ಬದಲಾವಣೆ ಬಿರುಸು: ಯಡಿಯೂರಪ್ಪಗೆ ಪಾಂಡಿಚೇರಿ ರಾಜ್ಯಪಾಲರ ಹುದ್ದೆ?

ಕೋವಿಡ್ ರುಧ್ರ ತಾಂಡವ ಒಂದು ಕಡೆಯಾದರೆ, ಮತ್ತೊಂದು ಕಡೆ ಪೊಲೀಸ್ ಅಟ್ಟಹಾಸದ ಭಯಾನಕ ಲಾಕ್ ಡೌನ್. ಈ ಎರಡರ ನಡುವೆ ಸಿಕ್ಕಿ ರಾಜ್ಯದ ಜನಸಾಮಾನ್ಯರು ಜೀವ ಮತ್ತು ಜೀವನದ ಉಳಿವಿಗಾಗಿ, ಬದುಕಿಗಾಗಿ ಏದುಸಿರು ಬಿಡುತ್ತಿದ್ದಾರೆ.

ಇಂತಹ ಹೊತ್ತಲ್ಲಿ ಜನರ ಜೀವ ಮತ್ತು ಜೀವನ ರಕ್ಷಣೆಗೆ ಬರಬೇಕಾದ ಸರ್ಕಾರ ಏನು ಮಾಡುತ್ತಿದೆ? ಒಂದು ಕಡೆ ಕರೋನಾ ನಿಯಂತ್ರಣದಲ್ಲಿ ಹೆಜ್ಜೆಹೆಜ್ಜೆಗೂ ಎಡವಿದ ಸರ್ಕಾರ, ಮತ್ತೊಂದು ಕಡೆ ಲಾಕ್ ಡೌನ್ ಹೇರಿ ಯಾವ ನೆರವನ್ನೂ ಘೋಷಿಸದೆ ಬಡವರ ಬದುಕನ್ನು ಕಿತ್ತುಕೊಂಡಿದೆ. ಹಾಗಾದರೆ, ಸರ್ಕಾರ ಎಂಬುದು ಯಾಕೆ ಬೇಕು ? ಎಂಬ ಪ್ರಶ್ನೆ ಎದ್ದಿದೆ. ಸುಪ್ರೀಂಕೋರ್ಟ್ ಕೂಡ ಕರ್ನಾಟಕ ಸರ್ಕಾರಕ್ಕೆ, ಬಡವರ ಆಹಾರ ಭದ್ರತೆಯನ್ನು ಖಾತರಿಪಡಿಸದೇ ಬಿಗಿ ಲಾಕ್ ಡೌನ್ ಹೇರಿ ಕೈಕಟ್ಟಿಕೂರುವುದೇ ಆದರೆ, ಸರ್ಕಾರದ ಹೊಣೆಗಾರಿಕೆ ಏನು? ಎಂದು ಪ್ರಶ್ನಿಸಿದೆ.

ಹೌದು, ಸರ್ಕಾರ ಏನು ಮಾಡುತ್ತಿದೆ? ಸರ್ಕಾರ ನಡೆಸುತ್ತಿರುವವರು ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗಳು ದೆಹಲಿಯ ಸರ್ವೋಚ್ಛ ನಾಯಾಲಯದಿಂದ ಹಳ್ಳಿಯ ಮೂಲೆಯವರೆಗೆ ಎಲ್ಲೆಡೆ ಮಾರ್ದನಿಸತೊಡಗಿದೆ. ಹಾಗಾದರೆ ಸರ್ಕಾರ ನಿಜಕ್ಕೂ ಏನು ಮಾಡುತ್ತಿದೆ? ಸರ್ಕಾರ ನಡೆಸುವವರು ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ, ಸದ್ಯಕ್ಕಂತೂ ಅವರೆಲ್ಲಾ ಅಧಿಕಾರ ಬದಲಾವಣೆಯ, ನಾಯಕತ್ವ ಬದಲಾವಣೆಯ ರಾಜಕೀಯ ಮೇಲಾಟದಲ್ಲಿ ಬ್ಯುಸಿಯಾಗಿದ್ದಾರೆ ಎಂಬುದಷ್ಟೇ!

