ರಾಜ್ಯ ಸರ್ಕಾರ ಭತ್ತ ಮತ್ತು ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ ನಿಗಧಿ ಪಡಿಸಿ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ಮಳೆ ಹಾನಿ ಪರಿಹಾರ ಈ ಕೂಡಲೇ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮಳೆ ಚೆನ್ನಾಗಿ ಆಗಿದೆ ಎಂದು ಖುಷಿ ಪಡುವ ಅಗತ್ಯ ಇಲ್ಲ ಜೊತೆ ಜೊತೆಗೆ ಬೆಳೆ ಹಾನಿ ಕೂಡ ಆಗಿದೆ. ಬೆಳೆದ ಬೆಳೆಯನ್ನ ಪಡೆಯಲೂ ಸಾಧ್ಯವಾಗುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ಆಗಿದೆ. ಆ ಹಿನ್ನೆಲೆಯಲ್ಲಿ ಅತೀವೃಷ್ಟಿ ಅನಾವೃಷ್ಟಿಯಿಂದ ಬಳಲಿರುವ ರೈತರಿಗೆ ಪರಿಹಾರ ನೀಡುವ ಕೆಲಸವನ್ನ ಸರ್ಕಾರ ತುರ್ತಾಗಿ ಮಾಡಬೇಕಿದೆ. ಕೇಂದ್ರ ಸರ್ಕಾರವೂ ಸಹ ಭರವಸೆ ಈಡೇರಿಸಿಲ್ಲ. ಕಳೆದ ವರ್ಷ ಮಳೆಗೆ ಮನೆಗೆ ಕಳೆದುಕೊಂಡವರು ಅರ್ಧಂಬರ್ಧ ಮನೆ ಕಟ್ಟಿಕೊಂಡು ಪರಿಹಾರದ ಮೊತ್ತಕ್ಕೆ ಕಾಯುತ್ತಿದ್ದಾರೆ. ಕೆಲವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿ ಕೆಬಿ ಶಿವಕುಮಾರ್‌ರನ್ನ ಭೇಟಿ ಮಾಡಿ ಮಾತನಾಡಿದ್ದೇನೆ. ಆದರೆ ಜಿಲ್ಲಾಧಿಕಾರಿಗಳ ಉತ್ತರ ಸಮಂಜಸವಾಗಿರಲಿಲ್ಲ. ಖಾತೆಯಿರೋ ಜಾಗದಲ್ಲಿದ್ದ ಮನೆಗಳಿಗೆ ಪರಿಹಾರ ವಿತರಣೆ ಮಾಡಿದ್ಧೇನೆಂದು ಹೇಳುತ್ತಾರೆ. ದುರಂತ ಅಂದತೆ ಖಾತೆ ಇದ್ದ ವಸತಿ ನಿರಾಶ್ರಿತರಿಗೂ ಕೂಡ ಪರಿಹಾರದ ಮೊತ್ತ ಬಿಡುಗಡೆಯಾಗಿಲ್ಲ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಬಸವಾರಾಜಪ್ಪ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಎಲ್ಲ ಕಡೆ ಸಾಧನಾ ಸಮಾವೇಶ ಮಾಡುತ್ತಿದೆ. ಸರ್ಕಾರದ ಸಾಧನೆಯನ್ನ ಜನರಿಗೆ ತಿಳಿಸಲು ಮುಂದಾಗಿದೆ. ಸಾಧನೆನೇ ಮಾಡದೇ ಸಮಾವೇಶ ಹೇಗೆ ಮಾಡ್ತಾರೆ. ಕೇವಲ ಟಿವಿ-ಪತ್ರಿಕೆಗಳಲ್ಲಿ ಮಾತ್ರ ಇವರ ಸಾಧನೆ ಇದೆ. ಆದರೆ ನೈಜವಾಗಿ ಎಲ್ಲಿಯೂ ಕಾಣುತ್ತಿಲ್ಲ. ಯಾರಿಗೂ ತಲುಪುತ್ತಿಲ್ಲ. ಪರಿಹಾರ ಆಂಗ್ಲರ ಕಾಲದ ರೀತಿ ಕೇವಲ ಎಕರಗೆ ಆರೂವರೆ ಸಾವಿರ ನೀಡುತ್ತಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕಿದೆ. ಈಗಾಗಳೇ ಮಳೆಗೆ ಭತ್ತದ ಬೆಳೆ ಕೊಚ್ಚಿಕೊಂಡು ಹೋಗಿದೆ. ಅವನ್ನೆಲ್ಲಾ ಶೀಘ್ರ ಅವಲೋಕನ ಮಾಡಿ ಪರಿಹಾರ ನೀಡುವ ಕೆಲಸ ಆಗಬೇಕಿದೆ.

ರಸಗೊಬ್ಬರ ಖಾತೆ ಕೇಂದ್ರ ಸಚಿವರು ಮತ್ತು ರಾಜ್ಯ ಕೃಷಿ ಸಚಿವರು ರಾಜ್ಯದಲ್ಲಿ ರಸಗೊಬ್ಬರದ ಆಭಾವವಿಲ್ಲವೆಂದು ಹೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಯಾವ ರಸಗೊಬ್ಬರಗಳು ಕೂಡ ಸಿಗುತ್ತಿಲ್ಲ. ಈಗ ಹಿಂಗಾರು ಬಿತ್ತನೆ ಪ್ರಾರಂಭವಾಗಿದೆ. ಈ ಬೆಳೆಗಳಿಗೆ ಮತ್ತು ತೋಟದ ಬೆಳೆಗಳಿಗೆ ರಸಗೊಬ್ಬರದ ಅವಶ್ಯಕತೆ ಇದೆ. ರಸಗೊಬ್ಬರ ಅಭಾವವಿರುವುದರಿಂದ ವರ್ತಕರು ಕಾಳಸಂತೆಯಲ್ಲಿ ಇನ್ನೂ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಈ ಪರಿಸ್ಥಿತಿಯ ದುರ್ಲಾಭ ಪಡೆದು ನಕಲಿ ರಸಗೊಬ್ಬರ ಸಹ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ತತಕ್ಷಣ ರಸಗೊಬ್ಬರ ಸರಬರಾಜು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಒಂದು ವೇಳೆ ಸರ್ಕಾರ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರ, ಮಳೆ ಹಾನಿ ಪರಿಹಾರ, ರಸಗೊಬ್ಬರ ಪೂರೈಕೆ ಮಾಡದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾದಿತ್ತು ಎಂದು ಬಸವರಾಜಪ್ಪ ಎಚ್ಚರಿಕೆ ನೀಡಿದರು.






