ಪ್ರತಿಭೆಯ ಲವಲೇಶವೂ ಇಲ್ಲದೆ ಕೇವಲ ಕುಟಿಲತನದಿಂದ ಭಾರತದ ಸರ್ವ ಕ್ಷೇತ್ರಗಳ ಮೇಲೆ ಬ್ರಾಹ್ಮಣ್ಯ ತನ್ನ ಹಿಡಿತವನ್ನು ಸಾಧಿಸುವಲ್ಲಿ ಸಫಲವಾಗಿದೆ. ಕನ್ನಡ ಚಿತ್ರರಂಗವೂ ಅದಕ್ಕೆ ಹೊರತಾಗಿಲ್ಲ. ಬಹುಜನ ಪ್ರತಿಭೆಗಳನ್ನು ದಮನಿಸುವುದೆ ತಮ್ಮ ಪ್ರತಿಭೆ ಎಂದು ಅದು ಅದೇಕ ವೇಳೆ ಪ್ರತಿಪಾದಿಸಿದ್ದನ್ನು ನೋಡಿದ್ದೇವೆ. ಆದರೆˌ ಬ್ರಾಹ್ಮಣ್ಯದ ಕುಟಿಲ ಅಡಚಣಿಗಳ ಹೊರತಾಗಿಯೂ ಹೊರಹೊಮ್ಮಿದ ಅಸಂಖ್ಯಾತ ದೈತ್ಯ ಪ್ರತಿಭೆಗಳೆಲ್ಲವೂ ಬಹುಜನ ವರ್ಗಕ್ಕೆ ಸೇರಿವೆ ಎನ್ನುವುದು ಗಮನಾರ್ಹ ಅಂಶವಾಗಿದೆ. ರಾಮಾಯಣ ಹಾಗು ಮಹಾಭಾರತದಂತಹ ಕಾಲ್ಪನಿಕ ರಮ್ಯ ಕಾವ್ಯಗಳು ಬರೆದಿದ್ದಾರೆನ್ನಲಾಗುವ ವಾಲ್ಮಿಕಿ ಮತ್ತು ವ್ಯಾಸರ ಬಗ್ಗೆ ಬಹಳಷ್ಟು ಅನುಮಾನಗಳು ಸಾರಸ್ವತ ವಲಯದಲ್ಲಿ ಇನ್ನೂ ಉಳಿದಿವೆ. ಬಹುಜನರಿಗೆ ಶಿಕ್ಷಣವೆ ಸಿಗದಿದ್ದ ಕಾಲಘಟ್ಟದಲ್ಲಿ ಅಕ್ಷರ ವಂಚಿತ ಸಮುದಾಯಕ್ಕೆ ಸೇರಿದ ಇವರು ಆ ಮಹಾಕಾವ್ಯಗಳು ಬರೆಯಲು ಸಾಧ್ಯವೆ ಇಲ್ಲ ಎನ್ನುವ ವಾದವು ಇನ್ನೂ ಜೀವಂತವಾಗಿದೆ.
