• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿಶೇಷ

ಬ್ರಿಟೀಷರ ಎದೆನಡುಗಿಸಿದ ಭಗತ್ ಸಿಂಗ್..! ಅಪ್ರತಿಮ ನಾಯಕ ಇಂದಿಗೂ ಎಂದಿಗೂ ಅಮರ ಅಜರಾಮರ ..

ನಾ ದಿವಾಕರ by ನಾ ದಿವಾಕರ
March 23, 2024
in ವಿಶೇಷ
0
ಬ್ರಿಟೀಷರ ಎದೆನಡುಗಿಸಿದ ಭಗತ್ ಸಿಂಗ್..! ಅಪ್ರತಿಮ ನಾಯಕ ಇಂದಿಗೂ ಎಂದಿಗೂ ಅಮರ ಅಜರಾಮರ ..
Share on WhatsAppShare on FacebookShare on Telegram

ವಿಶೇಷ ಲೇಖನ : ನಾ ದಿವಾಕರ

ನವ ಭಾರತ ವಿಭಿನ್ನ ದಿಕ್ಕಿನಲ್ಲಿ ಚಲಿಸುತ್ತಿದೆ. ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವಂತೆಲ್ಲಾ ದೇಶದ ಜನತೆಯಲ್ಲಿ ದುಗುಡ, ತಲ್ಲಣಗಳು ತೀವ್ರವಾಗುತ್ತಿವೆ. ಇದಕ್ಕೆ ಸಮಾನಾಂತರವಾಗಿ ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ರಾಜಕೀಯ ಪಕ್ಷಗಳ ಹತಾಶೆಯೂ ಅಷ್ಟೇ ತೀವ್ರವಾಗುತ್ತಿದೆ. ಜನಪ್ರಾತಿನಿಧ್ಯದ ನೆಲೆಯಲ್ಲಿ ಒಂದು ಪ್ರಜಾಸತ್ತಾತ್ಮಕ ಆಳ್ವಿಕೆಯನ್ನು ದೇಶದ ಸಾರ್ವಭೌಮ ಜನತೆಗೆ ನೀಡುವ ಜವಾಬ್ದಾರಿ ಇರಬೇಕಾದ ಮುಖ್ಯವಾಹಿನಿ ಪಕ್ಷಗಳಿಗೆ ಅಧಿಕಾರ ಗಳಿಸುವುದೊಂದೇ ಪ್ರಧಾನ ಧ್ಯೇಯವಾದರೆ ದೇಶದ ಪರಿಸ್ಥಿತಿ ಏನಾಗಬಹುದು ಎನ್ನುವುದಕ್ಕೆ ನವ ಭಾರತ ಒಂದು ಸ್ಪಷ್ಟ ನಿದರ್ಶನವಾಗಿ ನಿಂತಿದೆ.ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆ, ಅಂತಾರಾಷ್ಟ್ರೀಯ ಡಿಜಿಟಲ್‌ ಬಂಡವಾಳ ಹಾಗೂ ಬಿಜೆಪಿಯ ಬಲಪಂಥೀಯ ಹಿಂದುತ್ವ ರಾಜಕಾರಣದ ಮೈತ್ರಿಯು ಭಾರತದ ಸಾಂವಿಧಾನಿಕ ಅಡಿಪಾಯವನ್ನು ಹಂತಹಂತವಾಗಿ ಸಡಿಲಗೊಳಿಸುತ್ತಿರುವುದು, 1947ರಲ್ಲಿ ಸ್ವಾತಂತ್ರ್ಯದ ಪೂರ್ವಸೂರಿಗಳು ಕಟ್ಟಿಕೊಟ್ಟಿದ್ದ ಪ್ರಜಾಸತ್ತಾತ್ಮಕ ಸಮಸಮಾಜದ ಕನಸನ್ನು ಭಗ್ನಗೊಳಿಸುತ್ತಲೇ ಬಂದಿದೆ. ಇತ್ತೀಚೆಗೆ Pew ಸಂಸ್ಥೆ ನಡೆಸಿದ ಸಮೀಕ್ಷೆಯೊಂದರ ಅನುಸಾರ ಭಾರತದ ಶೇಕಡಾ 67ರಷ್ಟು ಜನರು ಸಂಸತ್ತಿನ ಹಸ್ತಕ್ಷೇಪವಿಲ್ಲದೆ ಆಡಳಿತ ನಡೆಸುವ ಬಲಿಷ್ಠ ನಾಯಕನನ್ನು ಬಯಸುತ್ತಾರೆ. ಶೇಕಡಾ 72ರಷ್ಟು ಜನರು ಮಿಲಿಟರಿ ಆಡಳಿತವನ್ನು ಅಪೇಕ್ಷಿಸುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಈ ಸಮೀಕ್ಷೆಗಳು ಸಾಮಾನ್ಯವಾಗಿ ಮಧ್ಯಮವರ್ಗದ ಜನಾಭಿಪ್ರಾಯಗಳನ್ನೇ ಅವಲಂಬಿಸುವುದರಿಂದ, ಇಂದಿಗೂ ಶೋಷಣೆ ದೌರ್ಜನ್ಯ ತಾರತಮ್ಯಗಳನ್ನು ಎದುರಿಸುತ್ತಿರುವ ಭಾರತದ ತಳಸಮುದಾಯಗಳ ಧ್ವನಿ ಇಲ್ಲಿ ಗುರುತಿಸುವುದು ಕಷ್ಟಸಾಧ್ಯ. ಏನೇ ಆದರೂ ಭಾರತ ನಡೆಯುತ್ತಿರುವ ದಿಕ್ಕು ಗಮನಿಸಿದಾಗ, ಈ ಆತಂಕಗಳನ್ನು ತಳ್ಳಿಹಾಕಲೂ ಆಗುವುದಿಲ್ಲ. ನವ ಉದಾರವಾದ-ಕಾರ್ಪೋರೇಟ್‌ ಆರ್ಥಿಕತೆಯಲ್ಲಿ ಸಂಸ್ಕೃತಿ, ಸಮಾಜ, ಜಾತಿ, ಮತ, ಧರ್ಮ, ಸಂವಹನ ಮಾಧ್ಯಮ ಹಾಗೂ ಕಡೆಗೆ ಮನುಷ್ಯನೂ commodification ಗೆ ಒಳಗಾಗುತ್ತಿರುವುದರಿಂದ, ಆಳ್ವಿಕೆಯ ಕೇಂದ್ರಗಳು ಶೋಷಣೆಯ ನೆಲೆಗಳನ್ನು ಹಿಂಬದಿಗೆ ಸರಿಸುತ್ತಾ, ಉಳ್ಳವರನ್ನು ಪೋಷಿಸುವ ಒಂದು ಸಮಾಜ ರೂಪಿಸಲು ಸಜ್ಜಾಗುತ್ತವೆ.

ADVERTISEMENT

ಪ್ರಜಾತಂತ್ರದ ಧ್ವನಿಗಳ ನಡುವೆ

ಸಂವಿಧಾನ ಅಥವಾ ಸಾಂವಿಧಾನಿಕ-ಪ್ರಜಾಸತ್ತಾತ್ಮಕ ಆಶಯಗಳನ್ನು ಈಡೇರಿಸುವ ಹಾದಿಯಲ್ಲಿ ಈ ಬೆಳವಣಿಗೆಗಳು ರಸ್ತೆ ಉಬ್ಬುಗಳಂತೆ ಕಾಣುತ್ತವೆ. ಆಳ್ವಿಕೆಯ ದೃಷ್ಟಿಯಲ್ಲಿ ಪ್ರತಿಯೊಂದು ವ್ಯಕ್ತಿಗತ ಪ್ರತಿರೋಧವೂ ʼದೇಶ ವಿರೋಧಿʼ ಎಂದೆನಿಸತೊಡಗುತ್ತದೆ. ಸಾಂಘಿಕ ಪ್ರತಿರೋಧಗಳು ವಿದ್ರೋಹದ ಸಂಕೇತವಾಗಿ ಕಾಣತೊಡಗುತ್ತವೆ. ಆಳ್ವಿಕೆಯ ನೆಲೆಯಲ್ಲಿ ನಿಷ್ಕರ್ಷಿಸಲ್ಪಡುತ್ತಿದ್ದ ʼಹಿಂಸಾತ್ಮಕ-ಅಹಿಂಸಾತ್ಮಕʼ ಎಂಬ ಹೋರಾಟದ ಪ್ರಬೇಧಗಳು ಅರ್ಥಹೀನವಾಗುವುದೇ ಅಲ್ಲದೆ ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ ಎಲ್ಲ ಪ್ರತಿರೋಧದ ಧ್ವನಿಗಳೂ ಸಹ ಅಸಹನೀಯವಾಗಿ ಕಾಣುತ್ತವೆ. ಆದರೆ ಆಳ್ವಿಕೆಯ ಈ ಧೋರಣೆಗಳಿಗೆ ಸಮಾನಾಂತರವಾಗಿ ಭಾರತದ ತಳಸಮಾಜವು ತನ್ನದೇ ಆದ ಗಟ್ಟಿಧ್ವನಿಯನ್ನು ಕಾಪಾಡಿಕೊಂಡು ಬಂದಿದ್ದು, ಇಂದಿಗೂ ಸಹ ದೌರ್ಜನ್ಯಗಳ ವಿರುದ್ಧದ ಹೋರಾಟಗಳು ದೇಶದ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸುತ್ತಲೇ ಇವೆ. ʼಆಂದೋಲನಜೀವಿʼ ಎಂದು ಕರೆಯಲ್ಪಡುವ ನೊಂದ ನಾಗರಿಕ ತನ್ನ ಹಾಗೂ ತನ್ನ ಸಮುದಾಯದ ಒಳಿತಿಗಾಗಿ ಅಸಹಾಯಕನಾಗಿ ಸಂವಿಧಾನದ ಕಡೆ ನೋಡುತ್ತಲೇ, ಸಂವಿಧಾನದ ಏಕೈಕ ವಿಶ್ವಸನೀಯ ಅಂಗ ʼ ನ್ಯಾಯಾಂಗ ʼದಲ್ಲಿ ತನ್ನ ವಿಶ್ವಾಸ ಕಾಪಾಡಿಕೊಂಡು ಬಂದಿದ್ದಾನೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲೇ ಅಮೃತ ಕಾಲದ ಭಾರತ ತನ್ನ ಹೊಸ ಹಾದಿಗಳನ್ನು ಕಂಡುಕೊಳ್ಳುತ್ತಿದ್ದು ವಿಶ್ವಮಾನ್ಯತೆಯನ್ನು ಪಡೆಯುತ್ತಿದೆ. ಭಾರತ ಬದಲಾಗುತ್ತಿರುವುದು ಖಚಿತ ಆದರೆ ಯಾವ ದಿಕ್ಕಿನಲ್ಲಿ ಎಂಬುದೇ ಗಹನವಾದ ಪ್ರಶ್ನೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದೇ ಪ್ರಶ್ನೆಗೆ ಮುಖಾಮುಖಿಯಾಗಿದ್ದು ವಸಾಹತು ವಿರೋಧಿ ಚಳುವಳಿಯಲ್ಲಿ ಸಕ್ರಿಯವಾಗಿದ್ದ ಒಂದು ಯುವ ಪೀಳಿಗೆಗೆ. ಸ್ವಾತಂತ್ರ್ಯಾನಂತರದ ಭಾರತ ಹೇಗಿರಬೇಕು ಎಂಬ ಜಟಿಲ ಪ್ರಶ್ನೆಗಳೇ ಡಾ. ಅಂಬೇಡ್ಕರ್‌, ಗಾಂಧಿ, ಸುಭಾಷ್‌ ಚಂದ್ರಬೋಸ್‌ ಮತ್ತು ಮಾರ್ಕ್ಸ್‌ವಾದಿ ಹೋರಾಟಗಾರರನ್ನು ಕಾಡಿತ್ತು. ಈ ಕಾಲಘಟ್ಟದಲ್ಲಿ 1917ರ ಸೋವಿಯತ್‌ ಕ್ರಾಂತಿಯಿಂದ ಪ್ರಭಾವಿತವಾದ ಒಂದು ಸಮೂಹ ಭಾರತದಲ್ಲೂ ಧ್ವನಿಸತೊಡಗಿತ್ತು. ಶೋಷಿತ ಜಾತಿಗಳ ಹೋರಾಟಗಳು, ಕಮ್ಯುನಿಸ್ಟ್‌ ಪಕ್ಷ, ಕಾರ್ಮಿಕ ಸಂಘಟನೆ ಹಾಗೂ ಹೋರಾಟಗಾರರ ನಡುವೆಯೇ ಈ ಧ್ವನಿಗೆ ಒಂದು ಹೊಸ ಆಯಾಮವನ್ನು ನೀಡಿದ ಯುವ ಚೇತನ ಎಂದರೆ ಶಹೀದ್‌ ಭಗತ್‌ ಸಿಂಗ್.‌ ಭಗತ್‌ ಸಿಂಗ್‌, ರಾಜಗುರು ಮತ್ತು ಸುಖ್‌ದೇವ್‌ವಸಾಹತು ಆಳ್ವಿಕೆಯ ಕ್ರೂರ ದಬ್ಬಾಳಿಕೆಗೆ ಸಿಲುಕಿ ಗಲ್ಲಿಗೇರಿ ಇಂದಿಗೆ (ಮಾರ್ಚ್‌ 23 2024) 93 ವರ್ಷಗಳು ತುಂಬುತ್ತವೆ. ಸ್ವಾತಂತ್ರ್ಯಾನಂತರ ಭಾರತದ ಪ್ರಾರಂಭಿಕ ಸಾಮಾಜಿಕ-ರಾಜಕೀಯ ಚಳುವಳಿಗಳು ಮಾರ್ಕ್ಸ್‌, ಅಂಬೇಡ್ಕರ್‌, ಲೋಹಿಯಾ, ಮಾವೋ ಮುಂತಾದ ದಾರ್ಶನಿಕರಿಂದ ನಿರ್ದೇಶಿಸಲ್ಪಟ್ಟಿದ್ದರೂ , ಭಗತ್‌ ಸಿಂಗ್‌ ಎಂಬ ಯುವ ಚೇತನ ಮತ್ತು ಆತನ ಕ್ರಾಂತಿಕಾರಕ ಆಲೋಚನೆಗಳು ನಮ್ಮ ನಡುವೆ ತೆರೆದುಕೊಂಡಿದ್ದು ಮೂರು ನಾಲ್ಕು ದಶಕಗಳ ನಂತರ. ರಾಜಕೀಯ ಪಲ್ಲಟಗಳ ನಡುವೆ, ಸೈದ್ಧಾಂತಿಕ ತುಮುಲ ತಲ್ಲಣಗಳ ಮಧ್ಯೆ, ಸಾಂಸ್ಕೃತಿಕ ಆತಂಕಗಳ ಛಾಯೆಯಲ್ಲಿ.

