ವೈಜ್ಞಾನಿಕವಾಗಿ ಅತ್ಯಂತ ಮುಂದುವರೆದ ದೇಶಗಳು ಸಹಜವಾಗಿ ಅನ್ಯ ದೇಶಗಳಿಗೆ ಮಾದರಿಯಾಗಿ ಕಾಣುತ್ತವೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು, ಪರಮಾಣು ಅಸ್ತ್ರಗಳನ್ನು ಹೊಂದಿರುವ ರಾಷ್ಟ್ರಗಳು ಬಲಿಷ್ಠ ಎನಿಸಿಕೊಳ್ಳುತ್ತವೆ. ಆರ್ಥಿಕವಾಗಿ ಮಾರುಕಟ್ಟೆಯ ಸೂಚ್ಯಂಕಗಳಲ್ಲಿ ಶಿಖರ ತಲುಪುವ ದೇಶಗಳು ʼಅಭಿವೃದ್ಧಿʼ ಹೊಂದಿರುವ ಚಿತ್ರಣವನ್ನು ನೀಡುತ್ತವೆ. ಈ ಮೂರೂ ಮಾನದಂಡಗಳೇ ವರ್ತಮಾನದ ಜಾಗತಿಕ ರಾಜಕಾರಣವನ್ನು ಹಾಗೂ ಸಾಮಾಜಿಕ ಸಂಕಥನಗಳನ್ನು ನಿರ್ದೇಶಿಸುತ್ತವೆ. ಈ ಸ್ಪರ್ಧಾತ್ಮಕ ಆವರಣದಲ್ಲಿ ಮಾನವ ಸಮಾಜ ತನ್ನ ಬೆನ್ನನ್ನು ತಾನೇ ನೋಡಿಕೊಳ್ಳಲಾಗದೆ, ನೆಲ ಕುಸಿದರೂ ಸ್ಥಿರವಾಗಿರುವಂತೆ ವರ್ತಿಸುವ ಮೂಲಕ ʼಎಲ್ಲವೂ ಸುಂದರವಾಗಿದೆ ʼ ಎಂಬ ಭ್ರಮೆಯನ್ನು ಸೃಷ್ಟಿಸುತ್ತದೆ. ಡಿಜಿಟಲ್ ಯುಗದ ವಿದ್ಯುನ್ಮಾನ ಮಾಧ್ಯಮಗಳು ,ಸುದ್ದಿವಾಹಿನಿಗಳು ಈ ಭ್ರಮಾಧೀನ ಜಗತ್ತನ್ನು ಸಮ್ಮೋಹನಗೊಳಿಸುವ ಸಾಧನಗಳಾಗಿ ಕಾರ್ಯನಿರ್ವಹಿಸುತ್ತವೆ.

ಹಣ ಮತ್ತು ಸಂಪತ್ತು ಕ್ರೋಢೀಕರಣವೇ ಪ್ರಧಾನವಾಗುವ ಬಂಡವಾಳಶಾಹಿ ವ್ಯವಸ್ಥೆ ಇಂತಹ ಸಮಾಜವನ್ನೇ ಅಪೇಕ್ಷಿಸುತ್ತದೆ, ಪೋಷಿಸುತ್ತದೆ. ಮಾನವ ಸಮಾಜ ಶತಮಾನಗಳಿಂದ ರೂಢಿಸಿಕೊಂಡು ಬಂದ ಎಲ್ಲ ಜೀವನಮೌಲ್ಯಗಳನ್ನೂ, ಅಪಮೌಲ್ಯಗೊಳಿಸುವ ಹಾಗೂ ಮಾರುಕಟ್ಟೆಯ ವ್ಯಾವಹಾರಿಕ ಚೌಕಟ್ಟುಗಳಲ್ಲಿ ಬಂಧಿಸಿ, ನಗದೀಕರಿಸುವ (Monetise) ಮೂಲಕ ಎಲ್ಲವನ್ನೂ ಬಳಕೆ-ಖರೀದಿ-ಮಾರಾಟದ ಪ್ರಕ್ರಿಯೆಗೆ ಒಳಪಡಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಮರುರೂಪುಗೊಳ್ಳುವ ನಾಗರಿಕತೆಗಳು ಮತ್ತು ಸಮಾಜಗಳಲ್ಲಿ ಕೊಲೆ, ಅತ್ಯಾಚಾರ, ಹತ್ಯಾಕಾಂಡ, ಎನ್ಕೌಂಟರ್, ಲೈಂಗಿಕ ದೌರ್ಜನ್ಯ, ತಾರತಮ್ಯ ಮತ್ತು ಶೋಷಣೆ ಈ ಎಲ್ಲ ಜೀವವಿರೋಧಿ ನಡವಳಿಕೆಗಳಿಗೂ ಮಾನ್ಯತೆ ದೊರೆತುಬಿಡುತ್ತದೆ. ʼಅಭಿವೃದ್ಧಿ ಮಾದರಿʼಗಳ ಫಲಾನುಭವಿ ಸಮಾಜಗಳಿಗೆ ಇವೆಲ್ಲವೂ ಸಹಜ ಕ್ರಿಯೆಗಳಾಗಿ ಕಾಣುತ್ತವೆ.

ಸ್ತರೀಯ ಲಕ್ಷಣಗಳು ಮತ್ತು ಧೋರಣೆಗಳು
ಈ ಮೇಲ್ವರ್ಗದ-ಮೇಲ್ಪದರ ಫಲಾನುಭವಿಗಳ ಜಗತ್ತು 21ನೆ ಶತಮಾನದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಂವಹನ ವಲಯಗಳನ್ನು ನಿಯಂತ್ರಿಸಿ ನಿರ್ದೇಶಿಸುತ್ತದೆ. ಬುದ್ಧಿ, ಜ್ಞಾನ , ತಂತ್ರಜ್ಞಾನ ಮತ್ತು ವಿಜ್ಞಾನ ಇವೆಲ್ಲವನ್ನೂ ತನ್ನೊಡಲಲ್ಲಿಟ್ಟುಕೊಂಡು ವ್ಯವಹರಿಸುವ ಈ ಜಗತ್ತು ಇಂದು ವಿಶ್ವ ಸಮುದಾಯವನ್ನು ತನ್ನ ಅಧೀನದಲ್ಲಿಟ್ಟುಕೊಂಡಿದೆ. ಹಾಗಾಗಿಯೇ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು, ಕೆಳಸ್ತರದ ಸಮುದಾಯಗಳು ಎದುರಿಸುತ್ತಿರುವ ಕರಾಳ ವಾಸ್ತವಗಳು ಜಗತ್ತಿನ ಕಣ್ಣಿಗೆ ʼಸಾಮಾಜಿಕ ವ್ಯಾಧಿ ʼ ಯಾಗಿ (Social malaise) ಕಾಣದ ಮಾನವ ಸಮಾಜದ ಸ್ವಾಭಾವಿಕ ನಡವಳಿಕೆಗಳಂತೆ ಕಾಣುತ್ತವೆ. ಇದು ಜಾಗತಿಕ ವಿದ್ಯಮಾನವಾಗಿದೆ. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಈ ಎಲ್ಲ ಕ್ರೌರ್ಯಗಳನ್ನೂ ಜಾತಿ-ಮತ ಅಥವಾ ಧಾರ್ಮಿಕ ಅಸ್ಮಿತೆಗಳಲ್ಲಿಟ್ಟು ನೋಡುವುದರಿಂದ, ಸಾಮಾಜಿಕ ವ್ಯಸನಗಳೂ ಸಹ ಸಾಪೇಕ್ಷವಾಗಿ ಪರಿಗಣಿಸಲ್ಪಡುತ್ತವೆ.

ಈ ವಾತಾವರಣದಲ್ಲಿ ಡಿಜಿಟಲ್ ಸಂವಹನ ಮಾಧ್ಯಮಗಳನ್ನು ಗಮನಿಸಿದಾಗ ಗೋಚರಿಸುವ ಒಂದು ಲಕ್ಷಣ ಎಂದರೆ, ರೋಚಕತೆಯ ಪ್ರಾಧಾನ್ಯತೆ ಮತ್ತು ಮನರಂಜನೆಯ ದೃಷ್ಟಿಕೋನ. ಮಾರುಕಟ್ಟೆಯ ಶ್ರೇಣೀಕರಣವೇ ಪ್ರಧಾನವಾಗುವುದರಿಂದ ಸುದ್ದಿವಾಹಿನಿಗಳು ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ವಿಷಯಗಳನ್ನೂ ಸಹ ಶ್ರೇಣೀಕರಣಗೊಳಿಸುತ್ತವೆ. ಸೂಕ್ಷ್ಮಗ್ರಾಹಿ ಮನಸ್ಥಿತಿ ಮತ್ತು ದೂರಗಾಮಿ ದೃಷ್ಟಿ ಇಲ್ಲದಿರುವ ಕಾರಣ ಸಂವಹನ ಮಾಧ್ಯಮಗಳಲ್ಲಿ ʼ ಸಾಮಾಜಿಕ ವ್ಯಾಧಿ ʼಯೂ ಸಹ ಸಾಪೇಕ್ಷವಾಗಿ ನೋಡಬೇಕಾದ ವಿದ್ಯಮಾನವಾಗುತ್ತದೆ. ಖ್ಯಾತನಾಮರ ಉಲ್ಲೇಖ ಅಥವಾ ಧಾರ್ಮಿಕ ಅಸ್ಮಿತೆಗಳ ಸೂಚನೆಗಳು ಕಂಡಕೂಡಲೇ ಸುದ್ದಿವಾಹಿನಿಗಳು ಧಿಗ್ಗನೆ ಎದ್ದುಕುಳಿತುಕೊಳ್ಳುತ್ತವೆ. ಸಮಾಜದ ಮೇಲ್ವರ್ಗ (Uppper Class ) ಮತ್ತು ಮೇಲ್ಪದರದ (Elite) ಸುಶಿಕ್ಷಿತ ನಾಗರಿಕರು ನಿರ್ಣಾಯಕ ಗ್ರಾಹಕರಾಗಿರುತ್ತಾರೆ.

ಇದರ ಒಂದು ಆಯಾಮವನ್ನು ಇತ್ತೀಚೆಗೆ ಜಾಗತಿಕ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಇಪ್ಸ್ಟೀನ್ ಕಡತಗಳು (Epstien Files) ತೆರೆದಿಟ್ಟಿವೆ. ಆಧುನಿಕ ನಾಗರಿಕ ಜಗತ್ತಿನ ವಿಕೃತ ಮುಖವಾಡವನ್ನು ಕಳಚಿರುವ ಈ ಕಡತಗಳು ಹೆಚ್ಚು ಚರ್ಚೆಗೊಳಗಾಗುತ್ತಿರುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ಖ್ಯಾತನಾಮರ ಹೆಸರುಗಳಿರುವುದು ಎರಡನೆಯದು ದೌರ್ಜನ್ಯದ ಕೇಂದ್ರ ಬಿಂದು ಮಹಿಳೆ ಆಗಿರುವುದು. ಗಮನಿಸಲೇಬೇಕಾದ ವ್ಯತ್ಯಾಸ ಎಂದರೆ ಇಲ್ಲಿ ಮಹಿಳೆ ಮತ್ತು ಮಹಿಳಾ ದೌರ್ಜನ್ಯ ಎರಡೂ ಸಹ ಸಂವೇದನೆಯ ನೆಲೆಗಿಂತಲೂ, ಸುದ್ದಿ ರೋಚಕತೆಯ ನೆಲೆಯಲ್ಲಿ ವ್ಯಾಖ್ಯಾನಿಸಲ್ಪಡುತ್ತದೆ. ಇದು ಡಿಜಿಟಲ್ ಯುಗದ ಒಂದು ವಿಕೃತ ಮಗ್ಗುಲನ್ನು ನಮಗೆ ಪರಿಚಯಿಸುತ್ತದೆ.

ಮಹಿಳಾ ದೌರ್ಜನ್ಯಗಳ ಪರಂಪರೆ
ಭಾರತದ ಸಂದರ್ಭದಲ್ಲಿ ಈ ವಿಕೃತಿಯನ್ನು ಇನ್ನೂ ಸ್ಪಷ್ಟವಾಗಿ ಗುರುತಿಸಬಹುದು. ಹೆಣ್ಣು ಮಕ್ಕಳ ಮೇಲೆ ( ಗಂಡುಮಕ್ಕಳ ಮೇಲೆ ಸಹ) ನಡೆಯುವ ಲೈಂಗಿಕ ದೌರ್ಜನ್ಯಗಳು, ಬಾಲೆಯರ ಮೇಲಿನ ಅತ್ಯಾಚಾರ, ವಯಸ್ಕರಿಂದ ವೃದ್ಧೆಯರವರೆಗೂ ಎದುರಿಸುವ ಲೈಂಗಿಕ ಕಿರುಕುಳ, ನಿಕಟ-ರಕ್ತ ಸಂಬಂಧಿಗಳಿಂದಲೇ ನಡೆಯುವ ದೌರ್ಜನ್ಯ, ಕೌಟುಂಬಿಕ ಚಿತ್ರಹಿಂಸೆ, ಕೋಮು ಗಲಭೆಗಳಲ್ಲಿ ಮಹಿಳೆಯನ್ನೇ ಕೇಂದ್ರೀಕರಿಸುವ ಕೊಲೆ-ಅತ್ಯಾಚಾರ-ಸಾಮೂಹಿಕ ಹತ್ಯೆ-ದಹನ, ಕಾನೂನು ಪಾಲಕರಿಂದ, ಜನಪ್ರತಿನಿಧಿಗಳಿಂದ, ಅಧಿಕಾರಶಾಹಿಗಳಿಂದ ನಡೆಯುವ ದೌರ್ಜನ್ಯಗಳು, ಇವೆಲ್ಲವೂ ಸಹ ಭಾರತದಲ್ಲಿ ನಿತ್ಯ ಸುದ್ದಿಗಳಾಗಿವೆ. ಸರ್ಕಾರದ ಅಧಿಕೃತ ದತ್ತಾಂಶಗಳೇ ಲಕ್ಷಾಂತರ ಪ್ರಕರಣಗಳನ್ನು ಪ್ರತಿ ವರ್ಷ ವರದಿ ಮಾಡುತ್ತಿವೆ. ಇದನ್ನು ಹೇಗೆ ವ್ಯಾಖ್ಯಾನಿಸುವುದು ?
ಶಾಲೆ-ಕಾಲೇಜು-ಹಾಸ್ಟಲ್ಗಳಿಂದ ವಿಶ್ವವಿದ್ಯಾಲಯಗಳ ಕ್ಯಾಂಪಸ್ವರೆಗೂ ಚುನಾಯಿತ ಪ್ರತಿನಿಧಿಗಳ ಕಚೇರಿಗಳಿಂದ ಮಹಲುಗಳವರೆಗೂ, ಆಧ್ಯಾತ್ಮಿಕ ಮಠಮಾನ್ಯಗಳಿಂದ ಪೂಜಾಸ್ಥಳಗಳವರೆಗೂ ವಿಸ್ತರಿಸುವ ಈ ಪಾತಕಿ ಕೃತ್ಯಗಳ ಹಿಂದೆ ನೂರಾರು ಇಪ್ಸ್ಟೀನ್‌ಗಳು ನಮ್ಮ ನಡುವೆಯೇ ಇದ್ದಾರೆ, ಆರೋಪ ಮುಕ್ತರಾಗಿದ್ದಾರೆ, ಶಿಕ್ಷೆಯಿಂದ ಪಾರಾಗುತ್ತಿದ್ದಾರೆ, ಶಾಸನಸಭೆಗಳನ್ನೂ ಪ್ರವೇಶಿಸುತ್ತಿದ್ದಾರೆ. ಪಿತೃಪ್ರಧಾನ ಅಹಮಿಕೆ ಮತ್ತು ಊಳಿಗಮಾನ್ಯ ದಬ್ಬಾಳಿಕೆಗೆ ಬಲಿಯಾದ ಲಕ್ಷಾಂತರ ಹೆಣ್ಣು ಜೀವಗಳು , ಮಥುರಾದಿಂದ ಸೌಜನ್ಯಾವರೆಗೂ, ನ್ಯಾಯ ಕೇಳುತ್ತಲೇ ಇದ್ದಾರೆ. ಜಾತೀಯ, ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯ ಸಾಂಸ್ಥಿಕ ಕವಚಗಳನ್ನು ತೊಟ್ಟಿರುವ ಅಪರಾಧಿಕ ಜಗತ್ತು ರಾಜಕೀಯ ಹಾಗೂ ಆರ್ಥಿಕ ಪ್ರಭಾವವನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿವೆ. ನಮ್ಮ ನಡುವಿನ ಇಪ್ಸ್ಟೀನ್ಗಳ ಪೂರ್ವಾಪರಗಳ ಬಗ್ಗೆ ಅಥವಾ ಚಾರಿತ್ರ್ಯ-ವ್ಯಕ್ತಿತ್ವದ ಬಗ್ಗೆ ಭಾರತದ ಸುದ್ದಿವಾಹಿನಿಗಳು ಎಷ್ಟು ಆಸಕ್ತಿಯಿಂದ ಶೋಧ ನಡೆಸಿವೆ/ನಡೆಸುತ್ತಿವೆ ?

ಈ ವ್ಯತ್ಯಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ , ಚಂದ್ರನೆಡೆಗೆ, ಮಂಗಳದೆಡೆಗೆ ಚಲಿಸುತ್ತಿರುವ ಆಧುನಿಕ ನಾಗರಿಕತೆಯು ಹೇಗೆ ಒಳಗೊಳಗೇ ಕೊಳೆತುಹೋಗುತ್ತಿದೆ ಎನ್ನುವುದೂ ಸ್ಪಷ್ಟವಾಗುತ್ತದೆ. ತಮ್ಮ ಎಕನಾಮಿಕ್ ಅಂಡ್ ಫಿಲಾಸಫಿಕ್ ಮ್ಯಾನುಸ್ಕ್ರಿಪ್ಟ್ಸ್ ಕೃತಿಯಲ್ಲಿ ಕಾರ್ಲ್ ಮಾರ್ಕ್ಸ್ “ ಹೆಣ್ಣನ್ನು ವಿಶೇಷ ಸರಕಾಗಿ ಮತ್ತು ಸಾಮುದಾಯಿಕ ಕಾಮದ ವಸ್ತುವಾಗಿ ಕಾಣುವ ಮಾನವನ ನಡೆಯು ಅವನದೇ ಅನಂತ ಅವನತಿಯ ಅಭಿವ್ಯಕ್ತಿಯಾಗಿದೆ ” ಎಂದು ಹೇಳುತ್ತಾರೆ. ವಿಶ್ವದ ದೊಡ್ಡ ವಾಣಿಜ್ಯೋದ್ಯಮಿಗಳು, ರಾಜಕೀಯ ನಾಯಕರು, ಅಮೆರಿಕದ ಬಂಡವಾಳಿಗರು ಅದೆಂತಹ ನೈತಿಕ ಅಧಃಪತನದತ್ತ ಸಾಗುತ್ತಿದ್ದಾರೆ ಎನ್ನವುದನ್ನು ಇಪ್ಸ್ಟೀನ್ ಕಡತಗಳು ಹೊರಗೆಡಹಿವೆ.
ಬಂಡವಾಳಿಗ ಸಮಾಜದ ವಿಕೃತಿಗಳು
ಅಮೆರಿಕದಲ್ಲಿ ಮಧ್ಯಮ ವರ್ಗಗಳ, ಸಿರಿವಂತರ, ಬಂಡವಾಳಿಗರ ಕಾಮತೃಷೆಗೆ ಬಲಿಯಾಗಿರುವವರಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಸಂಖ್ಯೆ ಸಾವಿರಕ್ಕೂ ಹೆಚ್ಚಾಗಿದೆ. ಇಪ್ಸ್ಟೀನ್ ಕಡತಗಳು ಬಹಿರಂಗವಾಗಿರುವ ಹೊತ್ತಿನಲ್ಲಿ ಇದು ಅಮೆರಿಕದ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಈ ಕಡತಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಅಪರಾಧಿಗಳ ಪಟ್ಟಿಯಲ್ಲಿ ಜಾಗತಿಕ ಗಣ್ಯ ಸಮಾಜ (Elite society) ಹಲವು ವ್ಯಕ್ತಿಗಳನ್ನು ಕಾಣಬಹುದು. ಲೈಂಗಿಕತೆ ಹೇಗೆ ನಗರ ಜೀವನಗಳನ್ನು ದಿಕ್ಕುಗೆಡಿಸುತ್ತಿದೆ, ಬಂಡವಾಳಶಾಹಿ ಅಭಿವೃದ್ಧಿ ಮಾದರಿಯ ಫಲಾನುಭವಿ ಶ್ರೀಮಂತ ವರ್ಗಗಳು ಮಾನವ ಸಮಾಜದ ಸ್ವಾಭಾವಿಕ-ನೈಸರ್ಗಿಕ ಪ್ರವೃತ್ತಿಯನ್ನು ಹೇಗೆ ಐಷಾರಾಮಿ ಜೀವನಶೈಲಿಯ ಸಂಕೇತವಾಗಿ ಮಾಡಿವೆ ಎನ್ನುವುದನ್ನು ಇಪ್ಸ್ಟೀನ್ ಕಡತಗಳು ಬಹಿರಂಗಪಡಿಸಿವೆ.

ಈ ಪ್ರಕರಣವನ್ನು ಕೇವಲ ರೋಚಕ ಲೈಂಗಿಕ ಹಗರಣ ಎಂದು ಪರಿಗಣಿಸಲಾಗುವುದಿಲ್ಲ. ಸಾಮಾಜಿಕವಾಗಿ ಆಳವಾಗಿ ಬೇರೂರಿರುವ ಒಂದು ವ್ಯವಸ್ಥಿತ ಕ್ರಿಯೆಯಾಗಿ ಇದನ್ನು ಗುರುತಿಸಬೇಕಿದೆ. ಅಮೆರಿಕದಲ್ಲಿ ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕಠಿಣ ಶಿಕ್ಷೆ ವಿಧಿಸುವಂತಹ ಹಲವು ಕಾನೂನುಗಳಿವೆ. ಕೆಲವು ರಾಜ್ಯಗಳಲ್ಲಿ ಅಪರಾಧಿಗಳಿಗೆ 40 ವರ್ಷದ ಜೈಲು ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಲೂಸಿಯಾನಾ, ಮೊಂಟಾನಾ, ಓಕ್ಲಹಾಮಾ, ದಕ್ಷಿಣ ಕ್ಯಾಲಿಫೋರ್ನಿಯ ಮತ್ತು ಟೆಕ್ಸಾಸ್ ರಾಜ್ಯಗಳಲ್ಲಿ ಮಕ್ಕಳ ಮೇಲೆ ಅತ್ಯಾಚಾರ ಮಾಡುವವರಿಗೆ ಮರಣದಂಡನೆಯ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಆದಾಗ್ಯೂ ಅಮೆರಿಕದ ಸಮಾಜದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಸಾಂಕ್ರಾಮಿಕದಂತೆ ವ್ಯಾಪಕವಾಗಿದೆ.

2009ರ ಸಂಶೋಧನೆಯೊಂದರ ಅನುಸಾರ, ಅಮೆರಿಕದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತ ಮಕ್ಕಳ ಸಂಖ್ಯೆ ಆರು ಕೋಟಿಗೂ ಹೆಚ್ಚಿದೆ. 1988ರಲ್ಲೇ ಫ್ರಾಂಕ್ಲಿನ್ ಹಗರಣವು ಸಾಕಷ್ಟು ಸಂಚಲನ ಉಂಟುಮಾಡಿತ್ತು. ಈಗ ಬಹಿರಂಗವಾಗಿರುವ ಇಪ್ಸ್ಟೀನ್ ಹಗರಣದಲ್ಲಿ ಈಗಾಗಲೇ 1,200 ಸಂತ್ರಸ್ತರನ್ನು ಗುರುತಿಸಲಾಗಿದ್ದು, ಇವರಲ್ಲಿ ಬಹುತೇಕ ಮಕ್ಕಳು 16 ರಿಂದ 18 ವರ್ಷದವರಾಗಿದ್ದಾರೆ. ಆರೋಪಿಗಳ ಪಟ್ಟಿಯಲ್ಲಿ ಟ್ರಂಪ್, ಕ್ಲಿಂಟನ್, ಎಲಾನ್ ಮಸ್ಕ್, ಬಿಲ್ ಗೇಟ್ಸ್ ಮತ್ತಿತರ ಬೃಹತ್ ವಾಣಿಜ್ಯೋದ್ಯಮಿಗಳ ಹೆಸರುಗಳೂ ಉಲ್ಲೇಖವಾಗಿದೆ. ಅಮೆರಿಕದ ಕಾನೂನುಗಳು ಅತಿ ಬಿಗಿಯಾಗಿವೆ ಎಂಬ ಅಭಿಪ್ರಾಯ ಪ್ರಚಲಿತವಾಗಿದೆ. ಆದಾಗ್ಯೂ ಇಪ್ಸ್ಟೀನ್ ಎರಡು ದಶಕಗಳಿಗೂ ಹೆಚ್ಚು ಕಾಲ ಕಾನೂನಿನ ಕಣ್ಣು ತಪ್ಪಿಸಿರುವುದು ಅಚ್ಚರಿ ಮೂಡಿಸುತ್ತದೆ.
ಬಂಡವಾಳಶಾಹಿ ಸಮಾಜದ ಲಕ್ಷಣ
ಮತ್ತೊಂದು ಆಯಾಮದಲ್ಲಿ ನೋಡಿದಾಗ, ಈ ಹಗರಣದಲ್ಲಿ ಬಂಡವಾಳಶಾಹಿ ವ್ಯವಸ್ಥೆಯು ಸೃಷ್ಟಿಸುವ ವರ್ಗ ಸಮಾಜಗಳನ್ನು ಗುರುತಿಸಬಹುದು. ರಷ್ಯಾದ ಮಾರ್ಕ್ಸ್ವಾದಿ ವಿದ್ವಾಂಸ ಟ್ರಾಟ್ಸ್ಕಿ ಹೇಳಿರುವಂತೆ ಈ ವ್ಯವಸ್ಥೆಯಲ್ಲಿ ನೈತಿಕತೆ ಮತ್ತು ಮೌಲ್ಯಗಳನ್ನು ಸಾಮಾಜಿಕವಾಗಿ ರೂಪಿಸಲಾಗುತ್ತದೆ. ಆಳುವ ವರ್ಗಗಳು ಸಾಧಾರಣ ಜನಸಮೂಹಗಳಿಗಾಗಿಯೇ ಒಂದು ರೀತಿಯ ನಿಯಮಗಳನ್ನು, ನೈತಿಕ ಸಂಹಿತೆಗಳನ್ನು ರೂಪಿಸುತ್ತವೆ. ಅದೇ ವೇಳೆ ಆಳುವ ವರ್ಗಗಳಿಗಾಗಿ ಭಿನ್ನವಾದ ಸಂಹಿತೆಗಳನ್ನು ರೂಪಿಸಿಕೊಳ್ಳುತ್ತವೆ. ಇಡೀ ಬಂಡವಾಳಶಾಹಿ ಸಂಸ್ಕೃತಿಯೇ ಬಂಡವಾಳಿಗರ ಈ ಬೂಟಾಟಿಕೆ, ಠಕ್ಕುತನವನ್ನು ಆಧರಿಸಿರುತ್ತದೆ. ಮಾರ್ಕ್ಸ್, ಲೆನಿನ್, ಸ್ಟಾಲಿನ್ ಮತ್ತು ಮಾವೋ ಈ ಬಂಡವಾಳಿಗ ಸಂಸ್ಕೃತಿಯ ಅವನತಿಯ ಲಕ್ಷಣಗಳನ್ನು ಸ್ಪಷ್ಟವಾಗಿ ನಿರ್ವಚಿಸಿದ್ದಾರೆ.

ಇಪ್ಸ್ಟೀನ್ ಇದೇ ಬಂಡವಾಳಶಾಹಿ ವ್ಯವಸ್ಥೆಯ ಒಂದು ಕೂಸು. ಡಿಜಿಟಲ್ ಯುಗದಲ್ಲಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಲಭ್ಯವಾಗುವುದು, ಬಳಕೆಯಾಗುವುದು ಅಶ್ಲೀಲ ತಾಣಗಳು. ಈ ಸಾಮೂಹಿಕ ಅಶ್ಲೀಲತೆ ಹಾಗೂ ಲೈಂಗಿಕ ವಿಕೃತಿಗಳು ಕೇವಲ ಅಂತರ್ಜಾಲಕ್ಕೆ ಸೀಮಿತವಾಗಿರುವುದಿಲ್ಲ, ವಾಸ್ತವ ಜನಜೀವನವನ್ನೂ ಪ್ರವೇಶಿಸಿ, ಅಸಹಾಯಕ ಮಹಿಳೆಯರನ್ನು ಲೈಂಗಿಕ ಶೋಷಣೆಗೊಳಪಡಿಸುತ್ತವೆ. ಈ ಬಂಡವಾಳಿಗ ಶ್ರೀಮಂತ ವರ್ಗಗಳ ಮುಖ್ಯ ಪ್ರತಿಪಾದಕರೇ ಅವನತಿಯ ಹಾದಿಯಲ್ಲಿ ಸಾಗುತ್ತಿರುವುದು ಜಾಗತಿಕ ವಿದ್ಯಮಾನ. ಸಮೂಹ ಮಾಧ್ಯಮಗಳಲ್ಲಿ ಮತ್ತು ವಿದ್ಯುನ್ಮಾನ ಸಂವಹನ ವಲಯದಲ್ಲಿ ಮಹಿಳೆಯನ್ನು ಭೋಗದ ವಸ್ತುವನ್ನಾಗಿಯೇ ನೋಡಲಾಗುತ್ತದೆ, ಬಳಸಲಾಗುತ್ತದೆ. ಬಂಡವಾಳಶಾಹಿ ಸಮಾಜದಲ್ಲಿ ಸಂಪತ್ತು, ಶ್ರೀಮಂತಿಕೆ ಮತ್ತು ಅಧಿಕಾರ ಮಧ್ಯಮ-ಮೇಲ್ವರ್ಗದವರಲ್ಲಿ ಈ ಧೋರಣೆಯನ್ನು ಇಮ್ಮಡಿಗೊಳಿಸುತ್ತಲೇ ಹೋಗುತ್ತದೆ. ಮಹಿಳೆಯರ ಮೇಲಿನ ಆಧಿಪತ್ಯವೇ ಲೈಂಗಿಕ ಅಧೀನತೆಗೂ ಕಾರಣವಾಗುತ್ತದೆ.
ಇಪ್ಸ್ಟೀನ್ ಹಗರಣದಲ್ಲಿ ಕೆಲವು ಭಾರತೀಯ ಗಣ್ಯರ ಹೆಸರುಗಳೂ ಉಲ್ಲೇಖವಾಗಿವೆ. ಇದರ ಸತ್ಯಾಸತ್ಯತೆಗಳೇನೇ ಇದ್ದರೂ, ಈ ಹೆಸರುಗಳೇ ಮುಖ್ಯವಾಗುವುದಿಲ್ಲ. ನಾವು ನೋಡಬೇಕಿರುವುದು ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊತ್ತಿರುವ ಭಾರತೀಯ ಸಮಾಜದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿ ಮತ್ತು ಮಹಿಳಾ ಅಧೀನತೆಯ ಪ್ರಮಾಣವನ್ನು. ದೇವದಾಸಿಯಂತಹ ಅಮಾನುಷ ಪದ್ಧತಿ ಇಂದಿಗೂ ಭಿನ್ನ ರೂಪದಲ್ಲಿ ಚಾಲ್ತಿಯಲ್ಲಿದೆ. ಇಂದಿಗೂ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕೆಳಸ್ತರದ ಜಾತಿಯ ಹೆಣ್ಣು ಮಕ್ಕಳು ವಿವಾಹದ ನಂತರ ಮೊದಲು ಭೂಮಾಲೀಕರ ಕಾಮತೃಷೆಯನ್ನು ತಣಿಸುವ ಪದ್ಧತಿ ಜಾರಿಯಲ್ಲಿದೆ. ಅಂತರ್ ಧರ್ಮೀಯ ವಿವಾಹಗಳನ್ನು ಜಿಹಾದ್ ಎಂದು ಕರೆಯುವ ಮೂಲ ಭಾವಾತಿರೇಕದ ಪರಿಸ್ಥಿತಿಯನ್ನು ಸೃಷ್ಟಿಸಿರುವ ಮೂಲಭೂತವಾದಿಗಳಿಗೆ, ಹಿಂದೂ ಹೆಣ್ಣುಮಕ್ಕಳನ್ನು ಕಾಡುತ್ತಿರುವ ಈ ಸಾಮಾಜಿಕ ಕ್ರೌರ್ಯ ಗೋಚರಿಸುವುದಿಲ್ಲ. ಅಥವಾ ಅದು ನಮ್ಮ ಪರಂಪರೆಯ ಒಂದು ಭಾಗ ಎಂದು ಸಮ್ಮತಿಸಲಾಗುತ್ತದೆ.

ಭಾರತದಲ್ಲಿ ಮಹಿಳಾ ದೌರ್ಜನ್ಯಗಳು
ಆಧುನಿಕ ಬಂಡವಾಳಶಾಹಿ ವ್ಯವಸ್ಥೆಗೂ, ಭಾರತದ ಸಾಂಪ್ರದಾಯಿಕ ಪಿತೃಪ್ರಧಾನ-ಊಳಿಗಮಾನ್ಯ ವ್ಯವಸ್ಥೆಗೂ ಇರುವ ಅಂತರ ಆರ್ಥಿಕತೆಯ ಚೌಕಟ್ಟಿನಲ್ಲಿ ಮಾತ್ರ ಗುರುತಿಸಬಹುದು. ಸಾಮಾಜಿಕ ನೆಲೆಯಲ್ಲಿ, ಸಾಂಸ್ಕೃತಿಕವಾಗಿ ಎರಡೂ ವ್ಯವಸ್ಥೆಗಳು ಒಂದೇ ಮಾದರಿಯ ನೀತಿ ಸಂಹಿತೆಗಳನ್ನು, ಮೌಲ್ಯಗಳನ್ನು ಪುಷ್ಟೀಕರಿಸುತ್ತವೆ. ಹೆಣ್ಣನ್ನು ಭೋಗದ ವಸ್ತುವಿನಂತೆ ನೋಡುವ, ಪರಾಧೀನತೆಗೆ ಒಳಪಡಿಸುವ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಪುರುಷಾಧಿಪತ್ಯ ಸಮಾಜದ ಚೌಕಟ್ಟಿನಲ್ಲಿ ಸಮ್ಮತಿಸುವ ಹಲವು ಪ್ರತಿಗಾಮಿ ಧೋರಣೆಗಳನ್ನು ಆಧುನಿಕ ಸಮಾಜದಲ್ಲೂ ಗುರುತಿಸಬಹುದು. ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಕೆಲಕಾಲ ಮುಕ್ತಿ ಪಡೆದಿದ್ದ ಅತ್ಯಾಚಾರಿಗಳನ್ನು, ಹಂತಕರನ್ನು ಸಾರ್ವಜನಿಕವಾಗಿ ಸನ್ಮಾನಿಸಿರುವುದು ಈ ಧೋರಣೆಯ ಒಂದು ಆಯಾಮವಾಗಿ ಕಾಣುತ್ತದೆ.
ಭಾರತದಲ್ಲಿ ಸಂಭವಿಸುತ್ತಿರುವ ಲೈಂಗಿಕ ದೌರ್ಜನ್ಯಗಳು, ಅತ್ಯಾಚಾರಗಳು, ಮರ್ಯಾದಾಹೀನ ಹತ್ಯೆಗಳು ಅಧಿಕೃತವಾಗಿಯೇ ಪ್ರಕಟವಾಗಿದ್ದು, ಈ ಪಿತೃಪ್ರಧಾನ ಧೋರಣೆಗೆ ಸಾಕ್ಷಿಯಾಗಿ ಕಾಣುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರ (NCRB) ವರದಿಯ ಅನುಸಾರವೇ ಭಾರತದಲ್ಲಿ ಪ್ರತಿ 15 ನಿಮಿಷಕ್ಕೆ ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗುತ್ತಾಳೆ. 1971 ರಿಂದ 2012ರ ಅವಧಿಯಲ್ಲಿ ಅತ್ಯಾಚಾರಗಳ ಪ್ರಮಾಣ ಶೇಕಡಾ 902ರಷ್ಟು ಹೆಚ್ಚಾಗಿದೆ. ಕಳೆದ ಹತ್ತು ವರ್ಷಗಳ ಬಿಜೆಪಿ ಆಳ್ವಿಕೆಯಲ್ಲೇ ಮಹಿಳಾ ದೌರ್ಜನ್ಯಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಲೈಂಗಿಕ ದೌರ್ಜನ್ಯಗಳ ಆರೋಪ, ಪೋಕ್ಸೋ ಕಾಯ್ದೆಯಡಿ ಅಪ್ರಾಪ್ತ ಬಾಲೆಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತ ಜನಪ್ರತಿನಿಧಿಗಳೂ, ಅಧ್ಯಾತ್ಮ ನೇತಾರರೂ, ಧಾರ್ಮಿಕ ನಾಯಕರೂ ನಮ್ಮ ನಡುವೆ ಇದ್ದಾರೆ.

ಜಾಗತಿಕ-ಸಾಮಾಜಿಕ ವ್ಯಾಧಿ
ಇಪ್ಸ್ಟೀನ್ ಹಗರಣವನ್ನು ಒಂದು ನಿರ್ದಿಷ್ಟ ದೇಶದ ವಿದ್ಯಮಾನವಾಗಿ ನೋಡಿದರೂ, ಅದರ ವ್ಯಾಪ್ತಿ ಮತ್ತು ಹರವು ವಿಶ್ವವ್ಯಾಪಿಯಾಗಿದೆ. ಉಲ್ಲೇಖಿತ ಗಣ್ಯ ವ್ಯಕ್ತಿಗಳ ಪೈಕಿ ಭಾರತೀಯರೂ ಇದ್ದಾರೆ. ಆದರೆ ಈ ವ್ಯಕ್ತಿಗತ ನೆಲೆಯನ್ನು ದಾಟಿ ನೋಡಿದಾಗ, ಈ ಹಗರಣವು ಬಂಡವಾಳಶಾಹಿ ವ್ಯವಸ್ಥೆಯು ರೂಪಿಸುವ ಒಂದು ಮೇಲ್ಪದರ-ಮೇಲ್ವರ್ಗ ಸಮಾಜದ ಲಕ್ಷಣವಾಗಿ ಕಾಣುತ್ತದೆ. ಈ ಕ್ರೌರ್ಯ ಕೇವಲ ವ್ಯಕ್ತಿಗಳಿಗೆ ಸೀಮಿತವಾಗಿ ಉಳಿಯದೆ, ಸಮಾಜದ ಎಲ್ಲ ಸ್ತರಗಳಿಗೂ ವಿಸ್ತರಿಸಿ, ಎಲ್ಲ ಮಗ್ಗುಲುಗಳಲ್ಲೂ ತನ್ನ ಭಿನ್ನ ರೂಪಗಳಲ್ಲಿ ಪ್ರಕಟವಾಗತೊಡಗಿದಾಗ ಅದನ್ನು ಸಮಾಜಶಾಸ್ತ್ರೀಯ ಪರಿಭಾಷೆಯಲ್ಲಿ ʼ ಸಾಮಾಜಿಕ ವ್ಯಾಧಿ/ವ್ಯಸನ ʼ (Social Malaise) ಎಂದು ಪರಿಗಣಿಸಲಾಗುತ್ತದೆ. ಭಾರತೀಯ ಸಮಾಜ ಈ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ.

ಇಪ್ಸ್ಟೀನ್ ಹಗರಣದ ತಾರ್ಕಿಕ ಅಂತ್ಯ ಹೇಗಾಗುತ್ತದೆ ಎಂಬ ಪ್ರಶ್ನೆ ಬಹುಶಃ ಬಹಳ ಕಾಲ ಪ್ರಶ್ನೆಯಾಗಿಯೇ ಉಳಿಯಬಹುದು. ಆದರೆ ಮಹಿಳಾ ಸಮೂಹವನ್ನು ದಿನನಿತ್ಯ ಕಾಡುತ್ತಿರುವ ಈ ಸಾಮಾಜಿಕ ವ್ಯಾಧಿ ಅಂತ್ಯವಾಗಲೇ ಬೇಕಿದೆ. ಈಗಾಗಲೇ ಭಾರತೀಯ ಸಮಾಜ ಅವನತಿಯ ಹಾದಿಯಲ್ಲಿ ಬಹುದೂರ ಕ್ರಮಿಸಿದೆ. ನೈತಿಕತೆ ಮತ್ತು ಮೌಲ್ಯಗಳ ಪಾತಾಳ ಕುಸಿತ ತೀವ್ರ ಗತಿಯಲ್ಲಿ ಸಂಭವಿಸುತ್ತಿದೆ. ಕಾನೂನು, ನ್ಯಾಯಾಂಗ ಮತ್ತು ಆಡಳಿತಾತ್ಮಕ ಚೌಕಟ್ಟುಗಳಿಂದಾಚೆ ಈ ಜಟಿಲ ಸಮಸ್ಯೆಯನ್ನು, ವ್ಯಸನವನ್ನು ಎದುರಿಸಬೇಕಿದೆ. ಡಿಜಿಟಲ್ ಯುಗದ ಭಾರತ ಮತ್ತು ಇಲ್ಲಿನ ಯುವ ಸಮಾಜ ಈ ಸವಾಲನ್ನು ಆದ್ಯತೆಯ ಮೇಲೆ ಪರಿಗಣಿಸಿ, ಮಹಿಳಾ ಸಮೂಹದ ಆತಂಕ, ಹತಾಶೆ ಮತ್ತು ಅಧೀನತೆಯನ್ನು ಹೋಗಲಾಡಿಸಬೇಕಿದೆ.
ಇದು ವಿಕಾಸದ ಹಾದಿಯಲ್ಲಿ ಸಾಗುತ್ತಿರುವ ದೇಶದ ನೈತಿಕ ಜವಾಬ್ದಾರಿ ಮತ್ತು ಕರ್ತವ್ಯ.
( ಈ ಲೇಖನದಲ್ಲಿರುವ ಮಾಹಿತಿ, ದತ್ತಾಂಶ ಮತ್ತು ಸೈದ್ಧಾಂತಿಕ ಉಲ್ಲೇಖಗಳಿಗೆ ಆಧಾರ :
The class character of the Epstein scandal – ಬಿ ಶಿವರಾಮನ್ ಜನಚೌಕ್ ಹಿಂದಿ ಪತ್ರಿಕೆ )






