ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ (85) ಅವರು ಶನಿವಾರ ಸಂಜೆ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಮೊದಲು ಬೆಂಗಳೂರಿನ ಪದ್ಮನಾಭನಗರದ ನಿವಾಸಕ್ಕೆ ಕೊಂಡೊಯ್ಯಲಾಗುತ್ತದೆ. ಬಳಿಕ ಕುಟುಂಬದ ತೀರ್ಮಾನದಂತೆ ಸ್ವಗ್ರಾಮ ಹಾಸನ ಜಿಲ್ಲೆಯ ಹರದನಹಳ್ಳಿ ಸಮೀಪದ ಮಾವಿನಕೆರೆ ಗ್ರಾಮಕ್ಕೆ ರವಾನಿಸಲಾಗಿದ್ದು, ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ಕೆಲವು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚೆನ್ನಮ್ಮ ಅವರ ಆರೋಗ್ಯ ಜುಲೈ 15ರಂದು ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಬೆಳಗ್ಗಿನಿಂದಲೇ ದೇವೇಗೌಡರು ಪತ್ನಿಯ ಬಳಿಯೇ ಇದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ವೈದ್ಯರು ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ ಬಳಿಕ ದೇವೇಗೌಡರು ಭಾವುಕರಾಗಿ, ಪತ್ನಿಯ ಹಣೆಗೆ ಕುಂಕುಮವಿಟ್ಟು, ತಲೆಗೆ ಹೂ ಮುಡಿಸಿ ಕೊನೆಯ ಕ್ಷಣಗಳಲ್ಲಿ ಅವರ ಮುಖವನ್ನು ನೋಡುತ್ತಾ ಕಣ್ಣೀರಿಟ್ಟರು. ಕೆಲವೇ ಕ್ಷಣಗಳ ಬಳಿಕ ಚೆನ್ನಮ್ಮ ಅವರು ಇಹಲೋಕ ತ್ಯಜಿಸಿದರು.
https://youtu.be/e7BAkiaGevI?si=7_OpQNBR98k-dcEf
ಚೆನ್ನಮ್ಮ ಅವರ ನಿಧನಕ್ಕೆ ವಿವಿಧ ರಾಜಕೀಯ ನಾಯಕರು, ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಮುಖಂಡ ರಾ. ಚಿಂತನ್ ಅವರು ಸಂತಾಪ ಸೂಚಿಸಿ, “ದೇವೇಗೌಡರ ಸುದೀರ್ಘ ರಾಜಕೀಯ ಬದುಕಿನ ಹಿಂದೆ ನಿಂತಿದ್ದ ದೃಢ ಶಕ್ತಿಯಾಗಿದ್ದವರು ಚೆನ್ನಮ್ಮ. ಅಧಿಕಾರದ ಪ್ರಚಾರದಿಂದ ದೂರವಿದ್ದರೂ, ಕುಟುಂಬದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಆದರ್ಶ ಗೃಹಿಣಿಯಾಗಿದ್ದರು. ಅವರ ಸರಳತೆ, ಸಾತ್ವಿಕತೆ ಮತ್ತು ಮೌಲ್ಯಯುತ ಜೀವನ ಎಲ್ಲರಿಗೂ ಮಾದರಿಯಾಗಿದೆ. ಈ ಅಗಲಿಕೆ ದೇವೇಗೌಡರ ಕುಟುಂಬಕ್ಕೆ ಮಾತ್ರವಲ್ಲ, ರಾಜ್ಯಕ್ಕೂ ತುಂಬಲಾರದ ನಷ್ಟ” ಎಂದು ಹೇಳಿದ್ದಾರೆ.

ಇನ್ನೊಬ್ಬ ಹಿರಿಯ ನಾಯಕ ಸಂತಾಪ ಸೂಚಿಸಿ, “ಜನತಾ ಪರಿವಾರದೊಂದಿಗೆ ನಿಕಟ ಒಡನಾಟ ಹೊಂದಿದ್ದ ನನಗೆ ಚೆನ್ನಮ್ಮನವರ ಪರಿಚಯ ಆಪ್ತವಾಗಿತ್ತು. ಜೀವನದ ಕಷ್ಟ-ನೋವುಗಳನ್ನು ಧೈರ್ಯದಿಂದ ಎದುರಿಸಿದ ಅವರು ದೇವೇಗೌಡರ ರಾಜಕೀಯ ಜೀವನದ ಏಳು-ಬೀಳುಗಳ ನಡುವೆ ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸಿದ ಗಟ್ಟಿಗಿತ್ತಿ. ಮಾಜಿ ಪ್ರಧಾನಿಯ ಪತ್ನಿಯಾಗಿದ್ದರೂ ಯಾವುದೇ ಹಮ್ಮು-ಬಿಮ್ಮಿಲ್ಲದೆ ಎಲ್ಲರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದರು. ಈ ಇಳಿವಯಸ್ಸಿನಲ್ಲಿ ಜೀವನ ಸಂಗಾತಿಯನ್ನು ಕಳೆದುಕೊಂಡಿರುವ ದೇವೇಗೌಡರಿಗೆ ಈ ದುಃಖವನ್ನು ಸಹಿಸುವ ಶಕ್ತಿ ಸಿಗಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ” ಎಂದು ಪ್ರಾರ್ಥಿಸಿದ್ದಾರೆ.






