ಇಂದು ಚಂದ್ರನ ಅಂಗಳದಲ್ಲಿ ಭಾರತದ ಸಾಧನೆ ಇತಿಹಾಸ ಸೃಷ್ಟಿಸಲಿ ಅನ್ನೋ ಆಶಯದಲ್ಲಿ ಭಾರತದ ಎಲ್ಲೆಡೆ ಪೂಜೆ ಪುನಸ್ಕಾರ, ಹೋಮ ಹವನ ಮಾಡಲಾಗ್ತಿದೆ. ಜುಲೈ 14 ರಂದು ಭೂಮಿಯಿಂದ ಆಗಸಕ್ಕೆ ಚಿಮ್ಮಿದ ಚಂದ್ರಯಾನ 3 ರಾಕೆಟ್ ಭೂಮಿಯ ಸುತ್ತ ಚಲಿಸಿ ವೇಗ ಹೆಚ್ಚಿಸಿಕೊಂಡು ಅಂತಿಮವಾಗಿ ಚಂದ್ರನ ಕಕ್ಷೆ ಸೇರಿಕೊಂಡಿತ್ತು. ಇದೀಗ ಚಂದ್ರ ಗ್ರಹವನ್ನು ಸುತ್ತು ಹಾಕುತ್ತಿರುವ ಚಂದ್ರಯಾನ 3ರ ಲ್ಯಾಂಡರ್ ಇಳಿಯಲು ವೇಗ ನಿಯಂತ್ರಣ ಮಾಡಲಾಗಿದೆ. ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲೆ ಸ್ಮೂತ್ ಲ್ಯಾಂಡಿಂಗ್ ಮಾಡಲು ಇಸ್ರೋ ವಿಜ್ಞಾನಿಗಳು ಸಕಲ ತಯಾರಿ ಮಾಡಿಕೊಳ್ತಿದ್ದಾರೆ. ದೂರದರ್ಶನದಲ್ಲಿ ನೇರ ಪ್ರಸಾರ ಮಾಡುವುದಕ್ಕೂ ಇಸ್ರೋ ಯೋಜನೆ ಮಾಡಿಕೊಂಡಿದೆ.
ಸದ್ಯ ಗಂಟೆಗೆ 6 ಸಾವಿರ ವೇಗದಲ್ಲಿ ಚಂದ್ರಯಾನ ಸಂಚಾರ..!
ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3ರ ಮಾಡ್ಯೂಲ್ ಇಳಿಯುತ್ತದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ. ಪರಿಸ್ಥಿತಿಯನ್ನು ಈಗಾಗಲೇ ಅವಲೋಕನೆ ಮಾಡಿದ್ದು, ಇಂದು ಸಂಜೆ ಲ್ಯಾಂಡಿಂಗ್ ಮಾಡಲು ನಿರ್ಧಾರ ಮಾಡಲಾಗಿದೆ. ಚಂದ್ರನಿಂದ 25 ರಿಂದ 30 ಕಿ.ಮೀ. ಎತ್ತರದಲ್ಲಿ ಇದ್ದಾಗ ಲ್ಯಾಂಡಿಂಗ್ ಕಾರ್ಯ ಶುರು ಮಾಡಲಿದ್ದಾರೆ ವಿಜ್ಣಾನಿಗಳು. ಪ್ರತಿ ಸೆಕೆಂಡ್ಗೆ 1.68 ಕಿ.ಮೀ. ವೇಗದಲ್ಲಿ ವಿಕ್ರಂ ಲ್ಯಾಂಡರ್ ಇಳಿಸಲು ವಿಜ್ಞಾನಿಗಳು ಲೆಕ್ಕಾಚಾರ ಹಾಕಿದ್ದಾರೆ. ಚಂದ್ರನಿಂದ ಕೇವಲ 800 ಮೀಟರ್ ದೂರದಲ್ಲಿದ್ದಾಗ ವೇಗವನ್ನು ಶೂನ್ಯ ಮಾಡಲಾಗುತ್ತದೆ. ಆ ಬಳಿಕ 150 ಮೀಟರ್ ತನಕ ಹತ್ತಿರಕ್ಕೆ ಹೋಗಲಿರುವ ಲ್ಯಾಂಡರ್ ಇಳಿಯಲು ಸೂಕ್ತವಾಗಿಯೇ ಎಂದು ಪರಿಶೀಲನೆ ನಡೆಸಲಿದೆ. ಒಂದು ವೇಳೆ ಚಂದ್ರನ ಮೇಲೆ ಕುಳಿಗಳು, ಬೆಟ್ಟ ಗುಡ್ಡಗಳು ಇದ್ದರೆ ಲ್ಯಾಂಡರ್ ತನ್ನ ಜಾಗವನ್ನು ಬದಲಾವಣೆ ಮಾಡಿಕೊಂಡು ಸಮತಟ್ಟು ಆಗಿರುವ ಜಾಗದಲ್ಲಿಯೇ ಇಳಿಯಲಿದೆ.
ವಿಕ್ರಮನಿಂದ 14 ದಿನಗಳ ಕಾಲ ಚಂದ್ರನ ಮೇಲೆ ಅಧ್ಯಯನ..!
