ಇಡೀ ರಾಜ್ಯದ ಗಮನ ಸೆಳೆದಿರುವ ಎರಡು ಉಪಚುನಾವಣಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಘಟಾನುಘಟಿ ನಾಯಕರು ಈಗಾಗಲೇ ಕ್ಷೇತ್ರ ಬಿಟ್ಟು ತೆರಳಿದ್ರೂ ಸಹ, ಅಭ್ಯರ್ಥಿಗಳ ಬೆಂಬಲಿಗರು ಕೊನೆಯ ದಿನ ಮನೆಮನೆ ಪ್ರಚಾರ ನಡೆಸಿದ್ರು. ಇನ್ನೊಂದೆಡೆ, ಅಖಾಡದಲ್ಲಿ ಝಣ ಝಣ ಕಾಂಚಾಣದ ಸದ್ದೂ ಸಹ ಜೋರಾಗಿದ್ದು, ಮತದಾರರು ನಾಳೆ ಎಲ್ಲರ ಹಣೆಬರಹ ಬರೆಯಲಿದ್ದಾರೆ.
ಇಷ್ಟು ದಿನ ಮೂರು ಪಕ್ಷಗಳು ಮುಗಿಬಿದ್ದು ಪ್ರಚಾರ ನಡೆಸಿದ್ದು ನಾಳಿನ ದಿನಕ್ಕಾಗಿಯೇ. ಭಾರೀ ಕುತೂಹಲ ಕೆರಳಿಸಿದ್ದ ಹಾನಗಲ್ ಹಾಗೂ ಸಿಂದಗಿ ಬೈಎಲೆಕ್ಷನ್ಗೆ ನಾಳೆ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯ ತನಕ ಮತದಾನ ನಡೆಯಲಿದೆ.
ಸಿಎಂ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯ ಹಾನಗಲ್ ಕ್ಷೇತ್ರದ ಉಪಚುನಾವಣೆ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಮಾಜಿ ಸಚಿವ ಸಿಎಂ ಉದಾಸಿ ಅಗಲಿಕೆಯಿಂದ ಬೈಎಲೆಕ್ಷನ್ ನಡೀತಿದ್ದು, ಬಿಜೆಪಿಯಿಂದ ಶಿವರಾಜ್ ಸಜ್ಜನರ್ ಕಣದಲ್ಲಿದ್ರೆ, ಕಾಂಗ್ರೆಸ್ನಿಂದ ಶ್ರೀನಿವಾಸ್ ಮಾನೆ ಹಾಗೂ ಜೆಡಿಎಸ್ನಿಂದ ನಿಯಾಜ್ ಶೇಕ್ ಸೇರಿದಂತೆ ಒಟ್ಟು 19 ಅಭ್ಯರ್ಥಿಗಳು ಚುನಾವಣೆ ಎದುರಿಸಲಿದ್ದಾರೆ.
ಹಾನಗಲ್ ಬೈಎಲೆಕ್ಷನ್ ಲೆಕ್ಕಾಚಾರ
ಪುರುಷ ಮತದಾರರು- 1,05,525
ಮಹಿಳಾ ಮತದಾರರು- 98,953
ಸೇವಾ ಮತದಾರರು- 89
ಒಟ್ಟು ಮತದಾರರು- 2,04,481
ಒಟ್ಟು ಮತಗಟ್ಟೆಗಳು- 263
ಹಾನಗಲ್ ಕ್ಷೇತ್ರದಲ್ಲಿ ಒಟ್ಟು 1 ಲಕ್ಷದ 5 ಸಾವಿರದ 525 ಪುರುಷ ಮತದಾರರು, 98 ಸಾವಿರದ 953 ಮಹಿಳಾ ಮತದಾರರಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ 89 ಸೇವಾ ಮತದಾರರಿದ್ದಾರೆ. ಈ ಮೂಲಕ ಒಟ್ಟು ಎರಡು ಲಕ್ಷದ 4 ಸಾವಿರದ 206 ಜನ ಮತದಾನ ಮಾಡುವ ಅಧಿಕಾರ ಹೊಂದಿದ್ದಾರೆ.

ಇನ್ನು, ಮಾಜಿ ಸಚಿವ ಎಂ.ಸಿ.ಮನಗೂಳಿ ನಿಧನದಿಂದ ತೆರವಾಗಿರುವ ಸಿಂದಗಿ ಕ್ಷೇತ್ರದಲ್ಲಿ, ಕಾಂಗ್ರೆಸ್ ಪರವಾಗಿ ಅಶೋಕ್ ಮನಗೂಳಿ ಕಣದಲ್ಲಿದ್ದಾರೆ. ಬಿಜೆಪಿ ಪರವಾಗಿ ರಮೇಶ್ ಭೂಸನೂರ್ ಅದೃಷ್ಟ ಪರೀಕ್ಷೆಗೆ ಇಳಿದಿದ್ರೆ, ಜೆಡಿಎಸ್ನಿಂದ ನಾಜಿಯಾ ಶಕೀಲಾ ಅಂಗಡಿ ಸೇರಿದಂತೆ ಒಟ್ಟು 6 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಒಟ್ಟು 263 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ,
ಸಿಂದಗಿ ಬೈಎಲೆಕ್ಷನ್ ಲೆಕ್ಕಾಚಾರ
ಪುರುಷ ಮತದಾರರು- 1,20,844
ಮಹಿಳಾ ಮತದಾರರು- 1,13,561
ಇತರೆ ಮತದಾರರು- 32
ಸೇವಾ ಮತದಾರರು- 147
ಒಟ್ಟು ಮತದಾರರು – 2,34,584
ಒಟ್ಟು ಮತಗಟ್ಟೆಗಳು- 297
ಸಿಂದಗಿಯಲ್ಲಿ 1 ಲಕ್ಷದ 20 ಸಾವಿರದ 844 ಪುರುಷ ಮತದಾರರಿದ್ದು, 1 ಲಕ್ಷದ 13 ಸಾವಿರದ 561 ಮಹಿಳಾ ಮತದಾರರಿದ್ದಾರೆ. 32 ಇತರೆ ಮತಗಳು ಹಾಗೂ 147 ಸೇವಾ ಮತದಾರರು ಸೇರಿದಂತೆ ಒಟ್ಟು 2 ಲಕ್ಷದ 34 ಸಾವಿರದ 584 ಜನರು ಮತದಾನದ ಹಕ್ಕನ್ನು ಹೊಂದಿದ್ದಾರೆ. ಒಟ್ಟು 297 ಮತಗಟ್ಟೆಗಳನ್ನು ಸ್ಥಾಪಿಸಿ ಸರಾಗವಾಗಿ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.)

ಮನೆಮನೆ ಪ್ರಚಾರಕ್ಕೂ ಇಂದು ಸಂಜೆ ಬ್ರೇಕ್ ಬಿದ್ದಿದೆ. ಇನ್ನೊಂದೆಡೆ ಎರಡೂ ಕ್ಷೇತ್ರಗಳಲ್ಲಿ ಭದ್ರತಾ ವ್ಯವಸ್ಥೆಯನ್ನೂ ಸಹ ಬಲಪಡಿಸಲಾಗಿದೆ. ಒಟ್ನಲ್ಲಿ, ಆರೋಪ-ಪ್ರತ್ಯಾರೋಪ, ಧಾಮ್-ಧೂಮ್ ಪ್ರಚಾರದ ಅಬ್ಬರಕ್ಕೆಲ್ಲಾ ನಾಳೆ ಎರಡೂ ಕ್ಷೇತ್ರಗಳ ಪ್ರಜ್ಞಾವಂತ ಮತದಾರರು ಉತ್ತರ ನೀಡಲಿದ್ದಾರೆ. ಮೂರು ಪಕ್ಷಗಳಿಗೂ ಹಾನಗಲ್ ಹಾಗೂ ಸಿಂದಗಿ ಜನತೆ, ತಮ್ಮ ಬೆರಳ ತುದಿಯಲ್ಲೇ ಸಂದೇಶ ನೀಡಲಿದ್ದಾರೆ.