• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಶಾಸ್ತ್ರೀಯ ಸಂಗೀತವೂ ಶ್ರೇಷ್ಠತೆಯ ಪಾರಮ್ಯವೂ

ನಾ ದಿವಾಕರ by ನಾ ದಿವಾಕರ
March 26, 2024
in ದೇಶ, ವಿಶೇಷ
0
ಶಾಸ್ತ್ರೀಯ ಸಂಗೀತವೂ ಶ್ರೇಷ್ಠತೆಯ ಪಾರಮ್ಯವೂ
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT


ಶತಮಾನಗಳ ಪರಂಪರೆ ಇರುವ ಶಾಸ್ತ್ರೀಯ ಸ್ವರಸಾಮ್ರಾಜ್ಯಕ್ಕೆ ಅಸ್ಮಿತೆಗಳ ಗೋಡೆಗಳೇಕೆ ?

=======
ಸಾಂಸ್ಕೃತಿಕ ಪ್ರಪಂಚವನ್ನು ಪ್ರತಿನಿಧಿಸುವ ಯಾವುದೇ ಕಲಾ ಪ್ರಕಾರವು ಕಾಲಕಾಲಕ್ಕೆ ರೂಪಾಂತರ ಹೊಂದದೆ ಹೋದರೆ, ಒಂದು ನಿರ್ದಿಷ್ಟ ಹಂತದಲ್ಲಿ ಜಡಗಟ್ಟಿ ಹೋಗುತ್ತದೆ. ಈ ಪ್ರಮೇಯ ಚಿತ್ರಕಲೆ, ರಂಗಭೂಮಿ, ದೃಶ್ಯಕಲೆ, ನಾಟ್ಯ ಮತ್ತು ಸಂಗೀತ ಕ್ಷೇತ್ರಗಳಿಗೂ ಸಮನಾಗಿ ಅನ್ವಯಿಸುತ್ತದೆ. ಕಾಲಾನುಕಾಲದಿಂದ ಎಲ್ಲ ಕಲಾ ಪ್ರಕಾರಗಳೂ ಹೊಸ ಪ್ರಯೋಗಗಳ ಮೂಲಕ ಜನಸಾಮಾನ್ಯರನ್ನು ತಲುಪುವ ಪ್ರಯತ್ನಗಳನ್ನು ಕಾಣುತ್ತಲೇ ಬಂದಿವೆ. ಈ ಪ್ರಯೋಗಗಳ ನಡುವೆ ಕೆಲವೇ ಕಲಾವಿದರಿಂದ ಹೊರಬರುವ ಸೃಜನಶೀಲತೆ ಇಡೀ ಕಲಾಭಿವ್ಯಕ್ತಿಯನ್ನೇ ಸಮಕಾಲೀನಗೊಳಿಸುವುದಲ್ಲದೆ, ಆವರೆಗೂ ತಲುಪಲಾಗದಿದ್ದ ಜನರನ್ನೂ ತಲುಪುವಂತೆ ಮಾಡುತ್ತದೆ. ಈ ಸಮಕಾಲೀನಗೊಳಿಸುವ (Contemporarisation) ಪ್ರಕ್ರಿಯೆಯಲ್ಲಿ ಸಹಜವಾಗಿಯೇ ಸಾಂಪ್ರದಾಯಿಕ ಶಕ್ತಿಗಳ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ. ಈ ತಡೆಗೋಡೆಗಳನ್ನು ನಿವಾರಿಸಿಕೊಂಡು ಮುನ್ನಡೆಯುವ ಕಲೆ ಮಾತ್ರವೇ ಶಾಶ್ವತವಾಗಿ ಉಳಿಯುತ್ತದೆ.

ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಕಲೆ-ಸಾಹಿತ್ಯ-ಸಂಗೀತ ಮೊದಲಾದ ಎಲ್ಲ ಸಾಂಸ್ಕೃತಿಕ ಅಭಿವ್ಯಕ್ತಿಗಳೂ ಇಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯೊಡನೆ ಬೆಸೆದುಕೊಂಡಿರುವುದರಿಂದ, ಇಲ್ಲಿ ಎಲ್ಲ ರೀತಿಯ ಕಲಾ ಪ್ರಕಾರಗಳ ಮೇಲೆ ಮೇಲ್ಜಾತಿಯ-ವೈದಿಕಶಾಹಿಯ-ಮೇಲ್ವರ್ಗದ ಪಾರಮ್ಯ ಸದಾ ಜೀವಂತವಾಗಿರುತ್ತದೆ. ತಳಮಟ್ಟದ ಸಾಮಾಜಿಕ ಬದುಕು ಹಾಗೂ ಜೀವನ ಶೈಲಿಯ ಪ್ರಭಾವದಿಂದ ಉಗಮಿಸುವ ಕಲೆ, ಸಾಹಿತ್ಯ ಮತ್ತು ಸಂಗೀತ ಮುಂತಾದ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನೂ ತನ್ನದಾಗಿಸಿಕೊಳ್ಳುವ ನಿರಂತರ ಪ್ರಯತ್ನದಲ್ಲಿ ಈ ಪ್ರಬಲ ವರ್ಗಗಳು, ವಿಶಾಲ ಸಮಾಜವನ್ನು ನಿರ್ದೇಶಿಸುವ ಜಾತಿ ಶ್ರೇಣಿಯ ತಾತ್ವಿಕ ನೆಲೆಗಳನ್ನೇ ಬಳಸಿಕೊಂಡು, ಪರಂಪರೆಯ ರಕ್ಷಣೆಯ ನೆಪದಲ್ಲಿ ತಮ್ಮ ಪ್ರಾಬಲ್ಯ-ಪಾರಮ್ಯವನ್ನು ಮರುಸ್ಥಾಪಿಸಿಕೊಳ್ಳುತ್ತಿರುತ್ತವೆ. ಈ ಪಾರಂಪರಿಕ ವಾರಸುದಾರಿಕೆಗೆ ಒಳಗಾಗಿರುವ ಒಂದು ಕ್ಷೇತ್ರ ಎಂದರೆ ಕರ್ನಾಟಕ ಶಾಸ್ತ್ರೀಯ ಸಂಗೀತ.