ಭಗತ್‌ ಸಿಂಗ್‌ ಒಂದು ಪರಂಪರೆಯಾಗಿ

ಬ್ರಿಟೀಷ್‌ ವಸಾಹತುಶಾಹಿಯ ದೃಷ್ಟಿಯಲ್ಲಿ ದೇಶದ್ರೋಹಿ ಅಥವಾ ಭಯೋತ್ಪಾದಕ ಎನಿಸಿಕೊಂಡಿದ್ದ ಭಗತ್‌ ಸಿಂಗ್‌ ಮತ್ತು ಅತನ ಸಹಚರರು ಕ್ರಾಂತಿಯ ಕನಸುಗಳನ್ನು ಕಟ್ಟಿಕೊಂಡವರು. ಸೋವಿಯತ್‌ ಕ್ರಾಂತಿ ಮತ್ತು ಲೆನಿನ್‌ ಅವರ ಬೋಲ್ಷೆವಿಕ್‌ ತತ್ವಗಳಿಂದ ಪ್ರಭಾವಿತರಾಗಿ, ವಸಾಹತು ಮುಕ್ತ ಭಾರತವನ್ನು ಶ್ರಮಜೀವಿಗಳ ಮುಂದಾಳತ್ವದಲ್ಲಿ ಕಟ್ಟುವ ಕನಸುಗಳನ್ನು ಹೊತ್ತವರು. ಭಗತ್‌ ಸಿಂಗ್‌ ಕ್ರಾಂತಿಯನ್ನು ಹುಟ್ಟುಹಾಕಿದ ಎನ್ನುವುದಕ್ಕಿಂತಲೂ, ಸ್ಥಾಪಿತ ವ್ಯವಸ್ಥೆಯನ್ನು ತಲೆಕೆಳಗು ಮಾಡಿ ಸಮಗ್ರ ಪರಿವರ್ತನೆಯನ್ನು ತರುವ ಮೂಲಕ, ಸ್ವತಂತ್ರ ಭಾರತವನ್ನು ಬಂಡವಾಳಶಾಹಿಗಳಿಂದ, ಊಳಿಗಮಾನ್ಯ ದೊರೆಗಳಿಂದ, ರಾಜಪ್ರಭುತ್ವಗಳಿಂದ, ಶ್ರೀಮಂತರ ಆಧಿಪತ್ಯದಿಂದ ಹಾಗೂ ಜಾತಿ-ಧರ್ಮಗಳ ಸಂಕೋಲೆಗಳಿಂದ ಮುಕ್ತಗೊಳಿಸುವ ಒಂದು ಚಿಂತನೆಯನ್ನು ಹುಟ್ಟುಹಾಕಿದ್ದ ಎನ್ನುವುದು ವಾಸ್ತವ.

75 ವರ್ಷಗಳ ಸ್ವತಂತ್ರ ಪ್ರಜಾಸತ್ತಾತ್ಮಕ-ಸಾಂವಿಧಾನಿಕ ಆಳ್ವಿಕೆಯ ನಂತರದಲ್ಲೂ ಭಗತ್‌ ಸಿಂಗ್‌ ಮತ್ತು ಆತನ ಆಲೋಚನೆಗಳು ಪ್ರಸ್ತುತ ಎನಿಸಿಕೊಳ್ಳುವುದು ಈ ಕಾರಣಕ್ಕಾಗಿ. ಯಾವುದೇ ಜನಾಂದೋಲನ ಹುಟ್ಟಿಕೊಳ್ಳುವುದು ತಲ್ಲಣಗೊಂಡ ಸಮಾಜದ ಗರ್ಭದೊಳಗಿಂದ, ಅದು ವಿಕಸಿಸುವುದು ವಿಶಾಲ ಸಮಾಜದ ಮುಕ್ತ ಅಂಗಳದಲ್ಲಿ. ಈ ಆಂದೋಲನಗಳ ಹಾದಿ, ಧೋರಣೆ ಮತ್ತು ತಾತ್ವಿಕ ನೆಲೆಗಳನ್ನು ನಿರ್ಧರಿಸುವುದು ಆಯಾ ಕಾಲಘಟ್ಟದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ವಾತಾವರಣ ಮತ್ತು ಇವುಗಳನ್ನು ನಿರ್ದೇಶಿಸುವ ಅಧಿಕಾರ ಕೇಂದ್ರಗಳು. ಭಗತ್‌ ಸಿಂಗ್‌ ಮತ್ತು ಆತನ ಸಂಗಡಿಗರು ಕೈಗೊಂಡ ಒಂದೆರಡು ಹೋರಾಟದ ಕ್ರಮಗಳು ವಸಾಹತುಶಾಹಿಗಷ್ಟೇ ಅಲ್ಲ, ವರ್ತಮಾನದ ಪ್ರಜಾಪ್ರಭುತ್ವಕ್ಕೂ ಸಹ ಅಸಹನೀಯವಾಗೇ ಕಾಣುತ್ತವೆ. ಏಕೆಂದರೆ ಅದು ಆಳುವವರನ್ನು ಪ್ರಶ್ನಿಸುವ, ಯಥಾಸ್ಥಿತಿಯನ್ನು ವಿರೋಧಿಸುವ, ಪರಿವರ್ತನೆಯನ್ನು ಬಯಸುವ ಮಾರ್ಗಗಳು.

ವರ್ತಮಾನದ ಭಾರತದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸ್ವಾತಂತ್ರ್ಯಪೂರ್ವದಲ್ಲಿದ್ದಂತಹ ಸಾಮಾಜಿಕ-ಸಾಂಸ್ಕೃತಿಕ ಸಿಕ್ಕುಗಳೇ ಇಂದಿಗೂ ಕಾಣುತ್ತಿರುವುದು ಸ್ಪಷ್ಟವಾಗುತ್ತದೆ. ಜಾತಿ ದೌರ್ಜನ್ಯ, ಸಾಮಾಜಿಕ-ಆರ್ಥಿಕ ಅಸಮಾನತೆ ಮತ್ತು ಅಸಮತೋಲನ, ಮಹಿಳಾ ದೌರ್ಜನ್ಯ, ಅಸ್ಪೃಶ್ಯತೆ ಮತ್ತು ಮತಾಂಧತೆಯ ವಿಭಿನ್ನ ರೂಪಗಳು ಇಂದಿಗೂ ಸಮಾಜವನ್ನು ಕಾಡುತ್ತಲೇ ಇವೆ. ಅಂದು ಭಗತ್‌ ಸಿಂಗ್‌ ವಿರೋಧಿಸಿದ್ದ ಸಾಮ್ರಾಜ್ಯಶಾಹಿ ಇಂದು ನವ ವಸಾಹತುಶಾಹಿಯಾಗಿ ತಂತ್ರಜ್ಞಾನದ ಮೂಲಕ ಎದುರಾಗಿದೆ. ಔದ್ಯೋಗಿಕ ಬಂಡವಾಳಶಾಹಿಯು ಡಿಜಿಟಲ್‌ ಬಂಡವಾಳಶಾಹಿಯಾಗಿ ರೂಪಾಂತರಗೊಂಡಿದೆ. ತಳಸಮಾಜದಲ್ಲಿನ ಸಾಮಾಜಿಕ-ಸಾಂಸ್ಕೃತಿಕ ತಾರತಮ್ಯಗಳು ರೂಪಾಂತರಗೊಂಡು, ಕಾರ್ಪೋರೇಟ್‌ ಆರ್ಥಿಕತೆಗೆ ಪೂರಕವಾದ ಸಾಂಸ್ಕೃತಿಕ ಭೂಮಿಕೆಗಳನ್ನು ನಿರ್ಮಿಸುತ್ತಿವೆ.

ಈ ನಿರ್ದಿಷ್ಟ ಕಾರಣಗಳಿಗಾಗಿಯೇ ಭಗತ್‌ ಸಿಂಗ್‌ ಮತ್ತು ಆತನ ಪರಂಪರೆ ಇಂದಿಗೂ ಪ್ರಸ್ತುತ ಎನಿಸಿಕೊಳ್ಳುತ್ತದೆ. ಭಗತ್‌ ಸಿಂಗ್‌ ಕ್ರಾಂತಿಯನ್ನು ಹುಟ್ಟುಹಾಕಲಿಲ್ಲ ಆದರೆ ಕ್ರಾಂತಿಯನ್ನು ಸಾಧಿಸುವ ಹಾದಿಯಲ್ಲಿ ಬೇಕಾದ ತಾತ್ವಿಕ-ಬೌದ್ಧಿಕ ಉಪಕರಣಗಳನ್ನು ಸೃಷ್ಟಿಸಿದ್ದ. ಈ ಯುವ ಪಡೆ ಅನುಸರಿಸಿದ ಮಾರ್ಗವನ್ನು ಹಿಂಸಾತ್ಮಕ ಎಂದು ಬಣ್ಣಿಸಿದ ಬ್ರಿಟೀಷ್‌ ವಸಾಹತುಶಾಹಿಗೆ ಅಪಾಯಕಾರಿಯಾಗಿ ಕಂಡಿದ್ದು ಈ ಕ್ರಾಂತಿಕಾರಿಗಳು ಯುವ ಸಮುದಾಯದ ನಡುವೆ ಹುಟ್ಟುಹಾಕಿದಂತಹ ಪ್ರತಿರೋಧದ ನೆಲೆಗಳು. ಇಂದು ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದರೂ ಇಂದಿಗೂ ಸಹ ಇದೇ ಧೋರಣೆಯನ್ನು ಗಮನಿಸುತ್ತಿದ್ದೇವೆ. ಒಂದು ವರ್ಷದ ಐತಿಹಾಸಿಕ ರೈತ ಮುಷ್ಕರ ಒಂದು ಸ್ಪಷ್ಟ ನಿದರ್ಶನ.


ಬದಲಾವಣೆಯ ಹಾದಿಯಲ್ಲಿ
ಭಗತ್‌ ಸಿಂಗ್‌ ಮತ್ತು ಆತನ ಸಂಗಡಿಗರಿಗೆ ಕ್ರಾಂತಿ ಎನ್ನುವುದು ಒಂದು Romanticism ಆಗಿರಲಿಲ್ಲ ಅಥವಾ ಅರಾಜಕತಾವಾದದ ಮಾರ್ಗವೂ ಆಗಿರಲಿಲ್ಲ. ಸಂಭಾವ್ಯ ಸ್ವತಂತ್ರ ಭಾರತದಲ್ಲಿ ಅಸಮಾನತೆ-ಶೋಷಣೆಯಿಲ್ಲದ ಒಂದು ರಾಷ್ಟ್ರ ನಿರ್ಮಾಣಕ್ಕಾಗಿ ಶೋಷಣೆ-ದೌರ್ಜನ್ಯದ ಎಲ್ಲ ನೆಲೆಗಳನ್ನೂ ವಿರೋಧಿಸುವುದು ಹೋರಾಟದ ಒಂದು ಮಾರ್ಗವಾಗಿತ್ತು. ಈ ಮಾರ್ಗ ಇಂದಿಗೂ ತೆರೆದಿದೆ , ಅನುಕರಣೀಯವೂ ಆಗಿದೆ. ಏಕೆಂದರೆ ನವಭಾರತ ಕಾಂಗ್ರೆಸ್‌ ಮುಕ್ತವಾದರೂ, ವಿರೋಧ ಪಕ್ಷ ಮುಕ್ತವಾದರೂ, ಬಡತನ, ಶೋಷಣೆ, ಹಸಿವೆ, ಅಸಮಾನತೆಗಳಿಂದ ಮುಕ್ತವಾಗುವುದಿಲ್ಲ. ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆ ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ. ಭ್ರಮಾಧೀನವಾಗಿರುವ ಮಿಲೆನಿಯಂ ಜನಸಂಖ್ಯೆಗೆ ಈ ಸುಡು ವಾಸ್ತವಗಳನ್ನು ಮನದಟ್ಟು ಮಾಡುವಾಗ ಭಗತ್‌ ಸಿಂಗ್‌ ಹಾಕಿಕೊಟ್ಟ ಹಾದಿ ಉಪಯುಕ್ತವಾಗುತ್ತದೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಭಗತ್‌ ಸಿಂಗ್‌ ಮತ್ತು ಸಂಗಡಿಗರು ಇಟ್ಟ ಒಂದೆರಡು ಹೆಜ್ಜೆಗಳಿಗೂ, ಆ ನಡಿಗೆಯ ಹಿಂದೆ ಇದ್ದಂತಹ ಉದಾತ್ತ ಆದರ್ಶಗಳಿಗೂ ನಡುವೆ ಇರುವ ಅಂತರದಲ್ಲೇ ನಾವು ಭಗತ್‌ಸಿಂಗ್‌ನ ಸೈದ್ಧಾಂತಿಕ ನೆಲೆಗಳನ್ನು ಮರುವ್ಯಾಖ್ಯಾನಿಸಬೇಕಿದೆ.

ನವ ಭಾರತ-ಯುವ ಭಾರತ ಇಂದು ಬದಲಾವಣೆಗಾಗಿ ಹಪಹಪಿಸುತ್ತಿದೆ. ಸಮ ಸಮಾಜ-ದೌರ್ಜನ್ಯಮುಕ್ತ ಸಮಾಜಕ್ಕಾಗಿ ಹೋರಾಡುತ್ತಿರುವ ಮಾರ್ಕ್ಸ್‌, ಅಂಬೇಡ್ಕರ್‌, ಪೆರಿಯಾರ್‌, ಗಾಂಧಿ ಮುಂತಾದ ದಾರ್ಶನಿಕರ ಅನುಯಾಯಿಗಳು ಈ ಬದಲಾವಣೆಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಕ್ರಾಂತಿಕಾರಿ ಅಥವಾ Revolutionary ಎಂಬ ಪರಿಕಲ್ಪನೆಯನ್ನು ಬದಿಗಿಟ್ಟು ನೋಡಿದಾಗ ಇಂದು ದೇಶದ ಬಹುಸಂಖ್ಯಾತ ಜನತೆ ಹೋರಾಡಬೇಕಿರುವುದು ಸಕಾರಾತ್ಮಕ ಬದಲಾವಣೆಗಾಗಿ, ಮನ್ವಂತರದ ಹಾದಿಗಾಗಿ, ಪರಿವರ್ತನೆಗಾಗಿ. ಈ ಹಾದಿಯ ಅಂತಿಮ ಘಟ್ಟ ಕ್ರಾಂತಿಕಾರಿ ಎನಿಸಿಕೊಳ್ಳುತ್ತದೆ. 75 ವರ್ಷಗಳ ಅವಧಿಯಲ್ಲಿ ನೂರಾರು ಹೋರಾಟಗಳು ಆಗಿಹೋಗಿದ್ದು, ಕೆಲವು ಇಂದಿಗೂ ಜೀವಂತಿಕೆಯಿಂದಿದ್ದರೂ, ಭಾರತೀಯ ಸಮಾಜ ಇನ್ನೂ ಬದಲಾವಣೆಯ ಹಾದಿಯಲ್ಲೇ ಇರುವುದನ್ನು ಗಮನಿಸಬೇಕಿದೆ. ಕ್ರಾಂತಿ ಎಂಬ ಉದಾತ್ತ ಪರಿಕಲ್ಪನೆ ಬಹುದೂರ ಇದೆ.

ಭಗತ್‌ ಸಿಂಗ್‌ ವರ್ತಮಾನ ಭಾರತಕ್ಕೆ ಇಲ್ಲಿ ಪ್ರಸ್ತುತನಾಗುತ್ತಾನೆ. ಭಾರತ ಪ್ರಜಾಸತ್ತಾತ್ಮಕ-ಸಾಂವಿಧಾನಿಕ ಆಳ್ವಿಕೆಗೆ ತೆರೆದುಕೊಳ್ಳುವ ಮುನ್ನವೇ ಹುತಾತ್ಮನಾದ ಭಗತ್‌ ಸಿಂಗ್‌ನನ್ನು ವರ್ತಮಾನದಲ್ಲಿಟ್ಟು ನೋಡುವಾಗ, ಆತನ ಚಿಂತನೆಗಳನ್ನು ಮತ್ತೆ ಮತ್ತೆ ನಿಷ್ಕರ್ಷೆಗೊಳಿಸುತ್ತಾ ಭವಿಷ್ಯದತ್ತ ಸಾಗಬೇಕಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಎತ್ತಿಹಿಡಿಯುವ ಯಾವುದೇ ರಾಜಕೀಯ ಪಕ್ಷದಲ್ಲೂ ಆಂತರಿಕ ಪ್ರಜಾತಂತ್ರ ಇಲ್ಲದಿರುವ ಒಂದು ದ್ವಂದ್ವದ ನಡುವೆ ಭಾರತ ಹೊಸದಿಕ್ಕಿನತ್ತ ಸಾಗುತ್ತಿದೆ. ಮಿಲೆನಿಯಂ ಜನಸಂಖ್ಯೆಯನ್ನು-ಭವಿಷ್ಯದ ಪೀಳಿಗೆಯನ್ನು ಪ್ರಜಾಪ್ರಭುತ್ವದ ಹಾದಿಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಕರೆದೊಯ್ಯಬೇಕಾದ ಭಾರತದ ರಾಜಕೀಯ ವ್ಯವಸ್ಥೆ ಆಂತರಿಕ ಪ್ರಜಾತಂತ್ರದ ಅರಿವೇ ಇಲ್ಲದೆ ನಡೆಯುತ್ತಿರುವುದು ನಮ್ಮನ್ನು ಆತಂಕಕ್ಕೀಡುಮಾಡಬೇಕಿದೆ.

ಒಳಗೊಳ್ಳುವಿಕೆಯ ಹಾದಿಯಲ್ಲಿ

ವಿಭಜನೆಯ ಗೋಡೆಗಳು ರೂಪಾಂತರಗೊಂಡು ಜಾತಿ-ಧರ್ಮಗಳ ನೆಲೆಯಲ್ಲಿ ಸಮಾಜವನ್ನು ವಿಘಟನೆಯತ್ತ ಕೊಂಡೊಯ್ಯುತ್ತಿರುವ ಸಂದರ್ಭದಲ್ಲಿ ಭಗತ್‌ ಸಿಂಗ್‌ ಚಿಂತನೆಗಳು ಯುವ ಸಮೂಹವನ್ನು ಜಾಗೃತಗೊಳಿಸಬೇಕಿದೆ. ಎಲ್ಲರನ್ನೂ ಒಳಗೊಳ್ಳುವ inclusive politics ಮೂಲಕ ಅಂಬೇಡ್ಕರ್-ಗಾಂಧಿ ಕನಸಿನ ಭಾರತವನ್ನು ಕಟ್ಟಬೇಕಾದ ರಾಜಕೀಯ ವ್ಯವಸ್ಥೆ ಇಂದು ತಳಸಮುದಾಯಗಳನ್ನು, ಮಹಿಳಾ ಸಮೂಹವನ್ನು, ಅವಕಾಶವಂಚಿತ-ಅಂಚಿಗೆ ತಳ್ಳಲ್ಪಟ್ಟವರನ್ನು ಹೊರಗಿಡುತ್ತಲೇ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ. ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆಯು ಈ ಹೊರಗುಳಿಯಲ್ಪಟ್ಟವರನ್ನು ಶಾಶ್ವತವಾಗಿ ದೂರೀಕರಿಸುವ ಮೂಲಕ, ಸಾಮಾಜಿಕ ಅಸಮಾನತೆ ಮತ್ತು ಸಾಂಸ್ಕೃತಿಕ ಅಸಮತೋಲನವನ್ನು ಹಿಗ್ಗಿಸುತ್ತಿದೆ. ಇಂದಿನ ಹಾಗೂ ಮುಂದಿನ ಯುವ ಪೀಳಿಗೆಗೆ ಈ ಮಾದರಿಯನ್ನೇ ಆದರ್ಶಪ್ರಾಯ ಎಂದು ಬಿಂಬಿಸುವ ಪ್ರಯತ್ನಗಳನ್ನು ಸಂವಹನ ತಂತ್ರಜ್ಞಾನವು ಮಾಧ್ಯಮಗಳ ಮುಖಾಂತರ, ಮಾಡುತ್ತಿದೆ. ಹಾಗಾಗಿಯೇ ಕಣ್ಣೆದುರಿನಲ್ಲೇ ನಡೆಯುತ್ತಿರುವ ಅಮಾನುಷ ದೌರ್ಜನ್ಯಗಳಿಗೂ ವಿಶಾಲ ಸಮಾಜ ಕುರುಡಾದಂತೆ ಕಾಣುತ್ತಿದೆ.

ಈ ಸಾಂಸ್ಕೃತಿಕ ಅಂಧತ್ವವನ್ನು, ಸಾಮಾಜಿಕ ಅಂಧಕಾರವನ್ನು, ರಾಜಕೀಯ ನಿಷ್ಕ್ರಿಯತೆಯನ್ನು ತೊಡೆದುಹಾಕಲು ಯುವ ಸಂಕುಲಕ್ಕೆ ಪರಿವರ್ತನೆಯ ಹಾದಿಯನ್ನು ತೋರಿಸುವ ತಾತ್ವಿಕ ಸೇತುವೆಗಳು ಅತ್ಯವಶ್ಯವಾಗಿವೆ. ಭಗತ್‌ ಸಿಂಗ್‌ ಮತ್ತು ಆತನ ಆಲೋಚನೆಗಳು ಈ ನಿಟ್ಟಿನಲ್ಲಿ ಒಂದು ದೀವಿಗೆಯಾಗಿ ಕಾಣುತ್ತವೆ. ಹುತಾತ್ಮ ದಿನವನ್ನು ಆಚರಿಸುವುದರೊಂದಿಗೇ ಭಗತ್‌ ಸಿಂಗ್‌ ಮತ್ತು ಸಂಗಡಿಗರ ತಾತ್ವಿಕ ಚಿಂತನೆಗಳನ್ನು ಸಮಾಜದ ನಡುವೆ ಕೊಂಡೊಯ್ಯುವುದು ನಮ್ಮ ಆದ್ಯತೆಯಾದರೆ, ಮಾರ್ಚ್‌ 23ರ ಆಚರಣೆಗಳೂ ಸಾರ್ಥಕವಾಗುತ್ತವೆ.

Tags: Akka MahadeviBhagat singhbritishCongress PartyMahatma Gandhiಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕಾಂಗ್ರೆಸ್ ಸರ್ಕಾರದಲ್ಲಿ ‘ಸಂಘಿ’ಗಳಿಗೆ ಮನ್ನಣೆ..? ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆಯನ್ನ ರೆಕಮೆಂಡ್ ಮಾಡಿದವರು ಯಾರು..?

Next Post

Donald Trump Is Sworn In as President, Capping His Swift Ascent

Related Posts

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
0

ಶಾಸಕರ ಅಭಿಪ್ರಾಯ ಪಕ್ಷದ ವರಿಷ್ಠರ ತೀರ್ಮಾನವಲ್ಲ, ನಾವಿಬ್ಬರೂ ವರಿಷ್ಠರ ತೀರ್ಮಾನಕ್ಕೆ ಬದ್ಧ ಮುಖ್ಯಮಂತ್ರಿಗಳ ಬದಲಾವಣೆ ಮಾಧ್ಯಮಗಳ ಸೃಷ್ಠಿ - ಊಹಾಪೋಹಗಳಿಗೆ ಆಸ್ಪದವಿಲ್ಲ-ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ,ಜುಲೈ 10 :...

Read moreDetails

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025
Next Post

Donald Trump Is Sworn In as President, Capping His Swift Ascent

Please login to join discussion

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 
Top Story

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

by Chetan
July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

July 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada