ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ರಕಾರ ಏಪ್ರಿಲ್ 1, 2020 ಮತ್ತು ಜೂನ್ 5, 2021 ರ ನಡುವೆ ಕೋವಿಡ್ನಿಂದಾಗಿ ಭಾರತದ 3,621 ಮಕ್ಕಳು ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದರೆ 26,176 ಮಕ್ಕಳು ಇಬ್ಬರಲ್ಲಿ ಒಬ್ಬ ಪೋಷಕರನ್ನು ಕಳೆದುಕೊಂಡಿದ್ದಾರೆ ಮತ್ತು 274 ಮಕ್ಕಳನ್ನು ಕುಟುಂಬದಿಂದ ಕೈಬಿಡಲಾಗಿದೆ. ರಾಜ್ಯ ಸರ್ಕಾರಿ ದಾಖಲೆಗಳ ಪ್ರಕಾರ ಮಾರ್ಚ್ 1, 2020 ಮತ್ತು ಆಗಸ್ಟ್ 2021ರ ನಡುವೆ 115 ಮಕ್ಕಳು ಕೋವಿಡ್ ನಿಂದಾಗಿ ಕರ್ನಾಟಕದಲ್ಲಿ ಅನಾಥರಾಗಿದ್ದಾರೆ.
ಕೋವಿಡ್ನಿಂದ ಅನಾಥರಾದ ಮಕ್ಕಳಿಗೆ PM-CARESನಿಂದ 18 ವರ್ಷ ತುಂಬಿದ ನಂತರ ಮಾಸಿಕ ಸ್ಟೈಫಂಡ್ ಮತ್ತು 23 ವರ್ಷ ತುಂಬಿದಾಗ ₹ 10 ಲಕ್ಷ ರೂಪಾಯಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕರ್ನಾಟಕ ಸರ್ಕಾರದ ಬಾಲ ಸೇವಾ ಯೋಜನೆ ಅಡಿಯಲ್ಲಿ ತಿಂಗಳಿಗೆ 3,500 ರೂ ಮತ್ತು ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ. 10 ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಲ್ಯಾಪ್ಟಾಪ್ಗಳನ್ನು ಉಚಿತವಾಗಿ ನೀಡಲಾಗುತ್ತದೆ.
21 ವರ್ಷ ವಯಸ್ಸಿನ ಹುಡುಗಿಯರಿಗೆ, ಉನ್ನತ ಶಿಕ್ಷಣ, ಸ್ವ-ಉದ್ಯೋಗ ಅಥವಾ ಮದುವೆ ವೆಚ್ಚಗಳಿಗಾಗಿ ಈ ಯೋಜನೆಯಡಿಯಲ್ಲಿ ರೂ 1 ಲಕ್ಷವನ್ನು ನೀಡಲಾಗುತ್ತದೆ ಎಂದು ಸರ್ಕಾರ ಪ್ರಕಟಿಸಿದೆ.
ಇದೀಗ ಸಿಬಿಎಸ್ಇ, ಮುಂದಿನ ವರ್ಷ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ತಮ್ಮ ಪೋಷಕರನ್ನು ಕಳೆದುಕೊಂಡಿದ್ದರೆ ಯಾವುದೇ ನೋಂದಣಿ ಅಥವಾ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಹೇಳಿ ಅಂತಹ ಮಕ್ಕಳ ಪರೀಕ್ಷಾ ಶುಲ್ಕ ಪೂರ್ತಿ ರದ್ದು ಮಾಡಿ ಮಾನವೀಯತೆ ಮೆರೆದಿದೆ.
“ಕೋವಿಡ್ -19 ಸಾಂಕ್ರಾಮಿಕವು ಇಡೀ ದೇಶದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಪೋಷಕರು ಅಥವಾ ಪಾಲಕರು ಅಥವಾ ದತ್ತು ಪಡೆದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳ ಮೇಲೆ ಅದರ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು, ಶೈಕ್ಷಣಿಕ ವರ್ಷ 2021-22ಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಶುಲ್ಕ ಅಥವಾ ನೋಂದಣಿ ಶುಲ್ಕವನ್ನು ಮಂಡಳಿಯು ವಿಧಿಸುವುದಿಲ್ಲ ಎಂದು ನಿರ್ಧರಿಸಿದೆ” ಎಂದು ಸಿಬಿಎಸ್ಇ ಪರೀಕ್ಷಾ ನಿಯಂತ್ರಣಾಧಿಕಾರಿ ಸಂಯಮ್ ಭಾರದ್ವಾಜ್ ಹೇಳಿದ್ದಾರೆ.