ಜನಪರಂಪರೆಯಾಗಿ ಸಂಗೀತ

ಸಂಗೀತದ ಕಲೆಗೆ ಯಾವುದೇ ಭೌತಿಕ ಚೌಕಟ್ಟುಗಳಿರುವುದಿಲ್ಲ. ಆದರೆ ವಿಭಿನ್ನ ಕಾಲಘಟ್ಟಗಳಲ್ಲಿ ಆಯಾ ಪ್ರದೇಶಗಳ ಸಾಮಾಜಿಕ-ಸಾಂಸ್ಕೃತಿಕ ಪರಿಸರಗಳಿಗೆ ಒಳಪಟ್ಟು ಸಂಗೀತವೂ ಸಹ ತನ್ನದೇ ಆದ ರೂಪಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಭಾರತದ ಜಾತಿಶ್ರೇಣಿಯ ಸಾಂಪ್ರದಾಯಿಕ ಸಮಾಜದಲ್ಲಿ ಈ ಸಹಜ ವಿದ್ಯಮಾನಗಳಿಗೇ ಪಾವಿತ್ರ್ಯತೆ-ಶ್ರೇಷ್ಠತೆ ಅಥವಾ ಪರಿಶುದ್ಧತೆಯನ್ನು ಆರೋಪಿಸುವ ಮೂಲಕ ಪಾರಂಪರಿಕ ವಾರಸುದಾರಿಕೆಯನ್ನು ಸ್ಥಾಪಿಸಿರುವುದನ್ನು ಕಾಣುತ್ತಲೇ ಬಂದಿದ್ದೇವೆ. ಹೀಗೆ ಪಾವಿತ್ರ್ಯತೆ-ಪರಿಶುದ್ಧತೆಯ ವ್ಯಾಖ್ಯಾನಕ್ಕೊಳಪಡುವ ಸಾಂಸ್ಕೃತಿಕ ಕಲಾಭಿವ್ಯಕ್ತಿಗಳೂ ಸಹ ಬೌದ್ಧಿಕವಾಗಿ ವರ್ಗೀಕರಣಕ್ಕೊಳಗಾಗಿ ಸಮಾಜದೊಳಗಿನ ಪ್ರಬಲ ಮೇಲ್ವರ್ಗ-ಮೇಲ್ಜಾತಿಗಳ ವಾರಸುದಾರಿಕೆಗೆ ಒಳಪಡುತ್ತದೆ. ಮೂಲತಃ ಸಂಗೀತದಂತಹ ಮುಕ್ತ ಕಲೆಯನ್ನು ನಿರ್ದೇಶಿಸುವ ಕಲಾತ್ಮಕ ಕಟ್ಟುಪಾಡುಗಳೆಲ್ಲವನ್ನೂ ತಮ್ಮ ಧಾರ್ಮಿಕ ಅಥವಾ ಸಾಂಸ್ಕೃತಿಕ ಭೂಮಿಕೆಗಳ ನೆಲೆಯಲ್ಲೇ ನಿರ್ವಚಿಸುವ ಮೂಲಕ, ಸ್ವರ-ರಾಗ-ಲಯಗಳನ್ನು ದಾಟಿ ಒಂದು ಕೋಶವನ್ನು ನಿರ್ಮಿಸಿಕೊಂಡಿರುವುದನ್ನು ಕರ್ನಾಟಕ ಸಂಗೀತ ಪರಂಪರೆಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ವಿಶೇಷವಾಗಿ ತಮಿಳುನಾಡಿನ ವೈದಿಕಶಾಹಿ ಪರಂಪರೆ ಇಲ್ಲಿ ಎದ್ದುಕಾಣುತ್ತದೆ.

