ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿದೆ ಎಂದು ಪದೇಪದೇ ನೆನಪು ಮಾಡುವ ಸಲುವಾಗಿಯೇ ಒಂದು ವರ್ಗ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೂ ಸಾರ್ವಜನಿಕ ಸಂಕಥನಗಳಲ್ಲಿ (Public Discourses) ಜಾತಿ ದೌರ್ಜನ್ಯ, ಮಹಿಳಾ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಮತ್ತು ಅಸ್ಪೃಶ್ಯತೆಯ ಘಟನೆಗಳು ನಡೆದಾಗ ಮಾತ್ರ ಈ ಸಂಕಥನಗಳು ಬಿಡಿಬಿಡಿಯಾಗಿ, ಸಾಪೇಕ್ಷವಾಗಿ (Relatively) ನಾಗರಿಕ ಚರ್ಚೆಗೊಳಗಾಗುತ್ತವೆ. ವರ್ಷಕ್ಕೊಮ್ಮೆ ಸರ್ಕಾರದ ಅಥವಾ ಕೆಲವು ಸಂಘ ಸಂಸ್ಥೆಗಳ ಸಮೀಕ್ಷೆಗಳು ಈ ವಾಸ್ತವವನ್ನು ತೆರೆದಿಡುವುದು ವಾಡಿಕೆಯಾಗಿದೆ. ಜಾತಿ ದೌರ್ಜನ್ಯದ ಘಟನೆ ನಡೆದಾಗ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುವ ಪ್ರತಿರೋಧ-ಆಕ್ರೋಶ ಶೋಷಿತರ ನೋವನ್ನು ಧ್ವನಿಸಿದರೆ, ನಿರ್ಲಿಪ್ತವಾಗಿ ಏನೂ ನಡೆದೇ ಇಲ್ಲ ಎನ್ನುವಂತೆ ಮೌನ ವಹಿಸುವ ಹಿತಲವಯದ ಸಮಾಜ ಡಿಜಿಟಲ್ ಭಾರತದ ಆತ್ಮವಂಚಕ ಮನಸ್ಸುಗಳನ್ನು ಧ್ವನಿಸುತ್ತದೆ.

ಈ ವಿರೋಧಾಭಾಸದ ನಡುವೆಯೇ ಚಂದ್ರನನ್ನು ಸ್ಪರ್ಶಿಸಿರುವ ವೈಜ್ಞಾನಿಕ ಭಾರತ ಸಹಜೀವಿಯನ್ನು (ಮನುಷ್ಯರನ್ನು) ಸ್ಪರ್ಶಿಸಲು ಹಿಂಜರಿಯುವ ಪ್ರಾಚೀನ ಭಾರತಕ್ಕೂ ಮುಖಾಮುಖಿಯಾಗುತ್ತಿದೆ. ಸಹಜೀವಿಯ ಸ್ಪರ್ಶವನ್ನೇ ಮಾಲಿನ್ಯ ಎಂದು ಸೈದ್ಧಾಂತಿಕವಾಗಿ ಭಾವಿಸುವ ಒಂದು ಸಮಾಜವನ್ನು ಭಾರತ ಸಾವಿರಾರು ವರ್ಷಗಳಿಂದ ಪೋಷಿಸುತ್ತಾ ಬಂದಿದೆ. ವಿಚಿತ್ರ ಎಂದರೆ ಪ್ರಾಣಿಗಳು ಇಲ್ಲಿ ವಿನಾಯಿತಿ ಪಡೆಯುತ್ತವೆ. ಮನುಷ್ಯ ಜೀವಿ ಮಾತ್ರ ತನ್ನ ಹುಟ್ಟಿನ ಕಾರಣಕ್ಕಾಗಿ ಸ್ಪರ್ಶಾನುಭವಕ್ಕೆ ಹೊರತಾಗುತ್ತಾನೆ. ನಾಗರಿಕ ಭಾರತದಲ್ಲಿ (Civilised India) ಈ ಭೇದಭಾವಗಳು ಮೇಲ್ನೋಟಕ್ಕೆ ಕಾಣುವುದಿಲ್ಲವಾದರೂ, ಒಳಹೊಕ್ಕು ನೋಡಿದಾಗ ಶಿಖರದಿಂದ ಪಾತಾಳದವರೆಗೂ ʼಸ್ಪರ್ಶʼ ವನ್ನು ʼ ಮಲಿನವಾಗದೆ ʼ ಕಾಪಾಡಿಕೊಳ್ಳಬೇಕಾದ ಅಮೂಲ್ಯ ದೈಹಿಕ ಕ್ರಿಯೆ ಎಂದು ಭಾವಿಸುವ ವಿದ್ಯಾವಂತ ಸಮಾಜಗಳನ್ನು ಗುರುತಿಸಬಹುದು.

ಸಾರ್ವಜನಿಕ ಆಯಾಮ
ಅಸ್ಪೃಶ್ಯತೆಯನ್ನು ಆಚರಿಸುವುದು ಯಾರೇ ಆದರೂ, ಈ ಸಮಾಜಗಳ ಮೇಲ್ಜಾತಿ ವಕ್ತಾರರು ಅದನ್ನು ಮೌನ ಸಮ್ಮತಿ ಅಥವಾ ನೇರ ಸಮರ್ಥನೆಯ ಮುಖಾಂತರ ಅನುಮೋದಿಸುತ್ತಿರುತ್ತಾರೆ. ಇದು ನವ ಭಾರತದ ಒಂದು ಚಿತ್ರಣ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಸ್ಪೃಶ್ಯತೆಯ ಮತ್ತೊಂದು ಆಯಾಮಕ್ಕೆ ಒಳಗಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಆಗಸ್ಟ್ 26ರಂದು ಉತ್ತರಖಾಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶವೊಂದರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು ಹೋಮ, ಹವನಗಳ ಮೂಲಕ ಶುದ್ಧೀಕರಿಸಿರುವ ಶ್ರೀ ರಾಮಸೇನಾ ಧರ್ಮಾರ್ಥ ಸೇವಾ ನ್ಯಾಸ್ ಸಂಘಟನ್ ಕಾರ್ಯಕರ್ತರು ಅಸ್ಪೃಶ್ಯತೆಯ ಜೀವಂತಿಕೆಯನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ.
ಈ ಶುದ್ಧೀಕರಣ ಕ್ರಿಯೆಯನ್ನು ಉತ್ತರಖಾಂಡದ ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ಭಟ್ ಸಮರ್ಥಿಸಿದ್ದು, ಮೈದಾನವು ಘೋಷಣೆಗಳಿಂದ ಮಲಿನವಾಗಿತ್ತು ಎಂದು ಹೇಳಿದ್ದಾರೆ. (ದ ಹಿಂದೂ ಆಗಸ್ಟ್ 26 2026) ಏತನ್ಮಧ್ಯೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಈ ನಡೆಯನ್ನು ಖಂಡಿಸಿದ್ದಾರೆ. ಮಹೇಂದ್ರ ಭಟ್ ಅವರ ʼಘೋಷಣೆಗಳಿಂದ ಮಲಿನವಾಗಿತ್ತು ʼ ಎಂಬ ಅಭಿಪ್ರಾಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮಾಲಿನ್ಯ vs ಶುದ್ಧೀಕರಣ, ಪಾವಿತ್ರ್ಯ vs ಮಾಲಿನ್ಯ ಇತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತವೆ. ಅಸ್ಪೃಶ್ಯತೆಯನ್ನು ಸಾಂವಿಧಾನಿಕವಾಗಿ ನಿಷೇಧಿಸಿದ 80 ವರ್ಷಗಳ ನಂತರ ಭಾರತೀಯ ಸಮಾಜ ಎಷ್ಟೊಂದು ಮುಂದುವರೆದಿದೆ ಅಲ್ಲವೇ ? ಮುಟ್ಟಿದರೆ ಮಲಿನ ಎನ್ನುತ್ತಿದ್ದ ಭಾರತೀಯ ಸಮಾಜ ಈಗ ಮೌಖಿಕ ಮೌಲಿನ್ಯವನ್ನೂ ಗುರುತಿಸಲಾರಂಭಿಸಿದೆ. ಅಂದರೆ ನಮ್ಮ ಬೌದ್ಧಿಕ ದಾರಿದ್ರ್ಯ ಮತ್ತು ನೈತಿಕ ಅವನತಿಯನ್ನು ನೇರವಾಗಿ ಪ್ರದರ್ಶಿಸುತ್ತಿದ್ದೇವೆ ಎಂದರ್ಥ.

ಇದೇ ಸಮಯದಲ್ಲಿ ಮಹಾರಾಷ್ಟ್ರದ ಜಾಲ್ನಾ ಎಂಬ ಊರಿನಲ್ಲಿ ಗೋರಕ್ಷಕ ಕಾರ್ಯಕರ್ತರು ದಲಿತ ವ್ಯಕ್ತಿಯೊಬ್ಬನನ್ನು ಥಳಿಸಿ ಆತನಿಗೆ ಸಗಣಿ ತಿನ್ನಿಸುವ ಕ್ರೌರ್ಯ ಮೆರೆದಿದ್ದಾರೆ. ಮೂತ್ರ ಕುಡಿಸುವುದು, ಮಲ ತಿನ್ನಿಸುವುದು ಇವೆಲ್ಲ ಶಿಕ್ಷೆಗಳನ್ನು ಸ್ವತಂತ್ರ ಭಾರತದ ದಲಿತರು ಅನುಭವಿಸುತ್ತಲೇ ಇದ್ದಾರೆ. ಎಫ್ಐಆರ್, ನ್ಯಾಯಾಲಯ, ಅಪರೂಪದ ಶಿಕ್ಷೆ ಇವುಗಳಿಂದಾಚೆಗೆ ಈ ಅಮಾನುಷ ಘಟನೆಗಳು ಯಾವುದೇ ಕಂಪನ ಮೂಡಿಸುವುದಿಲ್ಲ. ಹಲ್ದ್ವಾನಿಯಲ್ಲಿ ಶುದ್ಧೀಕರಣಕ್ಕಾಗಿ ಬಳಸಿದ ʼಪವಿತ್ರʼ ಸಗಣಿಯೇ ಮಹಾರಾಷ್ಟ್ರದ ಜಾಲ್ನಾದಲ್ಲಿ ದಲಿತ ವ್ಯಕ್ತಿಯನ್ನು ಅಪಮಾನಿಸುವ ದಂಡನೆಯ ಸಾಧನವಾಗಿ ಬಳಕೆಯಾಗುವುದನ್ನು ಹೇಗೆ ಬಣ್ಣಿಸುವುದು ? ಈ ದ್ವಂದ್ವದಲ್ಲೇ (Dichotomy) ನಾವು ಮನುಸ್ಮೃತಿ ಅಥವಾ ಮನುವಾದದ ಒಳಹೊರಗನ್ನು ಗುರುತಿಸಬಹುದು.
ರಾಜಕೀಯ ಆಯಾಮ
ಈ ಸಂದರ್ಭದಲ್ಲಿ ವಿಚಿತ್ರ ಎನಿಸಿದರೂ ಗಮನಿಸಬೇಕಿರುವುದು, ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ , ಲೋಕಜನಶಕ್ತಿ (ರಾಮ್ ವಿಲಾಸ್) ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ಅವರ ಹೇಳಿಕೆ. ಜಾತಿ ತಾರತಮ್ಯಗಳು ಹೆಚ್ಚಾಗುತ್ತಿರುವ ರಾಹುಲ್ ಗಾಂಧಿಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಾನ್ಯ ಸಚಿವರು “ ಸಮಾಜದಲ್ಲಿ ಜಾತಿ ತಾರತಮ್ಯಗಳು ಇನ್ನೂ ಏಕೆ ಜೀವಂತವಾಗಿವೆ ಎನ್ನುವುದಕ್ಕೆ ಬಿಜೆಪಿಯ ಆಳ್ವಿಕೆಗೂ ಮುನ್ನ ಅಧಿಕಾರದಲ್ಲಿದ್ದ ಪಕ್ಷಗಳು( ಅಂದರೆ ಕಾಂಗ್ರೆಸ್) ಉತ್ತರಿಸಬೇಕು,,,,,,,” ಎಂದು ಹೇಳಿದ್ದಾರೆ (ದ ಹಿಂದೂ30-08-2026). ಶುದ್ಧೀಕರಣ ಕ್ರಿಯೆಯ ಮುಖಾಂತರ ಅಸ್ಪೃಶ್ಯತೆಗೊಳಗಾಗುತ್ತಿರುವವರಲ್ಲಿ ಖರ್ಗೆ ಮೊದಲಿಗರೇನಲ್ಲ. ನೆಹರೂ ಕಾಲದಲ್ಲೂ ಇದು ನಡೆದಿತ್ತು. ಅಥವಾ ಸಗಣಿ-ಮಲ ತಿನ್ನಿಸಲ್ಪಟ್ಟವರಲ್ಲಿ ಜಲ್ನಾದ ದಲಿತ ವ್ಯಕ್ತಿಯೂ ಮೊದಲಿಗನಲ್ಲ.

ಚಿರಾಗ್ ಪಾಸ್ವಾನ್ ಅವರ ಈ ಹೇಳಿಕೆಯೇ, ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆಯಂತಹ ಅಮಾನುಷ ಪದ್ಧತಿ ಏಕೆ ಜೀವಂತವಾಗಿದೆ ಎಂದು ಸ್ಪಷ್ಟೀಕರಿಸುತ್ತದೆ. ಹಿಂದಿನ ಆಳ್ವಿಕೆಗಳನ್ನು ದೂಷಿಸುವ ಮೂಲಕ ಇಂದಿನ ಕ್ರೌರ್ಯಕ್ಕೆ ಕವಚ ಹೊದಿಸುವ ಹೊಸ ರಾಜಕೀಯ ಅವಿಷ್ಕಾರವನ್ನು ಚಿರಾಗ್ ಪಾಸ್ವಾನ್ ಧ್ವನಿಸಿದ್ದಾರೆ. 2014ರ ಈ ಬೌದ್ಧಿಕ ಉತ್ಪನ್ನವೇ 12 ವರ್ಷಗಳಲ್ಲಿ ಸಂಭವಿಸಿರುವ ಲಕ್ಷಾಂತರ ಮಹಿಳಾ ದೌರ್ಜನ್ಯಗಳನ್ನು, ಜಾತಿ ದೌರ್ಜನ್ಯಗಳನ್ನು ಸಹಜ ಘಟನೆಗಳನ್ನಾಗಿ ಮಾಡುವ ಕಚ್ಚಾವಸ್ತುವಾಗಿ ಬಳಕೆಯಾಗಿದೆ. ಅಧಿಕಾರ ರಾಜಕಾರಣ ಜಾತಿ ಅಸ್ಮಿತೆಗಳನ್ನು ತನ್ನೊಳಗೆ ಆವಾಹಿಸಿಕೊಳ್ಳುವುದರ ಮೂಲಕ, ಶೋಷಿತ ಸಮುದಾಯಗಳನ್ನೇ ಹೆಚ್ಚು ಬಾಧಿಸುವ ಸಾಮಾಜಿಕ ಅಸೂಕ್ಷ್ಮತೆ-ಅಸಂವೇದನೆಗಳನ್ನೂ ಸಹ ಸಾಪೇಕ್ಷಗೊಳಿಸಿಬಿಡುತ್ತದೆ. ಹಾಗಾಗಿ ಮಾನ್ಯ ಕೇಂದ್ರ ಸಚಿವರಿಗೆ ಅಮಾನುಷ ಅಪರಾಧಗಳು ಚಾರಿತ್ರಿಕ ಪ್ರಕ್ರಿಯೆಯಾಗಿ ಕಾಣುವುದೇ ಹೊರತು, ವರ್ತಮಾನದ ದುಷ್ಟ ಕ್ರಿಯೆ ಎಂದೆನಿಸುವುದಿಲ್ಲ.
ದಲಿತ ಚಳುವಳಿಗಳ ಆಯಾಮ
ದಲಿತ ಚಳುವಳಿಗಳ ನಡುವೆಯೂ ಸಹ ಶುದ್ಧೀಕರಣ ಘಟನೆ ರಾಷ್ಟ್ರವ್ಯಾಪಿ ಸಂಚಲನ ಮೂಡಿಸಿಲ್ಲ. ಬಹುಶಃ ಅಪಮಾನಕ್ಕೊಳಗಾದ ವ್ಯಕ್ತಿಯ ರಾಜಕೀಯ ಚಹರೆ ಅಡ್ಡಿಯಾಗಿರಬಹುದು. ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಅಥವಾ ಪ್ರತಿಮೆಗೆ ಅವಮಾನವಾದಾಗ ಉಂಟಾಗುವಷ್ಟು ಕಂಪನ ದಲಿತ ಚಳುವಳಿಗಳಲ್ಲಿ ಈ ಘಟನೆಯಲ್ಲಿ ಕಾಣಲೂ ಇಲ್ಲ. ಇದು ದಲಿತ ಅಸ್ಮಿತೆ ಮತ್ತು ದಲಿತ ರಾಜಕಾರಣದ ನಡುವೆ ಇರುವ ಅಂತರವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಚಿರಾಗ್ ಪಾಸ್ವಾನ್ ಈ ಅಂತರದ ಸಾಕ್ಷಿಪ್ರಜ್ಞೆಯಾಗಿ ಕಾಣುತ್ತಾರೆ. ಶುದ್ಧೀಕರಣದ ಘಟನೆ ಅಸ್ಪೃಶ್ಯತೆಯ ಜೀವಂತಿಕೆಯನ್ನು ಮಾತ್ರ ಪ್ರದರ್ಶಿಸಿಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ನೈತಿಕವಾಗಿ ಕೊಳೆತುಹೋಗುತ್ತಿರುವ ಭಾರತೀಯ ಸಮಾಜದ ದುಸ್ಥಿತಿಯನ್ನೂ ನಮ್ಮ ಮುಂದಿರಿಸಿದೆ.
ಏಕೆ ಹೀಗೆ ಎಂದು ಯೋಚಿಸಿದಾಗ ನಮಗೆ ಕಾಣುವುದು ಮನುಸ್ಮೃತಿ ಎಂಬ ಸಂಹಿತೆಗಳ ಗ್ರಂಥ ಮತ್ತು ಮನುವಾದ ಎಂಬ ವರ್ತಮಾನದ ಸಾಮಾಜಿಕ ವಿದ್ಯಮಾನ. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ, ಅಸ್ಪೃಶ್ಯತೆಯನ್ನು ಸಂವಿಧಾನದ ಅನುಚ್ಛೇದ 17ರ ಅನ್ವಯ ನಿಷೇಧಿಸಿ 78 ವರ್ಷಗಳು ಕಳೆದಿವೆ. (ನವಂಬರ್ 29 1948). ಶಾಸನಾತ್ಮಕವಾಗಿ ನಿಷೇಧಿಸಲ್ಪಟ್ಟಿರುವ ಒಂದು ಅಮಾನುಷ ಪದ್ಧತಿ ದೇಶದ ಉದ್ದಗಲಕ್ಕೂ ಎಲ್ಲ ಸಮಾಜಗಳಲ್ಲೂ, ಎಲ್ಲ ಸ್ತರಗಳಲ್ಲೂ ಚಾಲ್ತಿಯಲ್ಲಿರುವುದಕ್ಕೆ ನೂರಾರು ಸಾಕ್ಷಿಗಳು ದೊರೆಯುತ್ತವೆ. ಆದರೆ ದಲಿತ ಚಳುವಳಿಗಳು ಅಸ್ಪೃಶ್ಯತೆಯ ವಿರುದ್ಧ ರಾಷ್ಟ್ರವ್ಯಾಪಿ ಜನಾಂದೋಲನವನ್ನು ಹಮ್ಮಿಕೊಂಡಿರುವ ಉದಾಹರಣೆಗಳೇ ಕಾಣುವುದಿಲ್ಲ. ಸಂವಿಧಾನ ನಮ್ಮನ್ನು ಅಸ್ಪೃಶ್ಯತೆಯಿಂದ ಕಾಪಾಡುತ್ತದೆ ಎಂಬ ಭಾವನೆ ದಟ್ಟವಾಗಿರುವುದು ಇದಕ್ಕೆ ಕಾರಣ.

ಆದರೆ ವಾಸ್ತವ ಬೇರೆಯೇ ಇದೆ ಎನ್ನುವುದನ್ನು ಹಲ್ದ್ವಾನಿ ಸಾಬೀತುಪಡಿಸಿದೆ. ಈ 78 ವರ್ಷಗಳಲ್ಲಿ ಕಳೆದ 50 ವರ್ಷಗಳಿಂದಾದರೂ ಡಾ. ಅಂಬೇಡ್ಕರ್ ಅವರ ಮನುಸ್ಮೃತಿ ದಹನದ ದಿನವನ್ನು ವಾರ್ಷಿಕ ಆಚರಣೆಯಂತೆ (Annual Ritual) ನಡೆಸಿಕೊಂಡು ಬರಲಾಗಿದೆ. ಈ ಹಾಳೆಗಳನ್ನು ಸುಡುವ ಮೂಲಕ, ಭಾರತೀಯ ಸಮಾಜದ ನರನಾಡಿಗಳಲ್ಲಿ ಪ್ರವಹಿಸುತ್ತಿರುವ ಮನುಸ್ಮೃತಿಯ ತಾತ್ವಿಕ ಸಂಹಿತೆಗಳನ್ನು ನಗಣ್ಯಗೊಳಿಸುತ್ತಾ ಬಂದಿದ್ದೇವೆ. ಅಂಬೇಡ್ಕರ್ ಮನುಸ್ಮೃತಿಯ ಕೆಲವು ಪುಟಗಳನ್ನು ಸುಟ್ಟ ಸಂದರ್ಭದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಅನಿರ್ಬಂಧಿತ ಸಾಮಾಜಿಕ ನಡವಳಿಕೆಯಾಗಿತ್ತು. ಆದರೆ ಈಗ ಸಾಂವಿಧಾನಿಕ ನಿರ್ಬಂಧಗಳು, ಶಾಸನಾತ್ಮಕ ನಿಬಂಧನೆಗಳ ನಡುವೆ ಇದನ್ನು ಕಾಣುತ್ತಿದ್ದೇವೆ. ನಮ್ಮ ಹೋರಾಟಗಳಿಗೆ ಹೊಸ ಹೊಳಹು ಇನ್ನೂ ದೊರಕಿಲ್ಲ.
ಸಾಮಾಜಿಕ ಆಯಾಮ
ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದು ? ಇನ್ನು ನೂರು ವರ್ಷ ಈ ದಹನ ಕಾರ್ಯವನ್ನು ಸಾಂಕೇತಿಕವಾಗಿ ನಡೆಸಿದರೂ ಭಾರತೀಯ ಸಮಾಜದಿಂದ ಹಲ್ದ್ವಾನಿಗಳು, ʼಊನʼ ಗಳು, ಜಾಲ್ನಾಗಳು ಮರೆಯಾಗುವುದಿಲ್ಲ. ಏಕೆಂದರೆ ಭಾರತೀಯ ಸಮಾಜದಲ್ಲಿ, ವಿಶೇಷವಾಗಿ ಮೇಲ್ಜಾತಿಗಳಲ್ಲಿ, ವೈದಿಕಶಾಹಿಯನ್ನು ರಾಜಕೀಯ ಸ್ವಾರ್ಥಕ್ಕಾಗಿ ಅವಲಂಬಿಸುವ ಮಧ್ಯಂತರ ಜಾತಿಗಳಲ್ಲಿ, ಹಿಂದುಳಿದ ವರ್ಗಗಳಲ್ಲಿ , ಕೆಲವು ಆದಿವಾಸಿ ಸಮುದಾಯಗಳಲ್ಲೂ ಸಹ ಮನು ಸಂಹಿತೆಗಳು ಆಳಕ್ಕಿಳಿದು ಮಡುಗಟ್ಟಿವೆ. ಈ ಸಮಾಜಗಳಲ್ಲಿ ಮರ್ಯಾದೆಗೇಡು ಹತ್ಯೆ, ಸಾಮಾಜಿಕ ಬಹಿಷ್ಕಾರ ಮುಂತಾದ ಅನಾಗರಿಕ-ಅಮಾನುಷ ವರ್ತನೆಗಳು ಸಾರ್ವಜನಿಕ ಮಾನ್ಯತೆ-ಮೌನ ಸಮ್ಮತಿ ಪಡೆದುಕೊಳ್ಳುತ್ತವೆ. ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ಸಮ್ಮಾನಿಸುವ ಹಿಂದುಳಿದ ವರ್ಗಗಳಲ್ಲೇ ಮರ್ಯಾದೆಗೇಡು ಹತ್ಯೆ ಮತ್ತು ಸಾಮಾಜಿಕ ಬಹಿಷ್ಕಾರ ಜೀವಂತವಾಗಿದೆ. ಇವೆರಡೂ ಸಹ ಅಸ್ಪೃಶ್ಯತೆಯ ಅತ್ಯಂತ ಕ್ರೂರ ಆಯಾಮಗಳು ಎಂದು ಹೇಳಬೇಕಿಲ್ಲ.

ಅಸ್ಪೃಶ್ಯತೆಯನ್ನು ಅಥವಾ ಸಹಜೀವಿ ಮನುಷ್ಯರನ್ನು ಪ್ರತ್ಯೇಕಿಸಿ-ದೂರ ಇಟ್ಟು ನೋಡುವ ಧೋರಣೆಯನ್ನು ಅಂಕಿಅಂಶಗಳಲ್ಲಿ ನೋಡುವುದಕ್ಕಿಂತಲೂ, ಪ್ರಗತಿ ಹೊಂದಿರುವ ಆಧುನಿಕ ನಾಗರಿಕ ಜೀವನದಲ್ಲಿ ನೋಡಿದಾಗ ಅಲ್ಲಿ ನಮಗೆ ಮನುಸ್ಮೃತಿಯ ಒಂದು ಚಹರೆ ಎದ್ದು ಕಾಣುತ್ತದೆ. ಮೇಲ್ಜಾತಿಯವರು ಮಾತ್ರ ಇರುವ ಸ್ನೇಹ ಕೂಟಗಳಲ್ಲಿ, ಕುಟುಂಬಗಳ ನಾಲ್ಕು ಗೋಡೆಗಳ ನಡುವೆ, ಇಂದಿಗೂ ಮಡಿ-ಮೈಲಿಗೆಯನ್ನು ಕಟ್ಟುನಿಟ್ಟಾಗಿ ಆಚರಿಸುವ ಸಂಪ್ರದಾಯಸ್ಥ ಕುಟುಂಬಗಳ ಒಳಚರ್ಚೆಗಳಲ್ಲಿ , ಅಸ್ಪೃಶ್ಯತೆಯ ಬೌದ್ಧಿಕ ಮಗ್ಗುಲುಗಳನ್ನು ಈಗಲೂ ಗುರುತಿಸಬಹುದು. ನಾಲ್ಕು ಗೋಡೆಗಳ ನಡುವೆ ಅಥವಾ ಖಾಸಗಿ ಸ್ಥಳದಲ್ಲಿ ಸಾರ್ವಜನಿಕರ ಕಣ್ಣಿಗೆ ಕಾಣದಂತೆ ಅಥವಾ ಕೇಳಿಸದಂತೆ ನಡೆಸುವ ಜಾತಿ ನಿಂದನೆಯು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿರುವುದನ್ನು ಈ ಹಿನ್ನೆಲೆಯಲ್ಲಿ ಪರಾಮರ್ಶಿಸಬೇಕಿದೆ.
ನ್ಯಾಯಾಂಗದ ದೃಷ್ಟಿಯಲ್ಲಿ ಇದು ಸರಿ ಇರಬಹುದು ಏಕೆಂದರೆ ಅಂತಿಮ ನ್ಯಾಯ ಸಾಕ್ಷ್ಯಾಧಾರಿತವಾಗಿರುತ್ತದೆ. ಭಾರತೀಯ ಸಮಾಜದಲ್ಲಿ ನಾಲ್ಕು ಗೋಡೆಗಳ ನಡುವೆ ನಡೆಯುವ ಅತ್ಯಾಚಾರ, ಲೈಂಗಿಕ ಕಿರುಕುಳ ಇನ್ನಿತರ ಮಹಿಳಾ ದೌರ್ಜನ್ಯಗಳೂ ಸಹ ಬಹುತೇಕ ಸಂದರ್ಭದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಮರೆಯಾಗಿಬಿಡುತ್ತವೆ. ಆದರೆ ಮಾನವೀಯ ದೃಷ್ಟಿಯಿಂದ ನೋಡಿದಾಗ, ಜಾತಿ ನಿಂದನೆಯಾಗಲೀ, ಮಹಿಳಾ ದೌರ್ಜನ್ಯವಾಗಲೀ ಅಥವಾ ಅಸ್ಪೃಶ್ಯತೆಯಾಗಲೀ ಕಾಡಬೇಕಿರುವುದು ಆಧುನಿಕೀಕರಣಗೊಂಡ (Modernised) ವಿದ್ಯಾವಂತ ಸಮಾಜಗಳನ್ನು. ಈ ಸಮಾಜಗಳಲ್ಲಿ ಸಕ್ರಿಯವಾಗಿರುವ ಸಂವೇದನಾಶೀಲ ಮನಸ್ಸುಗಳು, ಸಂಘಟನೆಗಳು ʼ ಅಸ್ಪೃಶ್ಯತೆಯನ್ನು ಅಳಿಸುವ ಅಭಿಯಾನಗಳನ್ನುʼ ಹಮ್ಮಿಕೊಂಡಿರುವ ಉದಾಹರಣೆಗಳೂ ಕಡಿಮೆ. ಕೋಲಾರದ ಅರಿವು ಭಾರತ ಸಂಘಟನೆ ಇದನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ.
ಮನಸ್ಥಿತಿಯಾಗಿ ಮನುಸ್ಮೃತಿ
ಮೂಲತಃ ಅಸ್ಪೃಶ್ಯತೆ ಎನ್ನುವ ಸಾಮಾಜಿಕ ಅನಿಷ್ಠ ಇರುವುದು ನಮ್ಮ ಮುಂದುವರೆದ ಸಮಾಜಗಳ ಮನಸ್ಸುಗಳಲ್ಲಿ, ಜೀವನ ವಿಧಾನಗಳಲ್ಲಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ. ಕಾನೂನಿನ ಕುಣಿಕೆಗೆ ಸಿಲುಕದಂತೆ ಇದನ್ನು ನಿಭಾಯಿಸುವ ಜಾಣ್ಮೆಗೂ ನಮ್ಮಲ್ಲಿ ಕೊರತೆಯಿಲ್ಲ. ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ, 1955ರ ಅಸ್ಪೃಶ್ಯತೆ (ಅಪರಾಧಗಳ) ಕಾಯ್ದೆ ಮತ್ತು ಅದರ ವಿಸ್ತೃತ ರೂಪ 1976ರ ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ ಈ ಮೂರು ಶಾಸನಗಳಡಿ ಕಳೆದ 8 ವರ್ಷಗಳಲ್ಲಿ ಸುಮಾರು 2000 ಪ್ರಕರಣಗಳು ದಾಖಲಾಗಿವೆ. (ನೋಡಿ ಪ್ರಜಾವಾಣಿ ವರದಿ 31-8-2026) ಈ ಕಾನೂನು ಪ್ರಕರಣಗಳಲ್ಲಿ, ಮೇಲ್ಜಾತಿಗಳ ಮನದಾಳದಲ್ಲಿ ಮಡುಗಟ್ಟಿರುವ ಜಾತಿ ತಾರತಮ್ಯದ ಭಾವನೆಯನ್ನು ಗುರುತಿಸಲಾಗುವುದಿಲ್ಲ. ಬಾಹ್ಯ ಸಮಾಜದಲ್ಲಿ ಕಾಣುವ ಘಟನೆಗಳಷ್ಟೇ ದಾಖಲಾಗಿರುತ್ತವೆ. ಉತ್ತರಖಾಂಡದ ಬಿಜೆಪಿ ರಾಜ್ಯಾಧ್ಯಕ್ಷ ಈ ಭಾವನೆಯನ್ನೇ ಹೊರಗೆಡಹಿದ್ದಾರೆ.