” ಶಾಲೆಗಳು 10 ಮತ್ತು 12 ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ಪಟ್ಟಿ ನೀಡುವಾಗ ಇಂತಹ ವಿದ್ಯಾರ್ಥಿಗಳನ್ನು ಪರಿಶೀಲಿಸಿ ವಿವರ ಸಲ್ಲಿಸಲಿವೆ” ಎಂದೂ ಅವರು ಹೇಳಿದ್ದಾರೆ.
ಹತ್ತನೇ ತರಗತಿಯ ಪರೀಕ್ಷಾರ್ಥಿಗಳು 5 ವಿಷಯಗಳಿಗೆ ಅರ್ಜಿ ಶುಲ್ಕವಾಗಿ 1500 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಮತ್ತು ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳು 2500 ರೂಪಾಯಿಗಳನ್ನು ಪಾವತಿಸಬೇಕು.
ದೆಹಲಿಯ ಬಹುತೇಕ ಸರ್ಕಾರಿ ಶಾಲೆಗಳು ಸಿಬಿಎಸ್ಇ ಸಿಲೆಬಸ್ ಹೊಂದಿದ್ದು 2019ರಲ್ಲಿ ಮಂಡಳಿಯು ಪರಿಕ್ಷಾ ಶುಲ್ಕವನ್ನು ದಿಢೀರನೆ ಏರಿಸಿದ್ದಾಗ ದೆಹಲಿ ಸರ್ಕಾರವೇ ಸರ್ಕಾರಿ ಶಾಲೆಯ ಮಕ್ಕಳ ಫೀಸ್ ಭರಿಸಿತ್ತು. ಮತ್ತು ಸುಮಾರು 3,14,000 ರೂಪಾಯಿಗಳನ್ನು ಶುಲ್ಕವಾಗಿ ಪಾವತಿಸಿತ್ತು. ಈ ಬಾರಿ ಸರ್ಕಾರದ ಬೊಕ್ಕಸದಲ್ಲಿ ಹಣದ ಕೊರತೆ ಇರುವುದರಿಂದ ಫೀಸ್ ಕಟ್ಟಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಅಲ್ಲಿನ ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ಚಂದಾ ಸಂಗ್ರಹಿಸಿ ಶುಲ್ಕ ಕಟ್ಟಿದ್ದವು.
ಈಗ ಸಿಬಿಎಸ್ಇ ಕೈಗೊಂಡಿರುವ ನಿರ್ಧಾರದಿಂದಾಗಿ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಖಂಡಿತವಾಗಿಯೂ ಸಹಾಯವಾಗುತ್ತದೆ. ಆದರೆ ಕೋವಿಡ್ 19 ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟು ಮತ್ತು ಅನಿಶ್ಚಿತತೆ ಅಗಾಧವಾಗಿದ್ದು ಹಲವು ವಿದ್ಯಾರ್ಥಿಗಳ ಪೋಷಕರಿಗೆ ದೈನಂದಿನ ಖರ್ಚು ವೆಚ್ಚಗಳನ್ನು ಸರಿದೂಗಿಸುವುದೇ ಕಷ್ಟಕರವಾಗಿದೆ.
ಅಂತಹ ವಿದ್ಯಾರ್ಥಿಗಳಿಗೆ ಈ ನಿರ್ಧಾರದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಕಾಪಾಡುವುದು ಮತ್ತು ಅವರ ಅಗತ್ಯಗಳಿಗೆ ತಕ್ಕಂತೆ ತಮ್ಮ ಕಾರ್ಯ ನಿರ್ವಹಣಾ ವಿಧಾನಗಳನ್ನು ಬದಲಾಯಿಸಿಕೊಳ್ಳುವುದು ಆಯಾ ಸಂಸ್ಥೆಗಳ ಕರ್ತವ್ಯವಾಗಿದ್ದು ಅವು ಸಹ ಸಿಬಿಎಸ್ಇ ಮಂಡಳಿಯಂತೆ ಧನಾತ್ಮಕ ನಿರ್ಧಾರ ಕೈಗೊಂಡರೆ ವಿದ್ಯಾರ್ಥಿಗಳು ನೆಮ್ಮದಿಯ ಉಸಿರು ಬಿಡಬಹುದು.