ಶಿವಕುಮಾರ್ ಎ
ಲಸಿಕೆಯ ಕೊರತೆ ಭಾರತದಲ್ಲಿ ಕರೋನಾ ವಿರುದ್ದದ ಹೋರಾಟಕ್ಕೆ ದೊಡ್ಡ ಮಟ್ಟದ ಹೊಡೆತ ನೀಡಿದೆ. ಲಸಿಕೆಗಳನ್ನು ಪಡೆಯುವಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ವೈಫಲ್ಯ ಸಾಮಾನ್ಯ ಜನರನ್ನು ಸಾವಿನ ದವಡೆಗೆ ನೂಕುತ್ತಿದೆ. ಕಳೆದೆರಡು ತಿಂಗಳಲ್ಲಿ ಲಸಿಕೆ ಲಭ್ಯತೆಯ ಕುರಿತಾಗಿ ಅವಾಸ್ತವಿಕ ಭರವಸೆಯನ್ನು ನೀಡಿದ್ದ ಕೇಂದ್ರ, ಈಗ ಜೂನ್’ನಲ್ಲಿಯೂ ಮತ್ತೆ ಅಂತಹುದೇ ಪ್ರಯತ್ನಕ್ಕೆ ಕೈ ಹಾಕಿದೆ.
ಮೇ ೩೦ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಜೂನ್ ತಿಂಗಳ ಲಸಿಕಾ ಅಭಿಯಾನದ ಕುರಿತು ಮಾಹಿತಿ ನೀಡಿತ್ತು. ಈ ತಿಂಗಳಲ್ಲಿ 12 ಕೊಟಿ ಡೋಸ್’ಗಳಷ್ಟು ಲಸಿಕೆಗಳು ಲಭ್ಯವಾಗುವುದು ಎಂದು ಹೇಳಿತ್ತು. ಇದರಲ್ಲಿ 6.1 ಕೋಟಿ ಡೋಸ್’ಗಳು ಕೇಂದ್ರ ಸರ್ಕಾರಕ್ಕೆ ಹಾಗೂ ಉಳಿದ 5.9 ಕೋಟಿ ಡೋಸ್’ಗಳು ರಾಜ್ಯ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಲಭ್ಯವಾಗಲಿವೆ, ಎಂದಿತ್ತು.
ಇದೇ ರೀತಿ ಏಪ್ರಿಲ್ ತಿಂಗಳ ಆರಂಭದಲ್ಲಿಯೂ ಲಸಿಕಾ ಅಭಿಯಾನದ ಕುರಿತ ಮಾಹಿತಿಯನ್ನು ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರ ಹೊರಡಿಸಿತ್ತು. ಇವೆರಡೂ ಪ್ರಕಟಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಎರಡು ಅಂಶಗಳು ಬೆಳಕಿಗೆ ಬರುತ್ತವೆ. ಒಂದು, ಮೇ ತಿಂಗಳಲ್ಲಿ ನೀಡಿದ ಭರವಸೆಯನ್ನು ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎರಡು, ಜೂನ್ ತಿಂಗಳಿಗೆ ಸರ್ಕಾರ ನೀಡಿರುವ ಭರವಸೆಗೂ, ಭಾರತದಲ್ಲಿ ಲಸಿಕೆ ಉತ್ಪಾದನೆಯಾಗುವ ಮಟ್ಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಈ ರೀತಿಯ ಅವಾಸ್ತವಿಕ ಘೊಷಣೆಗಳನ್ನು ಸರ್ಕಾರದ ವಕ್ತಾರರು ಈ ಹಿಂದೆಯೂ ಮಾಡಿದ್ದಾರೆ. ಇದರ ಹಿಂದಿನ ಉದ್ದೇಶವೇನೆಂದರೆ, ಜನರಲ್ಲಿ ಒಂದು ರೀತಿಯ ‘ಆಶಾಭಾವನೆ’ಯನ್ನು ಹುಟ್ಟು ಹಾಕುವುದು. ಈ ಅವಾಸ್ತವಿಕ ನೀರಿನ ಗುಳ್ಳೆಯಂತಿರುವ ಆಶಾಭಾವನೆಯನ್ನು ಹೊಂದಿದ ಜನರು ಸರ್ಕಾರದ ವಿರುದ್ದ ಮಾತನಾಡಲು ಮುಂದಾಗುವುದಿಲ್ಲ ಎಂಬ ದೂ(ದು)ರಾಲೋಚನೆಯೂ ಇರಬಹುದು.
ಮೇ 2021ರ ಲಸಿಕೆ ಉತ್ಪಾದನೆ ಎಷ್ಟಿತ್ತು?
ಮೇ ತಿಂಗಳ ಲಸಿಕಾ ಯೊಜನೆಯ ಪ್ರಕಾರ, ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸುಮಾರು 4.4 ಕೋಟಿಯಷ್ಟು ಡೋಸ್’ಗಳು ನೇರ ಖರೀದಿಗೆ ಲಭ್ಯವಿದೆ, ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿತ್ತು. ಈ ಕುರಿತಾಗಿ ಎರಡು ಪತ್ರಿಕಾ ಪ್ರಕಟನೆಗಳನ್ನು ಹೊರಡಿಸಿತ್ತು. ಎರಡರಲ್ಲಿಯೂ ‘ಲಭ್ಯವಿದೆ’ ಎಂಬ ಪದ ಬಳಸಲಾಗಿತ್ತು. ಆದರೆ, ನೇರವಾಗಿ ಖರೀದಿಸಬೇಕು ಎಂಬ ಸ್ಪಷ್ಟತೆ ಹೊಂದಿರಲಿಲ್ಲ
ಉದಾಹರಣೆಗೆ ಹೇಳುವುದಾದರೆ, ನಿರ್ದಿಷ್ಟ ಡೋಸ್’ಗಳಷ್ಟು ಲಸಿಕೆಯು ನಿರ್ದಿಷ್ಟ ತಿಂಗಳಲ್ಲಿ ‘ಖರೀದಿಸಬಹುದು’, ಎಂದಷ್ಟೇ ಇದರ ಅರ್ಥ. ವಾಸ್ತವದಲ್ಲಿ ಅಷ್ಟು ಡೋಸ್ ಲಸಿಕೆಗಳು ತಯಾರಾಗಿದೆಯೇ ಇಲ್ಲವೇ ಎಂಬುದು ಇಲ್ಲಿ ಅಮಾನ್ಯವಾಗುತ್ತದೆ.
ಕೇಂದ್ರ ಸರ್ಕಾರವು ಸುಪ್ರಿಂಕೋರ್ಟ್’ಗೆ ನೀಡಿದ ಅಫಿಡವಿಟ್ ಪ್ರಕಾರ ಭಾರತದ ಪ್ರಮುಖ ಲಸಿಕಾ ಉತ್ಪಾದಕರಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಕ್ರಮವಾಗಿ 6.5 ಕೋಟಿ ಮತ್ತು 2 ಕೋಟಿ ಲಸಿಕೆಗಳನ್ನು ಪ್ರತಿ ತಿಂಗಳು ಉತ್ಪಾದಿಸುತ್ತವೆ. ಒಟ್ಟು 8.5 ಕೋಟಿ ಡೋಸ್ ಲಸಿಕೆ ಪ್ರತಿ ತಿಂಗಳು ಭಾರತದಲ್ಲಿ ಉತ್ಪಾದನೆಯಾಗುತ್ತದೆ. ಮೂರನೇ ಆಯ್ಕೆ ಸ್ಪುಟ್ನಿಕ್ ವಿ. ಇದು ಕೂಡಾ ಅಲ್ಪ ಪ್ರಮಾಣದಲ್ಲಿ ಮಾತ್ರ ಬಳಕೆಗೆ ಲಭ್ಯ.
ಈ 8.5 ಕೋಟಿ ಡೋಸ್ ಲಸಿಕೆಯನ್ನು ೫೦:೫೦ ಅನುಪಾತದಲ್ಲಿ ಕೇಂದ್ರ ಸರ್ಕಾರ ಎರಡು ಭಾಗ ಮಾಡುತ್ತದೆ. 4-4.5 ಕೋಟಿ ಲಸಿಕೆ ಕೇಂದ್ರ ಸರ್ಕಾರ ಪಡೆದುಕೊಂಡು, ಉಳಿದ 4-4.5 ಕೋಟಿ ಲಸಿಕೆ ರಾಜ್ಯ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನೀಡುತ್ತದೆ. ಇದು ಸರ್ಕಾರ ನೀಡಿದ ಲೆಕ್ಕಾಚಾರ.
ಆದರೆ, ಸರ್ಕಾರ ಸುಪ್ರಿಂಕೋರ್ಟ್’ಗೆ ನೀಡಿದ ಲೆಕ್ಕಾಚಾರ ಕೇವಲ ಅಂದಾಜು ಲೆಕ್ಕಾಚಾರ. ವಾಸ್ತವದಲ್ಲಿ 8.5 ಕೋಟಿ ಲಸಿಕೆ ಉತ್ಪಾದನೆಯಾಗಿದೆಯೇ ಎಂದು ಪ್ರಶ್ನಿಸಿದರೆ ಸಿಗುವ ಉತ್ತರ, ಇಲ್ಲ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಮೇ ತಿಂಗಳಲ್ಲಿ ಒಟ್ಟು ಸೇರಿ ಉತ್ಪಾದಿಸಿದ್ದು ಸುಮಾರು 6-6.5 ಕೋಟಿ ಡೋಸ್’ಗಳಷ್ಟು ಲಸಿಕೆ ಮಾತ್ರ. ಮೇ ತಿಂಗಳಲ್ಲೇ ಸುಮಾರು ಎರಡು ಕೋಟಿಗೂ ಹೆಚ್ಚು ಡೋಸ್ ಲಸಿಕೆಗಳ ಕೊರತೆ ಉಂಟಾಗಿದೆ.