ಈ ಮರುನಿರ್ಮಿತ ಸಾಂಸ್ಕೃತಿಕ ನೆಲೆಗಳನ್ನು ಧಿಕ್ಕರಿಸುವ ಅಥವಾ ಗೆರೆಗಳನ್ನು ದಾಟಿ ನಡೆಯುವ ಯಾವುದೇ ಕಲಾಭಿವ್ಯಕ್ತಿ ಸಾಂಪ್ರದಾಯಿಕ ಸಮಾಜಕ್ಕೆ ವಿದ್ರೋಹದಂತೆಯೇ ಕಾಣತೊಡಗುತ್ತದೆ. ಸ್ಥಾಪಿತ ಪರಂಪರೆಯನ್ನು ಧಿಕ್ಕರಿಸುವ ಯಾವುದೇ ಪ್ರಕ್ರಿಯೆಗೆ ವ್ಯಕ್ತವಾಗುವಂತೆಯೇ, ಸಂಗೀತ ಕ್ಷೇತ್ರದಲ್ಲೂ ಸಹ ರೂಢಿಗತವಾಗಿರುವ ʼ ಮೌಲ್ಯ ʼಗಳನ್ನು ಧಿಕ್ಕರಿಸುವುದು ಘೋರ ಅಪರಾಧದಂತೆ ಕಾಣುತ್ತದೆ. ಈ ಮೌಲ್ಯವನ್ನು ನಿರ್ವಚಿಸುವ ಅಧಿಕಾರವನ್ನು ತನಗೆ ತಾನೇ ವಹಿಸಿಕೊಂಡಿರುವ ಒಂದು ವರ್ಗಕ್ಕೆ ʼ ಸಾಂಸ್ಕೃತಿಕ ಮೌಲ್ಯಮಾಪನ ʼ ಎನ್ನುವುದು ಮಹಾದ್ರೋಹದಂತೆ ಕಾಣುತ್ತದೆ. ಸಮಕಾಲೀನ ಸಮಾಜಕ್ಕೆ ನಿಲುಕುವಂತೆ, ಆಧುನಿಕತೆಗೆ ತೆರೆದುಕೊಳ್ಳುವಂತಹ ಯಾವುದೇ ಮರುನಿರ್ವಚನೆ, ಸ್ಥಾಪಿತ ವಿದ್ವಾಂಸ ವಲಯದಲ್ಲಿ ಕಂಪನ ಮೂಡಿಸುತ್ತದೆ. ಬಲಪಂಥೀಯ ಸಾಂಸ್ಕೃತಿಕ ರಾಜಕಾರಣವು ಇಂತಹ ಪಲ್ಲಟಗಳ ನಡುವೆಯೇ ತನ್ನ ಸಾಂಸ್ಥಿಕ ಆಧಿಪತ್ಯ ಮತ್ತು ಪಾರಮ್ಯವನ್ನು ಬಲಪಡಿಸಿಕೊಳ್ಳಲು ಸದಾ ಉತ್ಸುಕವಾಗಿರುತ್ತದೆ.
ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹೊಸ ಪ್ರಯೋಗಗಳ ಮೂಲಕ ಸಂಚಲನ ಮೂಡಿಸುತ್ತಿರುವ ಟಿ.ಎಂ.‌ ಕೃಷ್ಣ ಈ ಕಾರಣಕ್ಕಾಗಿಯೇ ವಿವಾದಗಳ ಕೇಂದ್ರ ಬಿಂದುವಾಗುತ್ತಾರೆ. ಇತ್ತೀಚೆಗೆ ಚೆನ್ನೈ ಮ್ಯೂಸಿಕ್‌ ಅಕಾಡೆಮಿಯ ಪ್ರತಿಷ್ಠಿತ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಟಿ.ಎಂ. ಕೃಷ್ಣ ಅವರಿಗೆ ನೀಡಿರುವುದು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಮ್ಮ ಅಸಾಂಪ್ರದಾಯಿಕ ಧೋರಣೆ ಹಾಗೂ ಚರ್ಚಾಸ್ಪದ ಪ್ರತಿಪಾದನೆಗಳ ಮೂಲಕ ಶಾಸ್ತ್ರೀಯ ಸಂಗೀತವನ್ನು ಮರು ನಿರ್ವಚನೆಗೊಳಪಡಿಸುತ್ತಿರುವ ಟಿ.ಎಂ.‌ ಕೃಷ್ಣ ತಮ್ಮ ವಿನೂತನ ಪ್ರಯೋಗಗಳ ಮೂಲಕ, ಇದುವರೆಗೂ ಸಮಾಜದ ಮೇಲ್ಜಾತಿ-ಮೇಲ್ವರ್ಗಕ್ಕೇ ಸೀಮಿತವಾಗಿದ್ದ ಈ ಕಲಾಪ್ರಕಾರವನ್ನು ತಳಮಟ್ಟದ ಸಾಮಾನ್ಯ ಜನತೆಗೂ ತಲುಪಿಸಲು ಯತ್ನಿಸುತ್ತಿರುವುದು ಸಂಪ್ರದಾಯವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸಂಗೀತ-ಸಮಾಜ ಮತ್ತು ಸಮುದಾಯ

