ಹೊಸದಿಲ್ಲಿ : ಚಂದ್ರಯಾನ 3ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಖುಷಿಯಿಂದ ನಿದ್ರಿಸುತ್ತಿದೆ. ಅದು ತನ್ನ ಕೆಲಸವನ್ನು ಅದ್ಭುತವಾಗಿ ಮಾಡಿದೆ. ಅದಕ್ಕೆ ಏಳಬೇಕು ಅನಿಸಿದರೆ, ಏಳಲಿ. ಅಲ್ಲಿಯವರೆಗೂ ನಾವು ಕಾಯಬೇಕು ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಈ ಮೂಲಕ ವಿಕ್ರಮ್ ಮತ್ತು ಪ್ರಜ್ಞಾನ್ ಅನ್ನು ಸಂಪರ್ಕಿಸುವ ಕಾರ್ಯವನ್ನು ಇಸ್ರೋ ಮುಂದುವರಿಸಿದೆ ಎಂದು ತಿಳಿಸಿದ್ದಾರೆ.

ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಅನ್ನು ಸೆಪ್ಟೆಂಬರ್‌ನಲ್ಲಿ ಸ್ಲೀಪ್ ಮೋಡ್‌ಗೆ ಹಾಕಲಾಗಿತ್ತು. 15 ದಿನಗಳ ಬಳಿಕ ಅವುಗಳನ್ನು ಸಂಪರ್ಕಿಸುವ ಪ್ರಯತ್ನವನ್ನು ಇಸ್ರೋ ಮಾಡುತ್ತಿದೆ. ಆದರೆ, ಇದುವರೆಗೂ ಸಂಪರ್ಕ ಸಾಧ್ಯವಾಗಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್ ಸೋಮನಾಥ್ ಅವರು, ಅವುಗಳಿಂದ ಯಾವುದೇ ಸಂಕೇತವನ್ನು ನಾವು ಸ್ವೀಕರಿಸಿಲ್ಲ. ಲ್ಯಾಂಡರ್ ಮತ್ತು ರೋವರ್ ಅನ್ನು ಸಂಪರ್ಕಿಸುವ ನಮ್ಮ ಪ್ರಯತ್ನವನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದರು.