ಭಾರೀ ಸಂಚಲನ ಸೃಷ್ಟಿಸಿದ್ದ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿಯ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಪ್ರಕರಣದ ವಿಚಾರಣೆ ನಡೆಸಿದ ಸಿಒಡಿಗೆ ದೋಷಾರೋಪ ಪಟ್ಟಿ ಸಲ್ಲಿಸುವ ಕಾನೂನು ಅರ್ಹತೆಯೇ ಇಲ್ಲ ಮತ್ತು ಒಂದು ಪೊಲೀಸ್ ಠಾಣೆಯಲ್ಲದ ಆ ವ್ಯವಸ್ಥೆಯಡಿ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿಯೇ ದೋಷಪೂರಿತ ಎಂದಿದೆ.
ರಾಘವೇಶ್ವರ ಸ್ವಾಮಿ ವಿರುದ್ಧದ ರಾಮಕಥಾ ಗಾಯಕಿ ಅತ್ಯಾಚಾರ ಪ್ರಕರಣದಲ್ಲಿ ಸ್ವಾಮಿಯನ್ನು ಆರೋಪಮುಕ್ತಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪಿನ ಪುನರ್ ಪರಿಶೀಲನೆ ಕೋರಿ ಸಂತ್ರಸ್ತೆ ಮತ್ತು ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಷಯದಲ್ಲಿ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ಇಡೀ ಪ್ರಕರಣದಲ್ಲಿ; ಕಾನೂನು ಪ್ರಕಾರ ದೋಷರೋಪ ಪಟ್ಟಿ ಸಲ್ಲಿಸಬೇಕಾದ ಒಂದು ಪೊಲೀಸ್ ಠಾಣೆಯ ಮಾನ್ಯತೆ ಇರದ ಸಿಒಡಿಯೇ ಸ್ವತಃ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಹಾಗಾಗಿ ಸಿಒಡಿ ಸಲ್ಲಿಸರುವ ಆ ಆರೋಪಪಟ್ಟಿ ಕಾನೂನು ಪ್ರಕಾರ ಊರ್ಜಿತವಲ್ಲ. ಹಾಗಾಗಿ ಅಂತಹ ದೋಷಪೂರಿತ ದೋಷಾರೋಪ ಪಟ್ಟಿಯ ಆಧಾರದಲ್ಲಿ ವಿಚಾರಣಾ ನ್ಯಾಯಾಲಯ ನೀಡಿರುವ ತೀರ್ಪಿಗೆ ಕಾನೂನಿನ ದೃಷ್ಟಿಯಲ್ಲಿ ಅಸ್ತಿತ್ವವೇ ಇಲ್ಲ ಎಂದಿರುವ ರಾಜ್ಯ ಹೈಕೋರ್ಟ್, ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. ಸಿಒಡಿ ಮತ್ತು ಸಿಒಡಿ ತನಿಖೆಯ ಆಧಾರಿತ ಪ್ರಕರಣಗಳ ದೃಷ್ಟಿಯಲ್ಲಿ ಇದೊಂದು ಐತಿಹಾಸಿಕ ತೀರ್ಪಾಗಿದ್ದು, ಈ ತೀರ್ಪಿನ ಪರಿಣಾಮಗಳು ಕುತೂಹಲ ಮೂಡಿಸಿವೆ.
ಹೈಕೋರ್ಟಿನ ಈ ಆದೇಶ ಸಹಜವಾಗೇ ರಾಮಚಂದ್ರಾಪುರ ಮಠದ ವಿವಾದಿತ ಸ್ವಾಮಿಯ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಪ್ರಮುಖವಾಗಿ ಅಧೀನ ನ್ಯಾಯಾಲಯವು ಆರೋಪಿಯನ್ನು ಬಿಡುಗಡೆಗೊಳಿಸಿರುವುದೇ ಕಾನೂನು ಪ್ರಕಾರ ಸಮರ್ಥನೀಯವಲ್ಲ. ಯಾವುದೇ ದೃಷ್ಟಿಕೋನದಿಂದ ನೋಡಿದರೂ ಈ ಪ್ರಕರಣದಲ್ಲಿ ಅಧೀನ ನ್ಯಾಯಾಲಯದ ಆದೇಶಕ್ಕೆ ಕಾನೂನಿನ ಬೆಂಬಲ ಇಲ್ಲ ಎಂದು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕ ಸದಸ್ಯ ಪೀಠ ಹೇಳಿದೆ.
‘ದೋಷಪೂರಿತ ದೋಷಾರೋಪ ಪಟ್ಟಿ ಮತ್ತು ಕಾನೂನು ದೃಷ್ಟಿಯಲ್ಲಿ ಅಪ್ರಸ್ತುತವಾಗಿರುವ ತೀರ್ಪು’ ಎಂಬ ಎರಡು ಪ್ರಮುಖ ಸಂಗತಿಗಳನ್ನು ಉಲ್ಲೇಖಿಸಿರುವ ಆದೇಶ, ಅಂತಿಮವಾಗಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ಈ ಹಿಂದೆ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆ ಮತ್ತು ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಕ್ರಿಮಿನಲ್ ಅರ್ಜಿಗಳನ್ನು ವಜಾ ಮಾಡಿರುವುದಾಗಿ ತೀರ್ಪು ನೀಡಿದೆ.

