ಕೇರಳದ ಪಾಲಿಗೆ KSRTC ಟ್ರೇಡ್‌ಮಾರ್ಕ್: ದಶಕಗಳ ವ್ಯಾಜ್ಯ ಇತ್ಯರ್ಥ

KSRTC ಟ್ರೇಡ್‌ ಮಾರ್ಕ್‌ ವಿವಾದ ಕೊನೆಗೂ ಬಗೆಹರಿದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಹಾಗೂ ಕೇರಳ ರಾಜ್ಯ ರಸ್ತೆ ಸಾರಿಗೆ ಇವೆರಡೂ KSRTC ಎಂಬ ಟ್ರೇಡ್ಢ್‌ ಮಾರ್ಕ್‌ ಅನ್ನೇ ಬಳಸುತ್ತಿರುವುದರಿಂದ ಎರಡೂ ಸಂಸ್ಥೆಗಳ ನಡುವೆ ವಿವಾದ ತಲೆದೋರಿತ್ತು. ಈ ಕುರಿತು ಕರ್ನಾಟಕ ಸಾರಿಗೆ ಸಂಸ್ಥೆಯು ಕೇಂದ್ರ ಟ್ರೇಡ್‌ ಮಾರ್ಕ್‌ ನೋಂದಣಿ ಸಂಸ್ಥೆಯ ಮೆಟ್ಟಿಲೇರಿತ್ತು. ಸುದೀರ್ಘ ವರ್ಷಗಳ ಕಾನೂನು ಸಮರದ ಬಳಿಕವೂ ಕರ್ನಾಟಕ ಸಾರಿಗೆ KSRTC ಟ್ರೇಡ್‌ ಮಾರ್ಕ್‌ಅನ್ನು ಕಳೆದುಕೊಂಡಿದೆ.

ಕರ್ನಾಟಕ-ಕೇರಳ ಜನರ ದೈನಂದಿನ ಬದುಕಿನ ಆಗುಹೋಗುಗಳ ಭಾಗವಾಗಿರುವ ಈ ಎರಡೂ ಸಂಸ್ಥೆಗಳ ನಡುವಿನ ಕಾನೂನು ಸಮರ ಪ್ರಾರಂಭವಾಗಿರುವುದು 1994 ರಲ್ಲಿ. ‘KSRTC’ ಟ್ರೇಡ್‌ ಮಾರ್ಕ್‌ಅನ್ನು ಬಳಸದಂತೆ ಕರ್ನಾಟಕವು ಕೇರಳಕ್ಕೆ ನೋಟಿಸ್‌ ನೀಡಿದ ಬೆನ್ನಲ್ಲಿ ಕೇರಳ ಸಂಸ್ಥೆಯೂ ಕಾನೂನು ಸಮರಕ್ಕೆ ಇಳಿದಿತ್ತು. ಕರ್ನಾಟಕ ಸಾರಿಗೆ ಸಂಸ್ಥೆ ‘KSRTC’ ಟ್ರೇಡ್‌ ಮಾರ್ಕ್‌ಅನ್ನು ಬಳಸುವ ಮೊದಲೇ ತಾನು ಅದನ್ನು ಬಳಸಿಕೊಳ್ಳುತ್ತಿರುವುದಾಗಿ ಕೇರಳ ವಾದ ಮಾಡಿ ಟ್ರೇಡ್‌ ಮಾರ್ಕ್‌ಅನ್ನು ತನ್ನದಾಗಿಸಿಕೊಂಡಿದೆ..

1965 ರಲ್ಲೇ ತ್ರಿವಾಂಕೂರು ರಾಜ್ಯ ಸಾರಿಗೆ ಇಲಾಖೆ (TSTD) ಇಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆ (KSRTC) ಎಂಬ ಹೆಸರಿಗೆ ಕೇರಳ ಸಾರಿಗೆ ಸಂಸ್ಥೆಯು ಬದಲಾಯಿಸಿಕೊಂಡಿತ್ತು. ಆದರೆ ಕರ್ನಾಟಕವು Mysore Government Road Transport Department ಎಂಬ ಹೆಸರಿನಿಂದ KSRTCಗೆ ಬದಲಾಯಿಸಿಕೊಂಡದ್ದು 1973 ರಲ್ಲಿ. ಹಾಗಾಗಿ, ಕೇರಳ ಸಾರಿಗೆ ಸಂಸ್ಥೆಯು ಮೊದಲೇ ಈ ಟ್ರೇಡ್‌ ಮಾರ್ಕ್‌ ಅನ್ನು ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಟ್ರೇಡ್ ಮಾರ್ಕ್‌ ನೋಂದಣಿ ಸಂಸ್ಥೆಯು ಕೇರಳದ ಪರವಾಗಿ ತೀರ್ಪು ನೀಡಿದೆ

