• Home
  • About Us
  • ಕರ್ನಾಟಕ
Thursday, July 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಬಾಂಡ್‌ ಬಂಡವಾಳ ಮತ್ತು ಅಪರಿಪೂರ್ಣ ಪ್ರಜಾಪ್ರಭುತ್ವ

ಪ್ರತಿಧ್ವನಿ by ಪ್ರತಿಧ್ವನಿ
April 6, 2024
in ಅಂಕಣ
0
ಬಾಂಡ್‌ ಬಂಡವಾಳ ಮತ್ತು ಅಪರಿಪೂರ್ಣ ಪ್ರಜಾಪ್ರಭುತ್ವ
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

ಒಂದು ಉತ್ತಮ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಹಣಕಾಸು ದೇಣಿಗೆ ಪ್ರಧಾನವಾಗುವುದಿಲ್ಲ

( ಆಧಾರ : Bonds big money and imperfect democracy –ಹಿಂದೂ ಪತ್ರಿಕೆ – 30 ಮಾರ್ಚ್‌ 2024 –  ಅರುಣ್‌ ಕುಮಾರ್‌ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರು ಜೆಎನ್‌ಯು )

ನರೇಂದ್ರ ಮೋದಿ ಸರ್ಕಾರ 2018ರಲ್ಲಿ ಚುನಾವಣಾ ಬಾಂಡ್‌ ಯೋಜನೆಯನ್ನು ಜಾರಿಗೊಳಿಸಿದ್ದು, ರಾಜಕೀಯ ಪಕ್ಷಗಳು ಉದ್ಯಮಿಗಳಿಂದ ಪಡೆಯುವ ದೇಣಿಗೆಯಲ್ಲಿ ಕಪ್ಪುಹಣವನ್ನು ತಡೆಗಟ್ಟುವ ಉದ್ದೇಶದಿಂದ.  ಇದು ನಿಜಕ್ಕೂ ಸಾಧ್ಯವಾಗಿದ್ದಿದ್ದರೆ ಬಹುಶಃ ಭಾರತದ ರಾಜಕಾರಣದಲ್ಲಿ ಮಹತ್ತರವಾದ ಮನ್ವಂತರವನ್ನು ಕಾಣಬಹುದಿತ್ತು. ಏಕೆಂದರೆ ಅಕ್ರಮ ಬಂಡವಾಳ ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸಿದಷ್ಟೂ ಪ್ರಜಾಪ್ರಭುತ್ವ ಶಿಥಿಲವಾಗುತ್ತಲೇ ಹೋಗುತ್ತದೆ. ಆದರೆ ವಾಸ್ತವವಾಗಿ ನಡೆದದ್ದೇ ಬೇರೆ. ಚುನಾವಣಾ ಬಾಂಡ್‌ ಯೋಜನೆ ಚುನಾವಣಾ ರಾಜಕಾರಣದಲ್ಲಿ ಯಾವುದೇ ಪರಿವರ್ತನೆಯನ್ನು ತರಲಿಲ್ಲ. ಇಂದಿಗೂ ಸಹ ಚುನಾವಣೆಗಳು ಅಕ್ರಮ ಹಣಕಾಸಿನ ಬಲದಿಂದಲೇ ನಡೆಯುತ್ತಿದ್ದು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕೋಟ್ಯಂತರ ರೂಗಳನ್ನು ವೆಚ್ಚ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಸುಪ್ರೀಂಕೋರ್ಟ್‌ ತನ್ನ ಫೆಬ್ರವರಿ 15ರ ತೀರ್ಪಿನಲ್ಲಿ 2018ರ ಚುನಾವಣಾ ಬಾಂಡ್‌ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿ ಅಸಿಂಧುಗೊಳಿಸಿದೆ.