ಬಹಳ ಮುಖ್ಯವಾಗಿ ಟಿ.ಎಂ.ಕೃಷ್ಣ ಪೆರಿಯಾರ್‌ ಅವರನ್ನು ಆಗಾಗ್ಗೆ ಉಲ್ಲೇಖಿಸುವುದು ತಮಿಳುನಾಡಿನ ವೈದಿಕಶಾಹಿಯ ಆಕ್ರೋಶಕ್ಕೆ ಗುರಿಯಾಗಿದೆ. ಸಾಂಪ್ರದಾಯಿಕ ಮಾರ್ಗಗಳನ್ನು ಧಿಕ್ಕರಿಸುತ್ತಲೇ ಸಂಗೀತ ಸುಧೆಯನ್ನು ತಳಸಮುದಾಯಕ್ಕೆ ತಲುಪಿಸುವ ಪ್ರಯತ್ನದಲ್ಲಿರುವ ಟಿ.ಎಂ.‌ ಕೃಷ್ಣ ಅಶೋಕನ ಬ್ರಾಹ್ಮಿ ಶಾಸನಗಳನ್ನೂ ಸಂಗೀತಕ್ಕೆ ಅಳವಡಿಸುವ ಮೂಲಕ ಕ್ರಾಂತಿಕಾರಕ ಹೆಜ್ಜೆ ಇಟ್ಟಿರುವುದು ಪ್ರಶಂಸನೀಯ. ಹಾಗೆಯೇ ತಮ್ಮ ಕಛೇರಿಗಳ ನಡುವೆಯೇ ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸುವ ಟಿ.ಎಂ.‌ ಕೃಷ್ಣ ಭಾರತವನ್ನು ಆವರಿಸುತ್ತಿರುವ ಬಲಪಂಥೀಯ ಸಾಂಸ್ಕೃತಿಕ ರಾಜಕಾರಣವನ್ನೂ ಧಿಕ್ಕರಿಸುತ್ತಲೇ ಬಂದಿದ್ದಾರೆ. ಈ ನೆಲೆಯಲ್ಲಿ ಅವರಿಗೆ ಪೆರಿಯಾರ್‌, ಅಂಬೇಡ್ಕರ್‌ ಮೊದಲಾದ ದಾರ್ಶನಿಕರು ಆದರಣೀಯವಾಗಿ ಕಂಡರೆ ಅಚ್ಚರಿಯೇನಿಲ್ಲ.

ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಪ್ರತಿನಿಧಿಸುವ ವಿದ್ವಾಂಸರು ಸಮಕಾಲೀನ ಸಾಮಾಜಿಕ ಆಗುಹೋಗುಗಳಿಗೆ ಸ್ಪಂದಿಸುವುದನ್ನೇ ಅಪರಾಧ ಎಂದು ಪರಿಭಾವಿಸುವ ವೈದಿಕಶಾಹಿ ಮನೋಭಾವವನ್ನು ಟಿ.ಎಂ.‌ ಕೃಷ್ಣ ಧಿಕ್ಕರಿಸಿರುವುದರಿಂದಲೇ, ಅವರು ಶಾಸ್ತ್ರೀಯ ಸಂಗೀತ ಪರಂಪರೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂಬ ಆರೋಪಗಳನ್ನೂ ಹೊರಿಸಲಾಗುತ್ತಿದೆ. ಕಲೆಗಾಗಿ ಕಲೆ ಎಂಬ ಪ್ರಾಚೀನ ಮನಸ್ಥಿತಿಯನ್ನೇ ಇಂದಿಗೂ ಉಳಿಸಿಕೊಂಡು ಬಂದಿರುವ ಒಂದು ವರ್ಗಕ್ಕೆ ಸಹಜವಾಗಿಯೇ ಇಂತಹ ಸಾಂಸ್ಕೃತಿಕ ಉಲ್ಲಂಘನೆಗಳು ವಿದ್ರೋಹಗಳಂತೆ ಕಾಣುತ್ತವೆ. ಆದರೆ ಸಂಗೀತ ಎನ್ನುವುದು ಒಂದು ಆಸ್ವಾದಿಸಲ್ಪಡುವ ಕಲೆ. ಉತ್ತರಾದಿ-ದಕ್ಷಿಣಾದಿ ಎರಡೂ ಪ್ರಕಾರಗಳಲ್ಲಿ ಈ ಕಲೆಗೆ ಆಧಾರ ಇರುವುದು ಸಪ್ತ ಸ್ವರಗಳಲ್ಲಿ. ಈ ಸ್ವರಗಳು ಹರಿವ ನದಿಯ ಅಲೆಗಳಂತೆ ಸ್ವತಂತ್ರವಾಗಿ, ಸ್ವಾಯತ್ತವಾಗಿ ಪ್ರವಹಿಸಬೇಕೇ ಹೊರತು, ಇವುಗಳನ್ನು ನಿರ್ದಿಷ್ಟ ಧಾರ್ಮಿಕ-ಸಾಂಸ್ಕೃತಿಕ ಕೋಶಗಳಲ್ಲಿ ಬಂಧಿಸುವುದು, ಕಲೆಗೆ ಅಪಚಾರ ಮಾಡಿದಂತಾಗುತ್ತದೆ.

