ಕೋವಿಡ್ ಮುಕ್ತ ಜಿಲ್ಲೆಯಾಗುವತ್ತ ಚಾಮರಾಜನಗರ ದಾಪುಗಾಲು

ಕಳೆದ ಮೇ 2 ರಂದು ರಾತ್ರಿ ಆಕ್ಸಿಜನ್ ಕೊರತೆಯಿಂದಾಗಿ 24 ಜನ ಸೋಂಕಿತರು ಮೃತಪಟ್ಟಿದ್ದ ವಿಷಯ ರಾಷ್ಟ್ರದ ಪ್ರಮುಖ ಪತ್ರಿಕೆಗಳಲ್ಲಿ ರಾರಾಜಿಸುತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವರು,ಆರೋಗ್ಯ ಸಚಿವರು ಎಲ್ಲರೂ ಜಿಲ್ಲೆಗೆ  ದೌಡಾಯಿಸಿ ಬಂದರು. ಆಗ ಆಕ್ಸಿಜನ್ ಕೊರತೆಗೆ ಕಾರಣರಾರು ಎಂಬ ವಿಷಯದ ಬಗ್ಗೆ ಚರ್ಚೆಯೂ ನಡೆಯಿತು. ನಂತರ ಎಲ್ಲ ಘಟನೆಗಳಂತೆ ದಿನ ಕಳೆದಂತೆ ಈ ದುರಂತವೂ ಜನರ ಮನಸ್ಸಿನಿಂದ ಮರೆಯಾಗುತ್ತದೆ ಎಂಬ ಭಾವನೆ ಎಲ್ಲರಲ್ಲೂ ಇತ್ತು. ಆದರೆ ದುರಂತದ ನಂತರ ಬಹುಶಃ ಹೈ ಕೋರ್ಟಿನಿಂದ ನಡೆಯುತ್ತಿರುವ ನ್ಯಾಯಾಂಗ ತನಿಖೆಯ ಕಾರಣದಿಂದಲೋ ಅಥವಾ ಆಡಳಿತ ಯಂತ್ರ ಚುರುಕಾಗಿರುವುದರಿಂದಲೋ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಈ ಜಿಲ್ಲೆ ಇಂದು ನಿಜಕ್ಕೂ ಒಂದಷ್ಟು ಅಭಿವೃದ್ದಿಯ್ನೂ ಕಾಣುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್ ಇಲ್ಲಿಯೇ ಮೊಕ್ಕಾಂ ಹೂಡಿ ಕೋವಿಡ್ ನಿಯಂತ್ರಣಾ ಕ್ರಮಗಳನ್ನು ಅವಲೋಕಿಸುತಿದ್ದಾರೆ, ಮಾರ್ಗ ದರ್ಶನ ನೀಡುತಿದ್ದಾರೆ. ಇದು ಜನತೆಯಲ್ಲೂ ಒಂದಷ್ಟು ಭರವಸೆಯನ್ನು ಹೆಚ್ಚಿಸಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್ ಅವರು  ಜಿಲ್ಲೆಯಲ್ಲಿ ಒಟ್ಟು 503 ಗ್ರಾಮಗಳಿದ್ದು, ಈ ಪೈಕಿ 210 ಗ್ರಾಮಗಳು ಕೋವಿಡ್ ಮುಕ್ತ ಗ್ರಾಮಗಳಾಗಿವೆ ಎಂದು  ಹೇಳಿದರು. ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದ ಜೀರಿಗದ್ದೆ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ‘ಇತ್ತೀಚಿನ ದಿನಗಳಲ್ಲಿ ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಕೋವಿಡ್ ನಿಯಂತ್ರಣ ಮಾಡುವುದು ಆದ್ಯ ಕರ್ತವ್ಯ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಕೋವಿಡ್ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿಯನ್ನು ಕೊರೊನಾ ಮುಕ್ತವನ್ನಾಗಿಸಬೇಕು’ ಎಂದು ಸೂಚಿಸಿದರು.

‘ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿಯಲ್ಲಿ 23 ಗ್ರಾಮಗಳಿದ್ದು, ಇದರಲ್ಲಿ 16 ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ. ಕೆಲವು ಗ್ರಾಮಗಳಲ್ಲಿ ಕೋವಿಡ್ ನಿಯಮ ಪಾಲಿಸದ ಪರಿಣಾಮ ಸೋಂಕು ಕಂಡು ಬಂದಿದೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಿ ಸೋಂಕು ತಡೆಯಲು ಮುಂದಾಗಬೇಕು ಎಂದರು.

 ಇಲ್ಲಿನ ಹಾಡಿಗಳಲ್ಲಿ ವಾಸಿಸುವ ಆದಿವಾಸಿ ಸೋಲಿಗ ಜನಾಂಗದವರು ಕೋವಿಡ್ ನಿರೋಧಕ ಲಸಿಕೆ ಪಡೆಯಲು ಹಿಂಜರಿಯುತ್ತಿರುವುದರ ಬೆನ್ನಲ್ಲೇ ತಾವೇ ಸ್ವತಃ ಹಾಡಿಗಳಿಗೆ ಭೇಟಿ ನೀಡುತ್ತಿರುವ ಸುರೇಶ್ ಕುಮಾರ್ ಮಂಗಳವಾರ ಹನೂರು ತಾಲ್ಲೂಕಿನ ವಿವಿಧ ಗಿರಿಜನರ ಹಾಡಿಗಳು ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಿದರು. ಕೋವಿಡ್ ನಿಯಂತ್ರಣ ಸಂಬಂಧ ಪರಿಶೀಲಿಸಿದರು. ಹಲವು ಗ್ರಾಮಗಳಲ್ಲಿ ಸಭೆ ನಡೆಸಿದರು.ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇಬಿನಕೋಬೆ ಗಿರಿಜನರ ಹಾಡಿಗೆ ಭೇಟಿ ನೀಡಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಗಿರಿಜನರಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರದ ಬಗ್ಗೆ ಖುದ್ದು ಪರಿಶೀಲಿಸಿದರು. ಸಿಂಗನಲ್ಲೂರು ಗ್ರಾಮಕ್ಕೂ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಿದರು.ಹಾಡಿಗಳಲ್ಲಿ ಗಿರಿಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದರಿಂದ, ಅವರಿಗಾಗಿ ಪ್ರತ್ಯೇಕ ಲಸಿಕೆ ನೀಡುವ ವಿಶೇಷ ಆಂದೋಲನ ಕೈಗೊಳ್ಳಬೇಕು ಎಂದು ಸಚಿವ ಎಸ್.ಸುರೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ನಡುವೆ ರಾಜ್ಯ ಅರೋಗ್ಯ ಇಲಾಖೆಯೂ ಕೂಡ ಜಿಲ್ಲೆಯ ವಿವಿಧ ತಾಲ್ಲೂಕುಗಳ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ   ಎಂಬಿಬಿಎಸ್ ವೈದ್ಯರನ್ನು ನಿಯುಕ್ತಿ ಮಾಡಿ   ಆದೇಶ ಹೊರಡಿಸಿದೆ.  ರಾಜ್ಯದಾದ್ಯಂತ 1,048 ವೈದ್ಯರನ್ನು ಆರೋಗ್ಯ ಇಲಾಖೆ ನೇಮಕ ಮಾಡಿದ್ದು, ಜಿಲ್ಲೆಗೆ 25 ಮಂದಿಯನ್ನು ನಿಯುಕ್ತಿಗೊಳಿಸಲಾಗಿದೆ. ಹಲವು ತಿಂಗಳುಗಳಿಂದ ವೈದ್ಯರು ಇಲ್ಲದೇ ಇದ್ದ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ತೀರಾ ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಿಗೆ ವೈದ್ಯರ ನೇಮಕವಾಗಿದೆ. ಆರೋಗ್ಯ ಇಲಾಖೆಯ ಈ ನಿರ್ಧಾರದಿಂದಾಗಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆ ಇನ್ನಷ್ಟು ಸುಧಾರಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ವೈದ್ಯರ ಕೊರತೆಯಿಂದ ಬಳಲಿದ್ದ ಜಿಲ್ಲಾ ಆರೋಗ್ಯ ಇಲಾಖೆಗೂ ಇದರಿಂದ ಒಂದಷ್ಟು ಬಲ ಬಂದಿದೆ. ಜಿಲ್ಲೆಯಲ್ಲಿ 60 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಪೈಕಿ ಏಳು ಕೇಂದ್ರಗಳಲ್ಲಿ ವೈದ್ಯರೇ ಇರಲಿಲ್ಲ. ಉಳಿದ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರು ಇಲ್ಲದ ಕಡೆಗಳಲ್ಲಿ ಆಯುಷ್ ವೈದ್ಯರನ್ನು ನೇಮಿಸಲಾಗಿತ್ತು. 