ಹೌದು, ಒಂದು ಕಡೆ ಲಾಕ್ ಡೌನ್ ಮತ್ತು ಮಹಾಮಾರಿ ಕರೋನಾದ ನಡುವೆ ಜನದ ಬದುಕು ಅಕ್ಷರಶಃ ಸಾವು ಮತ್ತು ಬದುಕಿನ ಸೆಣಸಾಟದಲ್ಲಿರುವಾಗ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿ, ಅವರ ಸ್ಥಾನಕ್ಕೆ ಬೇರೊಬ್ಬ ನಾಯಕನನ್ನು ಕೂರಿಸಲು ಬಿಜೆಪಿಯ ಆಂತರಿಕ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಮುಖ್ಯವಾಗಿ ಕೋವಿಡ್ ನಿರ್ವಹಣೆಯ ವಿಷಯದಲ್ಲಿ ವೈಫಲ್ಯವನ್ನು ಮುಂದಿಟ್ಟುಕೊಂಡೇ ನಾಯಕತ್ವ ಬದಲಾವಣೆಗೆ ರಾಜ್ಯ ಬಿಜೆಪಿಯ ಒಳಗಿಂದಲೇ ಕೇಂದ್ರ ನಾಯಕರಿಗೆ ಅಹವಾಲು ಹೋಗಿದೆ. ಈ ಮೊದಲಿಂದಲೂ ಬಿ ಎಸ್ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಶತಾಯಗತಾಯ ಯತ್ನಿಸುತ್ತಿದ್ದ ಬಣದ ನಾಯಕರೇ ಈ ಬಾರಿ ಕೋವಿಡ್ ನಂತಹ ಗಂಭೀರ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ರಾಜ್ಯದ ಜನರು, ಪಕ್ಷ ಮತ್ತು ಕೇಂದ್ರ ಸರ್ಕಾರಗಳ ಹಿತ ಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಜನ ಬಿಜೆಪಿ ಮತ್ತು ಕೇಂದ್ರ ನಾಯಕತ್ವದ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದಾರೆ. ಆಮ್ಲಜನಕದ ವಿಷಯದಲ್ಲಿ ಸರಿಯಾದ ತಯಾರಿ ಮಾಡಿಕೊಳ್ಳದ ಯಡಿಯೂರಪ್ಪ ಸರ್ಕಾರದ ಹೊಣೆಗೇಡಿತನದಿಂದಾಗಿ ಈಗ ಅತ್ತ ಜನಸಾಮಾನ್ಯರ ಮತ್ತು ಇತ್ತ ನ್ಯಾಯಾಂಗದ ಕಣ್ಣಿನಲ್ಲಿ ಕೇಂದ್ರ ಸರ್ಕಾರ ಮತ್ತು ನಾಯಕರು ವಿಲನ್ ಗಳಾಗುವಂತಾಗಿದೆ ಎಂದು ಕೇಂದ್ರ ನಾಯಕರಿಗೆ ದೂರು ನೀಡಲಾಗಿದೆ.

ಅಲ್ಲದೆ, ಕರೋನಾದಂತಹ ಪರಿಸ್ಥಿತಿಯಲ್ಲಿ ಕೂಡ ಸಚಿವರು ಮತ್ತು ಸಿಎಂ ನಡುವೆ ಹೊಂದಾಣಿಕೆ ಇಲ್ಲ. ಎಲ್ಲಾ ವಿಷಯದಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪದಿಂದಾಗಿ ಕರೋನಾ ನಿರ್ವಹಣೆಯ ವಿಷಯದಲ್ಲಿ ಹೆಜ್ಜೆ ಹೆಜ್ಜೆಗೂ ಸರ್ಕಾರ ಎಡವುತ್ತಿದೆ. ಹಾಗಾಗಿ ಕನಿಷ್ಟ ಪಕ್ಷದ ಮೇಲೆ ಕರ್ನಾಟಕದ ಜನತೆ ಇಟ್ಟಿರುವ ವಿಶ್ವಾಸದಲ್ಲಿ ಕಿಂಚಿತ್ತಾದರೂ ಉಳಿಸಿಕೊಳ್ಳಬೇಕಾದರೆ ಕೂಡಲೇ ಸಿಎಂ ಬದಲಾವಣೆ ಮಾಡಿ, ವಿಜಯೇಂದ್ರ ಹಿಡಿತದಿಂದ ಸರ್ಕಾರವನ್ನು ಪಾರು ಮಾಡಬೇಕಿದೆ ಎಂದು ಪ್ರಬಲವಾಗಿ ಕೇಂದ್ರ ನಾಯಕರ ಮುಂದೆ ವಾದ ಮಂಡಿಸಲಾಗಿದೆ ಎಂಬುದು ಬಿಜೆಪಿ ಆಂತರಿಕ ಮೂಲಗಳ ಮಾಹಿತಿ.

ರಾಜ್ಯ ಬಿಜೆಪಿಯ ಯಡಿಯೂರಪ್ಪ ವಿರೋಧಿ ಬಣದ ಹಕ್ಕೊತ್ತಾಯಕ್ಕೆ ಮಣಿದಿರುವ ಪಕ್ಷದ ದೆಹಲಿ ವರಿಷ್ಠರು, ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚಿಸಲು ಬಿಎಸ್ ವೈ ಪರಮಾಪ್ತ ಮತ್ತು ಗೃಹಸಚಿವ ಬಸವರಾಜ ಬೊಮ್ಮಾಯಿ ಹಾಗೂ ಪುತ್ರ ವಿಜಯೇಂದ್ರ ಅವರನ್ನು ಮೂರು ದಿನಗಳ ಹಿಂದೆ ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿತ್ತು. ಈ ವೇಳೆ, ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನಾಯಕತ್ವ ಬದಲಾವಣೆಯ ಪ್ರಸ್ತಾಪ ಮುಂದಿಟ್ಟಿದ್ದರು. ಆದರೆ, ಬೊಮ್ಮಾಯಿ ಮತ್ತು ವಿಜಯೇಂದ್ರ ಆ ಪ್ರಸ್ತಾಪಕ್ಕೆ ಒಪ್ಪಲು ನಿರಾಕರಿಸಿ, ಇನ್ನು ಮುಂದೆ ಸರ್ಕಾರವನ್ನು ಸರಿಯಾಗಿ ನಡೆಸಿಕೊಂಡು ಹೋಗುವುದಾಗಿ ಸಮಜಾಯಿಷಿ ಕೊಟ್ಟು ವಾಪಸ್ಸಾಗಿದ್ದಾರೆ ಎನ್ನಲಾಗಿದೆ.

ಈ ನಡುವೆ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರು ಸೋಮವಾರ ಸಿಎಂ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಕೂಡ ನಾಯಕತ್ವ ಬದಲಾವಣೆಯ ಭಾಗವೇ ಎಂಬ ಚರ್ಚೆಯೂ ನಡೆಯುತ್ತಿದೆ. ಪಕ್ಷದ ದೆಹಲಿ ನಾಯಕರ ಆಣತಿಯಂತೆ ಕಟೀಲು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ನಾಯಕತ್ವ ಬದಲಾವಣೆಯ ಪ್ರಸ್ತಾಪಕ್ಕೆ ಒಪ್ಪಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಆ ಪ್ರಸ್ತಾಪದಲ್ಲಿ ಯಡಿಯೂರಪ್ಪ ಅವರನ್ನು ಪಾಂಡಿಚೇರಿಯ ರಾಜ್ಯಪಾಲರನ್ನಾಗಿ ನೇಮಕ ಮಾಡುವುದು, ಅವರ ಪುತ್ರ ವಿಜಯೇಂದ್ರಗೆ ಡಿಸಿಎಂ ಹುದ್ದೆ ನೀಡುವುದು ಸೇರಿದಂತೆ ಹಲವು ಆಯ್ಕೆಗಳನ್ನು ನೀಡಲಾಗಿದೆ. ಆದರೆ, ಸಿಎಂ ಆ ಪ್ರಸ್ತಾಪಕ್ಕೆ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ.