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿದ ಬಳಿಕ ಮೊದಲಿಗೆ ಬಾಗಿಲು ತೆರೆದುಕೊಂಡು ಅದರ ಒಳಗಿರುವ ಪ್ರಗ್ಯಾನ್ ರೋವರ್ ಹೊರಬರಲಿದೆ. 6 ಚಕ್ರಗಳನ್ನು ಹೊಂದಿರುವ ಪ್ರಗ್ಯಾನ್ ರೋವರ್, ರಾಷ್ಟ್ರಧ್ವಜ, ಇಸ್ರೋ ಲಾಂಛನದ ಜೊತೆಗೆ ಇಳಿಯುತ್ತತ್ತೆ. ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾಗು ಇಸ್ರೋ ಲಾಂಛನ ಇರಿಸಲಿದೆ. ಆ ಬಳಿಕ ಅಲ್ಲಿಂದ ಫೋಟೋ ರವಾನೆ ಮಾಡಲಿದೆ. ಚಂದ್ರನ ಮೇಲೆ ಪ್ರತಿ ಸೆಕೆಂಡಿಗೆ 1 ಸೆಂ.ಮೀ ವೇಗದಲ್ಲಿ ಚಲಿಸುವ ರೋವರ್, ಸೂರ್ಯ ಶಕ್ತಿ ಬಳಸಿಕೊಂಡು 14 ದಿನಗಳ ಕಾಲ ಚಂದ್ರ ಮೇಲೆ ಸುತ್ತಾಡುತ್ತ ವಿಜ್ಞಾನಿಗಳಿಗೆ ಮಾಹಿತಿ ರವಾನೆ ಮಾಡಲಿದೆ. ಚಂದ್ರನ ಮೇಲೆ ಸೂರ್ಯನ ಕಿರಣಗಳು ಬೀಳದೆ ಕತ್ತಲಾಗಿರುವ ಭಾಗದ ಅನ್ವೇಷಣೆ ನಡೆಸಲಿದೆ. ಚಂದ್ರನ ವಾತಾವರಣ ಮತ್ತು ಇತರ ಅಂಶಗಳ ಬಗ್ಗೆ ಅಧ್ಯಯನ ನಡೆಸಲಿದ್ದು, ಚಂದ್ರನ ಮೇಲೆ ನೀರು ಇದೆಯೋ ಇಲ್ಲವೋ ಅನ್ನೋ ಬಗ್ಗೆಯೂ ಅಧ್ಯಯನ ನಡೆಯಲಿದೆ. ಭೂಮಿ ಮೇಲಿನ 14 ದಿನಗಳು ಚಂದ್ರನ ಮೇಲೆ 1 ದಿನಕ್ಕೆ ಸಮಾನ.
ಅಂದುಕೊಂಡಷ್ಟು ಸುಲಭ ಅಲ್ಲ.. ವಿಜ್ಞಾನಿಗಳ ಶ್ರಮ ವ್ಯರ್ಥ ಆಗದಿರಲಿ..
ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸುವುದು ವಿಜ್ಞಾನಿಗಳಿಗೆ ಸವಾಲಿನ ಕೆಲಸವೇ ಸರಿ. ವೇಗ ನಿಯಂತ್ರಣದ ಬಳಿಕ ಗಂಟೆಗೆ 6 ಸಾವಿರ ಕಿಲೋ ಮೀಟರ್ ವೇಗವಾಗಿ ಸುತ್ತುತ್ತಿರುವ ವಿಕ್ರಮ್ ಲ್ಯಾಂಡರ್ನನ್ನು ವೇಗ ನಿಯಂತ್ರಣ ಮಾಡುತ್ತ ಚಂದ್ರನ ಕಡೆಗೆ ತೆಗೆದುಕೊಂಡು ಹೋಗುವುದು ಕೊನೆಯ 5 ನಿಮಿಷ ತುಂಬಾ ಸವಾಲಿನಿಂದ ಕೂಡಿದೆ ಎನ್ನುವುದು ವಿಜ್ಞಾನಿಗಳ ಮಾತು. 3 ಲಕ್ಷ 84 ಸಾವಿರ ಕಿಲೋ ಮೀಟರ್ ದೂರದಲ್ಲಿರುವ ಚಂದ್ರನ ಮೇಲೆ ವಿಜ್ಞಾನಿಗಳ ಪ್ರಯೋಗ ಯಶಸ್ವಿಯಾಗಲಿ ಎನ್ನುವುದು ಪ್ರತಿಧ್ವನಿ ಸೇರಿದಂತೆ ಕೋಟಿ ಕೋಟಿ ಜನರ ಪ್ರಾರ್ಥನೆ ಆಗಿದೆ. ಸಂಜೆ 5 ಗಂಟೆ 15 ನಿಮಿಷದಿಂದ 6 ಗಂಟೆ 4 ನಿಮಿಷದ ಅವಧಿಯೊಳಗೆ ವಿಜ್ಞಾನಿಗಳು ಸೂಕ್ತ ಸಮಯದಲ್ಲಿ ಚಂದ್ರ ಮೇಲೆ ಇಳಿಸಲಿದ್ದಾರೆ. ಕೊನೆಯ 15 ನಿಮಿಷದಿಂದ ತಳಮಳ ಶುರುವಾಗಲಿದ್ದು, ಕ್ಷಣ ಕ್ಷಣಕ್ಕೂ ವಿಜ್ಞಾನಿಗಳು ಕೊನೆಯ 2 ನಿಮಿಷದಲ್ಲಿ ಜಗಮೆಚ್ಚುವ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.