ವಾಲ್ಮಿಕಿˌ ವ್ಯಾಸˌ ಕಾಳಿದಾಸ ಮುಂತಾದ ಎಲ್ಲ ಸಾಧಕರ ಪ್ರತಿಭೆಯನ್ನು ಮೀರಿಸುವˌ ಇಲ್ಲವೆ ಕನಿಷ್ಟ ಅದನ್ನು ಸರಿಗಟ್ಟುವ ಪ್ರತಿಭೆ ಭೂಸುರರಲ್ಲಿ ಯಾವತ್ತೂ ಹುಟ್ಟಿಲ್ಲ ಎನ್ನುವುದು ಕೂಡ ಗಮನಿಸಲೇಬೇಕಾದ ಸಂಗತಿಯಾಗಿದೆ. ಗುರುವಿನ ಮಾರ್ಗದರ್ಶನವೆ ಇಲ್ಲದೆ ಕೇವಲ ತನ್ನ ಪ್ರತಿಭೆˌ ಏಕಾಗ್ರತೆˌ ಹಾಗು ಕಠಿಣ ಪರಿಶ್ರಮದಿಂದ ಬಿಲ್ಲುವಿದ್ಯೆಯಲ್ಲಿ ಪಾರಂಗತನಾದ ಏಕಲವ್ಯನನ್ನು ಸರಿಗಟ್ಟುವ ಕ್ಷತ್ರೀಯ ಅಥವಾ ಭೂಸುರ ಪ್ರತಿಭೆಗಳು ಇತಿಹಾಸ ಮತ್ತು ಕಾಲ್ಪನಿಕ ಪುರಾಣಗಳಲ್ಲಿ ಕಾಣಸಿಗದಿರುವುದನ್ನು ಕೂಡ ನಾವು ಗಮನಿಸಬೇಕಿದೆ. ಭೂಸುರರು ಸೃಷ್ಟಿಸಿರುವ ಪುರಾಣಗಳು ಜನರನ್ನು ಸದಾ ಗೊಂದಲದಲ್ಲಿಟ್ಟಿವೆ. ಒಂದು ಕಡೆ ಬಹುಜನರು ಪ್ರತಿಭಾವಂತರೆಂತಲೂ ಮತ್ತೊಂದು ಕಡೆ ಅವರ ಪ್ರತಿಭೆಯನ್ನು ಹತ್ತಿಕ್ಕಲು ಭೂಸುರರು ಹುನ್ನಾರಗಳು ಮಾಡಿದರೆಂತಲು ಹೇಳುವ ಪುರಾಣಗಳು ಎಷ್ಟರ ಮಟ್ಟಿಗೆ ನಂಬಿಕೆಗೆ ಅರ್ಹ ಎನ್ನುವ ಪ್ರಶ್ನೆ ಮೂಡುವುದು ಸಹಜ. ಬ್ರಾಹ್ಮಣ್ಯದ ಪ್ರಾಬಲ್ಯ ಉಳಿಸಿಕೊಳ್ಳಲು ಹಾಗು ಬಹುಜನರು ಯಾವತ್ತೂ ತಮ್ಮ ಧರ್ಮವನ್ನು ಅನುಸರಿಸಬೇಕೆಂದು ಬಹುಜನರ ಹೆಸರಿನಲ್ಲಿ ಕಾವ್ಯಗಳನ್ನು ಕಟ್ಟಿ ಚಾತುರ್ವರ್ಣ ವ್ಯವಸ್ಥೆಯನ್ನು ಭೂಸುರರು ಖಾಯಂ ಗೊಳಿಸಿರುವ ಸಾಧ್ಯತೆಗಳನ್ನು ಕೂಡ ಅಲ್ಲಗಳೆಯಲಾಗದು.
ಇನ್ನು ಕನ್ನಡ ಚಿತ್ರರಂಗದ ವಿಷಯಕ್ಕೆ ಬರುತ್ತೇನೆ. ಆರಂಭದಲ್ಲಿ ಹಿಂದಿನ ಮದ್ರಾಸ್ ಪ್ರಾಂತ್ಯದ ಸೌಲಭ್ಯಗಳ ಮೇಲೆ ಅವಲಂಬಿಸಿದ್ದ ಕನ್ನಡ ಚಿತ್ರರಂಗದ ಮೇಲೆ ಅಂದಿನಿಂದ ಇಂದಿನ ವರೆಗೆ ಬ್ರಾಹ್ಮಣ್ಯದ ಹಿಡಿತವೆ ಇದ್ದರು ಕೂಡ ಡಾ. ರಾಜಕುಮಾರರಂತಹ ಬಹುಜನ ಪ್ರತಿಭೆಯನ್ನು ಹೊರತು ಪಡಿಸಿ ಹಿಂದಿ ಹಾಗು ಭಾರತದ ಉಳಿದ ಪ್ರಾದೇಶಿಕ ಭಾಷೆಗಳ ಚಿತ್ರರಂಗಕ್ಕೆ ಪ್ರತಿಸ್ಪರ್ಧಿಯಾಗಬಲ್ಲ ಬ್ರಾಹ್ಮಣ್ಯದ ಪ್ರತಿಭೆ ಕನ್ನಡ ಚಿತ್ರರಂಗದಲ್ಲಿ ಹುಟ್ಟಲೆಯಿಲ್ಲ. ಡಾ. ರಾಜ್ ಚಿತ್ರರಂಗಕ್ಕೆ ಪ್ರವೇಶ ಪಡೆಯುವ ಮೊದಲು ನಟನೆ ಹಾಗು ಹಾಡುಗಾರಿಕೆಯಲ್ಲಿ ಪಳಗಿದ್ದು ರಂಗಭೂಮಿಯ ಇನ್ನೊಬ್ಬ ದೈತ್ಯ ಬಹುಜನ ಪ್ರತಿಭೆ ನಟರತ್ನಾಕರ ಗುಬ್ಬಿ ವೀರಣ್ಣನವರ ಗರಡಿಯಲ್ಲಿ ಎನ್ನುವ ಸಂಗತಿ ನಾವು ಮರೆಯಬಾರದು. ಡಾ. ರಾಜ್ ನಟಿಸಿದ ಮೊದಲ ಚಿತ್ರವೆ ರಾಷ್ಟ್ರ ಪ್ರಶಸ್ತಿ ಪಡೆದದ್ದದಲ್ಲಿ ರಾಜ್ ನಟನೆಯ ಪಾಲು ಅಲ್ಲಗಳೆಯಲಾಗದು. ಈ ಘಟನೆ ಅನೇಕ ಭೂಸುರರಲ್ಲಿ ಅಸೂಯೆ ಹುಟ್ಟಿಸಿತ್ತು ಎನ್ನುವುದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಡಾ. ರಾಜ್ ಜನಪ್ರೀಯತೆ ಮತ್ತು ಬೇಡಿಕೆ ಹೆಚ್ಚುತ್ತಿದ್ದಂತೆ ಚಿತ್ರರಂಗದ ಭೂಸುರ ನಿರ್ದೇಶಕ ಮತ್ತು ನಿರ್ಮಾಪಕರು ಅದನ್ನು ಎನ್ಕ್ಯಾಶ್ ಮಾಡಿಕೊಳ್ಳಲು ನಾಮುಂದು ತಾಮುಂದು ಎನ್ನುವಂತೆ ಪೈಪೋಟಿಗಿಳಿದದ್ದಲ್ಲದೆˌ ಅವರೊಟ್ಟಿಗೆ ರಾಜ್ ರ ಅಪಾರ ಜನಪ್ರೀಯತೆ ಕಂಡು ಒಳಗೊಳಗೆ ಕುದ್ದಿದಿದೆ. ಆರಂಭದಿಂದ ರಾಜ್ ಗೆ ಪರ್ಯಾಯ ನಾಯಕ ನಟನನ್ನು ಸೃಷ್ಟಿಸಲು ಭೂಸುರರು ಪಟ್ಟ ಪಾಡು ಅಷ್ಟಿಸ್ಟಲ್ಲ. ರಾಜ್ ಗೆ ಎಂದಿಗೂ ಸಮಬಾರದ ಉದಯ್ˌ ಕಲ್ಯಾಣ ಮತ್ತು ಇತರರು ರಾಜ್ ನಟನೆಯನ್ನು ಸರಿಗಟ್ಟಲಾಗದೆ ಮತ್ತು ರಾಜ್ ರಂತೆ ಅಂಗಸೌಷ್ಟವˌ ದೈಹಿಕ ಹಾಗು ಮಾನಸಿಕ ಆರೋಗ್ಯ ಮತ್ತು ಸನ್ನಡತೆಯನ್ನು ಪ್ರದರ್ಶಿಸಲಾಗದೆ ಪೋಷಕ ಪಾತ್ರಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆನಂತರದಲ್ಲಿ ರಾಜ್ ಎಂದರೆ ಕನ್ನಡ ಚಿತ್ರರಂಗ ಎನ್ನುವ ವಾತಾವರಣ ನಿರ್ಮಾಣವಾಗಿದ್ದು ಈಗ ಇತಿಹಾಸ. ಆರಂಭದಲ್ಲಿ ರಾಜ್ ರನ್ನು ಹಾಕಿಕೊಂಡು ಚಿತ್ರ ಮಾಡಿದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಆಮೇಲೆ ತಾನು ಸ್ಟಾರ್ ನಿರ್ದೇಶಕನೆಂದ ಭ್ರಮೆಯಲ್ಲಿ ರಾಜ್ ರಿಂದ ದೂರವಾದರು. ಆದರೆ ರಾಜ್ ಗೆ ಪ್ರತಿಸ್ಪರ್ಧಿ ನಟನನ್ನು ಸೃಷ್ಟಿಸಲು ಅವರು ಸಾಯುವ ತನಕ ಪ್ರಯತ್ನಿಸಿ ವಿಫಲರಾದರು.
ದುರಂತದ ಸಂಗತಿ ಎಂದರೆ ರಾಜ್ ಪ್ರತಿಭೆˌ ಬೇಡಿಕೆˌ ಹಾಗು ಜನಪ್ರೀಯತೆಯನ್ನು ಜೀರ್ಣಿಸಿಕೊಳ್ಳಲಾಗದೆ ಅವರನ್ನು ದ್ವೇಷಿಸಿದ ಭೂಸುರರು ರಾಜ್ ಮೂಲಕವೆ ತಮ್ಮ ಮಠ/ಮಂದಿರಗಳನ್ನು ಜನಪ್ರೀಯಗೊಳಿಸಿಕೊಂಡು ಹೊಟ್ಟೆಪಾಡಿಗೆ ಹಾದಿಮಾಡಿಕೊಂಡದ್ದು. ರಾಜ್ ಒಬ್ಬ ವ್ಯಕ್ತಿಯಾಗಿ ಅಷ್ಟೆ ಅಲ್ಲದೆ ಒಂದು ಬೃಹತ್ ಉದ್ಯಮವಾಗಿ ಬೆಳೆದು ನಿಂತಾಗ ಅನೇಕ ಜನ ಭೂಸುರರು ಅವರ ಕೃಪಾಕಟಾಕ್ಷದಿಂದ ಬದುಕು ಕಟ್ಟಿಕೊಂಡಿದ್ದು ಕೂಡ ನಾವು ಗಮನಿಸಬೇಕು. ಮಂತ್ರಾಲಯದ ಕೀರ್ತನಕಾರರಾಗಿದ್ದ ರಾಘವೇಂದ್ರರ ಪಾತ್ರ ಮಾಡುವ ಸಂದರ್ಭ ಬಂದಾಗ ಡಾ. ರಾಜ್ ಅವರನ್ನು ಮಾಂಸಾಹಾರಿ ಎಂತಲುˌ ಶೂದ್ರನೆಂತಲು ಅವಮಾನಿಸಿದವರು ಅದೇ ಮಂತ್ರಾಲಯ ಕ್ಷೇತ್ರವನ್ನು ರಾಜ್ ಜನಪ್ರೀಯತೆಯ ಬಲದಿಂದ ಮುನ್ನೆಲೆಗೆ ತಂದುಕೊಂಡದ್ದು ಭೂಸುರರ ಪರಂಪರಾಗತ ಅವಕಾಶವಾದಿ ಹೊಂದಾಣಿಕೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ರಾಜ್ ಜನಪ್ರೀಯತೆಯ ಉತ್ತುಂಗದಲ್ಲಿದ್ದಾಗ ಅವರನ್ನು ಹಾಕಿಕೊಂಡು ಚಿತ್ರ ಮಾಡಿ ಅಪಾರ ಹಣ ಗಳಿಸಿಯೂ ರಾಜ್ ಗೆ ಮೋಸ ಮಾಡಿದವರ ಸಂಖ್ಯೆಯೇನು ಕಡಿಮೆಯಿಲ್ಲ.
ಚಿತ್ರರಂಗದಲ್ಲಿ ನಿರ್ದೇಶನಕ್ಕೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಕೂಡ ಸಿದ್ಧಲಿಂಗಯ್ಯನವರಂತ ದೈತ್ಯ ಬಹುಜನ ಪ್ರತಿಭೆಯನ್ನು ಕಡೆಗಣಿಸಿ ಪುಟ್ಟಣ್ಣನವರ ಹೆಸರು ಪರಿಗಣಿಸಿದ್ದು ಕೂಡ ಒಂದು ದೊಡ್ಡ ಹುನ್ನಾರದ ಭಾಗವೆ ಆಗಿದೆ. ಹಾಗೆಂದು ಪುಟ್ಟಣ್ಣ ಪ್ರತಿಭಾವಂತರಾಗಿರಲಿಲ್ಲ ಎನ್ನಲಾಗದು. ಆದರೆ ಅವರ ಪ್ರತಿಭೆ ಮತ್ತು ಆದ್ಯತೆ ಏನಾಗಿತ್ತು ಎನ್ನುವ ಅಂಶವು ಕೂಡ ನಿರ್ದೇಶಕ ಪ್ರಶಸ್ತಿಗೆ ಅವರ ಹೆಸರಿಡುವವರು ಪರಿಗಣಿಸಬೇಕಿತ್ತು. ಪುಟ್ಟಣ್ಣನವರು ಉಳಿದೆಲ್ಲ ನಿರ್ದೇಶಕರಂತೆ ತಮ್ಮ ಚಿತ್ರಗಳಲ್ಲಿ ಬ್ರಾಹ್ಮಣ್ಯದ ಆಚರಣೆಗಳಿಗೆ ಮೊದಲ ಪ್ರಾಶಸ್ಥ್ಯ ನೀಡುತ್ತಿದ್ದರು. ಕೆಲವು ಅಪವಾದದ ಹೊರತಾಗಿ ತಮ್ಮ ಚಿತ್ರಗಳಲ್ಲಿ ತಮ್ಮವರಿಗೆ ಅತಿ ಹೆಚ್ಚು ಅವಕಾಶ ನೀಡುತ್ತಿದ್ದರು. ಚಿಕ್ಕಮಗಳೂರಿನಲ್ಲಿ ಅಡಿಗೆ ಎಣ್ಣೆ ಮಾರಾಟದ ವಾಹನವೊಂದರ ಸಾಧಾರಣ ಚಾಲಕನಾಗಿದ್ದ ಪುಟ್ಟಣ್ಣ ಸದಭಿರುಚಿಯ ಚಿತ್ರಗಳು ನಿರ್ದೇಶಿಸಿದ್ದು ಸಣ್ಣ ಸಂಗತಿಯಲ್ಲ. ಚಿತ್ರರಂಗದಲ್ಲಿ ತಳವೂರಲು ಅವರು ಹೆಚ್ಚು ಶ್ರಮ ಪಡುವ ಪರಿಸ್ಥಿತಿ ಇರಲಿಲ್ಲ. ಅವರ ಸಹೋದರ ಕಣಗಾಲ್ ಪ್ರಭಾಕರ ಶಾಸ್ತ್ರಿ ˌ ಅವರದೆ ಸಮುದಾಯದ ಹುಣಸೂರು ಕೃಷ್ಣಮೂರ್ತಿ ˌ ಎಚ್ ಎಲ್ ಎನ್ ಸಿಂಹ ಮುಂತಾದವರ ಪರೋಕ್ಷ ನೆರವು ಪುಟ್ಟಣ್ಣನವರಿಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅವರನ್ನು ಆದಷ್ಟು ಬೇಗ ಜನಪ್ರೀಯಗೊಳಿಸಲು ಅವರ ಮಾಧ್ಯಮ ಬಂಧುಗಳಂತೂ ಇಂದಿನಂತೆ ಅಂದೂ ಇದ್ದರು ಎನ್ನುವನ್ನು ನಾವು ಕಡೆಗಣಿಸುವಂತಿಲ್ಲ.

ಆದರೆˌ ಪುಟ್ಟಣ್ಣನವರಿಗಿದ್ದ ಈ ಯಾವ ಧನಾಂಶಗಳೂ ಇಲ್ಲದೆ ಗ್ರಾಮೀಣ ಭಾಗದಿಂದ ಬಂದ ಸಿದ್ಧಲಿಂಗಯ್ಯನವರು ಚಿತ್ರರಂಗದಲ್ಲಿ ತಳವೂರಿˌ ಬೆಳೆದುˌ ತಮ್ಮದೆ ಛಾಪು ಮೂಡಿಸಿದ್ದು ಸಾಧಾರಣ ಸಂಗತಿಯಂತೂ ಖಂಡಿತ ಅಲ್ಲ. ಸಿದ್ಧಲಿಂಗಯ್ಯನವರ ಬಂಗಾರದ ಮನುಷ್ಯ ಕನ್ನಡ ಚಿತ್ರರಂಗದಲ್ಲಿ ಬರೆದ ಸರ್ವಕಾಲಿಕ ದಾಖಲೆ ಸಾವಿರ ಪುಟ್ಟಣ್ಣ ಬಂದರೂ ಸರಿಗಟ್ಟಲಾರರು. ಬಂಗಾರದ ಮನುಷ್ಯ ಜನಪ್ರೀಯತೆಗೆ ಡಾ. ಡಾ. ರಾಜ್ ಮತ್ತು ಸಿದ್ಧಲಿಂಗಯ್ಯ ಇಬ್ಬರು ದೈತ್ಯ ಬಹುಜನ ಪ್ರತಿಭೆಗಳು ಕಾರಣರಾಗಿದ್ದನ್ನು ನಾವು ಮರೆಯುವಂತಿಲ್ಲ. ಅವರ ಭೂತಯ್ಯನ ಮಗ ಅಯ್ಯು ˌ ಹೇಮಾವತಿ ಮುಂತಾದ ಚಿತ್ರಗಳು ಸಾಮಾಜಿಕ ಪಿಡುಗುಗಳು ಮತ್ತು ಗ್ರಾಮೀಣˌ ಕೃಷಿ ಹಿನ್ನೆಲೆಯ ಬದುಕಿನ ಕಥಾ ಹಂದರ ಹೊಂದಿದ್ದು ಗಮನಾರ್ಹ ಅಂಶಗಳು. ಪುಟ್ಟಣ್ಣನವರ ಚಿತ್ರಗಳಲ್ಲಿ ಸಾಮಾನ್ಯವಾಗಿ ಈ ಶ್ರಮ ಸಂಸ್ಕೃತಿ ಮತ್ತು ಗ್ರಾಮೀಣ ಹಿನ್ನೆಲೆಯ ಕತೆಗಳು ಎರಡನೇ ಆದ್ಯತೆ ಹೊಂದಿದ್ದವು. ಪುಟ್ಟಣ್ಣನವರು ತಮ್ಮ ಅತಿಯಾದ ವೃತ್ತಿ ಶಿಸ್ತಿನ ಅಹಂಕಾರ ಮತ್ತು ವೈಯಕ್ತಿಕ ಬದುಕಿನ ಅಶಿಸ್ತಿನ ಕಾರಣದಿಂದ ದುರದೃಷ್ಟವಶಾತ್ ಅಕಾಲ ಮರಣ ಹೊಂದಿದರು. ಅವರು ಇನ್ನಷ್ಟು ದಿನ ಬದುಕಿದ್ದು ಕನ್ನಡ ಚಿತ್ರರಂಗಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಬೇಕಿತ್ತು ಎನ್ನುವದು ಕನ್ನಡಿಗರ ಆಶೆಯಾಗಿತ್ತು.
ಕನ್ನಡ ಚಿತ್ರರಂಗದ ಮೇಲೆ ಅಂದಿನ ಕಾಲದಲ್ಲಿ ಹೊಂದಿದ್ದ ಬ್ರಾಹ್ಮಣ್ಯದ ಹಿಡಿತ ಇಂದಿಗೂ ಸಡಿಲಗೊಂಡಿಲ್ಲ. ಆಗ ಕನಿಷ್ಟ ಒಂದಷ್ಟು ಸೌಹಾರ್ದತೆಯಾದರೂ ಚಿತ್ರರಂಗದಲ್ಲಿ ನೆಲೆಗೊಂಡಿತ್ತು. ಹಾಗೊಂದು ವೇಳೆ ಬಹಿರಂಗವಾಗಿ ಬ್ರಾಹ್ಮಣ್ಯ ಏನಾದರೂ ತನ್ನ ಬಾಲ ಬಿಚ್ಚಿದರೆ ತದನ್ನು ಕತ್ತರಿಸಲು ಡಾ. ರಾಜ್ ಎಂಬ ಶಕ್ತಿ ಕೇಂದ್ರವಿತ್ತು. ಆದರೆ ಬ್ರಾಹ್ಮಣೇತರ ಪ್ರತಿಭೆಗಳನ್ನು ಕನ್ನಡ ಚಿತ್ರರಂಗದಲ್ಲಿ ಆರಂಭದಲ್ಲೇ ಹೊಸಕಿ ಹಾಕುವ ಮತ್ತು ವಿವಾದಾತ್ಮಕಗೊಳಿಸುವ ಹುನ್ನಾರಗಳು ಅಂದಿಗಿಂತ ಇಂದು ಹೆಚ್ಚಾಗಿವೆ. ಕಾರಣˌ ಇಡೀ ದೇಶದಲ್ಲಿ ಬಲಪಂತೀಯ ಬ್ರಾಹ್ಮಣ್ಯ ಶಕ್ತಿಗಳು ಪ್ರತಿಯೊಂದರ ಮೇಲೆ ತಮ್ಮ ನಿಯಂತ್ರ ಹೊಂದಿವೆ. ಅದಕ್ಕೆ ಪೂರಕವೆನ್ನುವಂತೆ ಸರಕಾರದ ಆಡಳಿತಾತ್ಮಕ ಮತ್ತು ಬೇನಾಮಿ ಆರ್ಥಿಕತೆಯ ಸಹಕಾರˌ ಹಿಂದುತ್ವದ ಗೂಂಡಾಗಿರಿ ಪಡೆಯ ಬೆಂಬಲ ಹಾಗು ಹಿಂದೆಂದಿಗಿಂತ ಅಪಾಯಕಾರಿಯಾಗಿ ಬೆಳೆದು ನಿಂತಿರುವ ಮಾಧ್ಯಮ ಬ್ರಾಹ್ಮಣ್ಯದ ಕೃಪೆ ಈ ಮಡಿವಂತರಿಗೆ ಪೂರಕವಾಗಿದೆ. ಆ ಕಾರಣದಿಂದಲೆ ಪ್ರಗತಿಪರ ನಿಲುವುಳ್ಳ ಬಹುಜನ ಪ್ರತಿಭೆಗಳಾದ ಹಂಸಲೇಖˌ ಚೇತನ್ˌ ಡಾಲಿ ಧನಂಜಯ ಮುಂತಾದವರ ಮೇಲೆ ಪುರೋಹಿತಶಾಹಿಗಳು ಮುಗಿಬೀಳುವುದನ್ನು ನಾವು ನಿತ್ಯ ನೋಡುತ್ತಿದ್ದೇವೆ.