ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಜೊತೆಗಿನ ಮನಸ್ತಾಪದ ಬಳಿಕ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಅವರ ನಡೆ ಹಲವು ಅನುಮಾನಗಳಗೆ ಎಡೆ ಮಾಡಿಕೊಟ್ಟಿದೆ. ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಿಎಂ ಜೊತೆ ಅವರ ಪತ್ನಿ ಮತ್ತು ಮಗ-ಸೊಸೆ ಸಹ ಉಪಸ್ಥಿತರಿದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಬಳಿಕ ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಸಿಎಂ ಚನ್ನಿ ಪ್ರಮಾಣವಚನ ಸ್ವೀಕರಿಸಿದ ದಿನದಂದು ಕ್ಯಾಪ್ಟನ್ ಔತಣಕೂಟಕ್ಕೆ ಆಹ್ವಾನಿಸಿದ್ದರು. ಆದ್ರೆ ಕೆಲಸದ ಕಾರಣ ನೀಡಿ ಸಿಎಂ ಚನ್ನಿ ಔತಣಕೂಟಕ್ಕೆ ಕ್ಯಾಪ್ಟನ್ ಗೈರಾಗಿದ್ದರು.
ತೋಟದ ಮನೆಯಲ್ಲಿ ಮಾಜಿ – ಹಾಲಿ ಸಿಎಂ ಭೇಟಿ !
ಕ್ಯಾಪ್ಟನ್ ತೋಟದ ಮನೆಯಲ್ಲಿ ಇಬ್ಬರು ನಾಯಕರ ಭೇಟಿಯಾಗಿದೆ. ಆದ್ರೆ ಈ ವೇಳೆ ಏನು ಚರ್ಚೆಯಾಗಿದೆ ಎಂಬುದರ ಬಗ್ಗೆ ವರದಿಯಾಗಿಲ್ಲ. ಪಂಜಾಬ್ ಕಾಂಗ್ರೆಸ್ನಲ್ಲಿ ಅಮರಿಂದರ್ ಸಿಂಗ್ ಅನುಭವಿ ನಾಯಕರಾಗಿದ್ದು, ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಸಿಎಂ ಚನ್ನಿ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕ್ಯಾಪ್ಟನ್ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಮೂಲಕ ನವಜೋತ್ ಸಿಂಗ್ ಸಿಧುಗೆ ತಿರುಗೇಟು ನೀಡಲು ಚನ್ನಿ ಪ್ಲಾನ್ ಮಾಡಿಕೊಂಡಿದ್ದಾರೆ ಎಂಬುವುದು ಪಂಜಾಬ್ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಚರ್ಚೆ.
ಕಳೆದ ತಿಂಗಳು ಪಂಜಾಬ್ ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ಶಮನಕ್ಕೆ ಹೈಕಮಾಂಡ್, ಹರೀಶ್ ರಾವತ್ ಅವರನ್ನು ಚಂಡೀಗಢಕ್ಕೆ ಕಳಿಸಲಾಗಿತ್ತು. ಹರೀಶ್ ರಾವತ್ ಮೊದಲಿಗೆ ನವಜೋತ್ ಸಿಂಗ್ ಸಿಧು ಜೊತೆಗೆ ನಾಲ್ವರು ಕಾರ್ಯಕರ್ತರ ಜೊತೆ ಮಾತನಾಡಿದ್ದರು. ಇತ್ತ ಕ್ಯಾಪ್ಟನ್ ಜೊತೆಗಿನ ಭೇಟಿ ದಿನವೇ ಸಿಧು ದೆಹಲಿಗೆ ತೆರಳಿದ್ದರು. ಮೊದಲಿಗೆ ಭೇಟಿಗೆ ಅವಕಾಶ ನೀಡದ ಹೈಕಮಾಂಡ್ ನಂತರ ಸಿಧು ಜೊತೆ ಚರ್ಚೆ ನಡೆಸಿತ್ತು. ಕೊನೆಗೆ ಅಮರಿಂದರ್ ಸಿಂಗ್ ಅವರನ್ನು ಕೆಳಗಿಳಿಸುವಲ್ಲಿ ಸಿಧು ಯಶಸ್ವಿಯಾಗಿದ್ದರು. ಸಿಧು ದೆಹಲಿಯಲ್ಲಿರುವಾಗ ಇತ್ತ ಸಿಎಂ ಚನ್ನಿ ಹೊಸ ನಡೆ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಕ್ಯಾಪ್ಟನ್ ಅವರನ್ನ ಮತ್ತೆ ಪಕ್ಷಕ್ಕೆ ಕರೆತರುವ ಮೂಲಕ ಸಿಧುಗೆ ತಿರುಗೇಟು ಕೊಡ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ನವಜೋತ್ ಸಿಂಗ್ ಸಿಧು ವರ್ಸಸ್ ಸಿಎಂ ಚನ್ನಿ!
ಒಂದೇ ಪಕ್ಷದಲ್ಲಿದ್ದರೂ ಚರಣ್ಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಗೊತ್ತಿರುವ ವಿಚಾರ. ಸಿಧು ತಮ್ಮ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸುವ ಮೂಲಕ ಸಿಎಂ ಚನ್ನಿಯವರನ್ನು ಮುಜುಗರಕ್ಕೀಡು ಮಾಡುತ್ತಿದ್ದಾರೆ. ಡಿಜಿಪಿ ಮತ್ತು ಅಡ್ವೋಕೇಟ್ ಜನರಲ್ ನೇಮಕಾತಿ ವಿಷಯದಲ್ಲಿಯೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೆಲವೊಮ್ಮೆ ಹೈಕಮಾಂಡ್ ಅಜೆಂಡಾ ಪಾಲಿಸುತ್ತಿಲ್ಲ ಎಂದು ನೇರವಾಗಿ ಸಿಎಂ ವಿರುದ್ಧವೇ ಕಿಡಿಕಾರಿದ್ದರು. ಹೀಗಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ. ಆದ್ರೆ ಹೈಕಮಾಂಡ್ ಇಬ್ಬರ ಶೀತಲ ಸಮರ ಕೊನೆಗೊಳಿಸಲು ವೇದಿಕೆ ನಿರ್ಮಿಸಲು ಮುಂದಾಗಿದೆ ಎನ್ನಲಾಗುತ್ತಿದೆ.
ಸಿಧು ವಿರುದ್ಧ ಹೈಕಮಾಂಡ್ ಬೇಸರ !
ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರೋಧದ ನಡುವೆಯೂ ಕಾಂಗ್ರೆಸ್ ಹೈಕಮಾಂಡ್ ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿತ್ತು. ಜೊತೆಗೆ ಸಿಧು ಬೇಡಿಕೆಗಳನ್ನು ಹೈಕಮಾಂಡ್ ಪೂರ್ಣ ಮಾಡಿತ್ತು. ಹಲವು ಬಾರಿ ಸಿಧು ಮನವೊಲಿಸುವ ಯತ್ನವನ್ನು ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನಿಸಿತ್ತು. ಇದಾಗಿಯೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆ ಹೈಕಮಾಂಡ್ ಬೇಸರ ಹೊರಹಾಕಿದೆ ಎಂದು ತಿಳಿದು ಬಂದಿದೆ.