ನವದೆಹಲಿ :ಏ.೦೩: 2019ರ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ಸೆಷನ್ಸ್ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದ್ದು, ಮುಂದಿನ ವಿಚಾರಣೆಯನ್ನು ಮೇ 3ಕ್ಕೆ ನಿಗದಿಪಡಿಸಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಇಂದು ಮೇಲ್ಮನವಿ ಸಲ್ಲಿಸಿದರು. ಮೇಲ್ಮನವಿ ಸ್ವೀಕರಿಸಿದ ಕೋರ್ಟ್, ಆರೋಪಿ ಕಾಂಗ್ರೆಸ್ ನಾಯಕನಿಗೆ ಜಾಮೀನು ಮಂಜೂರು ಮಾಡಿ, ವಿಚಾರಣೆಯನ್ನು ಮೇ 3ಕ್ಕೆ ಮುಂದೂಡಿದೆ.
ಪ್ರಧಾನಿ ನರೇಂದ್ರ ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಇತ್ತೀಚೆಗೆ ತೀರ್ಪು ನೀಡಿದ್ದ ಸೂರತ್ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಜತೆಗೆ ಮೇಲ್ಮನವಿ ಸಲ್ಲಿಕೆಗೆ ಕಾಲಾವಕಾಶ ನೀಡಿ, ಅಲ್ಲಿಯವರೆಗೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಿತ್ತು. ಇದರ ಬೆನ್ನಲ್ಲೇ ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಇದೀಗ ರಾಹುಲ್ ಗಾಂಧಿ ಅವರು ಸೂರತ್ ಸೆಷನ್ಸ್ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.