ಭಾರತದಲ್ಲಿ ಗುರುತಿಸಬಹುದಾದ ರಾಜಕೀಯ ವಿರೋಧಾಭಾಸ ಎಂದರೆ, 80 ವರ್ಷಗಳ ಸ್ವತಂತ್ರ ಆಳ್ವಿಕೆಯ ಹೊರತಾಗಿಯೂ ʼದಲಿತ ರಾಜಕಾರಣʼ ಒಂದು ನಿರ್ದಿಷ್ಟ ರೂಪ ಪಡೆದುಕೊಂಡಿಲ್ಲ. ಆದರೆ ಅಧಿಕಾರ ರಾಜಕಾರಣದ ಪ್ರತಿ ಹಂತದಲ್ಲೂ ʼ ದಲಿತ ಅಸ್ತಿತ್ವ ಮತ್ತು ದಲಿತ ಅಸ್ಮಿತೆ ʼ ಬಲವಾಗಿ ಬೇರೂರಿದೆ. ಈ ಬೇರೂರಿದ ರಾಜಕೀಯ ನೆಲೆಗಳನ್ನು ಪ್ರತಿನಿಧಿಸುವ ದಲಿತ ಶಾಸಕ-ಸಂಸದರು, ಪ್ರತಿನಿಧಿಗಳು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಶುದ್ಧೀಕರಣದಂತಹ ಪ್ರಾಚೀನ ಅಮಾನುಷ ಕ್ರಿಯೆ ನಮ್ಮ ನಡುವೆ ನಡೆದಿದ್ದರೂ, ಹಿರಿಯ ರಾಜಕೀಯ ನಾಯಕರೊಬ್ಬರು ಈ ಅಪಮಾನಕ್ಕೀಡಾಗಿದ್ದರೂ, ಈ ಬೇರೂರಿರುವ ಜನಪ್ರತಿನಿಧಿಗಳಿಂದ ಆಕ್ರೋಶ ಇರಲಿ, ವಿಷಾದವೂ ವ್ಯಕ್ತವಾಗಿಲ್ಲ. ಖರ್ಗೆ ಅವರೂ ಸಹ ತಮ್ಮ ಸ್ವಪಕ್ಷೀಯರ ಬಗ್ಗೆ ಇದೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮನುಸ್ಮೃತಿ ಅಥವಾ ಮನುವಾದ ಒಂದು ಮನಸ್ಥಿತಿಯಾಗಿ-ಮನೋಭಾವದ ರೂಪದಲ್ಲಿ ಬಲವಾಗಿ ನೆಲೆಗೊಂಡಿರುವುದು ಅಧಿಕಾರ ಕೇಂದ್ರಗಳ ಈ ಸಮಾಜಗಳಲ್ಲೇ ಹೊರತು, ಮುದ್ರಿತ ಹಾಳೆಗಳಲ್ಲಿ ಅಲ್ಲ. ಸಂವಿಧಾನದ ಅನುಚ್ಛೇದ 17 ಈ ಮನಸ್ಸುಗಳನ್ನು ಬಾಧಿಸುವುದೂ ಇಲ್ಲ, ಹೆದರಿಸುವುದೂ ಇಲ್ಲ. ಏಕೆಂದರೆ ರಾಜಕೀಯ ರಕ್ಷಾ ಕವಚ ಗಟ್ಟಿಯಾಗಿರುತ್ತದೆ. ಇದೇ ಮನಸ್ಥಿತಿಯೇ ಸಮಾಜದ ಮೇಲ್ ಹಂತದಿಂದ ತಳಸ್ತರದ ಕಟ್ಟಕಡೆಯ ವ್ಯಕ್ತಿಯವರೆಗೂ ಕಿಂಚಿತ್ತೂ ಘಾಸಿಗೊಳಗಾಗದೆ ಇಳಿದು ಬರುತ್ತದೆ. ಜಲ್ನಾದಲ್ಲಿ ಗೋ ರಕ್ಷಣೆಯ ನೆಪದಲ್ಲಿ ದಲಿತ ವ್ಯಕ್ತಿಗೆ ಸಗಣಿ ತಿನ್ನಿಸಿದವರು ಇಲ್ಲಿ ಕಾಣಿಸುತ್ತಾರೆ. ಈ ಮನಸ್ಥಿತಿಯನ್ನು ಭೇದಿಸುವುದು ಹೇಗೆ ? ಹೋಗಲಾಡಿಸುವುದು ಹೇಗೆ ? ಈ ಜವಾಬ್ದಾರಿ ಯಾರದು ?

ನಿರ್ಮೂಲನೆಯ ಹಾದಿ ಯಾವುದು ?
ಕೇವಲ ಪ್ರದರ್ಶನಗಳಾಗಿ ಕಾಣುವ (Spectatcles) ವಾರ್ಷಿಕ ಆಚರಣೆಗಳಿಂದ (Annual Rituals) ಇದು ಸಾಧ್ಯವಾಗುವುದಿಲ್ಲ. ಸಮಾಜದ ನರನಾಡಿಗಳಲ್ಲೂ ಪ್ರವಹಿಸುತ್ತಿರುವ ಜಾತಿ ಪ್ರಜ್ಞೆ, ಮೇಲ್ಜಾತಿ ಶ್ರೇಷ್ಠತೆಯ ಅಹಮಿಕೆ ಮತ್ತು ಮನುಷ್ಯ ಸಹಜೀವಿಯನ್ನು ನಿಕೃಷ್ಟವಾಗಿ ಕಾಣುವ ಮನೋಭಾವವನ್ನು ಹೋಗಲಾಡಿಸುವ ಬಗೆ ಹೇಗೆ ಎಂದು ಯೋಚಿಸಬೇಕಿದೆ. ಖಂಡಿತವಾಗಿಯೂ ಇದು ಸೆಮಿನಾರ್ ಸಭಾಂಗಣಗಳಲ್ಲಿ ನಿಷ್ಕರ್ಷೆಯಾಗುವ ವಿಚಾರವಲ್ಲ. ಅಸ್ಪೃಶ್ಯತೆಯ ನೋವು-ಯಾತನೆಯನ್ನು ಈಗಲೂ ನೇರವಾಗಿ ಅನುಭವಿಸುತ್ತಿರುವವರು ಸೆಮಿನಾರ್ಗಳಲ್ಲಿ ಅಪರೂಪವಾಗಿ ಕಾಣುತ್ತಾರೆ ಅಥವಾ ಕಾಣುವುದೇ ಇಲ್ಲ. ಗ್ರಾಂಥಿಕವಾಗಿ ಅಸ್ಪೃಶ್ಯತೆಯ ಕರಾಳ ಚಿತ್ರಣ ನೀಡುವ ವಿದ್ವತ್ ಪೂರ್ಣ ಉಪನ್ಯಾಸಗಳು ತಟ್ಟುವುದಾದರೂ ಯಾರನ್ನು ? ಇಲ್ಲಿ ನಮಗೆ ಮನುವಾದ-ಮನುವಾದಿ ಎಂಬ ಕ್ಲೀಷೆಗಳನ್ನು ಮರುನಿರ್ವಚಿಸುವ ಅಗತ್ಯತೆ ಎದ್ದು ಕಾಣುತ್ತದೆ.
ಭಾರತೀಯ ಸಮಾಜ ಸಂವಿಧಾನವನ್ನು ಗ್ರಾಂಥಿಕವಾಗಿಯೇ ಉಳಿಸಿಕೊಂಡು, ಮನುಸ್ಮೃತಿಯನ್ನು ಅದು ಬೋಧಿಸುವ ಮನುಕುಲ ವಿರೋಧಿ ಸಂಹಿತೆಗಳನ್ನು ಎದೆಯಾಳಕ್ಕೆ ಇಳಿಸಿಕೊಂಡಿದೆ. ಇದು ಅದಲುಬದಲಾಗಬೇಕಿತ್ತು ಆದರೆ ಆಗಿಲ್ಲ. ಏಕೆಂದರೆ ಇಂದಿಗೂ ಸಹ ಜಾತಿ ವ್ಯವಸ್ಥೆಯ ಪ್ರಾಚೀನ ತಂತುಗಳು ಭಾರತೀಯ ಸಮಾಜವನ್ನು ಎಲ್ಲ ಮಗ್ಗುಲುಗಳಿಂದಲೂ ಆವರಿಸಿಕೊಂಡು ನಿಯಂತ್ರಿಸುತ್ತಿದೆ. ಅಂದು ಜಗಜೀವನ್ರಾಮ್, ನೆನ್ನೆ ಮಲ್ಲಿಕಾರ್ಜುನ ಖರ್ಗೆ , ನಾಳೆ ಮತ್ತೊಬ್ಬರು. ಈ ಅಪಮಾನಕ್ಕೆ ಗುರಿಯಾಗುತ್ತಲೇ ಇರುತ್ತಾರೆ. ಇಲ್ಲಿ ಶಾಶ್ವತ ಗಾಯವಾಗುವುದು ಮನುಜ ಪ್ರಜ್ಞೆಗೆ, ನಾಗರಿಕ ಮನೋಭಾವಕ್ಕೆ (Civilised Mindset) ಮತ್ತು ಸಾಂವಿಧಾನಿಕ ನೈತಿಕತೆಗೆ. ಕುಡಿಯುವ ನೀರಿನ ಟ್ಯಾಂಕಿಗೆ ಮಲ ಸುರಿಯುವ ಸಮಾಜದಲ್ಲಿ (ವೆಂಗೈವಯಲ್ ಪುದುಕ್ಕೋಟೈ ತಮಿಳುನಾಡು ಡಿಸೆಂಬರ್ 2022
-https://indianexpress.com/article/cities/chennai/human-excreta-water-tank-sc-village-tamil-nadu-8347377/ ) ನಾವು ಅಸ್ಪೃಶ್ಯತಾ ನಿರ್ಮೂಲನೆಯ ಕನಸು ಕಾಣುತ್ತಿದ್ದೇವೆ. ದುಷ್ಟ ಮನಸ್ಸುಗಳಿಗೆ ಕೈಹಾಕದೆ ಇದು ಸಾಧ್ಯವಾದೀತೇ ?

ದಲಿತ ಪ್ರಜ್ಞೆಯ ರಾಜಕೀಯ ವಿಘಟನೆ ಈ ವಿಷಾದಕರ ಸನ್ನಿವೇಶಕ್ಕೆ ಒಂದು ಕಾರಣ ಎನ್ನಬಹುದು. ಆದರೆ ಇದನ್ನೂ ಮೀರಿ ದಲಿತ ಚಳುವಳಿಗಳ ಹೋರಾಟಗಳ ಮಾದರಿ ಮತ್ತು ಬೌದ್ಧಿಕ ಸಂಕಥನಗಳ ಭಿನ್ನ ಆಯಾಮಗಳನ್ನೂ ಗಂಭೀರವಾಗಿ ಮರುವಿಮರ್ಶೆ ಮಾಡಬೇಕಿದೆ. ಸಾಮಾಜಿಕವಾಗಿ-ಆರ್ಥಿಕವಾಗಿ ಮೇಲ್ ಚಲನೆ ಪಡೆದಿರುವ ದಲಿತ ಸಮಾಜಗಳಲ್ಲಿ ಈ ಜಿಜ್ಞಾಸೆ ಹೆಚ್ಚಾಗಿ ಕಾಡಬೇಕಿದೆ. ದಲಿತ ರಾಜಕಾರಣ ಹರಳುಗಟ್ಟಬೇಕಾದರೆ ಕೆಳಹಂತದಿಂದಲೇ ಜಾತಿ ವ್ಯವಸ್ಥೆಯ ಕ್ರೂರ ವಿಧಾನಗಳನ್ನು ಒಂದೊಂದಾಗಿ ತೊಡೆದುಹಾಕುವುದು ನಮ್ಮ ಆದ್ಯತೆಯಾಗಬೇಕಾಗುತ್ತದೆ. ಇದಕ್ಕೆ ಬೇಕಿರುವುದು ವೈಚಾರಿಕ ಅರಿವು, ವೈಜ್ಞಾನಿಕ ಪ್ರಜ್ಞೆ ಮತ್ತು ಮಾನವೀಯ ಕಾಳಜಿ. ನಮ್ಮ ನಡುವೆ, ನಮ್ಮೊಡನೆ, ನಮ್ಮೊಳಗೆ ಅಂಬೇಡ್ಕರ್ ಇರುವುದೇ ಆದರೆ ಇದೇನೂ ಅಸಾಧ್ಯವಲ್ಲ.
-೦-೦-೦-೦-