ತೀರ್ಪು ಬಂದ ಬೆನ್ನಲ್ಲಿ, ಕೆಎಸ್‌ಆರ್‌ಟಿಸಿ ಎಂಡಿ ಮತ್ತು ಕೇರಳ ಸಾರಿಗೆ ಕಾರ್ಯದರ್ಶಿ ಬಿಜು ಪ್ರಭಾಕರ್ ಅವರು ತಮ್ಮ ಬಸ್‌ಗಳಲ್ಲಿ ಬ್ರಾಂಡ್ ಹೆಸರನ್ನು ಬಳಸುವುದನ್ನು ನಿಲ್ಲಿಸುವಂತೆ ಕೋರಿ ಕರ್ನಾಟಕ ಸಾರಿಗೆ ನಿಗಮಕ್ಕೆ ನೋಟಿಸ್ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಎರಡೂ ರಾಜ್ಯದ ಜನತೆಯ ಅಭಿಮಾನದ ಸಂಸ್ಥೆಗಳಾಗಿರುವ ಕಾರಣ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಂಸ್ಥೆಯ ಗೆಲುವಿನ ಪರ ಕೇರಳಿಗರು ಸಂಭ್ರಮಪಟ್ಟರೆ, ದೇಶದಲ್ಲೇ ನಂಬರ್‌ 1 ಸ್ಥಾನದಲ್ಲಿರುವ ಕರ್ನಾಟಕ ಸಾರಿಗೆ ಸಂಸ್ಥೆಯ ಸ್ಥಾನವನ್ನು ಉಲ್ಲೇಖಿಸಿ ಕನ್ನಡಿಗರು ಅಭಿಮಾನ ಪಟ್ಟುಕೊಳ್ಳುತ್ತಿದ್ದಾರೆ.

ಇನ್ನೂ ಕೆಲವರು, ಇದನ್ನು ಭಾವನಾತ್ಮಕವಾಗಿ ನೋಡಬಾರದು. ಭಾವನಾತ್ಮಕವಾಗಿ ಈ ಕುರಿತು ಪರವಿರೋಧ ಚರ್ಚೆ ಮಾಡುವ ಬದಲು ನಮ್ಮ ದೇಶದಲ್ಲಿ ಒಂದು ವ್ಯಾಜ್ಯೆ ಇತ್ಯರ್ಥವಾಗಲು ಇಷ್ಟು ಸಮಯ ಏಕೆ ತೆಗೆದುಕೊಳ್ಳಬೇಕಾಯಿತು ಎಂಬುದನ್ನು ಆಲೋಚಿಸಬೇಕು, ಆ ನಿಟ್ಟಿನಲ್ಲಿ ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ನಾವೆಲ್ಲರೂ ಮುಂದೆ ಸಾಗಬೇಕು ಎಂದು ಕರೆ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿ ಟ್ರೇಡ್‌ ಮಾರ್ಕ್‌ ಕಳೆದುಕೊಳ್ಳುವುದಲ್ಲ, ಸಾರಿಗೆ ಸಂಸ್ಥೆಯನ್ನು ಕಳೆದುಕೊಳ್ಳುವುದು ನಮ್ಮ ಆತಂಕಕ್ಕೆ ಕಾರಣವಾಗಬೇಕು ಎಂದು ಕೆಲವು ನೆಟ್ಟಿಗರು ಸಂಸ್ಥೆಯ ಖಾಸಗೀಕರಣದ ಹುನ್ನಾರದ ವಿರುದ್ಧ ಎಚ್ಚರಗೊಳ್ಳುವಂತೆ ಕರೆ ನೀಡಿದ್ದಾರೆ.

