ನವದೆಹಲಿ: ಏ.೦೩: ಪ್ರಧಾನಿ ಮೋದಿ ಅವರು ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ವಜ್ರ ಮಹೋತ್ಸವ ಸಮಾರಂಭವನ್ನು ಉದ್ಘಾಟನೆ ಮಾಡಿದ್ರು. ಇದೇ ವೇಳೆ ಅವರು ಶಿಲ್ಲಾಂಗ್, ಪುಣೆ ಮತ್ತು ನಾಗ್ಪುರದಲ್ಲಿ ಹೊಸದಾಗಿ ನಿರ್ಮಿಸಲಾದ ಸಿಬಿಐ ಕಚೇರಿ ಸಂಕೀರ್ಣಗಳನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಿಬಿಐ ಸಂಸ್ಥೆಯನ್ನು ಶ್ಲಾಘಿಸಿದರು, ಅಲ್ಲದೆ ಯಾವ ಭ್ರಷ್ಟರನ್ನೂ ಬಿಡಬಾರದು ಎಂದೂ ಕರೆ ನೀಡಿದರು.
ಸಿಬಿಐ ತನ್ನ ಕೆಲಸ ಮತ್ತು ತಂತ್ರಗಳ ಮೂಲಕ ಸಾಮಾಜ್ಯ ಜನರಿಗೆ ನಂಬಿಕೆಯನ್ನು ನೀಡಿದೆ. ಇಂದಿಗೂ ಯಾವುದಾದರೂ ಒಂದು ಪ್ರಕರಣ ಇತ್ಯರ್ಥವಾಗದೇ ಉಳಿದಿದ್ದರೆ ಅದನ್ನು ಸಿಬಿಐಗೆ ವಹಿಸಬೇಕು ಎಂಬ ಬೇಡಿಕೆಗಳು ಕೇಳಿ ಬರುತ್ತವೆ. ವೃತ್ತಿಪರ ಮತ್ತು ದಕ್ಷ ಸಂಸ್ಥೆಗಳಿಲ್ಲದೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ಸಾಧ್ಯವಿಲ್ಲ, ಆದ್ದರಿಂದ ಸಿಬಿಐಗೆ ದೊಡ್ಡ ಜವಾಬ್ದಾರಿ ಇದೆ ಎಂದೂ ಹೇಳಿದ್ದಾರೆ.

ಅಲ್ಲದೆ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಲ್ಲ ಮತ್ತು ಸಿಬಿಐನ ಕಾರ್ಯವ್ಯಾಪ್ತಿಯು ದೇಶದಲ್ಲಿ ಹಲವಾರು ಪಟ್ಟು ಹೆಚ್ಚಾಗಿದೆ ಎಂದೂ ಪ್ರಧಾನಿ ಮೋದಿ ಹೇಳಿದರು. ಈ ತನಿಖಾ ಸಂಸ್ಥೆ ಸೈಬರ್ ಕ್ರೈಂ ಪ್ರಕರಣಗಳನ್ನು ಸಹ ತನಿಖೆ ನಡೆಸುತ್ತಿದೆ. ಈ ಮಧ್ಯೆ, ಸಿಬಿಐಗೆ ಸಲಹೆ ನೀಡಿದ ಪ್ರಧಾನಿ ಮೋದಿ, “ನೀವು ಯಾರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೀರೋ ಅವರು ತುಂಬಾ ಶಕ್ತಿಶಾಲಿಗಳು ಎಂದು ನನಗೆ ತಿಳಿದಿದೆ, ಅವರು ವರ್ಷಗಳಿಂದ ಸರ್ಕಾರ ಮತ್ತು ವ್ಯವಸ್ಥೆಯ ಭಾಗವಾಗಿದ್ದಾರೆ. ಇಂದಿಗೂ ಅವರು ಕೆಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದಾರೆ. ಆದರೆ ನೀವು (ಸಿಬಿಐ) ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಬೇಕು, ಯಾವುದೇ ಭ್ರಷ್ಟರನ್ನು ಬಿಡಬಾರದು’’ ಎಂದು ಪ್ರಧಾನಿ ಮೋದಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ವಿಶೇಷ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಮತ್ತು ಸಿಬಿಐನ ಅತ್ಯುತ್ತಮ ತನಿಖಾ ಅಧಿಕಾರಿಗಳಿಗೆ ಚಿನ್ನದ ಪದಕ ಪಡೆದವರಿಗೆ ಇಂದು, ಏಪ್ರಿಲ್ 3ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಏಪ್ರಿಲ್ ೧, 1963 ರಂದು ಗೃಹ ಸಚಿವಾಲಯದ ನಿರ್ಣಯದಿಂದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಅನ್ನು ಸ್ಥಾಪಿಸಲಾಯಿತು ಮತ್ತು ಪ್ರಸಿದ್ಧ ತನಿಖಾ ಸಂಸ್ಥೆ ಶನಿವಾರ ತನ್ನ ೬೦ ವರ್ಷಗಳನ್ನು ಪೂರೈಸಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಇಂಟರ್ಪೋಲ್ ಜನರಲ್ ಅಸೆಂಬ್ಲಿಯಲ್ಲಿ ಬ್ಲೂ ಟಿಕ್ನೊಂದಿಗೆ ಸಿಬಿಐ ಟ್ವಿಟ್ಟರ್ಗೆ ಪಾದಾರ್ಪಣೆ ಮಾಡಿದೆ. ಈ ಕಾರ್ಯಕ್ರಮದ ಬಗ್ಗೆ ಸುದ್ದಿ ಹಂಚಿಕೊಳ್ಳುವುದು ಸಿಬಿಐ ಟ್ವಟ್ಟರ್ ಹ್ಯಾಂಡಲ್ನ ಉದ್ದೇಶವಾಗಿತ್ತು.