ಕರ್ನಾಟಕಕ್ಕೆ ಕಾವೇರಿ ವಿಚಾರದಲ್ಲಿ ಮತ್ತೆ ಸುಪ್ರೀಂಕೋರ್ಟ್ನಲ್ಲೂ ಹಿನ್ನಡೆ ಆಗಿದೆ. ಪ್ರತಿದಿನ ಸುಯಮಾರು 6,400 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಬೇಕು ಎಂದು ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೊಹ್ಟಗಿ ಸುಪ್ರೀಂಕೋರ್ಟ್ ವಾದ ಮಂಡನೆ ಮಾಡಿದ್ದಾರೆ. ಆದರೆ ಅಷ್ಟು ಪ್ರಮಾಣದ ನೀರು ಬಿಡುಗಡೆ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಮಳೆಯಾಗಿಲ್ಲ, ಜಲಾಶಯದಲ್ಲಿ ನೀರಿಲ್ಲ. ಸಂಕಷ್ಟದ ಸಮಯದಲ್ಲೂ CWMA ನೀಡಿದ್ದ ಸೂಚನೆಯನ್ನು ಪಾಲಿಸಿದ್ದೇವೆ. ಸದ್ಯದ ನೀರಿನ ಲಭ್ಯತೆ ಆಧಾರದಲ್ಲಿ ಕರ್ನಾಟಕ 2600 ಕ್ಯೂಸೆಕ್ ನೀರು ಬಿಡಲು ಸಾಧ್ಯವಿದೆ ಅಂತಾ ಸುಪ್ರೀಂಕೋರ್ಟ್ ಗೆ ತಿಳಿಸಿದ ಕರ್ನಾಟಕ ಪರ ವಕೀಲ ಶ್ಯಾಮ್ ದಿವಾನ್.
CWMA ಆದೇಶಕ್ಕೆ ಮಧ್ಯಪ್ರವೇಶ ಮಾಡಲ್ಲ ಎಂದ ಸುಪ್ರೀಂ
ಪ್ರತಿದಿನ 12, 500 ಕ್ಯೂಸೆಕ್ ನೀರು ಬಿಡಬೇಕಿರುವ ಕರ್ನಾಟಕ, ತಮಿಳುನಾಡಿದೆ 1200 ಕ್ಯೂಸೆಕ್ ನೀರು ಹರಿಸುತ್ತಿದೆ ಇದು ಯಾವ ನ್ಯಾಯ ಎಂದು ತಮಿಳುನಾಡು ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಲು ಯಶಸ್ವಿಯಾಗಿದೆ. CWMA ಆದೇಶ ಮಾಡಿದಷ್ಟೂ ನೀರನ್ನು ಬಿಡುತ್ತಿಲ್ಲ ಎಂದು ಗಮನಸೆಳೆಯುವ ವಾದವನ್ನು ಮಾನ್ಯ ಮಾಡಿದ ಸುಪ್ರೀಂಕೋರ್ಟ್, ಅಂತಿಮವಾಗಿ ಯಥಾಸ್ಥಿತಿ ಕಾಯ್ದುಕೊಳ್ಳುವ ಮೂಲಕ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ ನೀಡಿದೆ.. ಮುಂದಿನ ಎರಡು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಹೇಳಿರುವ ಸುಪ್ರೀಂಕೋರ್ಟ್, ಹದಿನೈದು ದಿನಗಳ ಬಳಿಕ ಮತ್ತೆ ಸಭೆ ನಡೆಸುವಂತೆ CWMAಗೂ ಸೂಚನೆ ನೀಡಿದೆ.
ಕರ್ನಾಟಕ ಕಂಗಾಲು ದೆಹಲಿಯಲ್ಲಿ ತುರ್ತು ಸಭೆ.. ಮುಂದೇನು..?
CWMA ಆದೇಶದ ಪ್ರಕಾರ ಕರ್ನಾಟಕದಿಂದ ತಮಿಳುನಾಡಿಗೆ ಸದ್ಯ 4,500 ಕ್ಯೂಸೆಕ್ ನೀರು ಹರಿಸಲಾಗ್ತಿದೆ. ಆದರೂ ಕಾವೇರಿ ನದಿ ನೀರು ಬಿಡುಗಡೆ ವಿಚಾರದಲ್ಲಿ ಪದೇ ಪದೇ ಅನ್ಯಾಯ ಆಗುತ್ತಿದ್ದು, ಕರ್ನಾಟಕ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಜಲಸಂಪನ್ಮೂಲ ಖಾತೆ ಸಚಿವ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಹೆಚ್.ಸಿ.ಮಹಾದೇವಪ್ಪ , ಚೆಲುವರಾಯಸ್ವಾಮಿ, ನವದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಸಭೆಯಲ್ಲಿ ಉಪಸ್ಥಿತರಿದ್ದು, ಸುಪ್ರೀಂಕೋರ್ಟ್ ಆದೇಶವನ್ನ ಪಾಲಿಸಬೇಕೆ ಅಥವಾ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕೆಎನ್ನುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಕರ್ನಾಟಕದ ಪರಿಸ್ಥಿತಿ ಪರಿಶೀಲನೆ ಮಾಡದೆ ಆದೇಶ ಹೇಗೆ..?
ಕಾವೇರಿ ನಿಯಂತ್ರಣ ಆಯೋಗ ಹಾಗು ಕಾವೇರಿ ನಿರ್ವಹಣಾ ಪ್ರಾಧಿಕಾರದ ಶಿಫಾರಸುಗಳು ಮತ್ತು ಆದೇಶಗಳ ವಿರುದ್ಧದ ಮಧ್ಯಂತರ ಅರ್ಜಿಗಳ ಮೇಲೆ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಣೆ ಮಾಡಿದೆ. ಇದೇ ವೇಳೆ ಸಂಕಷ್ಟ ಸೂತ್ರದ ಅಗತ್ಯತೆ ಬಗ್ಗೆ ವಕೀಲ ದುಷ್ಯಂತ ದವೇ ಪ್ರಸ್ತಾಪಿಸಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ರೈತರ ಪರ ದವೇ ವಾದ ಮಂಡಿಸಿದ್ದು, ಕರ್ನಾಟಕದಲ್ಲಿ ಮಳೆಯಿಲ್ಲದೆ ಸಂಕಷ್ಟ ಎದುರಾಗಿದೆ ಎಂದು ಅರ್ಥ ಮಾಡಿಸಲು ಯತ್ನಿಸಿದ್ದಾರೆ. ಆದರೆ ಸಂಕಷ್ಟ ಪರಿಶೀಲನೆಗೆ ತಜ್ಞರ ಸಮಿತಿ ಇದೆಯಲ್ಲ ಎಂದಿದ್ದಾರೆ ನ್ಯಾಯಮೂರ್ತಿ ಬಿ ಆರ್ ಗವಾಯಿ. ಸದ್ಯದ ವಾಸ್ತವ ಪರಿಸ್ಥಿತಿ ಅಧ್ಯಯನ ಮಾಡಲು ತಜ್ಞರು ಬರಬೇಕು ಎಂದ ವಕೀಲ ಮೋಹನ್ ಕಾತರಕಿ ಮನವಿ ಮಾಡಿಕೊಂಡಿದ್ದಾರೆ. ಆದರೂ ಕರ್ನಾಟಕಕ್ಕೆ ಮಾತ್ರ ಬರೆ ಮೇಲೆ ಬರೆ ಬೀಳುತ್ತಿರುವುದು ಮಾತ್ರ ಸುಳ್ಳಲ್ಲ.
ಕೃಷ್ಣಮಣಿ