ಶಿವಮೊಗ್ಗದಲ್ಲಿ ನಿರ್ಮಾಣವಾಗಲಿರುವ ವಿಮಾನನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಇಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಡಿಸೆಂಬರ್ ತಿಂಗಳಲ್ಲಿ ಈ ವಿಮಾನ ನಿಲ್ದಾನದ ಉದ್ಘಾಟನೆಗೆ ಸಜ್ಜಾಗಲಿದೆ. ಅದಕ್ಕೂ ಮುನ್ನ ಎಲ್ಲಾ ಕಾಮಗಾರಿಗಳನ್ನು ಜೊತೆಯಾಗಿ ನಿರ್ವಹಿಸಿ ಜನರಿಗೆ ಲೋಕಾರ್ಪಣೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶಿವಮೊಗ್ಗದ ವಿಮಾನ ನಿಲ್ದಾಣ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾಧ್ಯಮದ ವರೊಂದಿಗೆ ಮಾತನಾಡಿದ ಅವರು, ಕೇಂದ್ರ ವಿಮಾನಯಾನ ಸಚಿವರಿಗೆ ಪ್ರಸ್ತಾವನೆ ಕಳುಹಿಸಿ ಅಲ್ಲಿಂದ ಅನುಮೋದನೆ ಪಡೆದ ಕೂಡಲೇ ವಿಮಾನ ನಿಲ್ದಾಣಕ್ಕೆ ನಾಮಕರಣದ ಆದೇಶವನ್ನು ಪಡೆದುಕೊಳ್ಳುತ್ತೇವೆ. ಉಡಾನ್ ಯೋಜನೆಯಡಿ ಕಾಮಗಾರಿಯಲ್ಲಿ ಕೈಗೊಂಡಿದ್ದು, ವಿಮಾನನಿಲ್ದಾಣ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಲಾಗುವುದು. ಎಟಿಸಿ ಪರಿಕರಗಳನ್ನು ಅಳವಡಿಸಿ, ಸೌಲಭ್ಯಗಳನ್ನು ನಿರ್ಮಿಸಲಾಗುವುದು ತಿಳಿಸಿದರು.
ಶಿವಮೊಗ್ಗದ ಕೈಗಾರಿಕೋದ್ಯಮ, ಶಿಕ್ಷಣ, ಆರೋಗ್ಯ ಎಲ್ಲ ಅಭಿವೃದ್ಧಿಗೆ ವಿಮಾನ ಸೌಲಭ್ಯ ಬಹಳ ಪ್ರಮುಖವಾಗಿದ್ದು, ಜನರ ಸಮಯ ಹಾಗೂ ಹಣದ ಉಳಿತಾಯವೂ ಆಗುತ್ತದೆ. ಬೆಂಗಳೂರು ನಂತರ ವಿವಿಧ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಬಿಜಾಪುರ ಮತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಕ್ಕೆ ಇಂಬು ನೀಡಲು ವಿಮಾನನಿಲ್ದಾಣದ ಅವಶ್ಯಕತೆ ಬಹಳ ವರ್ಷಗಳಿಂದ ಇದೆ.
ನಮ್ಮ ನಾಯಕರಾದ ಯಡಿಯೂರಪ್ಪನವರು ಶಿವಮೊಗ್ಗ ಏರ್ಪೋನರ್ಟ್ 2006-07 ರಿಂದ ಪ್ರಾರಂಭ ಮಾಡಲು ಯೋಜನೆ ರೂಪಿಸಿದ್ದರು. 2020 ರಲ್ಲಿ ಯೋಜನೆಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ನಂತರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 3200 ಮಿ ಉದ್ದದ ರನ್ ವೇ ಇರಲಿದೆ. ಏರ್ ಬಸ್ ಲ್ಯಾಂಡ್ ಆಗುವ ವ್ಯವಸ್ಥೆ ಆಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ವಿಮಾನನಿಲ್ದಾಣವಾಗಲು ಎಲ್ಲ ಮೂಲಸೌಕರ್ಯಗಳು ಇಲ್ಲಿ ಸಿಗಲಿವೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೈಯಕ್ತಿಕವಾಗಿ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿ ಅವರ ಆಡಳಿತದ ಅವಧಿಯಲ್ಲಿ ಹಲವಾರು ಮೂಲಭೂತ ಸೌಕರ್ಯಗಳನ್ನು ಶಿವಮೊಗ್ಗ ಜಿಲ್ಲೆಗೆ ಕಲ್ಪಿಸಿದ್ದಾರೆ. ವಿಮಾನ ನಿಲ್ದಾಣ ಬರುವ ದಿನಗಳಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಈ ಭಾಗದ ಕೈಗಾರಿಕಾ, ವಾಣಿಜ್ಯ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಲಿದೆ. ಕರ್ನಾಟಕದ ಹೆಮ್ಮೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಲಿದೆ ಎಂದರು.
ವಿಮಾನನಿಲ್ದಾಣಕ್ಕೆ ಜಿಲ್ಲೆಯ ಹಲವಾರು ರೈತರು ಈಗಾಗಲೇ ಸಹಕಾರ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ರೈತರ ಸಭೆಯನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.