ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ರಾಜಕೀಯ ಎದುರಾಳಿಗಳನ್ನು ಸದೆಬಡಿಯಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿದೆ. ಇದಕ್ಕೆ ಪೂರಕವೆನಿಸುವಂತೆ ದೇಶದ ವಿವಿಧ ಭಾಗಗಳಲ್ಲಿ ಬಿಜೆಪಿಯೇತರ ಪಕ್ಷಗಳ ನಾಯಕರ ಹಾಗೂ ಸಂಘಟನೆಗಳ ಮೇಲೆ ಇಡಿ, ಸಿಬಿಐ, ಎನ್‌ಐಎ ಸೇರಿದಂತೆ ಕೇಂದ್ರೀಯ ತನಿಖಾ ದಳಗಳ ದಾಳಿಗಳು ನಿರಂತರವಾಗಿದೆ.
ಈ ನಡುವೆ, ದೆಹಲಿ ಅಬಕಾರಿ ನೀತಿ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ವಿರುದ್ಧ ಸಿಬಿಐ ವಿಚಾರಣೆ ತೀವ್ರ ರಾಜಕೀಯ ತಿರುವುಗಳನ್ನು ಪಡೆಯುತ್ತಿದೆ. ಸಿಸೋಡಿಯಾರನ್ನು ಸಿಬಿಐ ಸೋಮವಾರ 9 ಗಂಟೆ ವಿಚಾರಣೆ ನಡೆಸಿದ್ದು, ವಿಚಾರಣೆ ಬಳಿಕ ಮಾತನಾಡಿದ ಸಿಸೋಡಿಯಾ, ಆಮ್ ಆದ್ಮಿ ಪಕ್ಷ ಬಿಡುವಂತೆ ಸಿಬಿಐ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹಾಕಿದ್ದಾರೆ, ಅಲ್ಲದೆ, ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಆಮಿಷ ಒಡ್ಡಿದ್ದಾರೆ ಎಂಬ ಗಂಭೀರ ಆರೋಪ ಹೊರಿಸಿದ್ದಾರೆ.
‘10,000 ಕೋಟಿ ರೂ. ಅಬಕಾರಿ ಹಗರಣ ನಡೆದಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಸಿಬಿಐ ಬಳಿ ಹಗರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ . ಇದು ನಕಲಿ ಪ್ರಕರಣ. ನನ್ನ ವಿರುದ್ಧ ದಾಖಲಿಸಿರುವ ನಕಲಿ ಪ್ರಕರಣವು ದೆಹಲಿಯಲ್ಲಿ ಬಿಜೆಪಿಯ ಆಪರೇಷನ್ ಕಮಲ ಯಶಸ್ವಿಯಾಗಲು ನಡೆಸಿರುವ ಪಿತೂರಿʼ ಸಿಸೋಡಿಯಾ ಹೇಳಿದ್ದಾರೆ.
‘ಎಎಪಿ ತೊರೆಯುವಂತೆ ನನ್ನ ಮೇಲೆ ಒತ್ತಡ ಹೇರಲಾಯಿತು. ದೆಹಲಿ ಸಿಎಂ ಸ್ಥಾನ ಅಥವಾ ಜೈಲು ಶಿಕ್ಷೆ ಯಾವುದು ಬೇಕೊ ಆಯ್ಕೆ ಮಾಡಿಕೊಳ್ಳಿ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ’ಎಂದು ಸಿಸೋಡಿಯಾ ಗಂಭೀರ ಆರೋಪ ಹೊರಿಸಿದ್ದಾರೆ.
ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದ್ದು, ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಮದ್ಯದಂಗಡಿ ಪರವಾನಗಿಗಾಗಿ ಖಾಸಗಿ ವ್ಯಕ್ತಿಗಳು ರಾಜಕೀಯ ಮುಖಂಡರಿಗೆ ಕಿಕ್ ಬ್ಯಾಕ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪ ನಿರಾಕರಿಸಿದ ಸಿಬಿಐ
ವಿಚಾರಣೆ ವೇಳೆ ಎಎಪಿ ತೊರೆಯಲು ಒತ್ತಡ ಹಾಕಲಾಯಿತು ಎಂಬ ಮನೀಶ್ ಸಿಸೋಡಿಯಾ ಮಾಡಿರುವ ಆರೋಪವನ್ನು ಸಿಬಿಐ ತಳ್ಳಿ ಹಾಕಿದ್ದು, ಎಫ್‌ಐಆರ್‌ನಲ್ಲಿರುವ ಆರೋಪಗಳು ಮತ್ತು ತನಿಖೆಯ ಸಂದರ್ಭದಲ್ಲಿ ಇದುವರೆಗೆ ಸಂಗ್ರಹಿಸಲಾದ ಸಾಕ್ಷ್ಯಗಳ ಕುರಿತು ಮಾತ್ರ ಸಿಸೋಡಿಯಾ ಅವರನ್ನು ಪ್ರಶ್ನಿಸಲಾಗಿದೆ ಎಂದು ತಿಳಿಸಿದೆ.
‘ಸಿಬಿಐ ಈ ಆರೋಪಗಳನ್ನು ಬಲವಾಗಿ ನಿರಾಕರಿಸುತ್ತದೆ. ಎಫ್‌ಐಆರ್‌ನಲ್ಲಿ ಅವರ ವಿರುದ್ಧದ ಆರೋಪಗಳ ಅನ್ವಯ ಸಿಸೋಡಿಯಾ ಅವರ ವಿಚಾರಣೆಯನ್ನು ವೃತ್ತಿಪರ ಮತ್ತು ಕಾನೂನು ರೀತಿಯಲ್ಲಿ ಕಟ್ಟುನಿಟ್ಟಾಗಿ ನಡೆಸಲಾಗಿದೆ ಎಂದು ಪುನರುಚ್ಚರಿಸುತ್ತದೆ. ಪ್ರಕರಣದ ತನಿಖೆಯು ಕಾನೂನಿನ ಪ್ರಕಾರ ಮುಂದುವರಿಯುತ್ತದೆ’ಎಂದು ಸಿಬಿಐ ಹೇಳಿದೆ.






