಾಗಿ ನಿರರ್ಥಕ ಎಂದು ಬಣ್ಣಿಸಲಾಗುತ್ತಿರುವ ಈ ಸನ್ನಿವೇಶದಲ್ಲಿ ಭಾರತದ ಒಂದು ಸಾರ್ವಜನಿಕ ಸಂಸ್ಥೆ ಅತ್ಯಂತ ಕನಿಷ್ಠ ವೆಚ್ಚದಲ್ಲಿ ಚಂದ್ರನ ಅಂಗಳದಲ್ಲಿ ತನ್ನ ಹೆಜ್ಜೆ ಮೂಡಿಸಿರುವುದು ಈ ದೇಶದ ವಿಜ್ಞಾನಿಗಳ ಹಾಗೂ ವಿಜ್ಞಾನ ಕ್ಷೇತ್ರದ ಶ್ರಮಜೀವಿಗಳ ಪಾಲಿಗೆ ಹೆಮ್ಮೆಯ ಸಂಗತಿ. ಹಾಗೆಯೇ ಚಂದ್ರಯಾನದ ಯಶಸ್ಸು ಸಮಸ್ತ ಭಾರತೀಯರಿಗೆ ಹೆಮ್ಮೆಯ ವಿಚಾರವೂ ಹೌದು. ಆದರೆ ನೂರಾರು ವಿಜ್ಞಾನಿಗಳ ಶ್ರದ್ಧೆ, ಬದ್ಧತೆ ಹಾಗೂ ಅವಿರತ ಪರಿಶ್ರಮದ ಪ್ರತಿಫಲದ ಶ್ರೇಯ ಯಾರಿಗೆ ಸಲ್ಲಬೇಕು ಎನ್ನುವುದೇ ಪ್ರಧಾನವಾಗಿ ಚರ್ಚೆಗೊಳಗಾಗುತ್ತಿರುವುದರಿಂದ ಚರಿತ್ರೆಯತ್ತ ಗಮನಹರಿಸುವುದು ಸೂಕ್ತ ಎನಿಸಬಹುದು

ಚಂದ್ರಯಾನದ ಯಶಸ್ಸನ್ನು ಭಾರತದ ಕಟ್ಟಕಡೆಯ ವ್ಯಕ್ತಿಯೂ ಸಂಭ್ರಮಿಸಲು ಕಾರಣಗಳೂ ಇವೆ. 1947ರಲ್ಲಿ ವಸಾಹತು ದಾಸ್ಯದಿಂದ ವಿಮೋಚನೆ ಪಡೆದಾಗ ಭಾರತದ ಬೊಕ್ಕಸ ಬರಿದಾಗಿತ್ತು. ಹೂಡಿಕೆಯ ಬಂಡವಾಳದ ಕೊರತೆ ಇತ್ತು. ಸಾಕ್ಷರತೆ ಕನಿಷ್ಠ ಮಟ್ಟದಲ್ಲಿತ್ತು. ಶೇ 80ರಷ್ಟು ಕೃಷಿ ಅವಲಂಬಿತ ಜನಸಂಖ್ಯೆಯ ಭಾರತದಲ್ಲಿ ನಿರಕ್ಷರತೆ, ಬಡತನ, ಹಸಿವು, ಅಪೌಷ್ಟಿಕತೆ ಮತ್ತು ಸಾಮಾಜಿಕ ಅಸಮಾನತೆಗಳು ತಂಡವಾಡುತ್ತಿದ್ದವು. ವಿಜ್ಞಾನದ ಶಿಕ್ಷಣದ ಅವಕಾಶಗಳೇ ಇಲ್ಲದಂತಿತ್ತು. ವಿಭಜನೆಯ ನೋವುಗಳ ನಡುವೆಯೇ ಈ ಸಮಸ್ಯೆಗಳನ್ನು ಎದುರಿಸುತ್ತಾ ಭಾರತವನ್ನು ಒಂದು ಸಮ ಸಮಾಜದ ಸಮೃದ್ಧ ರಾಷ್ಟ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಂವಿಧಾನಿಕ ಆಶಯಗಳು, ಪ್ರಜಾಪ್ರಭುತ್ವದ ಕನಸುಗಳು ಹಾಗೂ ನೆಹರೂ ಆವರ ಆಧುನಿಕ ಭಾರತದ ಕಲ್ಪನೆಗಳು ಭಾರತವನ್ನು ವೈಜ್ಞಾನಿಕ ನೆಲೆಗಟ್ಟಿನ, ಸಾಮಾಜಿಕ ನ್ಯಾಯದ, ವೈಚಾರಿಕ ದೃಷ್ಟಿಕೋನದ ಪ್ರಬುದ್ಧ ರಾಷ್ಟ್ರವಾಗಿ ನಿರ್ಮಿಸುವ ಮಹತ್ವಾಕಾಂಕ್ಷೆಗೂ ಬುನಾದಿ ಹಾಕಲಾಗಿತ್ತು. ಈ ಬುನಾದಿಯೊಂದಿಗೆ ಆರಂಭವಾದ ಒಂದು ದೇಶ 75 ವರ್ಷಗಳ ತನ್ನ ನಡಿಗೆಯಲ್ಲಿ ಮಾಡಿರುವ ಸಾಧನೆಗಳಲ್ಲಿ ಚಂದ್ರಯಾನವೂ ಒಂದು. ವಿಜ್ಞಾನದ ದೃಷ್ಟಿಯಿಂದ ನೋಡಿದಾಗ ಇದು ಮೇರು ಸಾಧನೆ. ಆ ಕಾರಣಕ್ಕಾಗಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಈ ಕ್ಷಣವನ್ನು ಸಂಭ್ರಮಿಸುವುದು ಸಹಜ.
ಸಾಂವಿಧಾನಿಕ ಆಕಾಂಕ್ಷೆಗಳು
ಭಾರತದ ಸಂವಿಧಾನದ ಮೂಲ ಆಶಯವೇ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಿ, ವೈಚಾರಿಕತೆಯ ನೆಲೆಯಲ್ಲಿ ಸಮಸ್ತ ಜನಕೋಟಿಗೂ ಸಾರ್ವತ್ರಿಕ ಶಿಕ್ಷಣವನ್ನು ತಲುಪಿಸಿ ಒಂದು ಜಾತ್ಯತೀತ ಪ್ರಜಾಸತ್ತಾತ್ಮಕ ಸಮಾನತೆಯ ಸಮಾಜವನ್ನು ನಿರ್ಮಿಸುವುದಾಗಿತ್ತು. ಅಂಬೇಡ್ಕರ್ ಸಂವಿಧಾನದ ಮೂಲಕ ವ್ಯಕ್ತಪಡಿಸಿದ ಈ ಆಶಯಗಳನ್ನು ಸಾಕಾರಗೊಳಿಸಲು ಸಾಂಸ್ಥಿಕ ತಳಹದಿಯನ್ನು ನಿರ್ಮಿಸಿದ ಶ್ರೇಯಸ್ಸು ನೆಹರೂ ಆಳ್ವಿಕೆಗೆ ಸಲ್ಲುತ್ತದೆ. ಈ ಆಶಯಗಳ ನಡುವೆಯೇ ನೆಹರೂ ಸರ್ಕಾರ ದೂರದೃಷ್ಟಿಯ ಯೋಜನೆ ಮತ್ತು ನಿಖರವಾದ ಕ್ರಿಯಾಶೀಲ ಕಾರ್ಯಾಚರಣೆಯ ಮೂಲಕ ಆಧುನಿಕ ರಾಷ್ಟ್ರದ ನಿರ್ಮಾಣಕ್ಕೆ ಸುಭದ್ರ ಅಡಿಪಾಯವನ್ನು ಹಾಕಲಾಯಿತು. ಈ ದಾರ್ಶನಿಕ ದೃಷ್ಟಿಕೋನದಿಂದಲೇ ಏಪ್ರಿಲ್ 1948 ರಲ್ಲಿ ನೆಹರು ಪರಮಾಣು ಶಕ್ತಿ ಮಸೂದೆಯನ್ನು ಸಂವಿಧಾನ ಸಭೆಯ ಮುಂದೆ ಮಂಡಿಸಿದ್ದರು. ಇದು ಪರಮಾಣು ಶಕ್ತಿ ಮಂಡಳಿಗೆ ರಹಸ್ಯವಾಗಿ ಪರಮಾಣು ಸಂಶೋಧನೆ ನಡೆಸುವ ಅಧಿಕಾರವನ್ನು ನೀಡಿತು. ಪರಮಾಣು ಶಕ್ತಿ ಆಯೋಗವನ್ನು (AEC) ಏಪ್ರಿಲ್ 10, 1948 ರಂದು ಸ್ಥಾಪಿಸಲಾಯಿತು. ಈ ಅಡಿಪಾಯದ ಮೇಲೆ 1954 ರಲ್ಲಿ ಹೋಮಿ ಭಾಭಾ ಅವರ ಕಾರ್ಯದರ್ಶಿಯಾಗಿದ್ದ ಪರಮಾಣು ಶಕ್ತಿಯ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಲಾಯಿತು.

1952ರ ಮಾರ್ಚ್‌ನಲ್ಲಿ ಖರಗ್‌ಪುರದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಗೆ ಶಂಕುಸ್ಥಾಪನೆಯನ್ನು ನೆರವೇರಿಸಿದಾಗ “ ಇದು ನವ ಭಾರತದ ನಿರ್ಮಾಣದ ಅಡಿಗಲ್ಲು ಆಗಿದೆ ” ಎಂದು ಹೇಳಿದ್ದ ನೆಹರೂ ಅವರ ಆಶಯವನ್ನು ಇಸ್ರೋ 2023ರಲ್ಲಿ ಸಾಕಾರಗೊಳಿಸಿದೆ. 1959ರಲ್ಲಿ ಮುಂಬೈನಲ್ಲಿ ಎರಡನೆಯ IIT ಸ್ಥಾಪನೆಗೆ ಅಡಿಗಲ್ಲು ಹಾಕುವಾಗ ನೆಹರೂ “ಇಂದು ಭಾರತದಲ್ಲಿ ನಡೆಯುತ್ತಿರುವ ಅನೇಕ ಕೆಲಸಗಳಲ್ಲಿ, ತಾಂತ್ರಿಕ ತರಬೇತಿ ಮತ್ತು ಜ್ಞಾನದ ಈ ಮಹಾನ್ ಸಂಸ್ಥೆಗಳ ಸ್ಥಾಪನೆಯು ಬಹುಶಃ ವರ್ತಮಾನಕ್ಕೆ ಮಾತ್ರವಲ್ಲ, ಭವಿಷ್ಯಕ್ಕೂ ಅತ್ಯಂತ ಮುಖ್ಯವಾಗಿದೆ.” ಎಂದು ಹೇಳಿದ್ದುದು ಇಂದು ಚಂದ್ರನ ಅಂಗಳದಲ್ಲಿ ಮಾರ್ದನಿಸುತ್ತಿರಬೇಕು.