ಈ ರೀತಿ ಹಿಡಿದಿಟ್ಟಿರುವುದರಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಇಂದಿಗೂ ಸಾಂಸ್ಥಿಕವಾಗಿ ವೈದಿಕಶಾಹಿಯ-ಮೇಲ್ಜಾತಿಯ ವಾರಸುದಾರಿಕೆಗೆ ಒಳಪಟ್ಟಿದೆ. ಅಷ್ಟೇ ಅಲ್ಲದೆ ನಿರ್ದಿಷ್ಟ ಗಾಯನ ಪ್ರಕಾರಗಳಲ್ಲಿ ಬಂಧಿಸಲ್ಪಟ್ಟು ಸಮಾಜದ ಬಹುಸಂಖ್ಯಾತ ಜನತೆಯನ್ನು ತಲುಪುವುದರಲ್ಲಿ ವಿಫಲವಾಗಿದೆ. ಈ ವೈಫಲ್ಯವನ್ನು ಹೋಗಲಾಡಿಸಬೇಕೆಂದರೆ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುವುದು ಅನಿವಾರ್ಯ. ಟಿ. ಎಂ. ಕೃಷ್ಣ ಇಂತಹ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಹಾಗಾಗಿಯೇ ಅವರಿಗೆ ತಳಸಮುದಾಯಗಳನ್ನು, ದಲಿತ ಸಮುದಾಯಗಳನ್ನು, ಶಾಸ್ತ್ರೀಯ ಸಂಗೀತಕ್ಕೆ ಹೊರತಾದಂತಿದ್ದ ಕೆಳಸ್ತರದ ಸಮಾಜವನ್ನು ತಲುಪುವುದು ಸುಲಭವಾಗಿದೆ. ಒಂದು ಕಲಾಪ್ರಕಾರವಾಗಿ ಶಾಸ್ತ್ರೀಯ ಸಂಗೀತವು ಅವಲಂಬಿಸುವ ಸಪ್ತ ಸ್ವರಗಳು ಯಾವುದೇ ಸಮುದಾಯದ ಅಥವಾ ಸಾಂಸ್ಥಿಕ ಧರ್ಮದ ಸ್ವತ್ತಲ್ಲ. ಈ ಸ್ವರಗಳನ್ನಾಧರಿಸಿ ಹರಿದು ಬರುವ ಸ್ವರಾಲಾಪನೆ, ರಾಗಾಲಾಪನೆಗಳೇ ಸಂಗೀತದ ಚಲನಶೀಲತೆಗೂ ಕಾರಣವಾಗುತ್ತದೆ.

ಸ್ವರಾಧಾರಿತ ಸಂಗೀತದ ಚಲನಶೀಲತೆ

ಹಾಗಾಗಿಯೇ ಶಾಸ್ತ್ರೀಯ ಸಂಗೀತವನ್ನು ಆಸ್ವಾದಿಸುವವರ ಪೈಕಿ ನಮಗೆ ಕಟ್ಟಾ ನಾಸ್ತಿಕರೂ, ಆಜ್ಞೇಯತಾವಾದಿಗಳೂ, ಅಧ್ಯಾತ್ಮವಾದಿಗಳೂ ಕಾಣುತ್ತಾರೆ. ಹಾಗೆಯೇ ಶಾಸ್ತ್ರೀಯ ಸಂಗೀತದಲ್ಲಿ ಅಡಕವಾಗಿರಬಹುದಾದ ಶ್ರದ್ಧಾಭಕ್ತಿಗಳ ಭಾವವನ್ನು ಒಪ್ಪಿಕೊಳ್ಳುತ್ತಲೇ ಸಪ್ತಸ್ವರಗಳ ಲಯಬದ್ಧತೆಯನ್ನು ಕಾಪಾಡಿಕೊಳ್ಳುತ್ತಾ ತಮ್ಮದೇ ಆದ ಸಂಗೀತ ಪ್ರಕಾರಗಳಿಗೆ ಹೊಂದಿಸಿ ಬಳಸಿಕೊಳ್ಳುವುದನ್ನೂ ನಾವು ಕಂಡಿದ್ದೇವೆ. ಯೇಸುದಾಸ್‌, ಜಾನ್‌ ಹಿಗಿನ್ಸ್‌ ಮೊದಲಾದ ಕ್ರೈಸ್ತ ವಿದ್ವಾಂಸರಿಗೆ ತಮ್ಮ ಗಾಯನದ ಪ್ರಪಂಚದಲ್ಲಿ ಕಾಣುವುದು ಸ್ವರ ಪ್ರಪಂಚದ ಆಸ್ವಾದನೆಯೇ ಹೊರತು ಯಾವುದೇ ಒಂದು ನಿರ್ದಿಷ್ಟದ ಮತದ ಅಥವಾ ಧರ್ಮದ ಲಾಂಛನಗಳಲ್ಲ. ರಾಗಾಲಾಪನೆಯನ್ನೇ ಆಧರಿಸಿದ ಉತ್ತರಾದಿ ಸಂಗೀತದಲ್ಲಿ ಮುಸ್ಲಿಂ ಸಮುದಾಯದ ಘರಾನಾಗಳೇ ಇಂದಿಗೂ ಸಹ ಹಿಂದುಸ್ತಾನಿ ಸಂಗೀತ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ಗಝಲ್ ಗಾಯನದ ಸಾಮ್ರಾಟರೆಂದೇ ಗುರುತಿಸಲ್ಪಡುವ ಮೆಹದಿ ಹಸನ್‌, ಗುಲಾಂ ಅಲಿ ಮೊದಲಾದವರೂ ಸಹ ಇದೇ ಸಪ್ತ ಸ್ವರಗಳನ್ನು ಅಳವಡಿಸಿಕೊಂಡು, ಮಿರ್ಜಾ ಗಾಲಿಬ್‌ ಅವರ ಗಝಲ್‌ಗಳನ್ನು ಹಾಡುತ್ತಾರೆ. ಇದು ಶಾಸ್ತ್ರೀಯ ಸಂಗೀತದಲ್ಲಿ ನಾವು ಗುರುತಿಸಬೇಕಾದ ಪ್ರಧಾನ ಮೌಲಿಕ ಗುಣ.

