ಬದಲಾದ ಬಿಜೆಪಿ, ಹಿಮಾಂತ ಬಿಸ್ವಾ ಶರ್ಮಾಗೆ ಸಿಎಂ ಸ್ಥಾನ, ಜ್ಯೋತಿರಾಧಿತ್ಯ ಸಿಂಧ್ಯಗೆ ಹುರುಪು

ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ ಸ್ಥಾನಗಳು ಯಾವಾಗಲೂ ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರಿಗೆ‌ ಮೀಸಲಾಗಿರುತ್ತಿತ್ತು. ಇದು ಮೊದಲ ಬಾರಿಗೆ ಸುಳ್ಳಾಗಿದ್ದು ಅಸ್ಸಾಂನಲ್ಲಿ. 2011ರಲ್ಲಿ ಅಸ್ಸಾಂ ಗಣ ಪರಿಷತ್ (ಎಜಿಪಿ) ಬಿಟ್ಟು ಬಿಜೆಪಿ ಸೇರಿದ್ದ ಸರಬಾನಂದ ಸೋನೊವಾಲ್ ಅವರನ್ನು 2016ರಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ವಿಶೇಷ ಎಂದರೆ ಬಿಜೆಪಿ ಎರಡನೇ ಬಾರಿಗೆ ‘ಹೊರಗಿನವರನ್ನು’ ಮುಖ್ಯಮಂತ್ರಿ ಮಾಡಿದ್ದು‌ ಕೂಡ ಇದೇ ಅಸ್ಸಾಂನಲ್ಲಿ. ಅದು ಈಗ. 2015ರಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಹಿಮಾಂತ ಬಿಸ್ವಾ ಶರ್ಮಾ ಅವರಿಗೆ ಈಗ ಅಸ್ಸಾಂನಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಬಿಜೆಪಿ ಬದಲಾಗುತ್ತಿದೆಯೇ?

ಗೊತ್ತಿಲ್ಲ. ಆದರೆ ಇದರಿಂದ ಇತ್ತೀಚೆಗೆ ಬೇರೆ ಪಕ್ಷಗಳಿಂದ ಬಿಜೆಪಿ ಸೇರಿರುವವರಲ್ಲಿ ಉತ್ಸಾಹ ಮೂಡಿಸಿದೆ. ಉದಾಹರಣೆಗೆ ಮಧ್ಯಪ್ರದೇಶದಲ್ಲಿ ಜ್ಯೋತಿರಾಧಿತ್ಯ ಸಿಂಧ್ಯ ಮತ್ತು ಪಶ್ಚಿಮ ಬಂಗಾಳದಲ್ಲಿ ಸುವೆಂದು ಅಧಿಕಾರಿ.‌ ಅಸ್ಸಾಂನಲ್ಲಿ ಬಿಜೆಪಿ ‘ಹೊರಗಿನವರಿಗೆ’ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದರಲ್ಲಿ ಇನ್ನೂ ಒಂದು ವಿಶೇಷವಿದೆ. ಸರಬಾನಂದ ಸೋನೊವಾಲ್ ಪಕ್ಷ ಸೇರಿದ ಐದು ವರ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಪಡೆದರು.‌ ಹಿಮಾಂತ ಬಿಸ್ವಾ ಶರ್ಮಾ ಆರು ವರ್ಷ ತೆಗೆದುಕೊಂಡರು.‌ ಇದೊಂಥರಾ ‘ಸಮತೋಲಿತ’ವಾಗಿದೆ. ಅಂದರೆ ಅವರಿಗೆ ಬಂದ ತಕ್ಷಣ ಪದವಿ‌ ಕೊಡಲಾಗಿಲ್ಲ, ಅಂದಮಾತ್ರಕ್ಕೆ ಅವರು ದಶಕಗಳ ಕಾಲ ಕಾದು ಕೊಳೆಯುವ ಪರಿಸ್ಥಿತಿಯೂ ಬರಲಿಲ್ಲ. ಈ ಸಂಗತಿ ಜ್ಯೋತಿರಾಧಿತ್ಯ ಸಿಂಧ್ಯ ಮತ್ತು ಸುವೆಂದು ಅಧಿಕಾರಿಗೆ ‘ನಮಗೂ ಬಿಜೆಪಿಯಲ್ಲಿ ಪದವಿ ಸಿಗುತ್ತದೆ’ ಎಂಬ‌ ಸ್ಫೂರ್ತಿ ನೀಡುತ್ತದೆ. ಜೊತೆಗೆ ‘ನಾವು ಕೂಡ ಕಾಲಕ್ಕಾಗಿ ಕಾಯಬೇಕು’ ಎಂಬ ಪಾಠವನ್ನು ‌ಹೇಳಿದೆ.

ಇದಕ್ಕೂ ಮಿಗಿಲಾಗಿ ‘ತಮ್ಮ ಸಾಮರ್ಥ್ಯ ತೋರಬೇಕು, ಆಗ ಮಾತ್ರ ಉನ್ನತ ಸ್ಥಾನ ಪಡೆಯಲು ಸಾಧ್ಯ’ ಎಂಬ ಎಚ್ಚರಿಕೆಯನ್ನೂ ರವಾನಿಸಿದೆ. ಹೇಗೆಂದರೆ ಅಸ್ಸಾಂ ಗಣ ಪರಿಷತ್ ಪಕ್ಷದಿಂದ ಶಾಸಕ, ಸಂಸದರೂ ಆಗಿದ್ದ ಸರಬಾನಂದ ಸೋನೊವಾಲ್ 2011ರಲ್ಲಿ‌ ಬಿಜೆಪಿ ಸೇರಿದರು. 2014ರ ಲೋಕಸಭಾ ಚುನಾವಣೆವರೆಗೂ ಅಸ್ಸಾಂನಲ್ಲಿ ಪಕ್ಷ ಸಂಘಟಿಸಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಕೇಸರಿ ಭಾವುಟ ಅಸ್ಸಾಂನಲ್ಲಿ ಹಾರಾಡುವಂತೆ ಮಾಡಿದರು. ಬಳಿಕ ಹಿಮಾಂತ ಬಿಸ್ವಾ ಶರ್ಮಾ ಜೊತೆ ಸೇರಿಕೊಂಡು‌ 2016ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಅದರಿಂದ ಮುಖ್ಯಮಂತ್ರಿಯಾದರು.

ಹಿಮಾಂತ ಬಿಸ್ವಾ ಶರ್ಮಾ ವಿಷಯಕ್ಕೆ ಬರುವುದಾದರೆ ಸಂಘಟನೆಗೆ ಹೇಳಿ ಮಾಡಿಸಿದ ವ್ಯಕ್ತಿ ಎಂದು ಹೆಸರಾದವರು ಅವರು. 2016ರ ವಿಧಾನಸಭಾ ಚುನಾವಣೆಗೆ ತಮ್ಮನ್ನೇ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವಂತೆ ಹೈಕಮಾಂಡ್ ನಾಯಕರಲ್ಲಿ ಕೇಳಿಕೊಂಡರು. ಕಾಂಗ್ರೆಸ್ ಹಿಮಾಂತ ಬಿಸ್ವಾ ಶರ್ಮಾ‌ ಅವರ ಮನವಿ ಮತ್ತು ಒತ್ತಡಕ್ಕೆ ಮಣಿಯದಿದ್ದಾಗ ಬಿಜೆಪಿ ಸೇರಿದರು. ಬಿಜೆಪಿಯನ್ನು ಗೆಲ್ಲಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಬಳಿಕ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಿದರು.‌ ಸಿಎಎ ಮತ್ತು ಎನ್ ಆರ್ ಸಿ ವಿಷಯದಲ್ಲಿ ಮೊದಲು ಮತ್ತು ತೀವ್ರ ರೀತಿಯಲ್ಲಿ ಪ್ರತಿರೋಧ ತೋರಿದ ರಾಜ್ಯ ಅಸ್ಸಾಂ. ಆ ಪ್ರತಿರೋಧಕ್ಕೆ ಬಿಜೆಪಿ ಹೆದರಿದ್ದು ಸುಳ್ಳಲ್ಲ, ಬಿಜೆಪಿ‌ ಹೆದರಿತ್ತು ಎಂಬುದಕ್ಕೆ ಈ ಬಾರಿಯ ಚುನಾವಣೆ ವೇಳೆ ಅಸ್ಸಾಂನಲ್ಲಿ ಸಿಎಎ ಮತ್ತು ಎನ್ ಆರ್ ಸಿ ವಿಷಯದ ಬಗ್ಗೆ ಬಿಜೆಪಿ ವಹಿಸಿದ‌ ಮೌನವೇ ಸಾಕ್ಷಿ. ಆದರೆ ಆ ಎಲ್ಲಾ ಸಂದರ್ಭಗಳಲ್ಲೂ ಪರಿಸ್ಥಿತಿಯನ್ನು ನಿರ್ವಹಿಸಿದ್ದು ಇದೇ ಹಿಮಾಂತ ಬಿಸ್ವಾ ಶರ್ಮಾ. ಹಾಗಾಗಿ ಯಾವುದೇ ವಿರೋಧ ಇಲ್ಲದಿದ್ದರೂ ಸರಬಾನಂದ ಸೋನೊವಾಲ್ ಅವರನ್ನು ಪಕ್ಕಕ್ಕೆ ಸರಿಸಿ ಹಿಮಾಂತ ಬಿಸ್ವಾ ಶರ್ಮಾ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.

ಇದೇ ರೀತಿ ಜ್ಯೋತಿರಾಧಿತ್ಯ ಸಿಂಧ್ಯ ಮತ್ತು ಸುವೆಂದು ಅಧಿಕಾರಿ ಕಾಯುವುದರೊಂದಿಗೆ ಕೆಲಸವನ್ನೂ ಮಾಡಬೇಕಾಗಿದೆ. ಜ್ಯೋತಿರಾಧಿತ್ಯ ಸಿಂಧ್ಯ ಈಗಾಗಲೇ ಬಿಜೆಪಿ ನಾಯಕರಿಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ. ಮೊದಲಿಗೆ ಕಾಂಗ್ರೆಸ್ ಶಾಸಕರಿಂದ‌ ರಾಜೀನಾಮೆ ಕೊಡಿಸುತ್ತೇನೆ ಎಂದಿದ್ದರು.‌ ಕೊಡಿಸಿ ಕಮಲನಾಥ್ ಸರ್ಕಾರವನ್ನು ಕಡೆವಿದರು. ನಂತರ ಶಿವರಾಜ್ ಸಿಂಗ್ ಚೌಹಾಣ್ ದಾರಿಗೆ ಮುಳ್ಳಾಗುವುದಿಲ್ಲ ಎಂದಿದ್ದರು. ಅದೇ ರೀತಿ ಯಾವುದೇ ಅಡೆತಡೆಯಾಗದೆ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ರಚನೆಯಾಯಿತು. ಇದರಿಂದ ಜ್ಯೋತಿರಾಧಿತ್ಯ ಸಿಂಧ್ಯ ಎರಡನೇ ಭರವಸೆಯನ್ನೂ ಈಡೇರಿಸಿದಂತಾಯಿತು. ಬಳಿಕ ಉಪ ಚುನಾವಣೆಗಳಲ್ಲಿ 28 ಸ್ಥಾನಗಳ ಪೈಕಿ 19 ಸ್ಥಾನ ಬಿಜೆಪಿಗೆ ಬರುವಂತೆ ಮಾಡಿ ಮೂರನೇ ಭರವಸೆಯನ್ನೂ ಈಡೇರಿಸಿದರು. ಇನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನ‌ ದಡ‌ ಸೇರಿಸಲು ಶಿವರಾಜ್ ಸಿಂಗ್ ಚೌಹಾಣ್ ಜೊತೆ ದುಡಿಯಬೇಕು. ಆಗ ಅಸ್ಸಾಂನಲ್ಲಿ ತಮ್ಮ ದಾರಿಗೆ ಅಡ್ಡ ಬಂದಿಲ್ಲದ ಹಿಮಾಂತ ಬಿಸ್ವಾ ಶರ್ಮಾ ಅವರನ್ನು ಸ್ವತಃ ಸರಬಾನಂದ ಸೋನೊವಾಲ್ ಅವರೇ ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರು ಸೂಚಿಸಿದಂತೆ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಜ್ಯೋತಿರಾಧಿತ್ಯ ಸಿಂಧ್ಯ ಹೆಸರು ಸೂಚಿಸಬಹುದು.

ಹಿಮಂತ ಬಿಸ್ವಾ ಶರ್ಮಾಗೆ ಸಂಘ ಪರಿವಾರದ ನಂಟಿರಲಿಲ್ಲ. ಆದರೆ ಜ್ಯೋತಿರಾಧಿತ್ಯ ಸಿಂಧ್ಯಗೆ ಆ ಸಮಸ್ಯೆ ಇಲ್ಲ. ಜ್ಯೋತಿರಾಧಿತ್ಯ ಅವರ ಅಜ್ಜ ಜೀವಂಜಿರಾವ್ ಸಿಂಧ್ಯ ಹಿಂದೂ ಮಹಾಸಭಾದ ಬಗ್ಗೆ ಮೃದುಧೋರಣೆ ಹೊಂದಿದ್ದರು. ಅಜ್ಜಿ ವಿಜಯ್ ರಾಜೆ ಸಿಂಧ್ಯ ತಮ್ಮ ಮೊದಲ ಚುನಾವಣೆ ಎದುರಿಸಿದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿ. ಬಳಿಕ ಅವರು ಬಿಜೆಪಿಯ ಪೂರ್ವಾಶ್ರಮ ಭಾರತೀಯ ಜನ ಸಂಘ (ಬಿಜೆಎಸ್) ಸೇರಿದರು. ಅವರ ಮಗ ಮಾಧವರಾವ್ ಸಿಂಧಿಯಾ (ಜ್ಯೋತಿರಾಧಿತ್ಯ ಸಿಂಧ್ಯ ತಂದೆ) ಮೊದಲ ಲೋಕಸಭಾ ಚುನಾವಣೆಯನ್ನು ಗೆದ್ದದ್ದು ಬಿಜೆಎಸ್ ಬೆಂಬಲದೊಂದಿಗೆ. ಜ್ಯೋತಿರಾಧಿತ್ಯ ಸಿಂಧ್ಯ ಚಿಕ್ಕಮ್ಮಂದಿರಾದ ರಾಜಸ್ಥಾನದ ವಸುಂಧರಾ ರಾಜೆ ಮತ್ತು ಮಧ್ಯಪ್ರದೇಶದ ಯಶೋಧರ ರಾಜೆ ದಶಕಗಳಿಂದ ಬಿಜೆಪಿಯಲ್ಲೇ ಇದ್ದಾರೆ. ವಸುಂಧರಾ ರಾಜೆಯವರ ಮಗ ದುಶ್ಯಂತ್ ಸಿಂಗ್ ರಾಜಸ್ಥಾನದ ಝಾಲಾವರ್-ಬಾರ್ಮರ್ ಕ್ಷೇತ್ರದ ಬಿಜೆಪಿಯ ಹಾಲಿ ಸಂಸದ. ಹೀಗೆ ಜ್ಯೋತಿರಾಧಿತ್ಯ ಸಿಂಧ್ಯ ಮತ್ತು ಬಿಜೆಪಿ ನಂಟಿಗೆ ನಂಜಿಲ್ಲ. ಆದುದರಿಂದ ಅವರಿಗೆ ಬಿಜೆಪಿಯಲ್ಲಿ ಭಯವಿಲ್ಲ ಎನ್ನುವಂತಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ವೈಯಕ್ತಿಕವಾಗಿ ಎದುರು ಹಾಕಿಕೊಂಡು ನಂದಿಗ್ರಾಮದಲ್ಲಿ ಗೆದ್ದಿರುವ ಮತ್ತು‌ ಚುನಾವಣೆಗೂ ಮುನ್ನ ಹಲವಾರು ಟಿಎಂಸಿಯ ಸಚಿವರು, ಶಾಸಕರು ಮತ್ತು ಸಂಸದರನ್ನು ಬಿಜೆಪಿಗೆ ಸೆಳೆದಿರುವ ಸುವೇಂದು ಅಧಿಕಾರಿ ಈಗ ಬಿಜೆಪಿ ವಲಯದಲ್ಲಿ ‘ಪಶ್ಚಿಮ ಬಂಗಾಳದ ಹಿಮಾಂತ ಬಿಸ್ವಾ ಶರ್ಮಾ’ ಆಗಿದ್ದಾರೆ. ಕಾಲಕ್ಕೆ ತಕ್ಕ ಹಾಗೆ ಬದಲಾದ ಪರಿಣಾಮ ಬಿಜೆಪಿ ಬೇರುಗಳು ಗಟ್ಟಿಯಾಗತೊಡಗಿವೆ. ಪ್ರಾದೇಶಿಕ ನಾಯಕರನ್ನು ಬೆಳೆಸಿದರೆ ಮಾತ್ರ ಉಳಿಗಾಲ ಎಂಬ ಸತ್ಯ ಬಿಜೆಪಿಗೆ ಈಗ ಚೆನ್ನಾಗಿ ಅರ್ಥ ಆದಂತಾಗಿದೆ‌. ಅದೇ ಕಾರಣಕ್ಕೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಿಸಲು ಹತ್ತು ಸಲ ಯೋಚನೆ ಮಾಡಲಾಗುತ್ತಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...