ದೇಶದ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಆಲೋಚನೆಗಳ ಬೀಜ ಬಿತ್ತುವ ಪ್ರಕ್ರಿಯೆಯಲ್ಲಿ ನೆಹರೂ ಆಸಕ್ತಿ ವಹಿಸಿದ್ದುದು ಅವರ ಆಡಳಿತಾವಧಿಯ ಸಾಧನೆಗಳಿಂದಲೇ ಸ್ಪಷ್ಟವಾಗುತ್ತದೆ. ಸಾರ್ವಜನಿಕ ಕೈಗಾರಿಕಾ ಸಂಸ್ಥೆಗಳು ಮತ್ತು ಇತರ ವಿಜ್ಞಾನ-ಇತಿಹಾಸ-ಸಮಾಜಶಾಸ್ತ್ರದ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಆಧುನಿಕ ಭಾರತಕ್ಕೆ ಸುಭದ್ರ ಬುನಾದಿ ಹಾಕಿದ್ದ ನೆಹರೂ ಸಾರ್ವಜನಿಕ ಉದ್ಯಮಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದೇ ಬಣ್ಣಿಸಿದ್ದರು. ದೇಶದ ಶೈಕ್ಷಣಿಕ, ಬೌದ್ಧಿಕ ವಲಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ವಿಶೇಷ ಗಮನ ನೀಡುವ ನಿಟ್ಟಿನಲ್ಲಿ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳೊಡನೆ ನಿರಂತರ ಸಮಾಲೋಚನೆ ನಡೆಸುತ್ತಿದ್ದ ನೆಹರೂ ವಿಜ್ಞಾನ, ಲಲಿತಕಲೆಗಳು, ಸಾಹಿತ್ಯ, ಸಂಗೀತ, ನಾಟಕ, ಚಲನಚಿತ್ರ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಸ್ವತಂತ್ರ ಸಂಸ್ಥೆಗಳ ರಚನೆಗೆ ಮುಂದಾಗಿ ಯಶಸ್ವಿಯಾಗಿದ್ದು ಈಗ ಇತಿಹಾಸ.

ವೈಜ್ಞಾನಿಕ ಮುನ್ನಡೆಯ ಹೆಜ್ಜೆಗಳು
