ಬೆಳಗಾವಿ : ಉಡುಪಿ ಶ್ರೀ ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಜಾಗ ಕೊಟ್ಟಿದ್ದಾರೆ ಎಂಬ ಕಾಂಗ್ರೆಸ್ ಯುವನಾಯಕ ಮಿಥುನ್ ರೈ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಂಕಲಿ ಗ್ರಾಮದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ದೇಶಕ್ಕೆ ಭಾರತ ಎಂದು ಹೆಸರು ನೀಡಿದ್ದೇ ಮುಸಲ್ಮಾನ ದೊರೆಗಳು ಅಂತಾ ಇವರು ಹೇಳಿದರೂ ಯಾವುದೇ ಆಶ್ಚರ್ಯವಿಲ್ಲ ಅಂತಾ ಗುಡುಗಿದ್ದಾರೆ.

ಬರೀ ಕೃಷ್ಣ ಮಠ ಮಾತ್ರವಲ್ಲ, ಭಾರತ ಎಂಬ ಹೆಸರು ನೀಡಿದ್ದೇ ಮುಸಲ್ಮಾನ ದೊರೆಗಳು. ಮುಸಲ್ಮಾನ ದೊರೆಗಳೇ ರಾಮ ಮಂದಿರ ನಿರ್ಮಾಣ ಮಾಡಿದ್ದರು. ಮುಸಲ್ಮಾನ ದೊರೆಗಳೇ ಕಾಶಿ ವಿಶ್ವನಾಥನನ್ನು ಪ್ರತಿಷ್ಠಾಪನೆ ಮಾಡಿದ್ದು ಅಂತಾ ಇವರು ಹೇಳಿದರೂ ಯಾವುದೇ ಆಶ್ಚರ್ಯವಿಲ್ಲ. ಸುಳ್ಳು ಮತ್ತು ಕಾಂಗ್ರೆಸ್ ಒಂದು ನಾಣ್ಯದ ಮುಖಗಳು. ಸುಳ್ಳನ್ನು ಸತ್ಯದ ರೀತಿಯಲ್ಲಿ ಹೇಳುವುದು ಇವರಿಗೆ ಇರುವ ಕಾಯಿಲೆಯಾಗಿದೆ ಎಂದು ಸಿ.ಟಿ ರವಿ ಗುಡುಗಿದ್ದಾರೆ.
ಕಾಂಗ್ರೆಸ್ನವರು ಮುಖ್ಯಮಂತ್ರಿ ಕುರ್ಚಿ ಮೇಲೆ ಟವೆಲ್ ಹಾಕಿಕೊಂಡು ಕುಳಿತಿದ್ರು. ಆದರೆ ಯಾವಾಗ ತಮಗೆ ಸೋಲು ಪಕ್ಕಾ ಅನ್ನೋದು ಗೊತ್ತಾಯ್ತೋ ಅಂದಿನಿಂದ ಬಾಯಿಗೆ ಬಂದಂತೆ ಮಾತನಾಡೋಕೆ ಆರಂಭಿಸಿದ್ದಾರೆ. ಒಂದೊಂದೇ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿನ ಮೇಲೆ ಸೋಲನ್ನು ಅನುಭವಿಸುತ್ತಿದೆ. ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ನಿಂತು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳ್ತಿದ್ದಾರೆ. ನೆಹರು ಕುಟುಂಬ ಅಧಿಕಾರದಲ್ಲಿದ್ದರೆ ಪ್ರಜಾಪ್ರಭುತ್ವ ಸುಸ್ಥಿರದಲ್ಲಿರುತ್ತದೆ ಅಂತಾ ಭಾವಿಸಿದ್ದಾರೆ. ಇಂದಿರಾ ಗಾಂಧಿ 56 ಬಾರಿ ಚುನಾಯಿತ ಸರ್ಕಾರ ಕಿತ್ತು ಒಗೆದಿದ್ದರಯ. ಈಗ ಇವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಸಿ.ಟಿ ರವಿ ಗುಡುಗಿದ್ದಾರೆ.
ಇದೇ ವೇಳೆ ಸಿ.ಟಿ ರವಿ ನೀಡಿದ್ದ ಸೀರೆಯನ್ನು ಸುಟ್ಟು ಹಾಕಲಾಗ್ತಿದೆ ಎಂಬ ಆರೋಪದ ವಿಚಾರವಾಗಿಯೂ ಇದೇ ವೇಳೆ ಸ್ಪಷ್ಟನೆ ನೀಡಿದ ಸಿ.ಟಿ ರವಿ ಇದು ಸುಮ್ಮನೇ ಅವರು ಡ್ರಾಮಾ ಮಾಡ್ತಿದ್ದಾರೆ. ಇದೆಲ್ಲ ಕಾಂಗ್ರೆಸ್ನ ಹಳೆ ಡ್ರಾಮಾ, ನಾವು ಯಾರಿಗೂ ಸೀರೆ ಗಿಫ್ಟ್ ನೀಡಿಲ್ಲ ಎಂದಿದ್ದಾರೆ.