ಇಲ್ಲಿ ಭಾರತದ ರಾಜಕಾರಣ ಕಲಿಯಬೇಕಾದ ಪಾಠ ಸ್ಪಷ್ಟ. ರಾಜಕಾರಣದ ಮೂಲ ಸತ್ವವೇ ಅಪ್ರಜಾಸತ್ತಾತ್ಮಕವಾಗಿದ್ದಲ್ಲಿ ಯಾವುದೇ ಕಾನೂನಾತ್ಮಕ ಕ್ರಮಗಳೂ ಅದನ್ನು ಸರಿಪಡಿಸಲಾಗುವುದಿಲ್ಲ. ಚುನಾವಣಾ ಬಾಂಡ್‌ ವಿಫಲವಾಗಿರುವುದೂ ಇಲ್ಲೇ. ಭಾರತದ ರಾಜಕೀಯ ವ್ಯವಸ್ಥೆ ಮೂಲತಃ ಹಣಕಾಸು-ಬಂಡವಾಳವನ್ನೇ ಅವಲಂಬಿಸಿದ್ದು ಈ ಕಾರಣದಿಂದಲೇ ತನ್ನ ಅಂತಃಸತ್ವವನ್ನು ಕಳೆದುಕೊಂಡಿದೆ. ಚುನಾಯಿತ ನಾಯಕರು ತಮಗೆ ಚುನಾವಣೆಗಳಲ್ಲಿ ಹಣ ಪೂರೈಸುವವರ ಹಿತಾಸಕ್ತಿಗಾಗಿಯೇ ದುಡಿಯುವುದರಿಂದ ತಮ್ಮ ಕ್ಷೇತ್ರದ ಅಥವಾ ಮತದಾರಪ್ರಭುಗಳನ್ನು ಕಡೆಗಣಿಸುತ್ತಲೇ ಹೋಗುತ್ತಾರೆ. ಈ ಸನ್ನಿವೇಶದಲ್ಲಿ ನುಡಿದಂತೆ ನಡೆಯದ ಪಟ್ಟಭದ್ರ ಹಿತಾಸಕ್ತಿಗಳು ಚುನಾಯಿತರಾಗುವ ಸಂಭವವೇ ಹೆಚ್ಚಾಗಿರುತ್ತದೆ.

ನಡೆಗೂ ನುಡಿಗೂ ಇರುವ ಅಂತರ

ಹೀಗೆ ಆಯ್ಕೆಯಾಗುವ ರಾಜಕೀಯ ನಾಯಕರು ಹೇಳುವುದಕ್ಕೂ ಅವರು ನಡೆದುಕೊಳ್ಳುವ ರೀತಿಗೂ ಇರುವ ಅಪಾರ ಅಂತರವೇ ಪ್ರಜಾಪ್ರಭುತ್ವದ ಅವಗಣನೆಗೆ ಕಾರಣವಾಗುತ್ತದೆ. ಏಕೆಂದರೆ ಆಗ ಚುನಾಯಿತ ಸರ್ಕಾರವು ಜನರ, ಜನರಿಂದ, ಜನರಿಗಾಗಿ ಇರುವ ಆಳ್ವಿಕೆಯಾಗಿ ಉಳಿಯುವುದಿಲ್ಲ. ಸರ್ಕಾರಗಳ ಆಡಳಿತ ನೀತಿಗಳಿಂದ, ಜಾರಿಗೊಳಿಸುವ ಯೋಜನೆಗಳಿಂದ ಬಹುಸಂಖ್ಯಾತ ಜನರು ಯಾವುದೇ ರೀತಿಯ ಪ್ರಯೋಜನವನ್ನೂ ಪಡೆಯಲಾಗುವುದಿಲ್ಲ ಬದಲಾಗಿ ಪಟ್ಟಭದ್ರ ಹಿತಾಸಕ್ತಿಗಳೇ ಅಭಿವೃದ್ಧಿಯ ಪ್ರಮುಖ ಫಲಾನುಭವಿಗಳಾಗುತ್ತಾರೆ.  ಸರ್ಕಾರಗಳು ತಮ್ಮ ನೀತಿ-ಯೋಜನೆಗಳನ್ನು ಮೇಲ್ನೋಟಕ್ಕೆ ಜನಪರ ಎಂದು ಕಾಣುವ ಹಾಗೆಯೇ ರೂಪಿಸಿರುತ್ತಾರೆ ಆದರೆ ಫಲಿತಾಂಶ ಭಿನ್ನವಾಗಿರುತ್ತದೆ. ಪಟ್ಟಭದ್ರ ಹಿತಾಸಕ್ತಿಗಳನ್ನೇ ರಾಷ್ಟ್ರದ ಹಿತಾಸಕ್ತಿ ಎಂದು ಬಿಂಬಿಸಲಾಗುತ್ತದೆ.  ಹಾಗಾಗಿ ಈ ಅಲ್ಪ ಜನರೇ ಅವಕಾಶವಂಚಿತ ಜನಸಮೂಹಗಳಿಗಿಂತಲೂ ಮುಖ್ಯವಾಗಿಬಿಡುತ್ತಾರೆ.