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೇ ಗ್ರಾಮೀಣ ಜನರಿಗೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿರಲಿಲ್ಲ. ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ತಾಲ್ಲೂಕು ಅಥವಾ ಜಿಲ್ಲಾಸ್ಪತ್ರೆಗಳಿಗೆ ಬರಬೇಕಿತ್ತು. ಲಕ್ಷಾಂತರ ಭಕ್ತರು ಬರುವ ಮಹದೇಶ್ವರ ಬೆಟ್ಟದಲ್ಲಿ ಹಲವು ತಿಂಗಳುಗಳಿಂದ ಪೂರ್ಣ ಪ್ರಮಾಣದಲ್ಲಿ ವೈದ್ಯರಿಲ್ಲದೇ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಈಗ ಈ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಾಯಂ ವೈದ್ಯರ ನೇಮಕವಾಗಿದೆ.

ಈ ಬಗ್ಗೆ   ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು, ‘ಏಳು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಿಟ್ಟು ಉಳಿದ ಎಲ್ಲ ಕಡೆಗಳಲ್ಲಿ ವೈದ್ಯರು ಇದ್ದರು. ಎಂಬಿಬಿಎಸ್ ವೈದ್ಯರು ಇಲ್ಲದ ಕಡೆಗಳಲ್ಲಿ ಆಯುಷ್ ವೈದ್ಯರು ಇದ್ದರು. ಇನ್ನೂ ಕೆಲವು ಕಡೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದರು. ಗುತ್ತಿಗೆ ಆಧಾರದಲ್ಲಿರುವ ಕೆಲವು ವೈದ್ಯರ ಸೇವೆ ಈಗ ಕಾಯಂ ಆಗಿದೆ’ ಎಂದು ಹೇಳಿದರು. ‘15 ದಿನಗಳ ಒಳಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಇಲಾಖೆ ವೈದ್ಯರಿಗೆ ಸೂಚಿಸಿದೆ. ಎಷ್ಟು ಮಂದಿ ವೈದ್ಯರು ಸೂಚಿತ ಜಾಗದಲ್ಲಿ ಕರ್ತವ್ಯ ನಿರ್ವಹಿಸಲು ಮುಂದೆ ಬರುತ್ತಾರೆ ಎಂಬುದನ್ನು ನೋಡಬೇಕು’ ಎಂದು ಅವರು ಹೇಳಿದರು.  ಸೋಲಿಗ ಸಮುದಾಯಕ್ಕೆ ಲಸಿಕೆ ನೀಡಲು ಪ್ರತ್ಯೇಕ ಆಂದೋಲನ ನಡೆಸುವುದರಿಂದ ಲಸಿಕೆ ನೀಡಿಕೆ ಪ್ರಮಾಣದಲ್ಲೂ  ಜಿಲ್ಲೆಯು ಹೆಚ್ಚು ಪ್ರಗತಿ ಸಾಧಿಸಲಿದೆ. 24 ಜನರ ಬಲಿಯ ನಂತರವಾದರೂ ರಾಜ್ಯ ಸರ್ಕಾರ ಈ ಹಿಂದುಳಿದ ಜಿಲ್ಲೆಗೆ ವಿಶೇಷ ಅಸ್ಥೆ ವಹಿಸಿರುವುದು ನಿಜಕ್ಕೂ ಜನತೆಗೆ ನೆಮ್ಮದಿ ನೀಡಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...