ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿನ ದಲಿತ ಮತಗಳನ್ನು ಗಮನದಲ್ಲಿಟ್ಟುಕೊಂಡು ಫೆಬ್ರವರಿ 16 ರಂದು ಗುರು ರವಿದಾಸ್ ಜಯಂತಿಯನ್ನು ಒಂದು ವಾರದ ಆಚರಣೆಯನ್ನಾಗಿ ಆಯೋಜಿಸಲು ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಜಾತಿ (ಎಸ್ಸಿ) ಮೋರ್ಚಾ ನಿರ್ಧರಿಸಿದೆ.
ಬಿಜೆಪಿಯ ಹಿರಿಯ ನಾಯಕರೊಬ್ಬರ ಪ್ರಕಾರ, ಪಕ್ಷದ ಎಸ್ಸಿ ಘಟಕವು ಫೆಬ್ರವರಿ 13 ರಿಂದ 20 ರವರೆಗೆ ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ಬ್ಲಾಕ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಇದಲ್ಲದೆ, ಜಯಂತಿಯ ಮುನ್ನ ವಾರಣಾಸಿಯ ಸಂತ ರವಿದಾಸ್ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಲಿದ್ದು ಶ್ರದ್ಧಾಂಜಲಿ ಸಲ್ಲಿಸಲು ಬಿಜೆಪಿಯು ಸಹಾಯ ಮಾಡಲು ಯೋಜಿಸುತ್ತಿದೆ ಎನ್ನಲಾಗಿದೆ. ಆಧ್ಯಾತ್ಮಿಕ ನಾಯಕ ಮತ್ತು ಭಕ್ತಿ ಸಂತ ಗುರು ರವಿದಾಸ್ ವಾರಣಾಸಿ ಬಳಿ ಜನಿಸಿದ 15 ನೇ ಶತಮಾನದ ಕವಿ. ಅವರನ್ನು ದಲಿತರ ಒಂದು ದೊಡ್ಡ ವಿಭಾಗ ಗುರು ಎಂದು ಪರಿಗಣಿಸುತ್ತದೆ, ಅವರನ್ನು ಅನುಸರಿಸುವವರನ್ನು ‘ರವಿದಾಸಿಯಾಸ್’ ಎಂದೂ ಕರೆಯಲಾಗುತ್ತದೆ.
ಪಂಜಾಬ್ನ ಜನಸಂಖ್ಯೆಯಲ್ಲಿ ದಲಿತರು ಶೇಕಡಾ 32ರಷ್ಟಿದ್ದು ಇದು ಯಾವುದೇ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣವಾಗಿದೆ. ಯುಪಿಯಲ್ಲಿ, ಜನಸಂಖ್ಯೆಯ ಸರಿಸುಮಾರು 20 ಪ್ರತಿಶತವನ್ನು ದಲಿತ ಸಮುದಾಯ ಒಳಗೊಂಡಿದೆ ಮತ್ತು ಚುನಾವಣೆಯ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಗುರು ರವಿದಾಸ್ ಅವರ ಭಕ್ತರು ಪಂಜಾಬ್ನಿಂದ ವಾರಣಾಸಿಗೆ ದೊಡ್ಡ ಪ್ರಮಾಣದಲ್ಲಿ ಪ್ರಯಾಣ ಹೊರಡುವ ಕಾರಣ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವುದನ್ನು ತಪ್ಪಿಸಬಾರದು ಎಂಬ ಉದ್ದೇಶದಿಂದ ಭಾರತದ ಚುನಾವಣಾ ಆಯೋಗವು ಪಂಜಾಬ್ನಲ್ಲಿ ಮತದಾನದ ದಿನವನ್ನು ಫೆಬ್ರವರಿ 14 ರಿಂದ 20 ಕ್ಕೆ ಮುಂದೂಡಿತ್ತು.
ಬಿಜೆಪಿಯು ದೇಶಾದ್ಯಂತ ರವಿದಾಸ್ ದೇವಾಲಯಗಳ ‘ಸಂತರನ್ನು’ ಸನ್ಮಾನಿಸಲೂ ಯೋಜಿಸಿದೆ. “ನಾವು ರವಿದಾಸ್ ಜಯಂತಿಯಂದು ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ರಾಜ್ಯ ಘಟಕದ ಮಟ್ಟದಲ್ಲಿ ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು” ಎಂದು ಬಿಜೆಪಿಯ ಎಸ್ಸಿ ಮೋರ್ಚಾ ಅಧ್ಯಕ್ಷ ಲಾಲ್ಸಿಂಗ್ ಆರ್ಯ ಹೇಳಿದ್ದಾರೆ.
“ಚುನಾವಣೆಗಳಿರುವ ರಾಜ್ಯಗಳಲ್ಲಿ, ಅಭ್ಯರ್ಥಿಗಳು, ಶಾಸಕರು ಮತ್ತು ಇತರ ಪಕ್ಷದ ಪದಾಧಿಕಾರಿಗಳು ಭಾಗವಹಿಸಲು ಕೇಳಿಕೊಳ್ಳಲಾಗಿದೆ” ಎಂದೂ ಅವರು ಹೇಳಿದ್ದಾರೆ.
“ವಾರಣಾಸಿಯ ಸಂತ ರವಿದಾಸ ದೇವಾಲಯಕ್ಕೆ ವಿಸ್ತಾರವಾದ ಯೋಜನೆಗಳನ್ನು ಮಾಡಲು ಮತ್ತು ಗೌರವ ಸಲ್ಲಿಸುವಾಗ ಯಾರಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕೇಳಲಾಗಿದೆ” ಎಂದೂ ವರದಿಗಳಿವೆ.
ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಸಾಕಷ್ಟು ದಲಿತ ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರಗಳಲ್ಲಿ ಎಸ್ಸಿ ಮೋರ್ಚಾ ಇತರ ಸಮಾವೇಶಗಳು ಮತ್ತು ಕಾರ್ಯಕ್ರಮಗಳನ್ನು ಸಹ ನಡೆಸಲಿವೆ ಎಂದು ಆರ್ಯ ಪತ್ರಕರ್ತರನ್ನುದ್ದೇಶಿಸಿ ಹೇಳಿದ್ದಾರೆ. “ಉತ್ತರ ಪ್ರದೇಶದ ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮೀಸಲಾತಿ ಪ್ರಯೋಜನಗಳನ್ನು ನಿಲ್ಲಿಸುವುದಾಗಿ ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ. ಕಳೆದ ಹಲವು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಮೋದಿ ಮತ್ತು ಯೋಗಿ ಸರಕಾರಗಳು ಮಾತ್ರ ದಲಿತರ ಕಲ್ಯಾಣಕ್ಕಾಗಿ ಕ್ರಮಗಳನ್ನು ಕೈಗೊಂಡಿದ್ದು ಇದು ಮೀಸಲಾತಿ ನಿಲ್ಲಿಸಲಾಗುವುದು ಎಂಬುವುದು ಸಂಪೂರ್ಣ ಸುಳ್ಳು ಮತ್ತು ದಲಿತ ಸಮುದಾಯವು ಬಿಜೆಪಿಯೊಂದಿಗೆ ಇದೆ” ಎಂದು ಆರ್ಯ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಕರ್ನಾಟಕದ ಎಸ್ಸಿ ಮೋರ್ಚಾವೂ ರಾಜ್ಯದಲ್ಲಿ ರವಿದಾಸ ಜಯಂತಿಯಂದು ಕಾರ್ಯಕ್ರಮ ಆಯೋಜಿಸಿ ರಾಜ್ಯದ ದಲಿತ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯೋಜಿಸಿದೆ ಎನ್ನಲಾಗಿದೆ.