ಭಾರತದಲ್ಲಿ ಲಸಿಕಾ ಅಭಿಯಾನ ಎಲ್ಲಿ ತಲುಪಿದೆ?
ಸರ್ಕಾರ ನೀಡಿದ ಅಧಿಕೃತ ಮಾಹಿತಿಯ ಪ್ರಕಾರ ಮೇ ತಿಂಗಳಲ್ಲಿ 5.98 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಹಾಗಾದರೆ, ಕೇಂದ್ರ ಸರ್ಕಾರ ಸುಪ್ರೀಂಗೆ ನೀಡಿದ ಅಫಿಡವಿಟ್’ನಂತೆ 8.5 ಕೋಟಿ ಲಸಿಕೆ ಉತ್ಪಾದನೆಯಾಗಿದ್ದರೆ, ಉಳಿದ ಡೋಸ್’ಗಳು ಎಲ್ಲಿ ಹೋದವು?
ಇನ್ನು ಮುಂದೆ ನೋಡುತ್ತಾ ಹೋದರೆ, ಈ 5.98 ಕೋಟಿಯಲ್ಲಿ 5.1 ಕೋಟಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಹಾಗೂ 0.9 ಕೋಟಿ ಭಾರತ್ ಬಯೋಟೆಕ್’ನ ಕೊವ್ಯಾಕ್ಸಿನ್ ಉತ್ಪಾದನೆಯಾಗಿದೆ. ಹಾಗಾದರೆ, 6.5 ಕೋಟಿ ಕೋವಿಶೀಲ್ಡ್ ಹಾಗೂ ಎರಡು ಕೋಟಿಗೂ ಹೆಚ್ಚು ಕೊವ್ಯಾಕ್ಸಿನ್ ಉತ್ಪಾದಿಸಲಾಗುತ್ತಿದೆ ಎಂಬ ಅಫಿಡವಿಟ್ ಕಥೆ ಏನಾಯ್ತು?
ಈ ಅಂಕಿ ಅಂಶಗಳನ್ನು ಗಮನಿಸಿದರೆ, ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ನೀಡಿದ್ದ ಭರವಸೆ ಪೊಳ್ಳು ಎಂಬುದು ಸಾಬೀತಾಗುತ್ತದೆ.
ರಾಜ್ಯ ಸರ್ಕಾರಗಳನ್ನು ಮೊದಲಿನಿಂದಲು ಕತ್ತಲಲ್ಲಿಯೇ ಇಟ್ಟುಕೊಂಡು ಬಂದಿರುವ ಕೇಂದ್ರ ಸರ್ಕಾರವು, ‘ಧನಾತ್ಮಕ ಆಶಾಭಾವನೆಯ’ ಸುಳ್ಳಿನ ಪರದೆಯನ್ನು ಜನರ ಮುಂದೆ ಪ್ರದರ್ಶಿಸುತ್ತಲೇ ಬಂದಿದೆ. ಜನರನ್ನು, ನ್ಯಾಯಾಂಗವನ್ನು ಕಟು ವಾಸ್ತವದಿಂದ ದೂರವಿಟ್ಟು, ತಾನು ಹೇಳಿದ್ದೇ ಸತ್ಯ ಎಂದು ಕಹಿ ಮಾತ್ರೆಗೆ ಸಕ್ಕರೆಯ ಲೇಪನ ಹಚ್ಚಿ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡುತ್ತಿದೆ.
ಇಷ್ಟೆಲ್ಲಾ ವಿಚಾರವನ್ನು ಸಮಗ್ರವಾಗಿ ಹೇಳಬೇಕಾದರೆ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಕೇಂದ್ರ ಸರ್ಕಾರ ಹಾಲಿಗೆ ನೀರು ಬೆರೆಸಿದಂತೆ ಲಸಿಕೆ ಉತ್ಪಾದನೆಯ ಅಂಕಿ ಅಂಶಗಳಿಗೆ ನೀರು ಸೇರಿಸುತ್ತಾ ಹಂಚುತ್ತಿತ್ತು. ಮೇ ತಿಂಗಳಿನಲ್ಲಿಯೇ ಲಸಿಕಾ ಅಭಿಯಾನ ಅಂದುಕೊಂಡ ಮಟ್ಟ ತಲುಪದಿದ್ದರೆ, ಜೂನ್ ತಿಂಗಳಲ್ಲಿ ೧೨ ಕೋಟಿ ಲಸಿಕೆ ಉತ್ಪಾದಿಸುವ ಗುರಿ ತಲುಪಲು ಸಾಧ್ಯವೇ? ಅಥವಾ ಕೊನೆಯಲ್ಲಿ ಇದಕ್ಕೂ ಎಳ್ಳು ನೀರು ಬಿಡಲು ಕೇಂದ್ರ ಸಜ್ಜಾಗುವುದೇ..