ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಅಳೆದು ತೂಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ದಾವಣಗೆರೆ ದಕ್ಷಿಣದ ಟಿಕೆಟ್ ಶಾಮನೂರು ಕುಟುಂಬಕ್ಕೆ ದಕ್ಕಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪುತ್ರ ಸಮರ್ಥ್ ಶಾಮನೂರನ್ನು ಕಣಕ್ಕಿಳಿಸಿದೆ.

ಮುಸ್ಲಿಂ ಬಾಹುಳ್ಯದ ಕ್ಷೇತ್ರವಾಗಿರುವ ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಒತ್ತಡಗಳು ಹಾಗೂ ಒತ್ತಾಯಗಳ ಮಧ್ಯೆಯೂ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಹಿತದೃಷ್ಟಿಯಿಂದ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಅಲ್ಲದೆ ಒಂದು ವೇಳೆ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡದಿದ್ದರೆ ರಾಜೀನಾಮೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ತೀವ್ರ ಹಿನ್ನಡೆಯಾಗಿದೆ.
ಮುಖ್ಯವಾಗಿ ಅಂದುಕೊಂಡಂತೆ ಡಿಸಿಎಂ ಡಿಕೆ ಶಿವಕುಮಾರ್ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡುವಲ್ಲಿ ಸಫಲರಾಗಿದ್ದಾರೆ. ಅಲ್ಪಸಂಖ್ಯಾತರ ಮತಗಳು ಕೈ ತಪ್ಪುವ ಭೀತಿಯ ನಡುವೆಯೂ ಡಿಕೆ ಶಿವಕುಮಾರ್ ದಾವಣಗೆರೆ ಉಪಚುನಾವಣೆಯ ನೊಗ ಹೊತ್ತಿದ್ದಾರೆ.
ಇನ್ನೂ ತೀವ್ರ ಕಗ್ಗಂಟಾಗಿದ್ದ ಬಾಗಲಕೋಟೆಯ ಕಾಂಗ್ರೆಸ್ ಟಿಕೆಟ್ ಫೈಟ್ ತಣ್ಣಗಾಗಿದ್ದು, ದಿ. ಹೆಚ್.ವೈ. ಮೇಟಿ ಪುತ್ರ ಉಮೇಶ್ ಮೇಟಿಗೆ ಒಲಿದಿದೆ. ಸಾಕಷ್ಟು ಹಗ್ಗಜಗ್ಗಾಟದ ನಡುವೆ ಕೊನೆಗೆ ಕಾಂಗ್ರೆಸ್ ಪಕ್ಷ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಿದೆ. ಈ ಕ್ಷೇತ್ರದ ಟಿಕೆಟ್‌ಗಾಗಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿತ್ತು.
ಇದನ್ನೂ ಓದಿ : Viral News ; ಅಪಾಯದಲ್ಲಿ ಗಂಗಾ ನದಿಯ ಈ ಸೇತುವೆ : ಜನರಲ್ಲಿ ಪಿಲ್ಲರ್ ಕುಸಿತದ ಆತಂಕ!
ಆದರೆ ಅವುಗಳನ್ನೆಲ್ಲ ಬದಿಗೊತ್ತಿ ಆಪ್ತನ ಕುಟುಂಬಕ್ಕೆ ಬಿ ಫಾರಂ ತಲುಪುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೋಡಿಕೊಂಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯನವರಿಗೆ ಬಾಗಲಕೋಟೆಯ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಿಜೆಪಿಯ ಅಲೆಯಲ್ಲಿ ಕಾಂಗ್ರೆಸ್ ಉಳಿಸಿಕೊಳ್ಳುವ ಸವಾಲು ಎದುರಾದಂತಾಗಿದೆ.
ಅಲ್ಲದೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿಯ ನಡುವೆಯೂ ಪಕ್ಷದಲ್ಲಿನ ಫೈಟ್ ಇಲ್ಲಿಗೆ ತಣ್ಣಗಾಗುತ್ತಾ? ಅಥವಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.






