ಮೈಸೂರು ಹುಲಿ ಅಂತಾ ಕರೆಸಿಕೊಳ್ಳುವ ಟಿಪ್ಪು ಸುಲ್ತಾನ್ ಇನ್ಮುಂದೆ ಪಠ್ಯ ಪುಸ್ತಕದಲ್ಲಿ ರಾರಾಜಿಸೋದಿಲ್ಲ. ಯಾಕೆಂದರೆ ಪ್ರಸಕ್ತ ವರ್ಷದ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ಗೆ ಕೊಕ್ ನೀಡಲಾಗಿದೆ. ಹಾಗಾದರೆ ಟಿಪ್ಪುವಿಗೆ ಸಂಬಂಧಿಸಿದಂತೆ ಯಾವೆಲ್ಲಾ ವಿಷಯಗಳನ್ನ ಪಠ್ಯ ಪುಸ್ತಕದಿಂದ ಕೈಬಿಡಲಾಗಿದೆ.?
ಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ಸರ್ಕಾರಕ್ಕೆ ವರದಿ!
2022 -23 ರ ಆರು ಮತ್ತು ಏಳನೇ ತರಗತಿ ಸಮಾಜ ವಿಜ್ಞಾನ ಪಠ್ಯ ಕ್ರಮದಿಂದ ಟಿಪ್ಪು ಸುಲ್ತಾನ್ ಗೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನ ಕೈಬಿಡಲಾಗಿದೆ. ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಮಾರ್ಚ್ 8 ಸರ್ಕಾರಕ್ಕೆ ನೀಡಿರುವ ವರದಿಯ ಪ್ರಕಾರ ಟಿಪ್ಪು ಸುಲ್ತಾನ್ ಸಂಬಂಧ ಹಲವು ವಿಷಯಗಳನ್ನ ಕೈಬಿಟ್ಟಿರುವುದು ತಿಳಿದುಬಂದಿದೆ.
ಟಿಪ್ಪು ಸುಲ್ತಾನ್ ಸಂಬಂಧ ಕೈಬಿಡಲಾದ ಅಂಶಗಳು!
- ರೇಷ್ಮೆ ಬೇಸಾಯ ಟಿಪ್ಪು ಆರಂಭಿಸಿದ್ದು ಅನ್ನೋ ವಿಚಾರ ರದ್ದು
- ರಾಕೆಟ್ ತಂತ್ರಜ್ಞಾನ ಪರಿಚಯಿಸಿದ್ದು ಟಿಪ್ಪು ಎಂಬ ಪಠ್ಯವೂ ಇಲ್ಲ
- 6 ಮತ್ತು 7ನೇ ತರಗತಿಯ ಪಠ್ಯದಿಂದ ಟಿಪ್ಪು ಪಾಠ ಔಟ್
- ಹಿಂದೂ ದೇಗುಲಗಳಿಗೆ ದಾನ ದತ್ತಿ ನೀಡಿದ್ದ ಎಂಬ ವಾಕ್ಯವೂ ಔಟ್
- ಶೃಂಗೇರಿ ಮಠಕ್ಕೆ ಟಿಪ್ಪು ದೇಣಿಗೆ ನೀಡಿದ್ದ ಎಂಬ ಸಾಲುಗಳೂ ರದ್ದು
- ‘ನಮ್ಮ ಕರ್ನಾಟಕ ಚಾರಿತ್ರ್ಯಿಕ ಹಿನ್ನೆಲೆ’ ಎಂಬ ಪಾಠದಿಂದ ಟಿಪ್ಪು ಕಿಕ್ಔಟ್
- ಮೈಸೂರು ಒಡೆಯರ್ ಪಾಠದಿಂದ ಟಿಪ್ಪು ವಿಚಾರ ರದ್ದು
- ಬ್ರಿಟೀಷರ ವಿರುದ್ಧ ಟಿಪ್ಪು ಅನೇಕ ಹೋರಾಟ ನಡೆಸಿದ್ದ ಎಂಬ ವಾಕ್ಯ ಡಿಲೀಟ್
- ಟಿಪ್ಪು ಸುಲ್ತಾನ್ ಅನೇಕ ಜನಪರ ಕಾರ್ಯ ಕೈಗೊಂಡಿದ್ದ ಎಂಬ ವಾಕ್ಯ ರದ್ದು
- ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಫೋಟೋಗಳನ್ನೂ ತೆಗೆಯಲಾಗಿದೆ
- ಟಿಪ್ಪು ನಿರ್ಮಿಸಿದ್ದ ದರಿಯಾ ದೌಲತ್, ಬೆಂಗಳೂರು ಅರಮನೆ ಚಿತ್ರ ಡಿಲೀಟ್
- ಭೂ ಸುಧಾರಣೆ, ರೈತರಿಗೆ ಸುಲಭ ಸಾಲ ನೀಡಿದ್ದ ಟಿಪ್ಪು ಅನ್ನೋದು ರದ್ದು
- ಶ್ರೀರಂಗಪಟ್ಟಣ, ಬೆಂಗಳೂರಲ್ಲಿ ಠಂಕಶಾಲೆ ನಿರ್ಮಿಸಿದ್ದು ಟಿಪ್ಪು ಅನ್ನೋದು ಡಿಲಿಟ್
ಈ ಬಗ್ಗೆ ಮಾತನಾಡಿದ ಪಠ್ಯಪುಸ್ತಕ ಪರಿಷ್ಕೃತ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ನಾವು ಅಧ್ಯಯನ ನಡೆಸಿ ಕೆಲವೊಂದಿಷ್ಟು ವೈಭವೀಕರಣವನ್ನು ಸರಿಪಡಿಸಿದ್ದೇವೆ. ಕೆಲವು ಇತಿಹಾಸಕ್ಕೆ ಆಧಾರಗಳೇ ಅಲ್ಲ, ಅಂಥವನ್ನು ತೆಗೆದು ಹಾಕಿದ್ದೇವೆ. 2015ರಲ್ಲಿ ಬರಗೂರು ರಾಮಚಂದ್ರಪ್ಪನವರು ಕೂಡ ಹೀಗೆ ಹಲವು ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಕರ್ನಾಟಕದ ಬಗ್ಗೆ ಇದ್ದ ಪಠ್ಯದಿಂದ ಹೈ ಕೋರ್ಟ್, ವಿಶ್ವೇಶ್ವರಯ್ಯ ಮ್ಯೂಸಿಯಂ, ಲಾಲ್ ಬಾಗ್ ಚಿತ್ರಗಳನ್ನು ತೆಗೆದಿದ್ದರು. ವಿಧಾನಸೌದದ ಪಕ್ಕದಲ್ಲೇ ಮಸೀದಿಯ ಫೋಟೋ ಹಾಕಿ ಮುದ್ರಣ ಮಾಡಿದ್ದರು. ಈಗ ಅನಗತ್ಯ ಎಂದು ಕಂಡಿರುವ ಕೆಲವು ಫೋಟೋಗಳನ್ನು ತೆಗೆದುಹಾಕಲಾಗಿದೆ. ಟಿಪ್ಪು ಸುಲ್ತಾನ್ ಬಗ್ಗೆ ಮಾತ್ರವಲ್ಲ, ವೈಭವೀಕರಣ ಇರುವ ಎಲ್ಲಾ ಕಡೆ ಕತ್ತರಿ. 2017ರ ಪಠ್ಯದಲ್ಲಿ ಬರಗೂರು ರಾಮಚಂದ್ರಪ್ಪನವರು ತಮ್ಮ ವೈಯಕ್ತಿಕ ನಿಲುವನ್ನು ಬರೆದಿದ್ದಾರೆ. ಅದು ಇತಿಹಾಸ ಹೇಗೆ ಆಗಲು ಸಾಧ್ಯ..? ಕೆಲವೊಂದಿಷ್ಟು ವೈಭವೀಕರಣ ಏನಿದೆ ಅದನ್ನು ಕೈ ಬಿಡಕು ಶಿಫಾರಸು ಮಾಡಲಾಗಿದೆ ಎಂದರು. ಹೀಗೆ ಆರನೇ ಹಾಗೂ ಏಳನೇ ತರಗತಿಯಲ್ಲಿನ ಪಠ್ಯದಿಂದ ಟಿಪ್ಪು ಪಠ್ಯಕ್ಕೆ ಕತ್ತರಿ ಹಾಕಲಾಗಿದೆ. ಇನ್ಮುಂದೆ ಪಠ್ಯದಲ್ಲಿ ಟಿಪ್ಪು ಕೇವಲ ಪರಿಚಯಕ್ಕೆ ಮಾತ್ರ ಸೀಮಿತವಾಗಿರಲಿದ್ದು ಟಿಪ್ಪು ವೈಭವೀಕರಣಕ್ಕೆ ಬ್ರೇಕ್ ಹಾಕಲಾಗಿದೆ.