ಉದಾಹರಣೆಗೆ, ಬಡತ̧ನ ದಾರಿದ್ರ್ಯ, ಅನಾರೋಗ್ಯ ಹಾಗೂ ಕಳಪೆ ಗುಣಮಟ್ಟದ ಶಿಕ್ಷಣ ಇವೆಲ್ಲವನ್ನು ಸಹಜ ಪ್ರಕ್ರಿಯೆಗಳೆಂದು ಪರಿಗಣಿಸಿ ಮಾರುಕಟ್ಟೆ ಶಕ್ತಿಗಳ ಮರ್ಜಿಗೆ ಒಳಪಡಿಸಲಾಗುತ್ತದೆ.  ಜನತೆಗೆ ಈ ಸೇವೆಗಳನ್ನು ಒದಗಿಸುವ ಸಲುವಾಗಿ ಕಾರ್ಪೋರೇಟ್‌ ಉದ್ಯಮಿಗಳಿಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ. ತತ್ಪರಿಣಾಮವಾಗಿ ಬಡ ಜನತೆಗೆ ಈ ಸೇವೆಗಳನ್ನು ಪಡೆಯುವುದೇ ದುಸ್ತರವಾಗುತ್ತದೆ. ಹಾಗಾಗಿಯೇ ಆರ್ಥಿಕ ಅಸಮಾನತೆಯೂ ಹೆಚ್ಚಾಗುತ್ತಲೇ ಹೋಗುತ್ತದೆ. ಔದ್ಯಮಿಕ ವಲಯಕ್ಕೆ ಹೆಚ್ಚಿನ ರಿಯಾಯಿತಿಗಳನ್ನು ನೀಡುವುದರಿಂದ ಸಾರ್ವಜನಿಕ ವಲಯದಲ್ಲಿ ಸಂಪನ್ಮೂಲಗಳ ಕೊರತೆಯೂ ಹೆಚ್ಚಾಗುತ್ತದೆ.  ಹಾಗಾಗಿ ಸಾರ್ವಜನಿಕ ಸೇವೆಗಳೂ ಕುಂಠಿತವಾಗುತ್ತವೆ. ಅಸಮರ್ಪಕ ಸಾರ್ವಜನಿಕ ಸೇವೆಗಳು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಬದುಕಿಗೆ ಮಾರಕವಾಗಿ ಪರಿಣಮಿಸುತ್ತವೆ.

ಇತ್ತೀಚಿನ ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿಗಳ ವರದಿ (ASER) ಸೂಚಿಸುವಂತೆ, ಭಾರತದಲ್ಲಿ 14 ರಿಂದ 18 ವಯೋಮಾನದ ಮಕ್ಕಳಲ್ಲಿ ಶೇಕಡಾ 40ರಷ್ಟು ಮಕ್ಕಳು ಓದು ಬರಹ ಕಲಿತಿರುವುದಿಲ್ಲ. ಎರಡನೆ ತರಗತಿಯ ಗಣಿತವನ್ನೂ ತಿಳಿದಿರುವುದಿಲ್ಲ. ತಮ್ಮ ಬಡತನದಿಂದ ಪಾರಾಗಲು ಅವಶ್ಯವಾದ ಹೆಚ್ಚಿನ ಕೌಶಲವನ್ನು ಪಡೆಯುವುದು ಈ ಜನಸಮೂಹಕ್ಕೆ ಅಸಾಧ್ಯವಾಗಿರುತ್ತದೆ. ಹೀಗಿದ್ದರೂ ಶಿಕ್ಷಣ ಏಕೆ ಹೆಚ್ಚಿನ ಆದ್ಯತೆ ಗಳಿಸುವುದಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಇದರ ಕಾರಣವನ್ನು ನಮ್ಮ ಅಭಿವೃದ್ಧಿ ಮಾದರಿಯಲ್ಲೇ ಕಾಣಬಹುದು. ಅಭಿವೃದ್ಧಿಯ ಫಲವು ಮೇಲಿನಿಂದ ಕೆಳಮಟ್ಟಕ್ಕೆ ಹರಿಯುವ ಆರ್ಥಿಕ ಮಾದರಿಯಲ್ಲಿ ಸಂಪನ್ಮೂಲಗಳನ್ನು ಮೇಲ್ವರ್ಗಗಳೇ ಹೆಚ್ಚಿನ ಪ್ರಮಾಣದಲ್ಲಿ ಕಬಳಿಸುತ್ತವೆ.

ಕಾನೂನುಬದ್ಧವಾಗಿ ತಾವು ಗಳಿಸುವ ಲಾಭದಿಂದಲೇ ತೃಪ್ತಿ ಪಡೆಯದ ಉದ್ಯಮಿಗಳು ತಮ್ಮ ಅಘೋಷಿತ ಆದಾಯವನ್ನು ಮಾರುಕಟ್ಟೆಯಲ್ಲಿ ತೊಡಗಿಸುವ ಮೂಲಕ ಕಪ್ಪುಹಣದ ಹರಿವು ಹೆಚ್ಚಿಸಿ ಕರಾಳ ಆರ್ಥಿಕತೆಗೆ ಎಡೆಮಾಡಿಕೊಡುತ್ತಾರೆ. ಹಾಗಾಗಿಯೇ ಅಕ್ರಮ ವ್ಯವಹಾರ ಎನ್ನುವುದು ವ್ಯವಸ್ಥಿತವಾಗಿ ಜಾರಿಯಲ್ಲಿರುತ್ತದೆ. ಆಡಳಿತ ನೀತಿಗಳ ನಿರೂಪಕರು ಮತ್ತು ಕಾರ್ಯಾಂಗವು ನಿರ್ಲಿಪ್ತವಾಗಿರುವುದರಿಂದಲೇ ಈ ಅಕ್ರಮಗಳೂ ನೆಲೆಗಾಣುತ್ತವೆ. ಭಾರತದ ಅರ್ಥವ್ಯವಸ್ಥೆಯಲ್ಲಿ ಕಪ್ಪುಹಣದ ಉಗಮ, ಹರಿವು, ಬಳಕೆ ಮತ್ತು ಕ್ರೋಢೀಕರಣದ ಹಿಂದೆ ಈ ತ್ರಿವಳಿ ಶಕ್ತಿಗಳ ಪರಿಶ್ರಮ ಇದ್ದೇ ಇರುತ್ತದೆ. ಸರ್ಕಾರಿ ಅಧಿಕಾರಿಗಳ ಉತ್ತರದಾಯಿತ್ವ ಕಡಿಮೆಯಾದಷ್ಟೂ ಪ್ರಜಾಪ್ರಭುತ್ವವು ಕುಸಿಯುತ್ತಲೇ ಹೋಗುತ್ತದೆ. ಇದಕ್ಕೆ ಪೂರಕವಾಗಿ ಭಾರತೀಯ ಸಮಾಜದಲ್ಲಿ ಶತಮಾನಗಳಿಂದ ಬೇರೂರಿರುವ ಊಳಿಗಮಾನ್ಯ ಧೋರಣೆ, ಜನಸಾಮಾನ್ಯರನ್ನು ಅಧಿಕಾರಸ್ತರಿಗೆ ವಿಧೇಯರಾಗಿರುವಂತೆ ಮಾಡುತ್ತದೆ. ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕಾದ ಎಲ್ಲ ಸಂಸ್ಥೆಗಳಲ್ಲೂ ಈ ಸನ್ನಿವೇಶವನ್ನು ಗುರುತಿಸಬಹುದು.

ಹಣದ ಹರಿವು ಮತ್ತು ಚುನಾವಣೆಗಳು

ಭಾರತದ ಚುನಾವಣೆಗಳಲ್ಲಿ ಅಭ್ಯರ್ಥಿಯ ಸಾಧನೆಯನ್ನು ಆಧರಿಸಿ  ಮತದಾನ ನಡೆಯುವುದಿಲ್ಲ. ಬದಲಾಗಿ ಜಾತಿ, ಸಮುದಾಯ ಅಥವಾ ಧಾರ್ಮಿಕ ಅಸ್ಮಿತೆಗಳು ಮುಖ್ಯವಾಗುತ್ತವೆ. ಮತಗಳಿಕೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿಯೇ ಪಕ್ಷಗಳು ಜನಸಾಮಾನ್ಯರನ್ನು ಜಾತಿ ಧರ್ಮಗಳ ಚೌಕಟ್ಟುಗಳಲ್ಲಿ ವಿಭಜಿಸುತ್ತವೆ.  ಇಲ್ಲಿ ಸೃಷ್ಟಿಯಾಗುವ ಮತಬ್ಯಾಂಕುಗಳಿಗೇ ಚುನಾವಣೆಗಳಿಗೆ ಮುನ್ನ ಆಮಿಷಗಳನ್ನು ಒಡ್ಡುವ ಮೂಲಕ ಮತ ಗಳಿಸಲಾಗುತ್ತದೆ. ಪಕ್ಷಗಳ ಚುನಾವಣಾ ಪ್ರಚಾರವನ್ನು ಕೂಲಿ ಪಡೆಯುವ ಕಾರ್ಯಕರ್ತರು ನಿರ್ವಹಿಸುತ್ತಾರೆ. ಪ್ರಾಯೋಜಿತ ಚುನಾವಣಾ ಪ್ರಚಾರ ಸಭೆಗಳಲ್ಲಿ ಸಾರಿಗೆ, ಊಟದ ವ್ಯವಸ್ಥೆಯನ್ನೂ ಏರ್ಪಡಿಸುವುದು ಸಾಮಾನ್ಯ ಸಂಗತಿ. ಇದಕ್ಕಾಗಿಯೇ ಪ್ರಚಾರ ಕಾರ್ಯವನ್ನು ನಿರ್ವಹಿಸುವ ಪಡೆಗಳನ್ನು ಪೋಷಿಸಲಾಗುತ್ತದೆ. ಮಾಧ್ಯಮಗಳನ್ನೂ ಸಂತೃಪ್ತಿಪಡಿಸಲಾಗುತ್ತದೆ.

ಈ ಎಲ್ಲ ಕೆಲಸಗಳಿಗೆ ಅಪಾರ ಹಣದ ಅವಶ್ಯಕತೆ ಇರುತ್ತದೆ. ಒಂದು ದೊಡ್ಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅಭ್ಯರ್ಥಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ 95 ಲಕ್ಷ ರೂಗಳ ವೆಚ್ಚಮಿತಿ ಇಲ್ಲಿ ಯಾವುದಕ್ಕೂ ಸಾಲುವುದಿಲ್ಲ. ಸಾರ್ವತ್ರಿಕವಾಗಿ ತಿಳಿದಿರುವ ಗುಟ್ಟು ಎಂದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ 50 ಕೋಟಿ ರೂಗಳು ಬೇಕಾಗುತ್ತದೆ. ಹಾಗಾಗಿ ಅಭ್ಯರ್ಥಿಗೆ 49 ಕೋಟಿ ರೂಗಳನ್ನು ಅಕ್ರಮ ಮಾರ್ಗದಲ್ಲಿ ಸಂಪಾದಿಸುವುದು ಅನಿವಾರ್ಯವಾಗುತ್ತದೆ.  ಇದನ್ನೂ ಮೀರಿ ಪಕ್ಷಗಳು ತಮ್ಮ ಬೂತ್‌ ಕಚೇರಿಗಳನ್ನು ಸ್ಥಾಪಿಸಲು, ಜನರನ್ನು ಕ್ರೋಢೀಕರಿಸಲು ಬಳಸುವ ಹಣವನ್ನೂ ಅಕ್ರಮವಾಗಿಯೇ ಪಡೆಯಬೇಕಾಗುತ್ತದೆ. ಇಂತಹ ಒಂದು ಸನ್ನಿವೇಶದಲ್ಲೇ ಚುನಾವಣಾ ಬಾಂಡ್‌ ಯೋಜನೆಯನ್ನೂ ಜಾರಿಗೊಳಿಸಲಾಗಿತ್ತು.

ಈ ಯೋಜನೆಗಳ ಮೂಲಕ ರಾಜಕೀಯ ಪಕ್ಷಗಳು ನ್ಯಾಯುಯುತವಾಗಿ ನಿಧಿ ಸಂಗ್ರಹ ಮಾಡಬಹುದು, ರಾಜಕೀಯ ಪಕ್ಷಗಳು ಅಕ್ರಮ ಹಣವನ್ನು ಅವಲಂಬಿಸಬೇಕಾಗುವುದಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಆರಂಭದ ದಿನಗಳಿಂದಲೂ ಈ ಅಪಾರದರ್ಶಕ ಯೋಜನೆ ಟೀಕೆಗೊಳಗಾಗುತ್ತಲೇ ಇತ್ತು.  ಏಕೆಂದರೆ ಈ ಯೋಜನೆಯಲ್ಲಿ ಮತದಾರರಿಗೆ ಯಾವ ಉದ್ಯಮಿ ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡುತ್ತಾನೆ, ಏಕೆ ನೀಡುತ್ತಾನೆ ಎನ್ನುವುದು ಗೋಪ್ಯವಾಗಿಡಲಾಗಿತ್ತು. ಇದು ಸರ್ಕಾರದಿಂದ ಪಡೆಯುವ ಪ್ರಯೋಜನಗಳಿಗೆ ಲಂಚ ನೀಡಲು ಒಳಮಾರ್ಗವನ್ನು ತೆರೆದಂತಾಗಿತ್ತು.  ಬೃಹತ್‌ ಮೊತ್ತದ ನಿಧಿ ಅಥವಾ ದೇಣಿಗೆಯನ್ನು ದೊಡ್ಡ ಉದ್ದಿಮೆಗಳು ಅಥವಾ ಶ್ರೀಮಂತ ವ್ಯಕ್ತಿಗಳು ಮಾತ್ರ ನೀಡಲು ಸಾಧ್ಯವಿರುವುದಿಂದ ಸರ್ಕಾರದ ಮೇಲೆ ಇವರ ಪ್ರಭಾವವೂ ಹೆಚ್ಚಾಗುವುದು ಸಹಜವೇ ಆಗಿತ್ತು.

ಚುನಾವಣಾ ಬಾಂಡ್‌ ಮೂಲಕ ದೇಣಿಗೆಯನ್ನು ಕೇವಲ ಪಕ್ಷಗಳಿಗೆ ನೀಡಲು ಸಾಧ್ಯವಿತ್ತೇ ಹೊರತು ವ್ಯಕ್ತಿಗಳಿಗಲ್ಲ. ಹಾಗಾಗಿ ರಾಜಕೀಯ ನಾಯಕರಿಗೆ ವ್ಯಕ್ತಿಗತ ನೆಲೆಯಲ್ಲಿ  ಅಕ್ರಮ ನಿಧಿ ಸಂಗ್ರಹಿಸುವುದು ಅನಿವಾರ್ಯವಾಗುತ್ತದೆ. ಮೇಲಾಗಿ ಚುನಾವಣಾ ಬಾಂಡ್‌ಗಳ ಮೂಲಕ ಪಡೆಯುವ ದೇಣಿಗೆಯನ್ನು ಪಕ್ಷಗಳು ಕೇವಲ ಚುನಾವಣೆಗಳಿಗೆ ಮಾತ್ರವೇ ಅಲ್ಲದೆ ಕಚೇರಿ ತೆರೆಯಲು , ವಿರೋಧ ಪಕ್ಷಗಳ ಸರ್ಕಾರಗಳನ್ನು ಪಲ್ಲಟಗೊಳಿಸಲು, ಇತ್ಯಾದಿ ಕೆಲಸಗಳಿಗೂ ಬಳಸಲು ಅವಕಾಶ ಇದ್ದುದರಿಂದ, ʼ ಚುನಾವಣಾ ಬಾಂಡ್‌ ʼ ಎಂಬ ಹೆಸರೇ ಸಹಜವಾಗಿ  ತಪ್ಪಾಗಿ ಕಾಣಿಸುತ್ತದೆ. ಮೇಲಾಗಿ 2017ರ ಹಣಕಾಸು ಕಾಯ್ದೆ ಜಾರಿಯಾಗುವ ಮುನ್ನ ಕಂಪನಿಗಳಿಗೆ ದೇಣಿಗೆ ನೀಡಲು ಇದ್ದ ಸರಾಸರಿ ಮೂರು ವರ್ಷ ಲಾಭದ ಶೇಕಡಾ 7.5ರಷ್ಟು ಮಿತಿಯನ್ನು ತೆಗೆದುಹಾಕಿದ್ದರಿಂದ ನಷ್ಟ ಅನುಭವಿಸುವ ಕಂಪನಿಗಳೂ ದೇಣಿಗೆ ನೀಡಲು ಸಾಧ್ಯವಾಯಿತು. ಲಾಭದಾಯಕ ಕಂಪನಿಗಳ ದೇಣಿಗೆಗೂ ಇತಿಮಿತಿ ಇಲ್ಲದಂತಾಯಿತು.

ಈ ಯೋಜನೆಯಡಿ ಬಾಂಡ್‌ಗಳನ್ನು ಖರೀದಿಸಿ ದೇಣಿಗೆಗಳನ್ನು ನೀಡಿದ ಉದ್ಯಮಿಗಳಿಗೆ ಮುಂದೊಂದು ದಿನ ತಮ್ಮ ಹೆಸರು ಬಹಿರಂಗವಾಗುತ್ತದೆ ಎಂಬ ಊಹೆಯೂ ಇದ್ದಿರಲಿಕ್ಕಿಲ್ಲ. ಆದರೆ ಸುಪ್ರೀಂಕೋರ್ಟ್‌ ಮಧ್ಯಪ್ರವೇಶದಿಂದ ಇದು ಸಾಧ್ಯವಾಯಿತು. ಈ ವ್ಯವಹಾರಗಳಲ್ಲಿ ಅನುಭವ ಇದ್ದ ಉದ್ಯಮಿಗಳು ಮಾತ್ರ ಶೆಲ್‌ ಕಂಪನಿಗಳ ಮೂಲಕ ಬಾಂಡ್‌ ಖರೀದಿಸಿ ತಮ್ಮ ಹೆಸರನ್ನು ಮರೆಮಾಚಲು ಸಾಧ್ಯವಾಗಿದೆ. ಈ ಉದ್ಯಮಿಗಳ ಹೆಸರು ಬಹುಶಃ ಯಾವ ಕಾಲಕ್ಕೂ ಹೊರಬರುವುದಿಲ್ಲ. ಏತನ್ಮಧ್ಯೆ ಕಪ್ಪುಹಣದ ಮೂಲಕ ದೇಣಿಗೆ ನೀಡುವ ಪ್ರಕ್ರಿಯೆ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ರಾಜಕೀಯ ಪಕ್ಷಗಳ ನಿಧಿ ಸಂಗ್ರಹದ ಮೂಲ ಇಂದಿಗೂ ಇದೇ ಆಗಿದೆ.  ಚುನಾವಣಾ ಬಾಂಡ್‌ ಯೋಜನೆ ರಾಜಕೀಯ ಪಕ್ಷಗಳ ನಿಧಿ ಸಂಗ್ರಹಣೆಯ ಹೆಚ್ಚುವರಿ ಸಾಧನವಾಗಿತ್ತಷ್ಟೆ.

ಬಯಲಾದ ಆಪ್ತ ಬಂಡವಾಳಶಾಹಿ

ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಅಗತ್ಯವಿರುವ ಒಟ್ಟು ಹಣಕಾಸು ಮೊತ್ತಕ್ಕೆ ಹೋಲಿಸಿದರೆ ಚುನಾವಣಾ ಬಾಂಡ್‌ಗಳ ಮೊತ್ತ ಅತ್ಯಲ್ಪ ಎಂದೇ ಹೇಳಬಹುದು. ಆದಾಗ್ಯೂ ಈಗ ಬಹಿರಂಗವಾಗಿರುವ ದತ್ತಾಂಶಗಳು ಭಾರತದ ರಾಜಕಾರಣ ಮತ್ತು ಚುನಾವಣೆಗಳ ಮೂಲ ಲಕ್ಷಣವನ್ನು ಬಯಲು ಮಾಡಿರುವುದು ವಾಸ್ತವ. ಬಿಡುಗಡೆಯಾಗಿರುವ ವರದಿಯನ್ನು ಗಮನಿಸಿದರೆ, ಆಡಳಿತ ನೀತಿ ನಿರೂಪಕರಿಂದ ಪ್ರಯೋಜನ ಪಡೆಯುವ ಸಲುವಾಗಿ, ತಮ್ಮ ಅಕ್ರಮಗಳಿಂದಾಗುವ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಭವಿಷ್ಯದ ಹೂಡಿಕೆಯ ರೂಪದಲ್ಲಿ ಕಾರ್ಪೋರೇಟ್‌ ಉದ್ಯಮಿಗಳು ದೇಣಿಗೆ ನೀಡಿರುವುದು ಸ್ಪಷ್ಟವಾಗುತ್ತದೆ. ಹಾಗಾಗಿಯೇ ಅಧಿಕಾರದಲ್ಲಿಲ್ಲದ ರಾಜಕೀಯ ಪಕ್ಷಗಳೂ ದೇಣಿಗೆ ಪಡೆದಿವೆ. ಆಡಳಿತಾರೂಢ ಪಕ್ಷಗಳಿಗೆ ಸಲ್ಲಿಕೆಯಾಗುವ ದೇಣಿಗೆಯು ಕೆಲವು ಮೂಲ ಸೌಕರ್ಯ ನಿರ್ಮಾಣದ ಗುತ್ತಿಗೆ ಪಡೆಯಲು ನೆರವಾಗುವುದು ವಾಸ್ತವ.