ಮುಖ್ಯವಾಗಿ ಪ್ರಕರಣದಲ್ಲಿ ಸಿಒಡಿ ಪೊಲೀಸರ ತನಿಖಾ ಕ್ರಮವನ್ನೇ ನ್ಯಾಯಾಲಯ ದೋಷಪೂರಿತ ಎಂದಿದ್ದು, “ದೋಷಪೂರಿತವಾಗಿರುವ ದೋಷಾರೋಪ ಪಟ್ಟಿಯನ್ನೇ ಆಧರಿಸಿ ನ್ಯಾಯಾಲಯ ಕಲಾಪ ನಡೆಸಲು ಸಾಧ್ಯವಿಲ್ಲ. ಹಾಗೆ ಮಾಡಿದ್ದಲ್ಲಿ ಅದು ನಿಷ್ರಯೋಜಕವಾಗಲಿದೆ. ಹಾಗಾಗಿ ಆ ವಿಚಾರದಲ್ಲಿ ನ್ಯಾಯಾಲಯವು ಸಂತ್ರಸ್ತೆಯ ವಾದವನ್ನು ಪರಿಗಣನೆಗೆ ತೆಗೆದುಕೊಳ್ಳುವ ಸಂದರ್ಭವೇ ಉದ್ಭವವಾಗುವುದಿಲ್ಲ. ಯಾಕೆಂದರೆ; ಅಪರಾಧ ಪ್ರಕ್ರಿಯಾ ಸಂಹಿತೆ ಕಲಂ 229ರ ಪ್ರಕಾರ ಆರೋಪಿ ಅರ್ಜಿಯ ಪರಿಶೀಲನೆ ನಡೆಸಿದಾಗ, ಅಧೀನ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿರುವುದು ಸಮರ್ಥನೀಯವಲ್ಲ. ಆ ಹಿನ್ನೆಲೆಯಲ್ಲಿ ಯಾವ ರೀತಿಯಲ್ಲೂ ಅಧೀನ ನ್ಯಾಯಾಲಯದ ತೀರ್ಪನ್ನು ನೋಡಿದರೂ ಅದಕ್ಕೆ ಕಾನೂನಿನ ಬೆಂಬಲವಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಇದೇ ಸಂದರ್ಭದಲ್ಲಿ ಆರೋಪಿ ಮತ್ತು ಸಂತ್ರಸ್ತೆಯ ನಡುವಿನ ನಿಕಟ ಸಂಬಂಧದ ಕುರಿತು ಉಲ್ಲೇಖಿಸಿರುವ ನ್ಯಾಯಪೀಠ, ಆ ಸಂಬಂಧ ಸುಪ್ರೀಂಕೋರ್ಟಿನ ತೀರ್ಪೊಂದನ್ನು ಉಲ್ಲೇಖಿಸಿದೆ. ‘ಆರೋಪಿ ಮತ್ತು ಸಂತ್ರಸ್ತೆಯ ಮಧ್ಯೆ ಅತ್ಯಂತ ನಿಕಟ ಆತ್ಮೀಯತೆ ಇದ್ದು, ಇಬ್ಬರ ನಡುವೆ ಒಪ್ಪಿತ ಲೈಂಗಿಕ ಕ್ರಿಯೆ ನಡೆದಿದೆ ಎಂಬುದು ಸಾಬೀತಾಗಿರುವಾಗ ಅದರಲ್ಲಿ ಅತ್ಯಾಚಾರ ಎಂಬ ತಾಂತ್ರಿಕವಾಗಿ ಕಂಡುಬರುವುದಿಲ್ಲ. ಆದಾಗ್ಯೂ ಇಂತಹ ನಿಕಟತೆ ಅತ್ಯಾಚಾರಕ್ಕೆ ಸಮಾನವಾದದ್ದು’ ಎಂದು ಪೀಠ ಅಭಿಪ್ರಾಯಪಟ್ಟಿದೆ.
ನಿಟಕ ಬಾಂಧ್ಯವ್ಯ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರ ನಡುವಿನ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎನ್ನಲಾಗದು ಎಂಬ ಸಂಗತಿಯನ್ನು ಕೂಡ ನ್ಯಾಯಾಲಯದ ಈ ಆದೇಶ ತಳ್ಳಿಹಾಕಿದ್ದು, ಆ ಅಂಶದ ಹಿನ್ನೆಲೆಯಲ್ಲೂ ಪ್ರಕರಣದ ಮುಂದಿನ ತಿರುವು ಕುತೂಹಲ ಮೂಡಿಸಿದೆ.
ಸದ್ಯಕ್ಕಂತೂ ಪ್ರಕರಣದಲ್ಲಿ ಆರೋಪಿ ಸ್ವಾಮಿ ಮತ್ತು ಸಂತ್ರಸ್ತೆಯ ನಡುವೆ ನಿಕಟ ಲೈಂಗಿಕ ಸಂಬಂಧ ಇದ್ದಿರುವ ಅಂಶ ಮತ್ತು ಸಿಒಡಿಯ ದೋಷಾರೋಪ ಸಲ್ಲಿಕೆಯ ಕಾನೂನು ಮಾನ್ಯತೆ ಅಂಶಗಳು ಮುಖ್ಯವಾಗಿ ಇಡೀ ಪ್ರಕರಣಕ್ಕೆ ಹೊಸ ಆಯಾಮ ನೀಡಿವೆ.