ಇಂತಹ ಒಂದು ಚಲನಶೀಲ ಸಾಂಸ್ಕೃತಿಕ ಕಲಾಭಿವ್ಯಕ್ತಿಗೆ ಪಾವಿತ್ರ್ಯತೆ-ಪರಿಶುದ್ಧತೆ-ಶ್ರೇಷ್ಠತೆಯ ಹೊದಿಕೆಯನ್ನು ತೊಡಿಸಿದಾಗ ಅದು ತನ್ನ ಮೂಲ ಸ್ಥಾಯಿಯನ್ನು ಕಳೆದುಕೊಳ್ಳುವುದಷ್ಟೇ ಅಲ್ಲದೆ ತನ್ನೊಳಗಿರಬಹುದಾದ ಸೃಜನಶೀಲ ನೆಲೆಗಳನ್ನೂ ಕಳೆದುಕೊಳ್ಳುತ್ತದೆ. ಸಾಂಸ್ಕೃತಿಕ ನೆಲೆಯಲ್ಲಿ ಜಾತಿ-ಮತ-ಧರ್ಮಗಳ ಬಿಗಿಹಿಡಿತಕ್ಕೆ ಸಿಲುಕಿ ಹೀಗೆ ಪಾವಿತ್ರ್ಯತೆಯ ಕೋಶಗಳಿಗೊಳಪಟ್ಟ ಯಾವುದೇ ಕಲಾಭಿವ್ಯಕ್ತಿಯ ಮಾದರಿಗಳು ಕ್ರಮೇಣ ಸಾಮಾಜಿಕ ಪಾರಮ್ಯಗಳಿಗೆ ಸಿಲುಕಿ, ಉಲ್ಲಂಘಿಸಬಾರದ ಅಥವಾ ಉಲ್ಲಂಘಿಸಲಾರದ ನಿಬಂಧನೆಗಳನ್ನು ರೂಢಿಸಿಕೊಳ್ಳುತ್ತವೆ. ಕರ್ನಾಟಕ ಶಾಸ್ತ್ರೀಯ ಸಂಗೀತವೂ ಇಂತಹುದೇ ವೈದಿಕಶಾಹಿ ಭದ್ರಕೋಟೆಗಳಲ್ಲಿ ಬಂಧಿಸಲ್ಪಟ್ಟಿರುವುದು ದುರಂತ. ಈ ಭದ್ರಕೋಟೆಯ ಗೋಡೆಗಳನ್ನು ಭೇದಿಸುವ ಯಾವುದೇ ಪ್ರಯತ್ನಗಳು ಸಹಜವಾಗಿಯೇ ವಿದ್ರೋಹ ಎನಿಸಿಕೊಳ್ಳುತ್ತದೆ.

ಮಾರುಕಟ್ಟೆಯ ಆವರಣದಲ್ಲಿ

ಏತನ್ಮದ್ಯೆ ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆಯು ಸಾಂಸ್ಕೃತಿಕ ವಲಯದ ಎಲ್ಲ ಮಜಲುಗಳನ್ನೂ Commodification ಪ್ರಕ್ರಿಯೆಗೊಳಪಡಿಸುತ್ತಿರುವ ಡಿಜಿಟಲ್‌ ಯುಗದಲ್ಲಿ ಕಲಾಭಿವ್ಯಕ್ತಿಯ ಎಲ್ಲ ಪ್ರಕಾರಗಳಲ್ಲೂ ಇಂತಹ ಭದ್ರಕೋಟೆಗಳಿಗೆ ಒಂದು ಮೌಲ್ಯವನ್ನು ಸೃಷ್ಟಿಸಲಾಗುತ್ತದೆ. ಮಾರುಕಟ್ಟೆ ಸರಕಿನಂತೆ ವಿನಿಮಯ ಮಾಡಬಹುದಾದ ಸಂಗೀತದ ಮೇಲೆ ತಮ್ಮ ಹಿಡಿತ ಸಾಧಿಸುವ ಮೂಲಕ ಈ ಭದ್ರಕೋಶಗಳು ಅಭೇದ್ಯತೆಯನ್ನು ಕಾಪಾಡಿಕೊಳ್ಳಬಯಸುತ್ತವೆ. ಹಾಗಾಗಿ ಈ ಶಾಸ್ತ್ರೀಯ ಪಾರಂಪರಿಕ ಸಂಗೀತವನ್ನು ಕೆಳಸ್ತರದ ಸಮಾಜಕ್ಕೆ ತಲುಪಿಸುವ ಮೂಲಕ ಇದರ ಸುತ್ತ ನಿರ್ಮಾಣವಾಗಿರುವ ಮಾರುಕಟ್ಟೆಯನ್ನು ಭೇದಿಸುವ ಪ್ರಯತ್ನಗಳು ಅಸಹನೀಯವಾಗಿಬಿಡುತ್ತದೆ. ಇಲ್ಲಿ ಕಲ್ಪಿತ ಪಾವಿತ್ರ್ಯತೆ ಅಥವಾ ಕಟ್ಟಿಕೊಂಡ ಪರಿಶುದ್ಧತೆಗಳನ್ನು ಮುಂದಿಟ್ಟುಕೊಂಡು, ಪರಂಪರೆಯನ್ನು ಉಳಿಸುವ ಧ್ವನಿಗಳು ಕೇಳಿಬರುತ್ತವೆ.

ಟಿ.ಎಮ್.‌ ಕೃಷ್ಣ ಅವರ ಗಾಯನವನ್ನು ಆಲಿಸುವ ಯಾರಿಗೇ ಆದರೂ ಅವರು ಸ್ವರ-ರಾಗ-ಲಯದ ನಿಯಮಗಳನ್ನು ಉಲ್ಲಂಘಿಸುವುದು ಕಾಣುವುದಿಲ್ಲ. ಆದರೆ ಇದೇ ಸ್ವರಗಳನ್ನೇ ಇದುವರೆಗೂ ಬಹಿಷ್ಕೃತ ಎನಿಸಿದ್ದ ಸಾಹಿತ್ಯ-ಸಾಂಸ್ಕೃತಿಕ ನೆಲೆಗಳಲ್ಲಿ ಅಳವಡಿಸುವುದು ಜಾತಿ ಶ್ರೇಷ್ಠತೆಯ ಸಮರ್ಥಕರಿಗೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಮತ್ತೊಂದು ವಿಡಂಬನೆಯನ್ನು ಗಮನಿಸುವುದಾದರೆ, ಮೇಲ್ಜಾತಿ ಸಮುದಾಯಕ್ಕೆ ಇಂದಿಗೂ ಅತ್ಯಂತ ಪವಿತ್ರ ಎನಿಸಿರುವ ಗಾಯತ್ರಿ ಮಂತ್ರವನ್ನು ವಾಣಿಜ್ಯೀಕರಣಗೊಳಿಸಿ ಮನೆಮನೆಯ ಕಾಲಿಂಗ್‌ ಬೆಲ್‌ಗೆ ಧ್ವನಿಯಾಗಿ ಅಳವಡಿಸಿದಾಗ “ಪರಂಪರೆಯನ್ನು ಉಲ್ಲಂಘಿಸಿದ” ಯಾವುದೇ ಕೂಗು ಕೇಳಿಬರಲೇ ಇಲ್ಲ. ಏಕೆಂದರೆ ಅಲ್ಲಿ ಮಾರುಕಟ್ಟೆಯೇ ಎಲ್ಲವನ್ನೂ ನಿರ್ವಹಿಸುತ್ತದೆ. ಇದು ಬಂಡವಾಳಶಾಹಿ ಮಾರುಕಟ್ಟೆಯ ಸಾಮರ್ಥ್ಯವೂ ಹೌದು.

ಮಾರುಕಟ್ಟೆ ವ್ಯವಸ್ಥೆಯ ಈ commodification ಪ್ರಕ್ರಿಯೆಗೆ ಪ್ರತಿಯಾಗಿ ಟಿ.ಎಮ್.‌ ಕೃಷ್ಣ ಅವರಂತಹ ಸಂಗೀತಗಾರರು ತಮ್ಮ ಹೊಸ ಪ್ರಯೋಗಗಳ ಮೂಲಕ ಶಾಸ್ತ್ರೀಯ ಸಂಗೀತವನ್ನು ತಳಸ್ತರದ ಸಮುದಾಯಗಳಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಭಾರತದ ಜಾತಿಶ್ರೇಣಿ ಸಮಾಜದಲ್ಲಿ ಸಹಜವಾಗಿಯೇ ಇಲ್ಲಿ ಅಂಬೇಡ್ಕರ್‌, ಪೆರಿಯಾರ್‌, ನಾರಾಯಣಗುರು, ಗಾಂಧಿ ಮುಂತಾದ ದಾರ್ಶನಿಕರು ನೆರವಾಗುತ್ತಾರೆ. ತಳಸಮಾಜದ ಸಾಮಾನ್ಯ ಜನರ ನಡುವೆ ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಟಿ.ಎಮ್.‌ ಕೃಷ್ಣ ಈ ಮಹನೀಯರ ವಿಚಾರಧಾರೆಗಳಿಗೆ ತೆರೆದುಕೊಳ್ಳುವುದು ಅವರ ಸೃಜನಶೀಲತೆಗೆ ಸಾಕ್ಷಿ. ಇಂತಹ ಸೃಜನಶೀಲ ಪ್ರಯತ್ನಗಳೇ ಜಗತ್ತಿನಾದ್ಯಂತ ಸಂಗೀತ ಎಂಬ ಕಲಾಪ್ರಕಾರವನ್ನು ಹೊಸ ರೂಪಾಂತರಗಳೊಂದಿಗೆ ಜೀವಂತವಾಗಿಟ್ಟಿವೆ.

