ಸ್ವಯಂಚಾಲಿತ ಲ್ಯಾಂಡಿಂಗ್ ಸೀಕ್ವೆನ್ಸ್ (ALS) ಪ್ರಾರಂಭಕ್ಕೆ ಎಲ್ಲವೂ ಸಿದ್ಧವಾಗಿದೆ. ಸಂಜೆ 5 ಗಂಟೆ 44 ನಿಮಿಷ ಸುಮಾರಿಗೆ ಗೊತ್ತುಪಡಿಸಿದ ಸ್ಥಳದಲ್ಲಿ ಲ್ಯಾಂಡರ್ ಮಾಡ್ಯೂಲ್ (LM) ಆಗಮನದ ನಿರೀಕ್ಷೆ. ಕಾರ್ಯಾಚರಣೆಯ ನೇರ ಪ್ರಸಾರ ಸಂಜೆ 5.20ರಿಂದ ಆರಂಭವಾಗಲಿದೆ. ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಚಂದಿರನನ್ನು ಸ್ಪರ್ಶ ಮಾಡಲಿದೆ ಎಂದು ಇಸ್ರೊ ಟ್ವೀಟ್ ಮೂಲಕ ಖಚಿತಪಡಿಸಿದೆ.
ಚಂದ್ರಯಾನ 3 ಯಶಸ್ವಿಗೆ ಹಾರೈಸಿ ವಿಕ್ರಮ್ ಲ್ಯಾಂಡರ್ ಮಾಡಲ್ಗೆ ಚಿಕ್ಕಬಳ್ಳಾಫುರದ ಎಸ್.ಜೆ.ಸಿ.ಐ.ಟಿ ಕಾಲೇಜಿನ ಏರೋನಾಟಿಕಲ್ ಇಂಜನಿಯರಿಂಗ್ ಹಾಗೂ ಏರೊ ಸ್ಪೇಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪೂಜೆ ಮಾಡಿದರು. ರಾಕೇಟ್ ಲಾಂಚರ್, ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಮಾದರಿ ತಯಾರಿಸಿ ಪೂಜೆ ಮಾಡಿ ಚಂದ್ರಯಾನ- 3 ಗೆ ಯಶಸ್ವಿಯಾಗಲೆಂದು ಹಾರೈಸಿದರು.
ದೇಶಾದ್ಯಂತ ವಿವಿಧ ಪಕ್ಷಗಳ ನಾಯಕರು ಚಂದ್ರಯಾನ 3ರ ಯಶಸ್ಸಿಗೆ ಶುಭ ಕೋರಿದ್ದಾರೆ. ಮಂತ್ರಾಲಯ, ತಿರುಪತಿ, ಮೈಸೂರು ಚಾಮುಂಡೇಶ್ವರಿ, ನಂಜುಂಡೇಶ್ವರ ಸೇರಿದಂತೆ ದೇಶದ ಅನೇಕ ದೇಗುಲಗಳಲ್ಲಿ ಚಂದ್ರಯಾನ 3ರ ಯಶಸ್ಸಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅನೇಕರು ಹೋಮ, ಹವನ ಮಾಡಿಸಿದ್ದಾರೆ.