ಪಶ್ಚಿಮ ಬಂಗಾಳದ ಭವಾನಿಪುರದ ಉಪಚುನಾವಣೆಯೂ ಇಡೀ ದೇಶದ ಗಮನ ಸೆಳೆಯುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಂಬುದು. ಭಾರೀ ಕುತೂಹಲ ಮೂಡಿಸಿರುವ ಭವಾನಿಪುರದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ನಿಂದ ಕಣಕ್ಕಿಳಿದಿರುವ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯಿಂದ ವಕೀಲೆ ಪ್ರಿಯಾಂಕಾ ಟಿಬ್ರೂವಾಲ್ ಕಣಕ್ಕಿಳಿದಿದ್ದಾರೆ.
ಹೌದು, ಚುನಾವಣೆ ಆಯೋಗ ದಿನಾಂಕ ನಿಗದಿ ಮಾಡುತ್ತಿದ್ದಂತೆಯೇ ಪಶ್ಚಿಮ ಬಂಗಾಳದ ಭವಾನಿಪುರದ ಉಪ ಕದನದ ರಂಗು ಜೋರಾಗಿದೆ. ಇದೇ ತಿಂಗಳು 30ರಂದು ನಡೆಯಲಿರೋ ಭವಾನಿಪುರದ ವಿಧಾನಸಭೆ ಉಪ ಚುನಾವಣೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು, ಮುಖ್ಯಮಂತ್ರಿ ಸ್ಥಾನವನ್ನ ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಗೆಲ್ಲಲೇಬೇಕಿದೆ. ಇಷ್ಟುದಿನ ದೀದಿ ವಿರುದ್ಧ ಭವನಿಪುರದಲ್ಲಿ ಬಿಜೆಪಿಯಿಂದ ಕದನ್ನಕ್ಕಿಳಿಯೋದು ಯಾರು ಅನ್ನೋ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ದೀದಿ ವಿರುದ್ಧ ವಕೀಲೆ ಪ್ರಿಯಾಂಕ ಟಿಬ್ರೂವಾಲ್ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಕಾಲಿಟ್ಟಿದ್ದಾರೆ.
2014ರಲ್ಲಿ ಬಿಜೆಪಿ ಸೇರಿದ ಪ್ರಿಯಾಂಕಾ ಪಕ್ಷದ ಸಂಸದ ಬಾಬುಲ್ ಸುಪ್ರಿಯೊ ಅವರ ಕಾನೂನು ಸಹಕೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ವರ್ಷ ಬಿಜೆಪಿ ಮಹಿಳಾ ಮೋರ್ಚಾದ ಪಶ್ಚಿಮ ಘಟಕದ ಉಪಾಧ್ಯಕ್ಷೆಯಾಗಿ ನೇಮಕವಾಗಿ ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದಾರೆ.
ಕೋಲ್ಕತ್ತಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 2015ರಲ್ಲಿ ಎಂಟಾಲಿ ವಾರ್ಡ್ ಹಾಗೂ 2021ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರೂ ಮತದಾರರ ಜೊತೆಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಅಲ್ಲದೇ ಭವಾನಿಪುರ ಮತದಾರರು ಯುವ ಉತ್ಸಾಹಿ ಜನಪ್ರತಿನಿಧಿಯನ್ನ ನಿರೀಕ್ಷಿಸುತ್ತಿದೆ ಅಂತ ಬಿಜೆಪಿ ಪ್ರಿಯಾಂಕಾ ಟಿಬ್ರೂವಾಲ್ ಅವರನ್ನ ದೀದಿ ವಿರುದ್ಧ ಕದನಕ್ಕಿಳಿಸಿದೆ.
ಅಲ್ಲದೇ ಇದು ಪ್ರಿಯಾಂಕಾಗೆ ಅದೃಷ್ಠ ಪರೀಕ್ಷೆಯನ್ನೂ ಒಡ್ಡಿದೆ.
ಇನ್ನೊಂದೆಡೆ ಮಮತಾ ಬ್ಯಾನರ್ಜಿ ಇವತ್ತು ವಿದ್ಯುಕ್ತವಾಗಿ ನಾಮಪತ್ರ ಸಲ್ಲಿಸುತ್ತಲೇ, ಕಾಂಗ್ರೆಸ್ ಪಕ್ಷ ಕಣದಿಂದ ಹಿಂದೆ ಸರಿದಿದೆ. ಆದರೆ, ಸಿಪಿಐ(ಎಂ) ಮಾತ್ರ ಸ್ಪರ್ಧೆ ಮಾಡಲಿದ್ದು, ವಕೀಲ ಶ್ರೀಜಿಬ್ ಬಿಸ್ವಾಸ್ ಅವರು ಕದನಕ್ಕಿಳಿಸೋದಕ್ಕೆ ನಿರ್ಧಾರ ತೆಗೆದುಕೊಂಡಿದೆ.
ಬಂಗಾಳದ ಭವಾನಿಪುರದ ಉಪ ಕದನದ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಹೀಗಾಗಿ ಉಪ ಚುನಾವಣೆ ದೇಶದ ಗಮನ ಸೆಳೆದಿದ್ದು ದೀದಿಗೆ ಚುನಾವಣೆ ಮಾಡು ಇಲ್ಲವೇ ಮಡಿ ಸ್ಥಿತಿಯನ್ನ ತಂದೊಡ್ಡಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಅಲ್ಪ ಮತಗಳ ಅಂತದಲ್ಲಿ ಸೋತಿದ್ದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಈ ಉಪ ಕದನ ಪ್ರಮಖವಾಗಿದೆ. ತಾವು ವಿರಾಜಮಾನರಾಗಿರೋ ಮುಖ್ಯಮಂತ್ರಿ ಗಾದಿಯನ್ನ ಉಳಿಸಿಕೊಳ್ಳೋದಕ್ಕಾಗಿ ದೀದಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಇದೇ ತಿಂಗಳು 30ಕ್ಕೆ ನಡೆಯಲಿರೋ ಭವಾನಿಪುರದ ಬೈ ಎಲೆಕ್ಷನ್ ಫಲಿತಾಂಶ ಅಕ್ಟೋಬರ್ 3ಕ್ಕೆ ಹೊರಬರಲಿದೆ. ಹೀಗಾಗಿ ತ್ರಿಕೋನ ಜಿದ್ದಾಗಜಿದ್ದಿಯಲ್ಲಿ ಯಾರು ಗೆದ್ದು ಬೀಗಲಿದ್ದಾರೆ ಅನ್ನೋದು ಕುತೂಃಲ ಹುಟ್ಟಿಸಿದೆ ಅಲ್ಲದೇ ದೀದಿ ಗಾದಿ ಉಳಿದುಕೊಳ್ಳಿದೆಯೇ ಅನ್ನೋ ಬಗ್ಗೆಯೂ ಕುತೂಹಲವ ಮೂಡಿದೆ.