ಬೆಂಗಳೂರು :ಏ.೦೯: ಮೋದಿ ಅವರ ಸರ್ಕಾರ ಪ್ರತಿ ರಾಜ್ಯಗಳಲ್ಲಿ ಅದರದೇ ಆದ ಹೆಮ್ಮೆಯ ಸಂಸ್ಥೆಗಳನ್ನು ನಾಶ ಮಾಡಲು ಮುಂದಾಗುತ್ತಿದೆ. ಇದಕ್ಕೆ ಸೂಕ್ತ ಉದಾಹರಣೆ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ವಿರುದ್ಧದ ದಾಳಿ. ನಂದಿನಿ ಬ್ರ್ಯಾಂಡ್ ನಲ್ಲಿ ಯಾವ ಲೋಪದೋಷವಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ನಂದಿನಿ ವಿರುದ್ಧ ನಿಂತಿದ್ದಾರೆ. ನಂದಿನಿ ಉತ್ಪನ್ನಗಳಲ್ಲಿ ಯಾವ ದೋಷವಿದೆ? ಈ ಉತ್ಪನ್ನಗಳ ಮೇಲೆ ಕನ್ನಡ ಭಾಷೆ ಬಳಸಲಾಗಿದೆ ಎಂಬುದು ನಿಮ್ಮ ಸಮಸ್ಯೆಯೇ? ಎಂದು ಎಐಸಿಸಿ ವಕ್ತಾರರಾದ ಗೌರವ್ ವಲ್ಲಭ್ ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ನಂದಿನ ಉತ್ಪನ್ನಗಳ ರುಚಿ ನೋಡಬೇಕು. ಇದು ಕರ್ನಾಟಕದ ಹೆಮ್ಮೆ. ಆರೂವರೆ ಕೋಟಿ ಜನರ ಈ ಹೆಮ್ಮೆಯನ್ನು ಯಾಕೆ ತುಳಿಯಲು ಹೊರಟಿದ್ದೀರಿ? ಇದರಿಂದ ಏನು ಸಾಧಿಸಲು ಹೊರಟಿದ್ದೀರಿ? ಅಮಿತ್ ಶಾ ಅವರೇ ಸಹಕಾರಿ ಸಚಿವಾಲಯದ ಮೂಲ ಉದ್ದೇಶವೇನು? ನೀವು ಸಹಕಾರ ಕ್ಷೇತ್ರದಲ್ಲೂ ಸ್ಪರ್ಧೆ ತರಲು ಹೊರಟಿದ್ದೀರಿ. ಉದ್ದೇಶಪೂರ್ವಕವಾಗಿ ಇದನ್ನು ಯಾಕೆ ಮಾಡುತ್ತಿದ್ದೀರಿ. ನಂದಿನಿ ಆಶ್ರಯದಲ್ಲಿ ಸುಮಾರು 2 ಕೋಟಿ ಜನರು ಆಶ್ರಯ ಪಡೆದಿದ್ದಾರೆ.

ಮೋದಿ ಅವರೇ ಇನ್ನು ಒಂದು ತಿಂಗಳು ಮೂರು ದಿನಗಳು ಮಾತ್ರ ಬಾಕಿ ಇವೆ. ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನಂತರ ಕರ್ನಾಟಕದ ಹೆಮ್ಮೆಯ ಸಂಸ್ಥೆಗಳನ್ನು ಯಾರೂ ಕೂಡ ಮುಟ್ಟಲು ಸಾಧ್ಯವಿಲ್ಲ. ದೆಹಲಿಯಲ್ಲಿ ಕೂತು ಕರ್ನಾಟಕದ ಹೆಮ್ಮೆಯ ಸಂಸ್ಥೆಗಳ ಭವಿಷ್ಯ ನಿರ್ಧರಿಸಲು ಬಿಡುವುದಿಲ್ಲ. ನಂದಿನಿ ಬ್ರ್ಯಾಂಡ್ ರೈತರು, ಕಾರ್ಮಿಕರ ಪರಿಶ್ರಮದ ಫಲವಾಗಿದೆ. ಪ್ರತಿಯೊಬ್ಬ ಕನ್ನಡಿಗನೂ ಈ ಬ್ರ್ಯಾಂಡ್ ಬಗ್ಗೆ ಹೆಮ್ಮೆ ಹೊಂದಿದ್ದಾನೆ. ಮೋದಿ ಅವರು ಒಮ್ಮೆ ಇದರ ರುಚಿ ನೋಡಲಿ, ಅವರು ತಮ್ಮ ನಿಲುವು ಬದಲಿಸಬಹುದು. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರೂ ಇದಕ್ಕೆ ಉತ್ತೇಜನ ನೀಡುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಕರ್ನಾಟಕದ ʼನಂದಿನಿʼ ವಿನಾಶಕ್ಕೆ ಬಿಜೆಪಿ ಮುಂದಾಗಿದೆ :


ನಂದಿನಿ ವಿನಾಶಕ್ಕೆ ಬಿಜೆಪಿ ಯಾಕೆ ಮುಂದಾಗಿದೆ ಎಂದು ಕೇಳಿದಾಗ, ‘ಈ ನಂದಿನಿ ಉತ್ಪನ್ನಗಳಲ್ಲಿ ಯಾವ ದೋಷವಿದೆ? ಎಂಬುದು ನನ್ನ ಮೂಲಭೂತ ಪ್ರಶ್ನೆ. ಇದು ರುಚಿ ಇಲ್ಲವೇ? ತಾಜವಾಗಿಲ್ಲವೇ? ಮಾರುಕಟ್ಟಿಯಲ್ಲಿ ಮಾರಾಟವಾಗುತ್ತಿಲ್ಲವೇ? ಇದನ್ನು ಸೇವಿಸುತ್ತಿರುವ ಜನರು ಇದನ್ನು ಆಸ್ವಾದಿಸುತ್ತಿಲ್ಲವೇ? ಆಗಾದರೆ ಯಾವ ಕಾರಣಕ್ಕೆ ನಂದಿನಿಗೆ ಜತೆ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ. ಸಹಕಾರ ಇಲಾಖೆ ಮೂಲ ಉದ್ದೇಶವೇನು? ನಾವು ಯಾವುದೇ ಇತರೆ ಸಂಸ್ಥೆಗಳ ವಿರುದ್ಧವಿಲ್ಲ. ಬಿಜೆಪಿಯವರಿಗೆ ಇರುವ ಸಮಸ್ಯೆ ಎಂದರೆ ಈ ಉತ್ಪನ್ನಗಳ ಮೇಲೆ ಕನ್ನಡವನ್ನು ಬಳಸಲಾಗಿದೆ. ಅದರ ಹೊರತಾಗಿ ಬಿಜೆಪಿಗರು ಆಕ್ಷೇಪಿಸುವಂತಹ ಯಾವುದೇ ಅಂಶಗಳು ಇಲ್ಲ. ಮೋದಿ ಹಾಗೂ ಅಮಿತ್ ಶಾ ಅವರಿಗೆ ಅಜೆಂಡಾ ಇರಬಹುದು. ಆದರೆ ರಾಜ್ಯದ ಸಂಸದರಿಗೆ ಏನಾಗಿದೆ? ರಾಜ್ಯದ ಜನರ ಪಾಲಿಗೆ ನಂದಿನಿ ಯಾವ ಸ್ಥಾನದಲ್ಲಿದ್ದಾಳೆ ಎಂಬುದನ್ನು ಪ್ರತಿಯೊಬ್ಬ ಕನ್ನಡಿಗರು 2024ರಲ್ಲಿ ಬಿಜೆಪಿಯವರಿಗೆ ಉತ್ತರ ನೀಡುತ್ತಾರೆ. ಮುಂದಿನ ತಿಂಗಳು ಕರ್ನಾಟಕದ ಹೆಮ್ಮೆಯನ್ನು ಸಂರಕ್ಷಣೆ ಮಾಡಲಾಗುವುದು’ ಎಂದು ತಿಳಿಸಿದರು.