1950ರಲ್ಲಿ ಭಾರತದ ಹೊಸ ಆಳ್ವಿಕೆಯು ಶೈಶಾವಸ್ಥೆಯಲ್ಲಿರುವಾಗಲೇ ಬಂಡವಾಳದ ಕೊರತೆಯ ನಡುವೆಯೇ ಮೂರು ರಾಷ್ಟ್ರೀಯ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿತ್ತು. 1942ರಲ್ಲಿ ಸ್ವಾತಂತ್ರ್ಯಪೂರ್ವದಲ್ಲೇ ಸ್ಥಾಪನೆಯಾಗಿದ್ದ ಸ್ವಾಯತ್ತ ಸಂಸ್ಥೆ CSIR – ಕೈಗಾರಿಕೆ ಮತ್ತು ವೈಜ್ಞಾನಿಕ ಸಂಶೋಧನಾ ಸಂಸ್ಥೆ, ಸುಪರ್ದಿಯಲ್ಲಿ ಈ ಪ್ರಯೋಗಾಲಯಗಳು ಸ್ಥಾಪನೆಯಾಗಿದ್ದು, ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ (NCL) ಇಂದಿಗೂ ಸಹ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾಗಿದೆ. ಈ ಸಂಸ್ಥೆಗಳ ಅಂಗಳದಲ್ಲಿ ನಿಂತು ಹಿಂದಿರುಗಿ ನೋಡಿದಾಗ 1937ರ ಸನ್ನಿವೇಶಗಳು ನೆನಪಾಗುತ್ತವೆ. 1937ರಲ್ಲಿ ಜವಹರಲಾಲ್ ನೆಹರೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಅನುಮೋದನೆಯ ಮೇರೆಗೆ ಪ್ರಾಂತೀಯ ಸರ್ಕಾರಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ತಜ್ಞರ ಸಮಿತಿಗಳನ್ನು ರಚಿಸುವಂತೆ ನಿರ್ದೇಶನ ನೀಡಿದ್ದರು. ತದನಂತರ 1938ರಲ್ಲಿ ರಾಷ್ಟ್ರೀಯ ಯೋಜನಾ ಸಮಿತಿಯ ಅಧ್ಯಕ್ಷರಾಗಿ, ವಿಜ್ಞಾನಿಗಳಾದ ಮೇಘನಾದ್ ಸಹಾ ಹಾಗೂ ಪಿ.ಸಿ. ಮಹಲನೋಬಿಸ್ ಮತ್ತಿತರರೊಡನೆ ಸಮಾಲೋಚನೆ ನಡೆಸಿದ್ದರು. 1947ರ ಫೆಬ್ರವರಿ 3ರಂದು ಸಲ್ಲಿಸಿದ ಒಂದು ಟಿಪ್ಪಣಿಯಲ್ಲಿ ನೆಹರೂ “ ಆಧುನಿಕ ರಕ್ಷಣಾ ಮತ್ತು ಔದ್ಯಮಿಕ ವಲಯಕ್ಕೆ ವಿಶಾಲ ಆಧಾರದ ಮೇಲೆ, ವಿಶೇಷ ರೀತಿಯ ವೈಜ್ಞಾನಿಕ ಸಂಶೋಧನೆಯ ಅವಶ್ಯಕತೆ ಇದೆ ” ಎಂದು ಹೇಳುವ ಮೂಲಕ ಸ್ವತಂತ್ರ ಭಾರತದ ವೈಜ್ಞಾನಿಕ ಹೆಜ್ಜೆಗಳ ಮುನ್ನುಡಿ ಸೂಚಿಸುತ್ತಾರೆ.
ನೆಹರೂ ಅವರ ಸಲಹೆಯ ಮೇರೆಗೆ ಅದೇ ವರ್ಷದಲ್ಲಿ Scientific Manpower Committee ರಚಿಸಲಾಗುತ್ತದೆ. ಇದಕ್ಕೂ ಮುನ್ನ 1945ರಲ್ಲೇ ದೇಶದಲ್ಲಿ ಉನ್ನತ ದರ್ಜೆಯ ತಾಂತ್ರಿಕ ಸಂಸ್ಥೆಗಳ ಸ್ಥಾಪನೆಗಾಗಿ ವಿಜ್ಞಾನಿ ನಳಿನಿ ರಂಜನ್ ಸರ್ಕಾರ್ ಅವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿಯೊಂದನ್ನೂ ರಚಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು. ಈ ಅವಧಿಯಲ್ಲಿ ನೆಹರೂ ವಿಜ್ಞಾನ ಮತ್ತು ಸಂಶೋಧನೆಯ ಸ್ಥಾವರಗಳಿಗಿಂತಲೂ ಹೆಚ್ಚು ಗಮನ ನೀಡಿದ್ದು ವೈಜ್ಞಾನಿಕ ವಿಧಾನ, ದೃಷ್ಟಿಕೋನ ಮತ್ತು ಮನೋಭಾವಗಳಿಗೆ ಸಾಂಸ್ಥಿಕ ಸ್ವರೂಪ ನೀಡುವುದರ ಬಗ್ಗೆ. ವಿಜ್ಞಾನಿಗಳ ಒತ್ತಾಸೆಯ ಮೇರೆಗೆ 1947ರಲ್ಲಿ ದೆಹಲಿಯಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಅಧ್ಯಕ್ಷತೆಯನ್ನು ಸಹ ವಹಿಸಿದ್ದ ನೆಹರೂ “ ಭಾರತವು ಸ್ವಾತಂತ್ರ್ಯದ ಸಮೀಪದಲ್ಲಿರುವುದರಿಂದ ಹಾಗೂ ದೇಶದಲ್ಲಿ ವಿಜ್ಞಾನವೂ ಪ್ರವರ್ಧಮಾನಕ್ಕೆ ಬರುತ್ತಿರುವುದರಿಂದ ಎಲ್ಲ ಕ್ಷೇತ್ರಗಳಲ್ಲಿ ತ್ವರಿತಗತಿಯ ಯೋಜಿತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ನವ ಭಾರತ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತದೆ ಹಾಗೆಯೇ ಭಾರತೀಯರನ್ನು ಹೆಚ್ಚು ಹೆಚ್ಚು ವೈಜ್ಞಾನಿಕ ಮನೋಭಾವದವರನ್ನಾಗಿ ಮಾಡಲು ಪ್ರಯತ್ನಿಸುತ್ತದೆ ” ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡುತ್ತಾ ನೆಹರೂ “ ವಿಜ್ಞಾನವು ಕೇವಲ ಏಕವ್ಯಕ್ತಿಯ ಅಥವಾ ವ್ಯಕ್ತಿಗತವಾದ ಸತ್ಯಾನ್ವೇಷಣೆಯಾಗಿರುವುದಕ್ಕಿಂತಲೂ ಹೆಚ್ಚಾಗಿ ಸಮುದಾಯದ-ಸಮಾಜದ ಪರ ಕೆಲಸ ಮಾಡಿದರೆ ಅತ್ಯುತ್ತಮ ಸಾಧನೆಯೆನಿಸುತ್ತದೆ ” ಎಂದು ಹೇಳಿದ್ದರು. ಮುಂದುವರೆಯುತ್ತಾ “ ಹಸಿದ ವ್ಯಕ್ತಿಗೆ ಸತ್ಯಾಸತ್ಯತೆಗಳು ಅರ್ಥಹೀನ ಎನಿಸುತ್ತದೆ. ಅಂಥವರಿಗೆ ಆಹಾರ ಮುಖ್ಯವಾಗುತ್ತದೆ. ಅವರ ದೃಷ್ಟಿಯಲ್ಲಿ ದೇವರು ನಗಣ್ಯವಾಗುತ್ತಾನೆ. ಭಾರತ ಇಂದು ಹಸಿವಿನಿಂದ ಬಳಲುತ್ತಿದೆ ಈ ಸಂದರ್ಭದಲ್ಲಿ ನಾವು ಸತ್ಯ-ದೇವರು ಇವುಗಳ ಸುತ್ತ ಮಾತನಾಡುವುದಕ್ಕಿಂತಲೂ ಜನಸಾಮಾನ್ಯರಿಗೆ ಅನ್ನ, ಬಟ್ಟೆ ಮತ್ತು ವಸತಿ, ಶಿಕ್ಷಣ ಹಾಗೂ ಆರೋಗ್ಯ ಇವುಗಳನ್ನು ಒದಗಿಸಲು ಶ್ರಮಿಸಬೇಕಿದೆ. ವಿಜ್ಞಾನವು ಈ ಪರಿಭಾಷೆಯಲ್ಲಿ ಯೋಚಿಸುವುದಷ್ಟೇ ಅಲ್ಲದೆ, ಸಂಘಟಿತ ಯೋಜನೆಗಳ ವಿಶಾಲ ತಳಹದಿಯೊಂದಿಗೆ ಈ ಹಾದಿಯಲ್ಲಿ ಕ್ರಿಯಾಶೀಲತೆಯಿಂದ ಶ್ರಮಿಸಬೇಕಿದೆ ” ಎಂದು ಹೇಳುತ್ತಾರೆ.
1950ರಲ್ಲಿ ಮೂರು ಪ್ರಮುಖ ವೈಜ್ಞಾನಿಕ ಪ್ರಯೋಗಾಲಯಗಳನ್ನು ಸ್ಥಾಪಿಸಿದ ನಂತರದಲ್ಲಿ CSIR ಅಧ್ಯಕ್ಷ ಗಾದಿಯನ್ನು ಅಲಂಕರಿಸುವ ನೆಹರೂ ತಮ್ಮ ಅಧಿಕಾರಾವಧಿಯಲ್ಲಿ ದೇಶಾದ್ಯಂತ 17 ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದರು. ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ನಂತರದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ನೀಲನಕ್ಷೆಯನ್ನು ರೂಪಿಸಲು ಭಾರತೀಯ ವಿಜ್ಞಾನಿಗಳನ್ನು ಭೇಟಿ ಮಾಡುವುದು ಅವರ ಆದ್ಯತೆಯಾಗಿತ್ತು. ಇದೇ ಸಂದರ್ಭದಲ್ಲೇ ನೆಹರೂ ಅಂತರರಾಷ್ಟ್ರೀಯ ವಿಜ್ಞಾನಿಗಳಾದ ಆಲ್ಬರ್ಟ್ ಐನ್ ಸ್ಟೈನ್, ಹೆನ್ರಿ ಡೇಲ್, ಅಲೆಕ್ಸಾಂಡರ್ ಫ್ಲೆಮಿಂಗ್, ಶರೀರ ಶಾಸ್ತ್ರಜ್ಞ ಎ.ವಿ.ಹಿಲ್, ಭೌತ ಶಾಸ್ತ್ರಜ್ಞ ನೀಲ್ಸ್ ಬೋರ್ ಹಾಗೂ ಗಣಿತ ತಜ್ಞ ಬರ್ಟ್ರಾಂಡ್ ರಸೆಲ್ ಅವರೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಯ ಬೌದ್ಧಿಕ ಹಾಗೂ ಸಾಂಸ್ಥಿಕ ಅಡಿಪಾಯವನ್ನು ನಿರ್ಮಿಸುವ ಪ್ರಯತ್ನಗಳಲ್ಲಿ ಇದು ಪ್ರಮುಖವಾಗಿತ್ತು.
1950ರಲ್ಲಿ ಪ್ರಪ್ರಥಮ ವೈಜ್ಞಾನಿಕ ಪ್ರಯೋಗಾಲಯದ ಉದ್ಘಾಟನೆಯ ಸಂದರ್ಭದಲ್ಲಿ ನೆಹರೂ ಅವರು ಆಡಿದ : ” ನಮ್ಮ ದೇಶದಲ್ಲಿ ಪ್ರತಿಭೆ ಇದೆ. ಆದರೆ ಆ ಪ್ರತಿಭೆಯನ್ನು ಹೇಗೆ ಬಳಸಿಕೊಳ್ಳುವುದು ಮತ್ತು ಅಗತ್ಯ ಸಾಮರ್ಥ್ಯವನ್ನು ಹೊಂದಿದ್ದ ಭಾರತದ ಯುವಕ ಯುವತಿಯರಿಗೆ ಅವಕಾಶಗಳನ್ನು ನೀಡುವುದು ಹೇಗೆ ಎಂಬುದು ಜಟಿಲ ಪ್ರಶ್ನೆಯಾಗಿದೆ. ಈ ಪ್ರಯೋಗಾಲಯಗಳಿಗೆ ಸಂಬಂಧಿಸಿದಂತೆ, ಅವು ಹೆಚ್ಚಿನ ಸಂಖ್ಯೆಯ ಯುವಕ ಯುವತಿಯರಿಗೆ ಬಾಗಿಲು ತೆರೆಯುವಲ್ಲಿ ಸ್ವಲ್ಪ ಮಟ್ಟಿಗಾದರೂ ಸಹಾಯ ಮಾಡುತ್ತವೆ ಮತ್ತು ವಿಜ್ಞಾನದ ಕಾರಣಕ್ಕಾಗಿ ಮತ್ತು ವಿಜ್ಞಾನವನ್ನು ಸಾರ್ವಜನಿಕ ಒಳಿತಿಗಾಗಿ ಅನ್ವಯಿಸುವಲ್ಲಿ ದೇಶಕ್ಕಾಗಿ ಉತ್ತಮ ಕೆಲಸ ಮಾಡಲು ಅವಕಾಶವನ್ನು ನೀಡುತ್ತವೆ ಎಂದು ನಾನು ಭಾವಿಸುತ್ತೇನೆ. ಈ ಮಾತುಗಳೊಂದಿಗೆ ನಾನು ಈ ಪ್ರಯೋಗಾಲಯವನ್ನು ತೆರೆದಿದ್ದೇನೆ ಎಂದು ಘೋಷಿಸುತ್ತೇನೆ “ಎಂಬ ದಾರ್ಶನಿಕ ಮಾತುಗಳು ಇಂದು ಚಂದ್ರನ ಅಂಗಳದಲ್ಲಿ ಧ್ವನಿಸಲೇಬೇಕಲ್ಲವೇ ?
ಈ ವೈಜ್ಞಾನಿಕ ಹೆಜ್ಜೆಗಳ ನಡುವೆಯೇ 1958ರಲ್ಲಿ ಸೋವಿಯತ್ ರಷ್ಯಾದ ಸ್ಪುಟ್ನಿಕ್-1 ಗಗನ ನೌಕೆ ಯಶಸ್ವಿಯಾಗಿ ಉಡಾವಣೆಯಾದ ಕೂಡಲೇ ಪ್ರಧಾನಿ ನೆಹರೂ ಭಾರತಕ್ಕೆ ತನ್ನದೇ ಆದ ವೈಜ್ಞಾನಿಕ ನೀತಿಯ ಅವಶ್ಯಕತೆ ಇರುವುದನ್ನು ಮನಗಂಡು ಸಂಸತ್ತಿನಲ್ಲಿ ವೈಜ್ಞಾನಿಕ ಆಡಳಿತ ನೀತಿಯನ್ನು ಅಂಗೀಕರಿಸಿದ್ದರು. “ವಿಜ್ಞಾನಿಗಳಿಗೆ ಉತ್ತಮ ಸೇವೆಯ ಅವಕಾಶಗಳನ್ನು ಕಲ್ಪಿಸಲು ಮತ್ತು ಸೂಕ್ತ ಆಡಳಿತ ನೀತಿಗಳ ರಚನೆಯೊಂದಿಗೆ ವಿಜ್ಞಾನಿಗಳನ್ನು ಸಂಯೋಜಿಸುವ ಮೂಲಕ ಅವರಿಗೆ ಗೌರವಾನ್ವಿತ ಸ್ಥಾನವನ್ನು ನೀಡಲು ಸರ್ಕಾರ ಬದ್ಧವಾಗಿದೆ ” ಎಂದು ಸಂಸತ್ತಿನಲ್ಲಿ ಘೋಷಿಸಿದ್ದ ನೆಹರೂ ಸರ್ಕಾರವು ಆಗಸ್ಟ್ 1961 ರಲ್ಲಿ ನೆಹರು ಸರ್ಕಾರವು ಬಾಹ್ಯಾಕಾಶ ಸಂಶೋಧನೆ ಮತ್ತು ಬಾಹ್ಯಾಕಾಶದ ಶಾಂತಿಯುತ ಬಳಕೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಪರಮಾಣು ಶಕ್ತಿ ಇಲಾಖೆಗೆ ವಹಿಸಿತ್ತು. ಹೋಮಿ ಜೆ ಭಾಭಾ ಈ ಸಂಸ್ಥೆಯ ಕಾರ್ಯದರ್ಶಿಯಾಗಿದ್ದರು. ಮರುವರ್ಷವೇ ಹೋಮಿ ಭಾಭಾ ಅವರ ಮುಂದಾಳತ್ವದಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿಯನ್ನು (INCOSPOR) ಸ್ಥಾಪಿಸಲಾಯಿತು.
ಸ್ವಾತಂತ್ರ್ಯ ಪೂರ್ವದಲ್ಲೇ ಗುರುತಿಸಬಹುದಾದ ದಿಟ್ಟ-ದಾರ್ಶನಿಕ ಹೆಜ್ಜೆಗಳೇ ಭವಿಷ್ಯದ ಬಾಹ್ಯಾಕಾಶ ಸಂಶೋಧನೆಯ ತಳಪಾಯ ಎನ್ನುವುದನ್ನು ಚಂದ್ರಯಾನದ ಸಂಭ್ರಮದ ನಡುವೆ ನೆನೆಯಲೇಬೇಕಿದೆ.
ಇಸ್ರೋ ಸ್ಥಾಪನೆಯ ಮೈಲುಗಲ್ಲುಗಳು ಮುಂದಿನ ಭಾಗದಲ್ಲಿ
-೦-೦-೦-೦-