ಈ ನಡುವೆ, ಕಟೀಲು ಮಾತುಕತೆಯ ಬೆನ್ನಲ್ಲೇ ದೆಹಲಿ ವರಿಷ್ಠರು ಸ್ವತಃ ಸಿಎಂ ಯಡಿಯೂರಪ್ಪ ಅವರಿಗೇ ಬುಲಾವ್ ಕಳಿಸಿದ್ದು, ದೆಹಲಿಗೆ ಬಂದು ತಮ್ಮನ್ನು ಭೇಟಿಯಾಗುವಂತೆ ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಒಂದೆರಡು ದಿನದಲ್ಲೇ ದೆಹಲಿಗೆ ಹಾರಲಿದ್ದಾರೆ. ಬಹುಶಃ ದೆಹಲಿಯ ವರಿಷ್ಠರ ಸಮ್ಮುಖದಲ್ಲೇ ಎಲ್ಲವೂ ನಿರ್ಧಾರವಾಗಲಿದೆ ಎಂಬುದು ಸದ್ಯ ಚರ್ಚೆಯಾಗುತ್ತಿರುವ ಸಂಗತಿ.

ಈ ನಡುವೆ, ಕೋವಿಡ್ ವಿಷಯದಲ್ಲಿ ಸರ್ಕಾರ ಮತ್ತು ಸಿಎಂ ವೈಫಲ್ಯವನ್ನು ಖಂಡಿಸಿ ಕರ್ನಾಟಕದ ಜನತೆ ಬಿಜೆಪಿ ಸರ್ಕಾರ ಮತ್ತು ಸಿಎಂ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದು, #ResignModi ಹ್ಯಾಷ್ ಟ್ಯಾಗ್ ನೊಂದಿಗೆ  #ResignYeddy ಹ್ಯಾಷ್ ಟ್ಯಾಗ್ ಕೂಡ ಸಾಕಷ್ಟು ಟ್ರೆಂಡ್ ಆಗುತ್ತಿದೆ.

ಆ ಹಿನ್ನೆಲೆಯಲ್ಲಿ, ದೆಹಲಿ ವರಿಷ್ಠರು, ಮುಖ್ಯವಾಗಿ ಕೋವಿಡ್ ವಿಷಯದಲ್ಲಿ ಯಡಿಯೂರಪ್ಪ ನಡೆದುಕೊಂಡಿರುವ ರೀತಿ ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಿದೆ. ಸದ್ಯಕ್ಕೆ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಈ ಆಡಳಿತ ವೈಫಲ್ಯ ಖಂಡಿತವಾಗಿಯೂ ಪಕ್ಷಕ್ಕೆ ದೊಡ್ಡ ಪೆಟ್ಟು ಕೊಡಲಿದೆ. ಈಗಾಗಲೇ ಇಂತಹದ್ದೇ ಕಾರಣಕ್ಕೆ ಉತ್ತರಪ್ರದೇಶದ ವಾರಣಾಸಿ ಸೇರಿದಂತೆ ಹಲವು ಕಡೆ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.  ಅಂತಹದ್ದೇ ಸ್ಥಿತಿ, ದಕ್ಷಿಣ ಭಾರತದಲ್ಲಿ ಏಕೈಕ ಭದ್ರ ನೆಲೆಯಾಗಿರುವ ಕರ್ನಾಟಕದಲ್ಲಿಯೂ ಬಂದರೆ, ಭವಿಷ್ಯದಲ್ಲಿ ಕೇಸರಿ ಪಡೆಗೆ ದಕ್ಷಿಣ ಭಾರತದ ಬಾಗಿಲು ಹಾಕಿದಂತೆಯೇ ಸರಿ. ಈಗಾಗಲೇ ಕಳೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕೂಡ ಪಕ್ಷಕ್ಕೆ ದೊಡ್ಡ ಹಿನ್ನೆಡೆಯಾಗಿದೆ. ಆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪಕ್ಷ ಭವಿಷ್ಯ ಭದ್ರಪಡಿಸಬೇಕಾದರೆ, ಈ ಕೋವಿಡ್ ಸಂಕಷ್ಟದ ಹೊತ್ತಲ್ಲಿ ಚುರುಕಾದ ಮತ್ತು ದೃಢವಾದ ಆಡಳಿತ ನೀಡುವುದು ನಿರ್ಣಾಯಕ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಹಾಗಾಗಿ ನಾಯಕತ್ವ ಬದಲಾವಣೆಯ ಮೂಲಕ ಪ್ರಹ್ಲಾದ್ ಜೋಷಿ ಅವರನ್ನು ಸಿಎಂ ಸ್ಥಾನಕ್ಕೆ ಕೂರಿಸಿ, ಅವರೊಂದಿಗೆ ವಿಜಯೇಂದ್ರ ಅವರನ್ನು ಡಿಸಿಎಂ ಮಾಡುವುದು. ಆ ಮೂಲಕ ಏಕ ಕಾಲಕ್ಕೆ ಪಕ್ಷದ ಹಿತವನ್ನೂ, ಅತ್ತ ಯಡಿಯೂರಪ್ಪ ಗೆ ಸಿಎಂ ಸ್ಥಾನ ಕಳೆದುಕೊಂಡ ಹಿನ್ನೆಲೆಯಲ್ಲಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಮಾತು ಕೇಳಿಬರದಂತೆ ಅವರ ಮಗನನ್ನೇ ಡಿಸಿಎಂ ಮಾಡುವ ಮೂಲಕ ಲಿಂಗಾಯತ ಸಮುದಾಯವನ್ನೂ ಸಮಾಧಾನಪಡಿಸುವುದು ವರಿಷ್ಠರ ಲೆಕ್ಕಾಚಾರ ಎನ್ನಲಾಗುತ್ತಿದೆ.

ಹಾಗಾಗಿ, ಸದ್ಯ ಬಿಜೆಪಿಯ ರಾಜ್ಯ ಘಟಕದಲ್ಲಿ ತೆರೆಮರೆಯಲ್ಲಿ ಭಾರೀ ಚಟುವಟಿಕೆಗಳು ಗರಿಗೆದರಿದ್ದು, ನಾಯಕತ್ವ ಬದಲಾವಣೆಗೆ ದಿನಗಣನೆ ಆರಂಭವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ದೆಹಲಿ ನಾಯಕರ ಬುಲಾವಿನಂತೆ ಯಡಿಯೂರಪ್ಪ ದೆಹಲಿಗೆ ಹೋದಲ್ಲಿ, ಅಲ್ಲಿನ ವರಿಷ್ಠರೊಂದಿಗಿನ ಮಾತುಕತೆಯೇ ಎಲ್ಲಾ ಊಹಾಪೋಹ, ಗೊಂದಲ, ಲೆಕ್ಕಾಚಾರಗಳಿಗೆ ಪೂರ್ಣವಿರಾಮ ಹಾಕಲಿದೆ ಮತ್ತು ಬದಲಾವಣೆಯ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...