ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಆಪರೇಷನ್ ಹಸ್ತ ಶುರು ಮಾಡಿದೆ ಅನ್ನೋ ಗುಮಾನಿ ಶುರುವಾಗಿದೆ. ಬಿಜೆಪಿ ಹಾಗು ಜೆಡಿಎಸ್ನ ಹಾಲಿ ಮಾಜಿ ಶಾಸಕರನ್ನು ಸೆಳೆಯಲು ಡಿಕೆ ಶಿವಕುಮಾರ್ ಅಂಡ್ ಟೀಂ ಸಿದ್ದತೆ ಮಾಡಿಕೊಂಡಿದೆ. ಈ ಬಗ್ಗೆ ಬಿಜೆಪಿ ಶಾಸಕರೇ ಬಹಿರಂಗವಾಗಿ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕುವ ಮೂಲಕ ಪಕ್ಷ ತ್ಯಜಿಸುವ ಸುಳಿವು ನೀಡಿದ್ದಾರೆ. ಆದರೆ ಬಿಜೆಪಿ ಹಾಗು ಜೆಡಿಎಸ್ ನಾಯಕರು ಮಾತ್ರ ನಮ್ಮ ಪಕ್ಷಗಳಿಂದ ಯಾರೊಬ್ಬರೂ ಕಾಂಗ್ರೆಸ್ಗೆ ಹೋಗಲ್ಲ ಹೋಗಲ್ಲ ಎನ್ನುತ್ತಲೇ ಆಪರೇಷನ್ ಹಸ್ತ ತಡೆಯಲು ಭಾರೀ ಕಸರತ್ತು ಶುರು ಮಾಡಿಕೊಂಡಿದ್ದಾರೆ. ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಕಾಂಗ್ರೆಸ್ನ ರಣತಂತ್ರದ ವಿರುದ್ಧ ಹರಿಹಾಯುತ್ತಿದ್ದಾರೆ.

ಬಿಜೆಪಿ ಅಲರ್ಟ್, ಅಖಾಡಕ್ಕೆ ರಾಜಾಹುಲಿ ಎಂಟ್ರಿ
ಬಿಜೆಪಿ ಹೈಕಮಾಂಡ್ ಬಿಜೆಪಿಯ ಭೀಷ್ಮ ಬಿ.ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಅವಮಾನಕರವಾಗಿ ಇಳಿಸಿದ್ದು ಇತಿಹಾಸ. ಆ ಬಳಿಕ ಯಡಿಯೂರಪ್ಪ ಹೇಳಿದ ನಾಯಕರನ್ನು ಬಿಜೆಪಿ ಅಧ್ಯಕ್ಷ ಹಾಗು ವಿರೋಧ ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ಪರಿಗಣಿಸದೆ ನಿರ್ಲಕ್ಷ್ಯ ಮಾಡಿದೆ. ಆದರೆ ಆಪರೇಷನ್ ಹಸ್ತದ ಸದ್ದು ಕೇಳುತ್ತಿದ್ದ ಹಾಗೆ ಬಿಜೆಪಿ ಅಲರ್ಟ್ ಆಗಿದ್ದು, ಮಾಜಿ ಸಿಎಂ ಯಡಿಯೂರಪ್ಪ ಮನೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. BBMP ಚುನಾವಣೆ ಅಜೆಂಡಾದ ಸಭೆಯಲ್ಲಿ ಆಪರೇಷನ್ ಹಸ್ತದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಕಾಂಗ್ರೆಸ್ ಟಾರ್ಗೆಟ್ ಮಾಡಿರುವ ನಾಯಕರಿಗೆ ಮನವರಿಕೆ ಮಾಡುವ ಕೆಲಸ ಮಾಡಿದೆ. ಆದರೆ ಪ್ರಮುಖವಾಗಿ ಆಪರೇಷನ್ ಹಸ್ತದಲ್ಲಿ ಕೇಳಿ ಬಂದಿರುವ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್, ಕೆ.ಆರ್ ಪುರ ಶಾಸಕ ಬೈರತಿ ಬಸವರಾಜು ಸೇರಿದಂತೆ ಸುರೇಶ್ ಕುಮಾರ್, ರವಿ ಸುಬ್ರಹ್ಮಣ್ಯ, ರಾಮಮೂರ್ತಿ, ಸತೀಶ್ ರೆಡ್ಡಿ, ಮಂಜುಳಾ ಲಿಂಬಾವಳಿ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಜೆಡಿಎಸ್ನಲ್ಲಿ ಅಧಿಕಾರ ಹಂಚಿಕೆ, ಕೋರ್ ಕಮಿಟಿ ರಚನೆ..!
ಆಪರೇಷನ್ ಹಸ್ತದ ಸದ್ದು ಕೇಳುತ್ತಲೇ ಜೆಡಿಎಸ್ ಅಲರ್ಟ್ ಆಗಿದ್ದು, ಕೋರ್ ಕಮಿಟಿ ರಚನೆ ಮಾಡಲಾಗಿದೆ. ಈ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸುವ ಕೆಲಸ ಮಾಡಿದ್ದಾರೆ. ಆಗಸ್ಟ್ 20ರಿಂದ ಸೆಪ್ಟೆಂಬರ್ 30ರೊಳಗೆ ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಬಲವರ್ಧನೆಗೆ ವರದಿಗೆ ಸೂಚನೆ ಕೊಡಲಾಗಿದೆ. ಇನ್ನು ಜಿಲ್ಲಾಧ್ಯಕ್ಷರು ಹಾಗು ಪದಾಧಿಕಾರಿಗಳ ಬದಲಾವಣೆ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಕಾಂಗ್ರೆಸ್ಗೆ ಯಾವ ಶಾಸಕರೂ ಹೋಗೋದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು, ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗುವ ಕಾಂಗ್ರೆಸ್ ಲೆಕ್ಕಾಚಾರಕ್ಕೆ ಕೌಂಟರ್ ಕೊಡುವ ಕೆಲಸಕ್ಕೆ ಮುಂದಾಗಿದೆ. ಅಷ್ಟೇ ಅಲ್ಲದೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಬೇಕು. ಇದಕ್ಕಾಗಿ ವಿಭಾಗವಾರು ಸಭೆ ಮೂಲಕ ವಿಧಾನಸಭೆ ಸೋಲಿನ ಪರಾಮರ್ಶೆ ಮಾಡುವುದು, ಕಾಂಗ್ರೆಸ್ ಗ್ಯಾರಂಟಿಗಳ ವೈಫಲ್ಯ ಹಾಗು ಆಡಳಿತ ವೈಫಲ್ಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಚಿಂತನೆ ನಡೆದಿದೆ.

ಕಾಂಗ್ರೆಸ್ ಕಡೆಗೆ ವಿಪಕ್ಷಗಳ ನಾಯಕರ ಸೆಳೆತ ಯಾಕೆ..!?
ಕಾಂಗ್ರೆಸ್ ಸಂಪೂರ್ಣ ಬಹುಮತಕ್ಕೆ ಬೇಕಿರುವ 113 ಸ್ಥಾನಗಳನ್ನು ಮಾತ್ರ ಗೆಲ್ಲದೆ 23 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆದ್ದು ಅಧಿಕಾರ ರಚನೆ ಮಾಡಿದೆ. ಅಂದರೆ ಆಪರೇಷನ್ ಕಮಲದ ಮೂಲಕ ಶಾಸಕರನ್ನು ಕೊಂಡುಕೊಂಡು ಕಾಂಗ್ರೆಸ್ ಪಕ್ಷವನ್ನು ಅವಧಿಗೂ ಮುನ್ನವೇ ಅಧಿಕಾರದಿಂದ ಇಳಿಸುವುದು ಅಸಾಧ್ಯ. ಹೀಗಾಗಿ ಕೆಲವು ಶಾಸಕರು ರಾಜೀನಾಮೆ ಕೊಟ್ಟು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಯೋಜನೆಯಲ್ಲಿದ್ದಾರೆ ಎನ್ನಲಾಗಿದೆ. ತಮ್ಮ ಕ್ಷೇತ್ರಗಳನ್ನು ಮಕ್ಕಳಿಗೆ ಬಿಟ್ಟುಕೊಡುವ ಮೂಲಕ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದಿಂದ ಶಾಸಕರನ್ನಾಗಿ ಮಾಡಿದರೆ ಮಕ್ಕಳ ಭವಿಷ್ಯವೂ ಗಟ್ಟಿಯಾಗಲಿದೆ ಎನ್ನೋದು ಲೆಕ್ಕಾಚಾರ. ಇನ್ನೂ ಸೋಲುಂಡಿರುವ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ಸುಲಭ. ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿಗಳ ಮೂಲಕ ಗೆದ್ದು ಲೋಕಸಭಾ ಸ್ಥಾನ ಪಡೆದುಕೊಂಡರೆ ಮುಂದಿನ ನಾಲ್ಕೂವರೆ ವರ್ಷ ರಾಜಕೀಯ ಅಜ್ಞಾತವಾಸದಿಂದ ದೂರ ಉಳಿಯಬಹುದು ಎನ್ನುವ ಚಿಂತನೆಯಲ್ಲಿದ್ದಾರೆ ಎನ್ನಲಾಗ್ತಿದೆ.
ಕೃಷ್ಣಮಣಿ