ಭಾರತದಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ ಶ್ರೀಲಂಕಾ ತಮಿಳರು, ಟಿಬೆಟಿಯನ್ನರು ಹಾಗೂ ನೆರೆ ರಾಷ್ಟ್ರಗಳ ಅಲ್ಪಸಂಖ್ಯಾತ ನಿರಾಶ್ರಿತರು ಸೇರಿದಂತೆ ಹಲವು ವರ್ಗಗಳ ವಿದೇಶಿ ಪ್ರಜೆಗಳಿಗೆ ಪಾಸ್‌ಪೋರ್ಟ್ (passport) ಮತ್ತು ವೀಸಾ ನಿಯಮಗಳಲ್ಲಿ ಕೇಂದ್ರ ಸರ್ಕಾರ (Central government )ಮಹತ್ವದ ವಿನಾಯಿತಿ ನೀಡಿದೆ. ಈ ಕುರಿತು ಅಧಿಕೃತ ಗೆಜೆಟ್‌ನಲ್ಲಿ ‘ವಲಸೆ ಮತ್ತು ವಿದೇಶಿಯರು (ವಿನಾಯಿತಿ) (ತಿದ್ದುಪಡಿ) ಆದೇಶ, 2026’ ಅನ್ನು ಪ್ರಕಟಿಸಲಾಗಿದ್ದು, ನೆರೆಯ ನೇಪಾಳ ಮತ್ತು ಭೂತಾನ್ ದೇಶಗಳ ಪ್ರಯಾಣಿಕರ ಗುರುತಿನ ಚೀಟಿ ನಿಯಮಗಳಲ್ಲೂ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಲಾಗಿದೆ.
ಪಾಕಿಸ್ತಾನಿ ನಾಗರಿಕರು ಮತ್ತು ಮಲೇಷ್ಯಾ, ಸಿಂಗಾಪುರದ ಮೂಲ ಭಾರತೀಯರಿಗೆ ವಿನಾಯಿತಿ
ಹೊಸ ನಿಯಮಾವಳಿಗಳ ಅನ್ವಯ, ಶಾಶ್ವತವಾಗಿ ನೆಲೆಸುವ ಉದ್ದೇಶದಿಂದ 2009ರ ಡಿಸೆಂಬರ್ 31 ಅಥವಾ ಅದಕ್ಕಿಂತ ಮೊದಲು ಭಾರತಕ್ಕೆ ಬಂದ ಪಾಕಿಸ್ತಾನಿ ಪ್ರಜೆಗಳು, ಪಾಕಿಸ್ತಾನದ ಗಣಕೀಕೃತ ರಾಷ್ಟ್ರೀಯ ಗುರುತಿನ ಚೀಟಿ (ಸಿಎನ್‌ಐಸಿ) ಹೊಂದಿಲ್ಲದ ಕಾರಣಕ್ಕೆ ತಮ್ಮ ಪಾಸ್‌ಪೋರ್ಟ್ ನವೀಕರಿಸಲು ಸಾಧ್ಯವಾಗದಿದ್ದರೆ, ಅವರಿಗೆ ಪಾಸ್‌ಪೋರ್ಟ್ ನವೀಕರಣದಿಂದ ವಿನಾಯಿತಿ ನೀಡಲಾಗಿದೆ. ಇದೇ ವೇಳೆ, ದೇಶ ವಿಭಜನೆಯ ನಂತರ ಅಂದರೆ 1947ರ ಆಗಸ್ಟ್ 15 ರಿಂದ 1965ರ ಡಿಸೆಂಬರ್ 31ರ ನಡುವೆ ಪಾಕಿಸ್ತಾನಕ್ಕೆ ವಲಸೆ ಹೋಗಿ, ನಂತರ 2009ರ ಡಿಸೆಂಬರ್ 31ರೊಳಗೆ ಭಾರತಕ್ಕೆ ಮರಳಿ ಕೇರಳದಲ್ಲಿ ನೆಲೆಸಿರುವ ಮುಸ್ಲಿಂ ಸಮುದಾಯದ ನಿರ್ದಿಷ್ಟ ಪುರುಷ ನಾಗರಿಕರಿಗೂ ಈ ಸಡಿಲಿಕೆ ಅನ್ವಯವಾಗಲಿದೆ. ಆದರೆ ಅವರು ಪಾಕಿಸ್ತಾನದಲ್ಲಿ ವಿವಾಹವಾಗಿರಬಾರದು, ಅಲ್ಲಿ ಯಾವುದೇ ಸ್ಥಿರಾಸ್ತಿ ಹೊಂದಿರಬಾರದು ಮತ್ತು ಅವರ ಕುಟುಂಬದ ಸದಸ್ಯರು ಭಾರತೀಯ ಪ್ರಜೆಗಳಾಗಿರಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಇದರೊಂದಿಗೆ, ಮಲೇಷ್ಯಾ ಅಥವಾ ಸಿಂಗಾಪುರ ಪೌರತ್ವ ಪಡೆದು, ನಂತರ ಅವಧಿ ಮೀರಿದ ಪಾಸ್‌ಪೋರ್ಟ್‌ಗಳೊಂದಿಗೆ 2009ರ ಡಿಸೆಂಬರ್ 31ರೊಳಗೆ ಭಾರತಕ್ಕೆ ಮರಳಿರುವ ಭಾರತೀಯ ಮೂಲದ ವ್ಯಕ್ತಿಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಈ ಎಲ್ಲ ವರ್ಗದವರು ಭಾರತದಲ್ಲಿ ಮುಂದುವರಿಯಲು ಸೂಕ್ತ ವೀಸಾ ಪಡೆಯಬೇಕಾಗುತ್ತದೆ.
ಅಲ್ಪಸಂಖ್ಯಾತ ನಿರಾಶ್ರಿತರು, ಶ್ರೀಲಂಕಾ ತಮಿಳರು ಮತ್ತು ಟಿಬೆಟಿಯನ್ನರಿಗೆ ನೆರವು
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2024ರ ಡಿಸೆಂಬರ್ 31ರೊಳಗೆ ಭಾರತಕ್ಕೆ ಪ್ರವೇಶಿಸಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯಗಳ ನಿರಾಶ್ರಿತರಿಗೆ ಪಾಸ್‌ಪೋರ್ಟ್ ನಿಯಮಗಳಲ್ಲಿ ವಿನಾಯಿತಿ ಕಲ್ಪಿಸಲಾಗಿದೆ. ಮಾನ್ಯವಾದ ದಾಖಲೆಗಳಿಲ್ಲದೆ ಬಂದಿರುವ ಅಥವಾ ದಾಖಲೆಗಳ ಅವಧಿ ಮುಗಿದಿರುವ ಇಂತಹ ನಿರಾಶ್ರಿತರಿಗೆ ಈ ನಿಯಮ ಅನ್ವಯವಾಗಲಿದ್ದು, ಅವರು ಭಾರತದಲ್ಲಿ ವಾಸ್ತವ್ಯ ಮುಂದುವರಿಸಲು ಸೂಕ್ತ ವೀಸಾ ಪಡೆಯುವುದು ಕಡ್ಡಾಯವಾಗಿದೆ. ಇದರ ಜೊತೆಗೆ, 2015ರ ಜನವರಿ 9ರ ಮೊದಲು ಭಾರತಕ್ಕೆ ಆಶ್ರಯ ಕೋರಿ ಬಂದ ನೋಂದಾಯಿತ ಶ್ರೀಲಂಕಾ ತಮಿಳು ನಾಗರಿಕರಿಗೆ ಸಾಮಾನ್ಯ ಪಾಸ್‌ಪೋರ್ಟ್ ಮತ್ತು ವೀಸಾ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ. ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿದ ಪ್ರವೇಶ ಪರವಾನಗಿಗಳ ಮೂಲಕ ಭಾರತಕ್ಕೆ ಬಂದು, ನಂತರ ಸಕ್ಷಮ ಪ್ರಾಧಿಕಾರಗಳಲ್ಲಿ ನೋಂದಾಯಿಸಿಕೊಂಡ ಟಿಬೆಟಿಯನ್ ನಾಗರಿಕರಿಗೂ ಈ ಆದೇಶ ವಿಸ್ತರಣೆಯಾಗಿದೆ.
ನೇಪಾಳ ಮತ್ತು ಭೂತಾನ್ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ
ಭಾರತ, ನೇಪಾಳ ಮತ್ತು ಭೂತಾನ್ ನಡುವಿನ ಗಡಿ ಸಂಚಾರ ನಿಯಮಗಳಲ್ಲೂ ಸ್ಪಷ್ಟನೆ ನೀಡಲಾಗಿದೆ. ಭಾರತೀಯ ಪ್ರಜೆಗಳು ಭೂಮಾರ್ಗ ಅಥವಾ ವಾಯುಮಾರ್ಗದ ಮೂಲಕ ನೇಪಾಳ ಅಥವಾ ಭೂತಾನ್‌ಗೆ ಪ್ರಯಾಣಿಸುವಾಗ ಪಾಸ್‌ಪೋರ್ಟ್ ಬದಲಿಗೆ ಸರ್ಕಾರದ ವೀಸಾ ಕೈಪಿಡಿಯಲ್ಲಿ ನಿರ್ದಿಷ್ಟಪಡಿಸಿದ ಮಾನ್ಯ ಗುರುತಿನ ಚೀಟಿಗಳನ್ನು ಹಾಜರುಪಡಿಸಲು ಅವಕಾಶ ನೀಡಲಾಗಿದೆ. ಇದೇ ಸೌಲಭ್ಯ ಭಾರತಕ್ಕೆ ಬರುವ ಅಥವಾ ಹೋಗುವ ನೇಪಾಳಿ ಮತ್ತು ಭೂತಾನ್ ಪ್ರಜೆಗಳಿಗೂ ಅನ್ವಯವಾಗಲಿದೆ. ಆದರೆ, ಚೀನಾ, ಮಕಾವೊ, ಹಾಂಗ್‌ಕಾಂಗ್ ಅಥವಾ ಪಾಕಿಸ್ತಾನದಿಂದ ಪ್ರಯಾಣ ಆರಂಭಿಸಿದ ಅಥವಾ ಆ ದೇಶಗಳ ಮೂಲಕ ಹಾದುಬರುವ ನೇಪಾಳಿ ಮತ್ತು ಭೂತಾನಿ ನಾಗರಿಕರು ಮಾನ್ಯವಾದ ಪಾಸ್‌ಪೋರ್ಟ್ ಮತ್ತು ವೀಸಾ ಎರಡನ್ನೂ ಕಡ್ಡಾಯವಾಗಿ ಹೊಂದಿರಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಬೆನ್ನುಹುರಿ ನೋವಿಗೆ ಚಿಕಿತ್ಸೆ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ





