ಕನ್ನಡ ಸಿನಿಮಾ ರಂಗದಲ್ಲಿ ತನ್ನದೇ ಆದ ಶೈಲಿ ಮೂಲಕ ಕನ್ನಡಿಗರ ಮನಸೆಳೆದಿದ್ದ ನಟ. ನಿರ್ದೇಶಕ ರಿಷಬ್ ಶೆಟ್ಟಿ, ಇತ್ತೀಚಿಗೆ ಬಿಡುಗಡೆ ಆದ ಕಾಂತಾರ ಒಂದು ದಂತಕಥೆ ಸಿನಿಮಾದ ಮೂಲಕ ದೇಶ-ವಿದೇಶದಲ್ಲೂ ಖ್ಯಾತಿ ಪಡೆದಿದ್ದಾರೆ. ಕೋಟಿ ಕೋಟಿ ಹಣ ಸಂಪಾದನೆ ಜೊತೆಗೆ ಖ್ಯಾತಿಯನ್ನು ಪಡೆದಿರುವ ರಿಷಬ್ ಶೆಟ್ಟಿ ರಾಜಕೀಯ ಕ್ಷೇತ್ರದ ಕಡೆಗೆ ಆಸೆಗಣ್ಣುಗಳನ್ನು ಅರಳಿಸಿ ನೋಡುವ ಅವಕಾಶ ಬಂದೊದಗಿದೆ. ಈ ಹಿಂದಿನಿಂದಲೂ ಭಾರತೀಯ ಜನತಾ ಪಾರ್ಟಿ ಕಡೆಗೆ ಒಲವು ಹೊಂದಿದ್ದ ರಿಷಬ್ ಶೆಟ್ಟಿ ಇದೀಗ ಚುನಾವಣೆಗೆ ಸ್ಪರ್ಧೆ ಮಾಡೋದಕ್ಕೆ ಬೇಕಾದ ಪೂರ್ವ ತಯಾರಿಯನ್ನು ಮಾಡಿಕೊಳ್ತಿದ್ದಾರೆ. ಆದರೆ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಬೇಕೋ..? ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಬೇಕೋ ಎನ್ನುವ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲೇ ರಿಷಬ್ ಶೆಟ್ಟಿ ರಾಜಕೀಯಕ್ಕೆ ಸೇರ್ಪಡೆ ಆಗಲಿದ್ದಾರೆ ಎನ್ನಲಾಗ್ತಿದೆ.
ಕಾಂತಾರ ಸಿನಿಮಾ ಬಿಡುಗಡೆ ವೇಳೆ ವಿವಾದ..!
ಕಾಂತಾರ ಸಿನಿಮಾ ಬಿಡುಗಡೆ ವೇಳೆ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದ ರಿಷಬ್ ಶೆಟ್ಟಿ, ಒಂದು ಮಾಧ್ಯಮದಲ್ಲಿ ನೀಡಿದ್ದ ಹೇಳಿಕೆಯಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಱಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರ ಹೇಳುತ್ತಾ, ನರೇಂದ್ರ ಮೋದಿ ಎನ್ನುವ ಒಂದು ಪದದ ಪ್ರಶ್ನೆಗೆ ಗುಡ್ ಲೀಡರ್ ಎಂದಿದ್ದರು. ಅದೇ ರೀತಿ ರಾಹುಲ್ ಗಾಂಧಿ ಎನ್ನುವ ಪ್ರಶ್ನೆಗೆ ನೋ ಕಾಮೆಂಟ್ ಎಂದಿದ್ದರು. ಈ ವಿಚಾರ ಬಹಳಷ್ಟು ಚರ್ಚೆಯನ್ನು ಸೃಷ್ಟಿಸಿತ್ತು. ಆ ಬಳಿಕ ಬೆಂಗಳೂರಿಗೆ ಬಂದಿದ್ದ ನರೇಂದ್ರ ಮೋದಿ ರಿಷಬ್ ಶೆಟ್ಟಿ ಸೇರಿದಂತೆ ಸಾಕಷ್ಟು ಸಿನಿ ತಾರೆಯರನ್ನು ಭೇಟಿ ಮಾಡಿದ್ದರು. ಅದರಲ್ಲಿ ಬಹುತೇಕ ಬಿಜೆಪಿ ಪರ ಒಲವು ಇರುವ ನಟರನ್ನೇ ಆಯ್ಕೆ ಮಾಡಲಾಗಿತ್ತು ಎನ್ನುವುದರಲ್ಲಿ ತಪ್ಪೇನು ಇಲ್ಲ. ನರೇಂದ್ರ ಮೋದಿ ಭೇಟಿ ಬಳಿಕ ಮಾತನಾಡಿದ್ದ ರಿಷಬ್ ಶೆಟ್ಟಿ, ಮೋದಿ ಒಬ್ಬ ಮಹಾನ್ ನಾಯಕರು. ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ನಾಡು, ಸಂಪ್ರದಾಯ, ಸಿನಿಮಾ ರಂಗದ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ ಎಂದೆಲ್ಲಾ ಹೇಳಿಕೆ ನೀಡಿದ್ದರು. ಆ ಬಳಿಕ ಒಂದೊಂದೇ ಗರಿಗಳು ಬಿಚ್ಚಿಕೊಳ್ತಿದ್ದು, ಅದು ಕಮಲದ ಆಕಾರ ಪಡೆದುಕೊಳ್ತಿದೆ.
ಮಗಳ ಹುಟ್ಟುಹಬ್ಬದಲ್ಲಿ ಕೇಸರಿ ಮಯ..!
ರಿಷಬ್ ಶೆಟ್ಟಿ ಮಗಳು ರಾದ್ಯ ಹುಟ್ಟಹಬ್ಬವನ್ನು ಅದ್ಧೂರಿಯಾಗಿ ಮಾಡಿದ್ದ ರಿಷಬ್ ಶೆಟ್ಟಿ ಬಹುತೇಕ ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದ್ದರು. ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ ರವಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸಾಕಷ್ಟು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಐಶಾರಾಮಿ ಹೋಟೆಲ್ನಲ್ಲಿ ನಡೆದ ಬರ್ತ್ ಡೇ ಪಾರ್ಟಿಯಲ್ಲಿ ರಿಷಬ್ ಶೆಟ್ಟಿ ಬಿಜೆಪಿಗೆ ಸೇರ್ತಾರೆ ಎನ್ನುವ ಸುಳಿವು ನೀಡುವ ಸಂಕೇತ ಸದ್ದು ಮಾಡಿತ್ತು.
ಫೋಟೋ ಸೆಷನ್ ನಡೆಯುವ ಹಿಂದಿಯ ಥೀಮ್ ಕಮಲವನ್ನು ಹೋಲುತ್ತಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾಯಕರು ಬಿಜೆಪಿಯವರು, ಹಿಂಬದಿ ಥೀಮ್ ಕೂಡ ಬಿಜೆಪಿ ಚಿಹ್ನೆಯೇ ಆಗಿದ್ದು, ಕಾರ್ಯಕ್ರಮಕ್ಕೆ ಬಂದಿದ್ದ ಸ್ನೇಹಿತರು, ಸಂಬಂಧಿಗಳು ರಿಷಬ್ ಶೆಟ್ಟಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಎನ್ನುವ ಮಾತುಗಳನ್ನು ಆಡಿಕೊಂಡ್ರು. ಅವರಲ್ಲೂ ಮೂಡಿದ ಗೊಂದಲ ವಿಧಾನಸಭೆಗೋ..? ಲೋಕಸಭೆಗೋ..? ಎನ್ನುವುದೇ ಆಗಿತ್ತು.
ಕಾಡಂಚಿನ ಗ್ರಾಮಗಳ ಜನರ ಸಂಪರ್ಕ, ಸಿಎಂಗೆ ವರದಿ..!
ಚುನಾವಣೆಗೆ ಸ್ಪರ್ಧೆ ಮಾಡುವ ಮುನ್ನ ಜನರ ಸಂಪರ್ಕ ಮಾಡಬೇಕು, ಜನರಲ್ಲಿ ಒಲವು ಸೃಷ್ಟಿಸಬೇಕು ಎನ್ನುವುದು ರಾಜಕೀಯಕ್ಕೆ ಸೇರಿದ ಎಲ್ಲರೂ ಹೇಳುವ ಮಾತು. ಅದನ್ನೇ ಪಾಲಿಸಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಬಿಡುಗಡೆ ಆಗಿ ಬಿಡುವು ಸಿಕ್ಕ ಕೂಡಲೇ ಮಲೆನಾಡಿನ ಕಾಡಂಚಿನ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಜನರ ಸಮಸ್ಯೆ ಏನು..? ಅವರ ಸಮಸ್ಯೆಗೆ ಪರಿಹಾರ ಕೊಡುವುದಕ್ಕೆ ಸರ್ಕಾರ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಅನ್ನೋ ಮಾಹಿತಿ ಸಂಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ. ಸಿನಿಮಾ ಮೂಲಕ ಜುನರ ಮನಸ್ಸನ್ನು ಸೆಳೆದ ನಟ ನಿರ್ದೇಶಕ ರಿಷಬ್ ಶೆಟ್ಟಿ, ಇದೀಗ ಸಾಮಾಜಿಕ ಕಳಕಳಿ ಮೂಲಕ ಜನರನ್ನು ತಲುಪುವ ಕೆಲಸ ಮಾಡ್ತಿದ್ದಾರೆ. ರಾಜಕೀಯಕ್ಕೆ ರಿಷಬ್ ರೀತಿಯ ಯುವಕರ ಅವಶ್ಯಕತೆ ಖಂಡಿತವಾಗಿಯೂ ಇದೆ. ಯಾವ ಪಕ್ಷದಿಂದ ಸ್ಪರ್ಧೆ ಮಾಡ್ತಾರೆ ಅನ್ನೋದು ಮುಖ್ಯವಲ್ಲ. ಜನರಿಗೆ ಸಹಾಯ ಮಾಡ್ಬೇಕು ಅನ್ನೋ ಮನಸ್ಸಿದ್ದರೆ ಸಾಕು ಅನ್ನೋದು ಪ್ರತಿಧ್ವನಿ ಅಭಿಮತ. ನೀವೇನಂತೀರಿ..?