ಔದ್ಯಮಿಕ ವ್ಯವಹಾರಗಳಲ್ಲಿ ಅಕ್ರಮಗಳು, ವಾಮಮಾರ್ಗಗಳು ಸಹಜವಾಗಿದ್ದು ನಿಯಮಗಳ ಉಲ್ಲಂಘನೆ ಮಾಡುವುದು ಸಹಜ ಪ್ರಕ್ರಿಯೆಯಾಗಿರುತ್ತದೆ. ಹೀಗೆ ನಿಯಮ ಉಲ್ಲಂಘಿಸಿರುವ ಉದ್ದಿಮೆಗಳು ಸರ್ಕಾರದ ವಿಚಾರಣೆಗಳಿಗೆ ಒಳಪಡದಂತೆ ಎಚ್ಚರವಹಿಸಲು ಚುನಾವಣಾ ಬಾಂಡ್‌ ನೆರವಾಗಿದೆ. ಹಾಗಾಗಿ ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳ ಕೆಂಗಣ್ಣಿಗೆ ಬೀಳದಂತೆ ಎಚ್ಚರವಹಿಸಿರುವುದು ಬಹಿರಂಗವಾಗಿರುವ ಮಾಹಿತಿಯಿಂದ ಸ್ಪಷ್ಟವಾಗಿದೆ.  ಈ ನಿಟ್ಟಿನಲ್ಲಿ ಇನ್ನೂ ಆಳವಾದ ವಿಶ್ಲೇಷಣೆಗಳು ನಡೆದಂತೆಲ್ಲಾ, ಔದ್ಯಮಿಕ ವಲಯ ಹಾಗೂ ಆಡಳಿತ ನೀತಿ ನಿರೂಪಕರ ನಡುವಿನ ಸಂಬಂಧಗಳೂ ಬಯಲಾಗುತ್ತವೆ. ಇದು ವ್ಯವಸ್ಥೆಯೊಳಗಿನ ಅಪರಾಧಿ ಜಗತ್ತನ್ನು ಹೊರಗೆಳೆಯುತ್ತದೆ. ಉತ್ತಮವಾಗಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವದಲ್ಲಿ ರಾಜಕೀಯ ನಾಯಕತ್ವವು ಉತ್ತರದಾಯಿಯಾಗಿದ್ದರೆ ಚುನಾವಣೆಗಳನ್ನು ಸ್ಪರ್ಧಿಸಲು ಅಪಾರ ಮೊತ್ತದ ಹಣದ ಅವಶ್ಯಕತೆಯೇ ಉದ್ಭವಿಸುವುದಿಲ್ಲ. ಚುನಾವಣಾ ಬಾಂಡ್‌ಗಳಂತಹ ಗೋಪ್ಯ ವ್ಯವಹಾರಗಳೂ ಅವಶ್ಯಕವಾಗುವುದಿಲ್ಲ. ಚುನಾವಣಾ ಆಯೋಗ ನಿಗದಿಪಡಿಸಿದ ಇತಿಮಿತಿಯಲ್ಲೇ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು.  ಹಾಗಾಗಿ ಚುನಾವಣಾ ಬಾಂಡ್‌ ಯೋಜನೆ ಮೂಲತಃ ಭಾರತದ ಪ್ರಜಾಪ್ರಭುತ್ವದ ದೌರ್ಬಲ್ಯವನ್ನು ಸೂಚಿಸುತ್ತದೆ. ವಿರೋಧ ಪಕ್ಷಗಳನ್ನು ಹಾಗೂ ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸಲೆಂದೇ ರೂಪಿಸಿದ ನೀತಿಯಾಗಿ ಚುನಾವಣಾ ಬಾಂಡ್ ಯೋಜನೆ ಕಾಣುತ್ತದೆ.

Tags: bigbusinesshousesblackmoneycapitalistDemocracyElectionselectoralbondinvestmentmarketsystemMoneyNarendramodoiSBI
Previous Post

ಸರ್ಕಾರದಲ್ಲಿ ಅಕ್ರಮವೋ..? ಅಕ್ರಮಕ್ಕಾಗಿಯೇ ಸರ್ಕಾರವೋ..? ಯಾರು ಕಳ್ಳರು..?

Next Post

ಬೇಸಿಗೆಯಲ್ಲಿ ಕಾಡುವ ಉಷ್ಣತೆಗೆ ಇಲ್ಲಿದೆ ಪರಿಹಾರ

Related Posts

Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
0

ನಮ್ಮ ಮತ, ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಲು ಸಿದ್ಧರಾಗಬೇಕು, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಕರೆ “ನಮ್ಮ ರಾಜ್ಯದ ಚುನಾವಣೆಯಲ್ಲಿ ಆಗಿರುವ ಅಕ್ರಮ, ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯವನ್ನು...

Read moreDetails

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

July 30, 2025

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

July 30, 2025

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

July 30, 2025

Lakshmi Hebbalkar: ಗೃಹಲಕ್ಷ್ಮೀ ಯೋಜನೆಯ ಜಂಟಿ ಹೊಣೆಗಾರಿಕೆ ಗುಂಪುಗಳ ಕುರಿತು ಸಭೆ

July 30, 2025
Next Post
ಬೇಸಿಗೆಯಲ್ಲಿ ಕಾಡುವ ಉಷ್ಣತೆಗೆ ಇಲ್ಲಿದೆ ಪರಿಹಾರ

ಬೇಸಿಗೆಯಲ್ಲಿ ಕಾಡುವ ಉಷ್ಣತೆಗೆ ಇಲ್ಲಿದೆ ಪರಿಹಾರ

Please login to join discussion

Recent News

Top Story

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

by ಪ್ರತಿಧ್ವನಿ
July 31, 2025
Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
Top Story

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

by ಪ್ರತಿಧ್ವನಿ
July 30, 2025
Top Story

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

by ಪ್ರತಿಧ್ವನಿ
July 30, 2025
Top Story

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

by ಪ್ರತಿಧ್ವನಿ
July 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

July 31, 2025

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada