ರಾಮಮಂದಿರದ ಭರವಸೆ ಬಜೆಟ್ ಪುಸ್ತಕದಲ್ಲಿಯೇ ಉಳಿಯಲಿದೆ
ಬೆಂಗಳೂರು: ವರ್ಷಕ್ಕೊಮ್ಮೆ ಜಾತ್ರೆ ಮುಗಿದ ಮೇಲೆ ಅಲ್ಲಿನ ಅಂಗಡಿಗಳು ಸ್ಟಾಕ್ ಕ್ಲಿಯರೆನ್ಸ್ ಸೇಲ್ ಬೋರ್ಡ್ ಹಾಕಿ ರಿಯಾಯಿತಿ ದರದ ಘೋಷಣೆ ಮಾಡುತ್ತವೆ, ಹಾಗಿದೆ ಈ ಬಜೆಟ್ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಮೂರು ತಿಂಗಳಲ್ಲಿ ಚುನಾವಣೆ ಇಟ್ಟುಕೊಂಡು ಶಾಸ್ತ್ರಕ್ಕೆ ಮಂಡಿಸಿರುವ ರಾಜ್ಯ ಮುಂಗಡ ಪತ್ರ ರಾಜ್ಯದ ಜನರ ಸಂಕಷ್ಟಗಳನ್ನು ಪರಿಹಾರ ಮಾಡಲು ಮೂರು ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಹೇಳಿದ್ದಾರೆ.
ಮೂರು ವರ್ಷಗಳಲ್ಲಿ ಬಿಜೆಪಿ ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿದೆ. ಕೈಗಾರಿಕೆ, ಮೂಲಸೌಕರ್ಯ, ಸಾರಿಗೆ, ಶಿಕ್ಷಣ, ಕೃಷಿ ಸೇರಿ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ಬಸವಳಿದಿದೆ. ಕೇಂದ್ರದ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಲ್ಲುವ ದುಸ್ಥಿತಿ ಬಂದಿದೆ. ಕೇಂದ್ರ ಸರಕಾರವು ರಾಜ್ಯಕ್ಕೆ ಅನುದಾನವನ್ನು ಭಿಕ್ಷೆಯಂತೆ ಹಾಕುತ್ತಿದೆ. ಇನ್ನು ಈ ಬಜೆಟ್ಟಿನ ಹಣೆಬರಹಕ್ಕೆ ದಿಕ್ಕೆಲ್ಲಿ ಎಂದು ಕಟುವಾಗಿ ಟೀಕಿಸಿದ್ದಾರೆ.
ಬೊಮ್ಮಾಯಿ ಬಜೆಟ್’ಗೆ ಯಾವುದೇ ಮಹತ್ವ ಇಲ್ಲ. ಇದು ಅತ್ಯಂತ ನೀರಸ, ಮಾತ್ರವಲ್ಲ ನಿರುಪಯುಕ್ತ ಕೂಡ. ಚುನಾವಣೆ ನಂತರ ಬರುವ ಸರಕಾರ ಮಂಡಿಸುವ ಬಜೆಟ್ ಜಾರಿಗೆ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ ಎನ್ನುವುದು ಎಲ್ಲ ಕನ್ನಡಿಗರಿಗೂ ಗೊತ್ತಿರುವ ಸಂಗತಿ ಎಂದು ತಿಳಿಸಿದ್ದಾರೆ.
ಮಕ್ಕಳ ಬಸ್ಸು ಯೋಜನೆಯನ್ನು ಬಜೆಟ್’ನಲ್ಲಿ ಘೋಷಣೆ ಮಾಡಲಾಗಿದೆ. ಆದರೆ, ಈ ಯೋಜನೆಯನ್ನು ಚುನಾವಣೆಗೆ ಮೊದಲೇ ಜಾರಿ ಮಾಡುತ್ತಾರಾ? ಅಥವಾ ಚುನಾವಣೆ ನಂತರ ಜಾರಿ ಮಾಡುತ್ತಾರಾ? ಎನ್ನುವುದಕ್ಕೆ ಮುಖ್ಯಮಂತ್ರಿಗಳು ಏನೂ ಹೇಳಿಲ್ಲ, ಬುದ್ದಿವಂತಿಕೆಯಿಂದ ಜಾರಿಕೊಂಡಿದ್ದಾರೆ ಎಂದಿದ್ದಾರೆ .
ಇನ್ನು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುತ್ತಿರುವ ಬೆಂಗಳೂರು ಕೊಳಚೆ ನೀರಿನ ಮೂರನೇ ಹಂತದ ಸಂಸ್ಕರಣೆ ಬಗ್ಗೆ, ಟರ್ಸರಿ ಘಟಕ ಹಾಕುವ ಬಗ್ಗೆ ನೂರಾರು ಸಲ ನಾನು ಒತ್ತಾಯ ಮಾಡಿದ್ದೆ. ಈಗ ಟರ್ಸರಿ ಘಟಕ ಹಾಕುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಅಂದರೆ, ಈ ಸರಕಾರಕ್ಕೆ ತಾನು ಮಾಡಿದ ಪಾಪದ ಅರಿವಾಗಿದೆ ಸರಿ, ಆದರೆ; ಟರ್ಸರಿ ಘಟಕ ಸ್ಥಾಪನೆ ಮಾಡುವುದು ಯಾವಾಗ? ಎಂದು ಅವರು ಕೇಳಿದ್ದಾರೆ.
ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ವಿಚಾರದ ಬಗ್ಗೆ ಹೇಳುವುದಾದರೆ, ರೈತರು ಸಾಲಗಾರನಾಗದಂತೆ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಬೇಕು ಎಂದು ಹೇಳಿದ್ದಾರೆ.
ರಾಮಮಂದಿರ ನಿರ್ಮಾಣ ನನ್ನಿಂದ ಮಾತ್ರ ಸಾಧ್ಯ
ಬಿಜೆಪಿಯಿಂದ ರಾಮನಗರದಲ್ಲಿ ರಾಮಮಂದಿರ ಕಟ್ಟಲು ಸಾಧ್ಯವಿಲ್ಲ. ರಾಮಮಂದಿರ ಘೋಷಣೆ ಬಜೆಟ್ ಬುಕ್’ನಲ್ಲೇ ಉಳಿಯುತ್ತದೆ. ರಾಮಮಂದಿರ ನಿರ್ಮಾಣ ನನ್ನಿಂದ ಸಾಧ್ಯ. ರಾಮನಗರದಲ್ಲಿ ಯಾವುದೇ ಜಪ ಮಾಡಿದರು ಏನೂ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.