ಕರ್ನಾಟಕ – ಕೇರಳ ಸಾರಿಗೆಯಲ್ಲಿ ಪೈಪೋಟಿ ಏನಿಲ್ಲ: ಡಿಸಿಎಂ ಸವದಿ ಸ್ಪಷ್ಟನೆ

ಕೇರಳವು ಕೆಎಸ್ಆರ್ಟಿಸಿ ಎಂಬ ಶಬ್ದವನ್ನು ತಾವೇ ಮೊದಲು ಬಳಸಿದ್ದರಿಂದ ಕರ್ನಾಟಕವು ಈ ಶಬ್ದವನ್ನು ಬಳಸಬಾರದು ಎಂದು ತಕರಾರು ತೆಗೆದ ಬಗ್ಗೆ ಈಗ ಟ್ರೇಡ್ಮಾರ್ಕ್ ರಿಜಿಸ್ಟ್ರಿಯು ತೀರ್ಪು ನೀಡಿದೆ ಎಂದು ಮಾಹಿತಿ ಬಂದಿದೆ. ಆದರೆ ಈ ತೀರ್ಪಿನಲ್ಲಿ ಏನಿದೆ ಎಂಬ ಅಂಶವು ನಮಗೆ ಅಧಿಕೃತವಾಗಿ ಇನ್ನೂ ಬಂದಿಲ್ಲ, ಅದು ಲಭ್ಯವಾದ ನಂತರ ಕರ್ನಾಟಕ ರಾಜ್ಯದ ಮುಂದಿನ ನಿಲುವು ಮತ್ತು ಕಾನೂನು ಹೋರಾಟ ಏನು ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು ಎಂದು ಡಿಸಿಎಂ, ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ನಮ್ಮದು ಒಕ್ಕೂಟ ವ್ಯವಸ್ಥೆ ಎಂದರೆ ಫೆಡರಲ್ ಸಿಸ್ಟಮ್. ಒಂದು ರಾಜ್ಯವು ಮತ್ತೊಂದು ರಾಜ್ಯದ ಜೊತೆಗೆ ಯಾವುದೇ ಸಂಘರ್ಷವಿಲ್ಲದೆ ಸೌಹಾರ್ದಯುತವಾಗಿ ಸಂಬಂಧವನ್ನು ಇಟ್ಟುಕೊಂಡು ಹೋಗಬೇಕೆಂದು ಈ ಫೆಡರಲ್ ಸಿಸ್ಟಮ್ ಹೇಳುತ್ತದೆ. ಆದರೆ ದುರದೃಷ್ಟವಶಾತ್ ಈ ವಿವಾದ ಅನಗತ್ಯವಾಗಿ ಎದ್ದಿದೆ. ಏಕೆಂದರೆ ಖಾಸಗಿ ಸಂಸ್ಥೆಗಳಲ್ಲಾದರೆ ಈ ರೀತಿಯ ಹೆಸರು ಅಥವಾ ಟ್ರೇಡ್ಮಾರ್ಕ್ ಗಳಿಂದ ಅವರ ವ್ಯವಹಾರ ಮತ್ತು ಲಾಭಗಳ ಮೇಲೆ ಪ್ರಭಾವ ಬೀಳುತ್ತದೆ. ಆದರೆ ಸರ್ಕಾರಿ ಸಂಸ್ಥೆಗಳು ಹಾಗಲ್ಲ. ಇಲ್ಲಿ ಜನರ ಸೇವೆಯ ಮುಖ್ಯ. ಕರ್ನಾಟಕವಾಗಲಿ ಕೇರಳವಾಗಲಿ ಪರಸ್ಪರ ಸಾರಿಗೆ ಕ್ಷೇತ್ರದಲ್ಲಿ ಲಾಭಗಳಿಸುವ ಮೇಲಾಟಕ್ಕೆ ಅಥವಾ ಸ್ಪರ್ಧೆಗೆ ಮುಂದಾಗದೆ ಸಾರ್ವಜನಿಕರ ಹಿತಾಸಕ್ತಿ ಮತ್ತು ಸೇವೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿವೆ. ಹೀಗಾಗಿ ಈ ವಿಷಯವನ್ನು ಯಾವುದೇ ರಾಜ್ಯಗಳು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಳ್ಳಬಾರದು. ಇದು ಕೇರಳಕ್ಕೆನು ಸಂಭ್ರಮಪಡುವಂತ ವಿಚಾರವೇನಲ್ಲ. ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ಎಂಬ ಹೆಸರಿದ್ದರೆ ಅದರಿಂದ ಕೇರಳ ರಾಜ್ಯದ ಕೆಎಸ್ಆರ್ಟಿಸಿ ಸಂಸ್ಥೆಗೆ ಯಾವುದೇ ನಷ್ಟವೇನಿಲ್ಲ. ಕರ್ನಾಟಕವು ಕೇರಳದ ಸಾರಿಗೆ ಸಂಸ್ಥೆಗಳೊಂದಿಗೆ ಯಾವತ್ತೂ ಪೈಪೋಟಿಗೆ ಇಳಿದಿದ್ದಿಲ್ಲ. ಎಂಬುದನ್ನು ಕೇರಳ ಮೊದಲು ಅರ್ಥಮಾಡಿಕೊಳ್ಳಬೇಕು. ಇಂತಹ ವಿಷಯಗಳಲ್ಲಿ ಅನಗತ್ಯವಾಗಿ ವಿವಾದಗಳನ್ನು ಹೆಚ್ಚು ಮಾಡುತ್ತಾ ಪರಸ್ಪರ ರಾಜ್ಯಗಳಲ್ಲಿ ವಿವಾದಗಳನ್ನು ಬೆಳೆಸುವ ಪರಿಪಾಠಕ್ಕೆ ನಾವೆಲ್ಲರೂ ಅಂತ್ಯ ಹಾಡಬೇಕು. ದೇಶದ ಹಿತದೃಷ್ಟಿಯಿಂದ ರಾಜ್ಯ ರಾಜ್ಯಗಳ ನಡುವಿನ ಬಾಂಧವ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾದ ವಿಷಯ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...