ಚಿತ್ರದುರ್ಗ: ಗ್ಯಾರಂಟಿ ಯೋಜನೆಗಳ ಆರ್ಥಿಕ ಭಾರದಿಂದ ಕುಗ್ಗಿ ಹೋಗಿರುವ ಸಿದ್ದರಾಮಯ್ಯನವರ (Siddaramaiah) ಕಾಂಗ್ರೆಸ್ ಸರ್ಕಾರ, ಅಬಕಾರಿ ಇಲಾಖೆ ಮೂಲದಿಂದ ಹೆಚ್ಚಿನ ಆದಾಯ ಗಳಿಸಲು ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ, ಮಾಲ್ ಹಾಗೂ ಸೂಪರ್ ಮಾರ್ಕೆಟ್ಗಳಲ್ಲಿ ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳಿಗೆ(liquor shops) ಪರವಾನಗಿ ನೀಡಲು ಚಿಂತನೆ ನಡೆಸಿದೆ ಎನ್ನುವ ಸುದ್ದಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಇಂದು (ಅಕ್ಟೋಬರ್ 06) ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಸರ್ಕಾರ ಮದ್ಯದ ಅಂಗಡಿ ತೆಗೆಯಲ್ಲ. ಬಿಜೆಪಿ ಆಡಳಿತದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ನಮ್ಮ ಅವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಗ್ಯಾರಂಟಿ ಯೋಜನೆ, ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.
ಮತ್ತೊಂದೆಡೆ ಇದೇ ವಿಚಾರವಾಗಿ ರಾಮನಗರದ ಕುದೂರಿನಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಳೆದ 30 ವರ್ಷದಿಂದ ಯಾವುದೇ ಅಬಕಾರಿ ಲೈಸೆನ್ಸ್ ನೀಡಿಲ್ಲ. ಹಳ್ಳಿಯಲ್ಲಿ ನಾವು ಬಾರ್ ತೆಗೆಯುವುದಿಲ್ಲ. ಚರ್ಚಿಸಿ ಸೂಕ್ತ ಪ್ರದೇಶಗಳಲ್ಲಿ ಬಾರ್ಗಳನ್ನು ತೆರೆಯಲಾಗುವುದು. ಕುಡಿಯುವುದನ್ನು ಯಾರೂ ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಎಚ್ಚರಿಕೆ ನೀಡಿದ್ದ ಸ್ವಪಕ್ಷದ ಶಾಸಕ ಬಿ.ಆರ್.ಪಾಟೀಲ್
ಈ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್, ಪಾಪದ ಹಣದಲ್ಲಿ ಸರ್ಕಾರ ನಡೆಸುವ ಅಗತ್ಯವಿಲ್ಲ. ಮದ್ಯದ ಅಂಗಡಿಗಳನ್ನು ಯಾವ ಪುರುಷಾರ್ಥಕ್ಕೆ ಹೆಚ್ಚಿಸುತ್ತಿದ್ದಾರೆ? ಸರ್ಕಾರ ನಡೆಸಲು ಆರ್ಥಿಕ ಸಮಸ್ಯೆಗಳಿದ್ದರೆ ಬೇರೆ ಮಾರ್ಗ ಹುಡುಕಿ. ಶ್ರೀಮಂತರಿಗೆ ಯಾಕೆ ಉಚಿತ ಯೋಜನೆ ಕೊಡುತ್ತಿದ್ದಾರೋ ಗೊತ್ತಿಲ್ಲ. ನನ್ನಂತಹವರಿಗೆ ಉಚಿತ ವಿದ್ಯುತ್ ನೀಡುವ ಅಗತ್ಯವೇನು? ಸಿದ್ದರಾಮಯ್ಯ ಆರ್ಥಿಕ ತಜ್ಞರು, ಮ್ಯಾನೇಜ್ ಮಾಡುವ ನಂಬಿಕೆ ಇದೆ. ಈ ವಿಚಾರವನ್ನು ಶಾಸಕರ ಸಭೆ, ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಒಂದು ವೇಳೆ ಸರ್ಕಾರ ಈ ನಿರ್ಣಯದಿಂದ ಹಿಂದೆ ಸರಿಯದಿದ್ದರೆ ನಾನೇ ಹೋರಾಟ ನಡೆಸುವೆ ಎಂದು ಎಚ್ಚರಿಕೆ ನೀಡಿದ್ದರು.