ಟಿ.ಎಮ್.‌ ಕೃಷ್ಣ ಅವರಂತಹ ಸೃಜನಶೀಲ ಕಲಾವಿದರಿಗೆ “ಸಂಗೀತ ಕಲಾನಿಧಿ” ಪ್ರಶಸ್ತಿ ನೀಡುವ ಮೂಲಕ ಮ್ಯೂಸಿಕ್ ಅಕಾಡೆಮಿ ತನ್ನ ಸಾಂಸ್ಕೃತಿಕ ಹಿರಿಮೆ-ಸಾಮಾಜಿಕ ಬದ್ಧತೆಯನ್ನು ಎತ್ತಿಹಿಡಿದಿದೆ. ದೇಶದ ಸಾಂಸ್ಕೃತಿಕ ವಲಯವು ಬಲಪಂಥೀಯ ರಾಜಕಾರಣ ಮತ್ತು ಕಾರ್ಪೋರೇಟ್‌ ಮಾರುಕಟ್ಟೆಯ ಹಿತಾಸಕ್ತಿಗಳಿಂದ ಆವೃತ್ತವಾಗುತ್ತಿರುವ ಹೊತ್ತಿನಲ್ಲಿ, ಸಮಾಜದಲ್ಲಿ ಭಿನ್ನಭೇದಗಳ ಗೋಡೆಗಳನ್ನು ಕೆಡವಬೇಕಿದೆ. ಈ ಕೆಡವುವಿಕೆಯ ಹಾದಿಯಲ್ಲಿ ಟಿ.ಎಮ್. ಕಷ್ಣ ಒಬ್ಬ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾಣುತ್ತಾರೆ. ಅವರನ್ನು ಸಮ್ಮಾನಿಸುವುದು ಸಾಮಾಜಿಕ-ಸಾಂಸ್ಕೃತಿಕ ಸೂಕ್ಷ್ಮತೆಯನ್ನು ಸಮ್ಮಾನಿಸಿದಂತೆಯೇ ಆಗುತ್ತದೆ. ಇದು ಈ ಕಾಲದ ತುರ್ತು.

Tags: Congress Partyಜನಪರಂಪರೆಯಾಗಿ ಸಂಗೀತನರೇಂದ್ರ ಮೋದಿಶಾಸ್ತ್ರೀಯ ಸಂಗೀತವೂ ಶ್ರೇಷ್ಠತೆಯ ಪಾರಮ್ಯವೂಸಂಗೀತಸಿದ್ದರಾಮಯ್ಯ
Previous Post

ಕಳೆದ ಬಾರಿ ಖರ್ಗೆ.. ಈ ಬಾರಿ ಡಿಕೆಶಿ.. ಇದು ಮೋದಿ ತಂತ್ರ..!

Next Post

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಗೆಲುವಿನ ನಗೆ ಬೀರಿದ RCB ! ಪಂಜಾಬ್ ವಿರುದ್ಧ ೪ ವಿಕೆಟ್ ಗಳ ಜಯ ! 

Related Posts

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
0

ಕನ್ನಡದ ಮೊದಲ ದಿನಪತ್ರಿಕೆ ಮಂಗಳೂರ ಸಮಾಚಾರ ಕ್ರೈಸ್ತ ಧರ್ಮ ಪ್ರಚಾರಕ್ಕೆ ಸ್ವಿಟ್ಜ್ ರ್ ಲೆಂಡ್ ನಿಂದ ಭಾರತಕ್ಕೆ ಆಗಮಿಸಿದ ಮಿಶನರಿಗಳು ಬಾಸೆಲ್ ಮಿಶನ್ ಎಂಬ ಒಂದು ಸಂಸ್ಥೆಯನ್ನು...

Read moreDetails
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Bangalore Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣ

July 1, 2025
Next Post
ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಗೆಲುವಿನ ನಗೆ ಬೀರಿದ RCB ! ಪಂಜಾಬ್ ವಿರುದ್ಧ ೪ ವಿಕೆಟ್ ಗಳ ಜಯ ! 

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಗೆಲುವಿನ ನಗೆ ಬೀರಿದ RCB ! ಪಂಜಾಬ್ ವಿರುದ್ಧ ೪ ವಿಕೆಟ್ ಗಳ ಜಯ ! 

Please login to join discussion

Recent News

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

July 1, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada